ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮ ಪ್ರಾರ್ಥನೆ ಮಕ್ಕಳಿಗೆ ಅರ್ಥಮಾಡಿಸಿ

Last Updated 3 ಅಕ್ಟೋಬರ್ 2012, 4:20 IST
ಅಕ್ಷರ ಗಾತ್ರ

ದಾವಣಗೆರೆ: ಮಹಾತ್ಮ ಗಾಂಧೀಜಿ ಅವರ ಸರ್ವಧರ್ಮ ಪ್ರಾರ್ಥನೆಯನ್ನು ಶಾಲಾ ಕಾಲೇಜು, ಮದ್ರಸಾ, ಕಾನ್ವೆಂಟ್‌ಗಳಲ್ಲಿ ಮಕ್ಕಳಿಗೆ ಅರ್ಥ ಮಾಡಿಸಿದ್ದರೆ ಇಂದು ದೇಶಕ್ಕೆ ಉಗ್ರಗಾಮಿ ಚಟುವಟಿಕೆಯಂಥ ಆತಂಕ ಎದುರಾಗುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಹೇಳಿದರು.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ವತಿಯಿಂದ ಮಂಗಳವಾರ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಹೊಂದಿರುವ ಗಾಂಧೀಜಿ ಅವರನ್ನು ಭಾರತೀಯರೇ ಮರೆತಂತೆ ಆಗಿದೆ. ಅವರ ಚಿಂತನೆಗಳನ್ನು ಕೇವಲ ಓದುವುದಲ್ಲ. ಅಳವಡಿಸಿಕೊಳ್ಳುವುದು ಇಂದಿಗೆ ಅತ್ಯಂತ ಪ್ರಸ್ತುತ ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ರಾಜತಾಂತ್ರಿಕ ನಿರ್ಧಾರಗಳು ಗಟ್ಟಿತನದಿಂದ ಕೂಡಿದ್ದವು. ಭಾರತ ಪಾಕ್ ಯುದ್ಧ ಸಂಭವಿಸಿದಾಗ ಭಾರತದ ಸೇನೆ ಕರಾಚಿವರೆಗೂ ಜಯ ಸಾಧಿಸಿತ್ತು. ಆದರೆ, ಅವರ ಬಳಿಕ ಬಂದ ನಾಯಕರಿಂದ ಅಂಥ ದಿಟ್ಟತನ ಕಾಣಲಾಗಲಿಲ್ಲ ಎಂದು ವಿಷಾದಿಸಿದರು.

ಹೆಬ್ಬಾಳು ವಿರಕ್ತಮಠದ ಮಹಾಂತರುದ್ರ ಸ್ವಾಮೀಜಿ ಮಾತನಾಡಿ, ಸತ್ಯ, ಅಹಿಂಸೆಯನ್ನೇ ಅಸ್ತ್ರವನ್ನಾಗಿಸಿ ಹೋರಾಡಿದ  ವ್ಯಕ್ತಿ ಮಹಾತ್ಮ ಗಾಂಧೀಜಿ. ಇಂದು ನಮ್ಮಲ್ಲಿ ಅಣ್ವಸ್ತ್ರಗಳಿಂದ ಮನುಷ್ಯ ಮನುಷ್ಯರನ್ನೇ ಪರಸ್ಪರ ಶತ್ರುವಾಗಿ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂದಿನ ರಾಜಕಾರಣಿಗಳಲ್ಲಿ  ನಡೆಧರ್ಮದ ಬದಲು ನುಡಿಧರ್ಮವೇ ಜಾಸ್ತಿಯಾಗಿದೆ ಎಂದು ಹೇಳಿದರು.

ಮುಸ್ಲಿಂ ಧರ್ಮಗುರು ಮೌಲಾನಾ  ಬಿ.ಎ. ಇಬ್ರಾಹಿಂ ಸಖಾಫಿ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರು ವಿಶ್ವಕ್ಕೆ ದೇವರ ಕೊಡುಗೆ. ಗಾಂಧೀಜಿ ಅವರು ಎಲ್ಲ ಧರ್ಮಗಳ ಐಕ್ಯತೆಯಿಂದ ಯಶಸ್ಸು ಸಾಧಿಸಬೇಕು ಎಂಬ ಕನಸು ಕಂಡವರು. ಸತ್ಯ, ತ್ಯಾಗ ಇಲ್ಲದ ಧರ್ಮವನ್ನು ಕಾಣಲು ಸಾಧ್ಯವಿಲ್ಲ. ಸೌದಿ ಅರೇಬಿಯಾದಲ್ಲಿಯೂ ಗಾಂಧೀಜಿ ಕುರಿತ ಪುಸ್ತಕ ಬಿಡುಗಡೆಯಾಗಿದೆ. ಗಾಂಧೀಜಿ ಸಂದೇಶದಂತೆ ನಮ್ಮ ನಗರವನ್ನೂ ಸ್ವಚ್ಛವಾಗಿಡಬೇಕು ಎಂದು ಮನವಿ ಮಾಡಿದರು.

ಫಾದರ್ ರಾಬರ್ಟ್ ಡಿ~ಮೆಲ್ಲೋ ಮಾತನಾಡಿ, ಗಾಂಧೀಜಿ ಮೌನದ ಘನತೆಯನ್ನು ಎತ್ತಿಹಿಡಿದಿದ್ದಾರೆ. ಮನುಷ್ಯ ರಾಕ್ಷಸನಾಗಲು ಹೆಚ್ಚು ಹೊತ್ತು ಬೇಡ. ನಾವು ಮನುಷ್ಯರಾಗಲು ಕಷ್ಟಪಡಬೇಕಿದೆ ಎಂದರು.
ಲಲಿತ್ ಕುಮಾರ್ ಜೈನ್ ಮಾತನಾಡಿದರು.

ಸಚಿವ ಎಸ್.ಎ. ರವೀಂದ್ರನಾಥ್, ಶಾಸಕ ಎಂ. ಬಸವರಾಜ ನಾಯ್ಕ, ಮೆಳ್ಳೆಕಟ್ಟೆ ಚಿದಾನಂದ ಐಗೂರು, ಮೇಯರ್ ಸುಧಾ ಜಯರುದ್ರೇಶ್, ಜಿ.ಪಂ. ಸಿಇಒ ಎ.ಬಿ. ಹೇಮಚಂದ್ರ, ಎಸ್‌ಪಿ ಲಾಭೂರಾಂ, ಕೆ. ರಾಮೇಶ್ವರಪ್ಪ, ಉಪ ವಿಭಾಗಾಧಿಕಾರಿ ನಾಗರಾಜ್, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸರ್ವಧರ್ಮ ಪ್ರಾರ್ಥನೆ ನಡೆಯಿತು. ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT