ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಬಿಕ್ಕಟ್ಟು:ಪೈಲಟ್ ಮುಷ್ಕರಕ್ಕೆ ಹೈಕೋರ್ಟ್ ತಡೆ

Last Updated 9 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರಕ್ಕೆ ದೆಹಲಿ ಹೈಕೋರ್ಟ್ ಬುಧವಾರ ತಡೆ ನೀಡಿದೆ.ಪೈಲಟ್‌ಗಳು ಮುಷ್ಕರ ಹೂಡದಂತೆ ನಿರ್ಬಂಧಿಸಬೇಕೆಂದು ಕೋರಿ ಏರ್ ಇಂಡಿಯಾ ಆಡಳಿತ ಮಂಡಳಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿರುವ ಕೋರ್ಟ್, `ಪೈಲಟ್‌ಗಳು ಅನಾರೋಗ್ಯದ ಕಾರಣ ನೀಡಿ ಈ ರೀತಿ ಕಾನೂನು ಬಾಹಿರವಾಗಿ ಮುಷ್ಕರ ಹೂಡುವಂತಿಲ್ಲ~ ಎಂದು ಹೇಳಿದೆ.

ಮಂಗಳವಾರವಷ್ಟೇ ಸರ್ಕಾರವು ಮುಷ್ಕರ ನಿರತ ಹತ್ತು ಪೈಲಟ್‌ಗಳನ್ನು ಸೇವೆಯಿಂದ ವಜಾ ಮಾಡಿತ್ತು. ಅಲ್ಲದೇ `ಇಂಡಿಯನ್ ಪೈಲಟ್ಸ್ ಗಿಲ್ಡ್~ (ಐಪಿಜಿ) ಮಾನ್ಯತೆ ರದ್ದು ಮಾಡಿ, ದೆಹಲಿ ಹಾಗೂ ಮುಂಬೈನಲ್ಲಿರುವ ಅದರ ಕಚೇರಿಗಳಿಗೆ ಬೀಗ ಮುದ್ರೆ ಹಾಕಿತ್ತು.

ಆಡಳಿತ ಮಂಡಳಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ನ್ಯಾಯಮೂರ್ತಿ ರೇವಾ ಖೆತ್ರಪಾಲ್ ಅವರು ಐಪಿಜಿಗೆ ನೋಟಿಸ್ ನೀಡಿದ್ದಾರೆ.`ಐಪಿಜಿ ಸದಸ್ಯರು, ಏಂಜೆಟರು, ಪದಾಧಿಕಾರಿಗಳು ಅಕ್ರಮವಾಗಿ ಮುಷ್ಕರ ಹೂಡುವುದಕ್ಕೆ ತಡೆ ನೀಡಲಾಗಿದೆ. ಪೈಲಟ್‌ಗಳು ಅನಾರೋಗ್ಯದ ಕಾರಣ ನೀಡಿ ರಜೆಯ ಮೇಲೆ ತೆರಳುವುದು, ಧರಣಿ ನಡೆಸುವುದು ಅಥವಾ ಸಂಸ್ಥೆಯ ದೆಹಲಿ ಕಚೇರಿಯ ಹೊರಗೆ ಮತ್ತು ಇತರ ಪ್ರಾದೇಶಿಕ ಕಚೇರಿಯಲ್ಲಿ ಯಾವುದೇ ಸ್ವರೂಪದ ಪ್ರತಿಭಟನೆ ಮಾಡುವಂತಿಲ್ಲ~ ಎಂದು ಖೆತ್ರಪಾಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

`ಇಂಥ ಮುಷ್ಕರ ಮುಂದುವರಿಯುವುದಕ್ಕೆ ಅವಕಾಶ ಮಾಡಿಕೊಟ್ಟರೆ ಸಂಸ್ಥೆಗೆ ತುಂಬಲಾರದ ನಷ್ಟವಾಗುತ್ತದೆ. ಅಲ್ಲದೇ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ~ ಎಂದೂ ಅವರು ಹೇಳಿದ್ದಾರೆ.`ಇದು ಕಾನೂನು ಬಾಹಿರ ಮುಷ್ಕರ. ಇದರಿಂದಾಗಿ ಕೆಲವೊಂದು ಅಂತರ ರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಪಡಿಸಬೇಕಾಯಿತು ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು~ ಎಂದು ಅರ್ಜಿಯಲ್ಲಿ ಏರ್ ಇಂಡಿಯಾ ಪರ ವಕೀಲ ಲಲಿತ್ ಭಾಸಿನ್ ದೂರಿದ್ದರು.

`ವಿಮಾನಗಳ ಹಾರಾಟ ರದ್ದು ಮಾಡಿದ್ದರಿಂದ ಸಂಸ್ಥೆಯು ದಿನವೊಂದಕ್ಕೆ ಸುಮಾರು 10 ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಸಂಧಾನಕ್ಕೆ ಪ್ರಯತ್ನಿಸುತ್ತಿದ್ದರೂ ಪೈಲಟ್‌ಗಳು ತಮ್ಮ ಸಮಸ್ಯೆ ಪರಿಹಾರಕ್ಕೆ ಮನಸ್ಸು ಮಾಡುತ್ತಿಲ್ಲ. ಕೈಗಾರಿಕಾ ವಿವಾದ ಕಾಯ್ದೆ ಅಡಿಯಲ್ಲಿ ಪೈಲಟ್‌ಗಳು ಮುಷ್ಕರಕ್ಕೆ ಮುನ್ನ 14 ದಿನಗಳು ಮುಂಚಿತವಾಗಿ ಪೂರ್ವಸೂಚನೆ ನೀಡಬೇಕು. ಆದರೆ ಐಪಿಜಿ ಸದಸ್ಯರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ~ ಎಂದು ಆಕ್ಷೇಪಿಸಿದ್ದರು.

ಭಾಸಿನ್ ವಾದವನ್ನು ಒಪ್ಪಿಕೊಂಡ ಕೋರ್ಟ್, ಏರ್ ಇಂಡಿಯಾ ಸರ್ಕಾರಿ ಸೇವಾ ಸಂಸ್ಥೆ (ಪಿಯುಎಸ್). ಇಂಥ ಸಂಸ್ಥೆಗಳು ಏಕಾಏಕಿ ಮುಷ್ಕರ ಹೂಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ~ ಎಂದು ನೆನಪಿಸಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 13ಕ್ಕೆ ನಿಗದಿಪಡಿಸಿತು.

ಮರು ಬಂಡವಾಳ ನೆರವು ಇಲ್ಲ: ಎಚ್ಚರಿಕೆ
 `ಮುಷ್ಕರ ನಿರತ ಏರ್ ಇಂಡಿಯಾ ಪೈಲಟ್‌ಗಳ ಜತೆಗೆ ನಾವು ಮಾತುಕತೆಗೆ ಸಿದ್ಧ. ಆದರೆ ಪೈಲಟ್‌ಗಳು ಪದೇ ಪದೇ ಪ್ರತಿಭಟನೆಗೆ ಇಳಿದರೆ ಸಂಕಷ್ಟದಲ್ಲಿರುವ ಸಂಸ್ಥೆಗೆ ಮರು ಬಂಡವಾಳ ಹಾಕುವುದಿಲ್ಲ~ ಎಂದು ಸರ್ಕಾರ ಬುಧವಾರ ಎಚ್ಚರಿಕೆ ನೀಡಿದೆ.

`ಸಮಸ್ಯೆಗಳನ್ನು ಚರ್ಚಿಸೋಣ. ಆದರೆ ಚರ್ಚೆ ಹಾಗೂ ಮುಷ್ಕರ ಏಕಕಾಲದಲ್ಲಿ ಸಾಧ್ಯವಿಲ್ಲ. ಪೈಲಟ್‌ಗಳು ಮೊದಲು ಮುಷ್ಕರ ಕೈಬಿಡಬೇಕು ಹಾಗೂ ಪ್ರಯಾಣಿಕರ ಕ್ಷಮೆ ಕೇಳಬೇಕು~ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.

ಸುಮಾರು 200 ಪೈಲಟ್‌ಗಳು ಮಂಗಳವಾರದಿಂದ ಮುಷ್ಕರ ಹೂಡಿದ ಪರಿಣಾಮ 20 ಅಂತರ ರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿ ಪ್ರಯಾಣಿಕರು ಪಡಿಪಾಟಲು ಪಡುವಂತಾಗಿದೆ.`ಯಾವುದೇ ವಿಮಾನಯಾನ ಸಂಸ್ಥೆಗೆ ಪೈಲಟ್‌ಗಳು ಮುಖ್ಯ. ಅವರು ತಮಗೆ ಇಷ್ಟ ಬಂದಾಗ ವಿಮಾನ ಹಾರಾಟ ರದ್ದು ಮಾಡಬಲ್ಲರು.

ಆದರೆ ಅವರು ತಮ್ಮ ಜವಾಬ್ದಾರಿ ಏನು ಎನ್ನುವುದನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಏರ್ ಇಂಡಿಯಾ ಅಕ್ಷರಶಃ ದಿವಾಳಿಯಾಗಿದೆ. ಸಿಬ್ಬಂದಿಗೆ ವೇತನ ನೀಡುವ ಸ್ಥಿತಿಯಲ್ಲಿಯೂ ಇಲ್ಲ~ ಎಂದು ಸಚಿವ ಅಜಿತ್ ಸಿಂಗ್ ಹೇಳಿದರು.

`ಸುಮಾರು 30,000 ಕೋಟಿ ರೂಪಾಯಿ ಮರು ಬಂಡವಾಳ ಹೂಡುವ ಮೂಲಕ ಏರ್ ಇಂಡಿಯಾವನ್ನು ಪುನಶ್ಚೇತನಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ತೊಡಕು ಉಂಟಾಗುತ್ತಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT