ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜಾಪುರ ರಸ್ತೆಯಲ್ಲಿ ಪ್ರಯಾಣ ದುಸ್ತರ

ಅರ್ಧಕ್ಕೆ ಸಂಚಾರ ಮೊಟಕುಗೊಳಿಸುವ ಬಿಎಂಟಿಸಿ ಬಸ್‌ಗಳು
Last Updated 15 ಡಿಸೆಂಬರ್ 2013, 20:00 IST
ಅಕ್ಷರ ಗಾತ್ರ

ವೈಟ್‌ಫೀಲ್ಡ್‌: ಸಮೀಪದ ಸರ್ಜಾಪುರ ರಸ್ತೆಯ ಬಡಾವಣೆಗಳಿಗೆ ಬರುವ ಬಿಎಂಟಿಸಿ ಬಸ್‌ಗಳು ಬದಲಿ ಮಾರ್ಗದಲ್ಲಿ ಬಳಸಿಕೊಂಡು ಹೋಗಬೇಕಾದ ಕಾರಣ ಅರ್ಧಕ್ಕೆ ಸಂಚಾರ ಮೊಟಕುಗೊಳಿಸುವ ಕಾರಣ ಸ್ಥಳೀಯ ಪ್ರಯಾಣಿಕರಿಗೆ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕಳೆದ ಆರು ತಿಂಗಳಿಂದ ಕೊಡತಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಸರ್ಜಾಪುರ ಮಾರ್ಗದ ಸಂಚಾರ ದುಸ್ತರ ಆಗಿದೆ. ವಾಹನ ಸಂಚಾರದಿಂದ ಕಾಮಗಾರಿ ವಿಳಂಬ ಆಗುತ್ತಿರುವುದನ್ನು ಗಮನಿಸಿದ ಸಂಚಾರಿ ಪೋಲೀಸರು ದ್ವಿಚಕ್ರ ವಾಹನ ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಿದ್ದಾರೆ.

ಬೆಂಗಳೂರು ಕಡೆಯಿದ ಬರುವ ವಾಹನಗಳು ಕಾರ್ಮೆಲರಾಂ ಗೇಟ್‌, ಚಿಕ್ಕ ಬೆಳ್ಳಂದೂರು, ಗುಂಜೂರು ಗೌರಮ್ಮಕೆರೆ, ಕಾಚಮಾರನಹಳ್ಳಿ, ಮುಳ್ಳೂರು, ಕೊಡತಿ, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ ಕಡೆಗೆ ಮತ್ತು ಸರ್ಜಾಪುರ ಕಡೆಯಿಂದ ಬರುವ ವಾಹನಗಳು ಕೊಡತಿ ಗೇಟ್‌, ಹಾಡೋಸಿದ್ದಾಪುರ, ಕಾರ್ಮೆಲಾರಂ ಗೇಟ್‌, ದೊಡ್ಡಕನ್ನಲ್ಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಅರ್ಧ ಕಿ.ಮೀ. ಬದಲಿಗೆ 8 ಕಿ.ಮೀ.ವರೆಗೆ ಸುತ್ತುವರೆದು ಬರಬೇಕಾದ ಕಾರಣ ಇದನ್ನೇ ನೆಪ ಒಡ್ಡಿ ಕೆಲ ಬಿಎಂಟಿಸಿ ಬಸ್‌ ಚಾಲಕರು ಸಂಚಾರ ಮೊಟಕುಗೊಳಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ.

ಬಹುತೇಕ ಕೆ.ಆರ್‌.ಮಾರುಕಟ್ಟೆ–ಕೆಂಪೇಗೌಡ ಬಸ್‌ ನಿಲ್ದಾಣದಿಂದ ಸರ್ಜಾಪುರ ರಸ್ತೆಯ ವಿವಿಧ ಗ್ರಾಮಗಳಿಗೆ ಬರುವ ಬಸ್‌ಗಳು ದೊಡ್ಡಕನ್ನಲ್ಲಿ ಗ್ರಾಮದವರೆಗೆ ಮಾತ್ರ ಸಂಚರಿಸುತ್ತಿವೆ. ಇದರಿಂದ ಮೂರು ಕಿ.ಮೀ.ವರೆಗೆ ಕಾಲ್ನಡಿಗೆಯಲ್ಲಿ ಕೊಡತಿ ಗೇಟ್‌ವರೆಗೆ ಬಂದು ಬೇರೆ ಬಸ್‌ಗಳಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಸರ್ಕಾರಿ ನೌಕರ ಹೇಮಂತ್‌ ದೂರುತ್ತಾರೆ.

ಇದೇ ಮಾರ್ಗದ ಸರ್ಜಾಪುರದಿಂದ ಕೆ.ಆರ್‌.ಮಾರುಕಟ್ಟೆ ಮತ್ತು ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಹೋಗುವ ಬಸ್‌ಗಳು ಚೆಕ್‌ ಪೋಸ್ಟ್‌ವರೆಗೆ ಮಾತ್ರ ಹೋಗುತ್ತವೆ. ಮುಂದಿನ ಬಡಾವಣೆಗಳಿಗೆ ಹೋಗಲು ಮತ್ತೆ ಟಿಕೆಟ್‌ ಪಡೆದು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದಲ್ಲದೆ ದುಪ್ಪಟ್ಟು ಹಣ ನೀಡಿದರೂ ನಿಗದಿತ ಸಮಯಕ್ಕೆ ಬಿಎಂಟಿಸಿ ಬಸ್‌ಗಳು ಬರುತ್ತಿಲ್ಲ ಎನ್ನುತ್ತಾರೆ ನೊಂದ ಪ್ರಯಾಣಿಕರು.

ಈ ಮಾರ್ಗದಲ್ಲಿ ಬಹುತೇಕ ಗಾರ್ಮೆಂಟ್ಸ್‌ ನೌಕರರು, ಕೂಲಿ ಕಾರ್ಮಿಕರು, ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರಯಾಣ ಮಾಡುತ್ತಿದ್ದು, ದಿನನಿತ್ಯ ಪರದಾಡಬೇಕಿದೆ ಎಂದು ನೊಂದ ಪ್ರಯಾಣಿಕರು ದೂರಿದ್ದಾರೆ.

ಬಿಎಂಟಿಸಿ ನೌಕರರ ಈ ಧೋರಣೆ ತಪ್ಪಿಸಿ, ಕೊನೆಯವರೆಗೆ ಬಸ್‌ ಸಂಚರಿಸಲು ವ್ಯವಸ್ಥೆ ಮಾಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಇಲಾಖಾ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ದೊಮ್ಮಸಂದ್ರ ಎಸ್‌.ಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT