ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶುಶ್ರೂಷಕರ ಬೇಡಿಕೆ ಈಡೇರಿಸಿ

Last Updated 2 ಫೆಬ್ರುವರಿ 2011, 10:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸರ್ಕಾರಿ ಶುಶ್ರೂಷಕರ ಬೇಡಿಕೆಗಳನ್ನು 21 ದಿನದೊಳಗೆ ಸರ್ಕಾರ ಈಡೇರಿಸದಿದ್ದರೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಕ್ರಮ ವಹಿಸಿಲ್ಲ.ಹೀಗಾಗಿ ಮುಂದಾಗದಿರುವುದರಿಂದ ರಾಜ್ಯ ಸಂಘದ ಕರೆಯ ಮೇರೆಗೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರನ್ನು ಖಾಯಂಗೊಳಿಸಬೇಕು. ಮುಂದಿನ ದಿನಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳದಂತೆ ಆದೇಶ ಹೊರಡಿಸಬೇಕು. ಪತ್ರಾಂಕಿತ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಭತ್ಯೆಯನ್ನು 15 ದಿನಗಳಿಂದ 30 ದಿನಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶುಶ್ರೂಷಕರುಗಳಿಗೆ ರಿಸ್ಕ್ ಭತ್ಯೆ ಹೆಚ್ಚಿಸಿ ಆದೇಶ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.

ವೈದ್ಯಾಧಿಕಾರಿಗಳಿಗೆ ನೀಡುವ ಸವಲತ್ತುಗಳನ್ನು ಶುಶ್ರೂಷಕರಿಗೂ ವಿಸ್ತರಿಸಬೇಕು. ಶುಶ್ರೂಷ ವಿಶ್ವವಿದ್ಯಾಲಯ ಹಾಗೂ ನಿರ್ದೇಶನಾಲಯ ರಚಿಸಬೇಕು. ಸಮವಸ್ತ್ರ ಭತ್ಯೆಯನ್ನು ಪರಿಷ್ಕರಿಸಬೇಕು. ಸರ್ಕಾರಿ ನರ್ಸಿಂಗ್ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದವರನ್ನು ನೇಮಕಾತಿ ಸಂದರ್ಭದಲ್ಲಿ ಕಡ್ಡಾಯವಾಗಿ ಪರಿಗಣಿಸಬೇಕು ಎಂದು ಅವರು ಕೋರಿದರು.

ಶುಶ್ರೂಷಕ ವೃಂದದ ಹುದ್ದೆ ಮತ್ತು ನೇಮಕಾತಿಗೆ ಸಂಬಂಧಪಟ್ಟ ನಿಯಮಾವಳಿಗಳನ್ನು ನವೀಕರಿಸಿ ಆದೇಶ ಹೊರಡಿಸಬೇಕು. 20 ವರ್ಷ ಸೇವೆ ಸಲ್ಲಿಸಿದವರಿಗೆ ಬಡ್ತಿ ನೀಡುವುದು,ಸರ್ಕಾರಿ ಶಾಲೆಗಳಲ್ಲಿ ತರಬೇತಿ ಪಡೆಯುತ್ತಿರುವ ಶುಶೂಷಕರಿಗೆ ಶಿಕ್ಷಣ ವೇತನವನ್ನು 5 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವುದು, ಸ್ವಾಯತ್ತ ಸಂಸ್ಥೆಗಳಾಗಿ ಪರಿವರ್ತನೆಗೊಳ್ಳುತ್ತಿರುವ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಯಥಾಸ್ಥಿತಿ ಮುಂದುವರಿಸಬೇಕು. ಸರ್ಕಾರಿ ವಸತಿಗೃಹಗಳನ್ನು ಮೀಸಲಿಡಬೇಕು.

ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಸುರಕ್ಷತೆ ಮತ್ತು ಭದ್ರತೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಮೂಲ ಸೌಕರ್ಯ ಮತ್ತು ಸಲಕರಣೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಪಾರ್ವತಿ ಚೆಲುವಾಡಿ, ಸದಸ್ಯರಾದ ಪದ್ಮಿನಿ, ಗ್ರೇಸಿ, ಮಂಜುಳ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥಸ್ವಾಮಿ, ಕಾರ್ಯದರ್ಶಿ ನೂರ್‌ಮಹ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT