ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವ ರೋಗಕ್ಕೆ ಸ್ಮಾರ್ಟ್‌ಫೋನ್ ಮದ್ದು!

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್ ಅಪ್ಲಿಕೇಷನ್ಸ್ ಜೀವನ ಶೈಲಿಯ ಭಾಗವಾಗಿ ಮಾರ್ಪಟ್ಟಿರುವ ಕಾಲವಿದು. ವೈದ್ಯಕೀಯ ಕ್ಷೇತ್ರಕ್ಕೂ ಈ ತಂತ್ರಜ್ಞಾನ ಕಾಲಿರಿಸಿದೆ!

ಹೌದು, ಇನ್ನು ಮುಂದೆ ನಿಮ್ಮನ್ನು ಪರೀಕ್ಷಿಸುವ ವೈದ್ಯರು, ದಿನಕ್ಕೆ 3 ಬಾರಿ ಈ ಮಾತ್ರೆ ತೆಗೆದುಕೊಳ್ಳಿ ಎನ್ನುವಂತೆಯೇ `ಈ ಎರಡು ಸ್ಮಾರ್ಟ್‌ಫೋನ್ ಅಪ್ಲಿಕೇಷನ್ಸ್ ಡೌನ್‌ಲೋಡ್ ಮಾಡಿಕೊಳ್ಳಿ~ ಎಂದು ಹೇಳಿದರೂ ಆಶ್ಚರ್ಯಪಡಬೇಕಾಗಿಲ್ಲ.

ಈಗಾಗಲೇ ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳು ಟಿ.ವಿ ರಿಮೋಟ್ ಕಂಟ್ರೋಲ್ ಮತ್ತು ಬೈಕಿನ ಅನಲಾಗ್ ಸ್ಫೀಡೊಮೀಟರ್‌ನ ಸ್ಥಾನವನ್ನೂ ತುಂಬಿ ಅವುಗಳ ಕಾರ್ಯವೈಖರಿಯನ್ನೇ ಬದಲಿಸಿವೆ. ವೈದ್ಯಕೀಯ ಉಪಕರಣಗಳಾಗಿಯೂ ಅಪ್ಲಿಕೇಷನ್ಸ್ ಕಾರ್ಯನಿರ್ವಹಿಸುವ ಕಾಲ ದೂರವಿಲ್ಲ!

ರೋಗಿಗೆ ತನ್ನ ಆರೋಗ್ಯ ಸ್ಥಿತಿ ಅರಿಯಲು ನೆರವು ನೀಡುವ ಇವು ಒಬ್ಬ ದಾದಿಯ ಕೆಲಸವನ್ನೇ ಈ ಅಪ್ಲಿಕೇಷನ್ಸ್ ಮಾಡಬಲ್ಲವು. ಹೃದಯ ಬಡಿತ ಪರೀಕ್ಷಿಸುವುದು, ರಕ್ತದಲ್ಲಿನ ಸಕ್ಕರೆ ಅಂಶ ಅರ್ಥಾತ್ ಮಧುಮೇಹ ಪ್ರಮಾಣದತ್ತ ಗಮನ ಸೆಳೆಯುವುದು, ಅಷ್ಟೇ ಏಕೆ ನಿಮ್ಮ ಆರೋಗ್ಯ ವಿಮೆಯ ಕಂತು ಪಾವತಿಸುವ ಕೆಲಸಕ್ಕೂ ಈ ಅಪ್ಲಿಕೇಷನ್ಸ್ ಬಳಕೆಯಾಗಲಿವೆ. ಒಟ್ಟಿನಲ್ಲಿ ಸರ್ವರೋಗಕ್ಕೂ ಸ್ಮಾರ್ಟ್‌ಫೋನ್ ಮದ್ದು ಎಂಬ ಸ್ಥಿತಿಗೆ ನಾವು ತಲುಪಿದ್ದೇವೆ.

ವೈದ್ಯರು ಶಿಫಾರಸು ಮಾಡುವ ಔಷಧಿಗಳ ಸೇವನೆ ಕುರಿತು ಈ ಅಪ್ಲಿಕೇಷನ್‌ಗಳೇ ಕರಾರುವಕ್ಕಾಗಿ ನೆನಪಿಸುವುದರಿಂದ ಪದೇ ಪದೇ ಆಸ್ಪತ್ರೆಗೆ ಅಲೆಯುವ ಕಿರಿಕಿರಿ ತಪ್ಪುತ್ತದೆ. ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡರೆ, ತಲೆ ತಿರುಗಿದ ಅನುಭವವಾದರೆ ಭಯ ಬೀಳಬೇಕಾಗಿಲ್ಲ.
 
ಪ್ರಾಥಮಿಕ ಆರೋಗ್ಯ ತಪಾಸಣೆಯಿಂದ ತಿಳಿಯಬಹುದಾದ, ಆರೋಗ್ಯದಲ್ಲಿ ಯಾವ ರೀತಿಯ ಏರುಪೇರು ಆಗಿದೆ? ರಕ್ತದೊತ್ತಡ ಸರಿಯಾಗಿದೆಯೆ? ಮೊದಲಾದ ಮಾಹಿತಿಗಳನ್ನೂ ರೋಗಿ ತಾನು ಇರುವಲ್ಲಿಯೇ ಕ್ಷಣಮಾತ್ರದಲ್ಲಿ ತಿಳಿಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಇದಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ದಾಖಲಿಸಿಟ್ಟರೆ ಈ ವೈದ್ಯಕೀಯ ಪ್ರಾಥಮಿಕ ಪರೀಕ್ಷೆ ಅಪ್ಲಿಕೇಷನ್‌ಗಳು ನಿಮ್ಮ ದೇಹಾರೋಗ್ಯದ ಮೇಲೆ ನಿಗಾ ಇಟ್ಟು ಕಾಲಕಾಲಕ್ಕೆ ನಿಮ್ಮನ್ನು ಎಚ್ಚರಿಸುತ್ತವೆ.

`ಸದ್ಯ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಇಂಥ ಅಪ್ಲಿಕೇಷನ್‌ಗಳು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇವೆ. ಇನ್ನಷ್ಟು ಸುಧಾರಿತ ಮತ್ತು `ಸ್ಮಾರ್ಟ್~ ಆದ ಅಪ್ಲಿಕೇಷನ್‌ಗಳು ಬಂದರೆ ಇವು ವೈದ್ಯರ ಕೊರತೆಯಿಂದ ಎದುರಾಗಿರುವ ಶುಶ್ರೂಷಾ ಸಮಸ್ಯೆಗಳ ನೀಗಿಸಬಹುದು ಮತ್ತು ತಪಾಸಣೆಗಾಗಿ ಆಸ್ಪತ್ರೆಗೆ ಪದೇಪದೇ ಎಡತಾಕುವಂತಹ ಕೆಲಸವನ್ನೂ ಕಡಿಮೆ ಮಾಡಬಹುದು~ ಎನ್ನುತ್ತಾರೆ ಅಮೆರಿಕದ `ಗ್ರೇಟರ್  ನ್ಯೂಯಾರ್ಕ್ ಆಸ್ಪತ್ರೆ ಸಮೂಹದ~ದ ಅಂಗಸಂಸ್ಥೆ `ಹ್ಯಾಪ್ಟಿಕ್~ನ ವ್ಯವಸ್ಥಾಪಕ ನಿರ್ದೇಶಕ ಎಚ್.ಪರ್ಲ್‌ಮನ್.

ಈಗಾಗಲೇ `ಹ್ಯಾಪ್ಟಿಕ್~ನ ವೈದ್ಯರ ತಂಡ ರೋಗಿಗಳಿಗೆ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಬಳಸಿ ಔಷಧ ಶಿಫಾರಸು ಮಾಡುವುದನ್ನು ಜಾರಿಗೆ ತಂದಿದೆ. ಬದಲಾಗಿರುವ ಜೀವನಶೈಲಿಗೆ ತಕ್ಕಂತೆ ರೋಗಿಗಳು ಕೂಡ ಇದನ್ನು ಅತ್ಯಂತ ಖುಷಿಯಿಂದ ಸ್ವಾಗತಿಸಿದ್ದಾರೆ. ಇದು ಸರಳ ಮತ್ತು ಕಡಿಮೆ ವೆಚ್ಚದ್ದೂ ಆಗಿದೆ~ ಎನ್ನುತ್ತಾರೆ ಪರ್ಲ್‌ಮನ್.

`ಆಂಡ್ರಾಯ್ಡ~ ಮತ್ತು `ಐಫೋನ್-ಒಎಸ್~ನ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ಇಂತಹ ಹಲವು ವೈದ್ಯಕೀಯ ಅಪ್ಲಿಕೇಷನ್‌ಗಳು ಬಂದಿವೆ. ಇದರಲ್ಲಿ ಕೆಲವೊಂದನ್ನು ಅದರಲ್ಲೂ ಮಧುಮೇಹ ಮತ್ತು ಹೃದಯಬೇನೆಗೆ ಸಂಬಂಧಿಸಿದ ಅಪ್ಲಿಕೇಷನ್‌ಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ರೋಗಿಗಳ ಜತೆಗೆ, ವೈದ್ಯಕೀಯ ವೃತ್ತಿಪರರು ಮತ್ತು ಔಷಧಿ ವ್ಯಾಪಾರಿಗಳು ಸಹ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

`ವೈದ್ಯಕೀಯ ತುರ್ತು ಸೇವೆಗಳ ವೆಚ್ಚವನ್ನು ಅಪ್ಲಿಕೇಷನ್‌ಗಳು ತಗ್ಗಿಸುತ್ತಿವೆ. ಉದಾಹರಣೆಗೆ 5 ವರ್ಷಗಳ ಹಿಂದೆ ಅಮೆರಿಕದಲ್ಲಿ ಮಧುಮೇಹ ಸಂಪೂರ್ಣ ಚಿಕಿತ್ಸೆಗೆ ಒಟ್ಟಾರೆ 17.40 ಕೋಟಿ ಡಾಲರ್ ವೆಚ್ಚವಾಗುತ್ತಿತ್ತು. ಈಗ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಬಳಕೆಯಿಂದ ಈ ವೆಚ್ಚ ಶೇ 30ರಷ್ಟು ತಗ್ಗಲಿದೆ~ ಎನ್ನುತ್ತದೆ ಇಲ್ಲಿನ `ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ~ದ ಅಧ್ಯಯನ.

ಆದರೆ, ಶೇ 99ರಷ್ಟು ವೈದ್ಯರು ಇಂಥ ವೈದ್ಯಕೀಯ ಅಪ್ಲಿಕೇಷನ್‌ಗಳನ್ನು ಶಿಫಾರಸು ಮಾಡುತ್ತಿಲ್ಲ. ವೈದ್ಯಕೀಯ ಲೋಕವೂ ಇಂಥದನ್ನು ಒಪ್ಪಿಕೊಂಡಿಲ್ಲ. ಸುರಕ್ಷತೆ ಮತ್ತು ಗುಣಮಟ್ಟ ಖಾತರಿ ಬಗ್ಗೆ ಇನ್ನೂ ಹಲವು ಸಂಗತಿಗಳು ಇತ್ಯರ್ಥವಾಗಲು ಬಾಕಿ ಉಳಿದಿರುವುದರಿಂದ ಇದರ ಬಳಕೆಯ ಸುರಕ್ಷತೆ ಕುರಿತೇ ಈಗ ಚರ್ಚೆ ನಡೆಯುತ್ತಿದೆ.

ರೋಗಿಯನ್ನು ಪರೀಕ್ಷಿಸಿ, ಔಷಧಿ ಶಿಫಾರಸು ಮಾಡುವ ಅಪ್ಲಿಕೇಷನ್ ಅಭಿವೃದ್ಧಿಪಡಿಸುತ್ತಿರುವ ಮೊದಲ ಕಂಪೆನಿಗಳಲ್ಲಿ `ವೆಲ್‌ಡಾಕ್~ ಕೂಡಾ ಒಂದು. ಈ ಸಂಸ್ಥೆ ಮಧುಮೇಹ ಪರೀಕ್ಷಿಸುವ ಅಪ್ಲಿಕೇಷನ್ ಅಭಿವೃದ್ಧಿಪಡಿಸುತ್ತಿದೆ.

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಕೂಡ ಈ ಅಪ್ಲಿಕೇಷನ್ ಸುಲಭವಾಗಿ ಬಳಸಬಹುದು. ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಗುರುತಿಸಿ, ನಂತರ ರೋಗಿ ತೆಗೆದುಕೊಳ್ಳಬೇಕಾದ ಆಹಾರ, ಔಷಧಿ ಮತ್ತು ಪಥ್ಯಗಳ ಬಗ್ಗೆ ಟಿಪ್ಪಣಿ ನೀಡುತ್ತದೆ. ನಂತರ ಈ ಎಲ್ಲ ದತ್ತಾಂಶಗಳನ್ನು ಖಚಿತ ವೈದ್ಯಕೀಯ ಪರೀಕ್ಷೆಗಾಗಿ ಸಂಬಂಧಿಸಿದ ವೈದ್ಯರಿಗೆ ರವಾನಿಸುತ್ತದೆ.

ಈ ಅಪ್ಲಿಕೇಷನ್ ಬಳಕೆಯಿಂದ ಮಧುಮೇಹ ರೋಗಿಗಳಲ್ಲಿ ಸಕ್ಕರೆ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ಎಂದು `ವೆಲ್‌ಡಾಕ್~ ಸಾಕ್ಷಿ ಸಮೇತ ದೃಢೀಕರಿಸಿದೆ. ಅಮೆರಿಕ ಆಹಾರ ಮತ್ತು ಔಷಧಿ ನಿಯಂತ್ರಣ ಸಂಸ್ಥೆ ಈ ಅಪ್ಲಿಕೇಷನ್ ಬಳಕೆಗೆ ಅನುಮತಿ ನೀಡಿದೆ. ಆದರೆ, ಇದಕ್ಕಾಗಿ ರೋಗಿ ತಿಂಗಳಿಗೆ 100 ಡಾಲರ್ (ರೂ 5,236) ಪಾವತಿಸಬೇಕಿದೆ.

ಇದು ಹೆಚ್ಚೂ ಕಡಿಮೆ ತಿಂಗಳಿಗೆ ಮಧುಮೇಹ ಚಿಕಿತ್ಸೆಗೆ ತಗುಲುವ ವೆಚ್ಚಕ್ಕೆ ಸಮಾನವೇ ಆಗಿರುವುದರಿಂದ ಈ ಅಪ್ಲಿಕೇಷನ್‌ಗಳ ಬಳಕೆ ಜನಪ್ರಿಯವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಆದರೆ, ವೈದ್ಯರು ಈ ಅಪ್ಲಿಕೇಷನ್ ಬಳಕೆಗೆ ಶಿಫಾರಸು ಮಾಡಿದರೆ ಚಿಕಿತ್ಸೆ ವೆಚ್ಚ ಭರಿಸಲು ಸಿದ್ಧರಿರುವುದಾಗಿ ಎರಡು ವಿಮೆ ಕಂಪೆನಿಗಳು ಹೇಳಿಕೊಂಡಿವೆ.

ಮುಂದಿನ ವರ್ಷ ಅಪ್ಲಿಕೇಷನ್ ಮಾರುಕಟ್ಟೆಗೆ ಬರಲಿದೆ~ ಎನ್ನುತ್ತಾರೆ ಕಂಪೆನಿಯ ಅಧ್ಯಕ್ಷ ಆನಂದ್ ಕೆ.ಅಯ್ಯರ್. ಆದರೆ, ವಿಮೆ ನೀಡಲು ಮುಂದಾಗಿರುವ ಕಂಪೆನಿಗಳ ಹೆಸರು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

`ಲಕ್ಷಗಟ್ಟಲೆ ಡಾಲರ್ ಬಳಸಿ `ವೆಲ್ ಡಾಕ್~ ಕಂಪೆನಿ ಈ ಅಪ್ಲಿಕೇಷನ್ಸ್ ಅಭಿವೃದ್ಧಿಪಡಿಸಿದೆ. ಆದ್ದರಿಂದ ಇದರ ವಾಣಿಜ್ಯ ಬಳಕೆ ಕುರಿತೂ ಚಿಂತಿಸಬೇಕಾಗುತ್ತದೆ~ ಎನ್ನುತ್ತಾರೆ ಅಯ್ಯರ್.
ಸ್ಮಾರ್ಟ್‌ಫೋನ್ ಆಧಾರಿತ `ಅಲ್ಟ್ರಾ ಸೌಂಡ್~ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ `ಮೊಬಿಸ್ಟ್ಯಾಂಡ್~ ಕಂಪೆನಿಯ ಸಹ ಸ್ಥಾಪಕ ಶೈಲೇಜ್ ಚುಥಾನಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.  ವಿದೇಶಿ ಮಾರುಕಟ್ಟೆಗಳಲ್ಲಿ ಇಂತಹ ತಂತ್ರಜ್ಞಾನಗಳು ಯಶಸ್ಸು ಗಳಿಸಬಹುದು. ಆದರೆ, ಭಾರತದಂತಹ ದೇಶಗಳಲ್ಲಿ ಇದರ ಸಾರ್ವತ್ರಿಕ ಬಳಕೆಗೆ ವರ್ಷಗಳೇ ಬೇಕಾಗಬಹುದು ಎನ್ನುತ್ತಾರೆ ಅವರು.

ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮೂಲಕ `ಮೊಬಿಸ್ಟ್ಯಾಂಡ್~ ಈ ಅಪ್ಲಿಕೇಷನ್ ಅಭಿವೃದ್ಧಿಗೆ ಬಂಡವಾಳ  ಸಂಗ್ರಹಿಸಿದೆ.

`ಕಾಂಟಿನುವ ಹೆಲ್ತ್ ಅಲಯನ್ಸ್~ ಸಂಸ್ಥೆ  ಸಹ ವೈದ್ಯಕೀಯ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಕುರಿತು ಅಧ್ಯಯನ ನಡೆಸುತ್ತಿದೆ. ರೋಗಿಗಳು ಒಂದಕ್ಕಿಂತ ಹೆಚ್ಚು ರೋಗ ವಿವರಗಳನ್ನು ತಮ್ಮ ಹ್ಯಾಂಡ್‌ಸೆಟ್‌ನಲ್ಲೇ ಪಡೆದುಕೊಳ್ಳಬಹುದಾದ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ.

`ಸುರಕ್ಷತೆ ದೃಷ್ಟಿಯಿಂದ ಹಲವು ದೇಶಗಳು ಇಂತಹ ಅಪ್ಲಿಕೇಷನ್ ಅಭಿವೃದ್ಧಿ ಮೇಲೆ ನಿರ್ಬಂಧ ವಿಧಿಸಿರುವುದು ಮಾರುಕಟ್ಟೆ ವಿಸ್ತರಣೆಗೆ ತೊಡಕಾಗಿದೆ~ ಎನ್ನುವುದು `ಎಫ್‌ಡಿಎ~ ಸಲಹೆಗಾರ ಬಾಕುಲ್ ಪಟೇಲ್ ಅವರ ಅಭಿಮತ.

`ಆರೋಗ್ಯ ಸಂಬಂಧಿ ಅಪ್ಲಿಕೇಷನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ, ಇವುಗಳ ಬಳಕೆಗೆ ರೋಗಿಗೆ ಶಿಫಾರಸು ಮಾಡುವ ಮುನ್ನ ವೈದ್ಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಏರುಪೇರಾದರೂ ಇವು ರೋಗಿಯ ಜೀವಕ್ಕೇ ಅಪಾಯ ತರುತ್ತವೆ.

ಆದರೆ, ಭವಿಷ್ಯದ ದೂರದೃಷ್ಟಿಯಿಂದ ಯೋಚಿಸಿದರೆ ಈ ಅಪ್ಲಿಕೇಷನ್‌ಗಳು ವೈದ್ಯಕೀಯ ಜಗತ್ತನ್ನೇ ಬದಲಿಸಬಲ್ಲಷ್ಟು ಸಾಮರ್ಥ್ಯ ಹೊಂದಿವೆ ಎನ್ನುತ್ತಾರೆ `ಎಂಐಟಿ~ ವೈದ್ಯಕೀಯ ಪ್ರಯೋಗಾಲಯದ ತಜ್ಞ  ಜಾನ್ ಮುರ‌್ರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT