ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಪಕ್ಷಗಳ ನಿಯೋಗ ತೆರಳಲು ಆಗ್ರಹ

Last Updated 19 ಜೂನ್ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ಗಡಿ ವಿವಾದ ಇತ್ಯರ್ಥಪಡಿಸಲು ಮಹಾಜನ್ ವರದಿಯನ್ನು ಸಂಪೂರ್ಣ ಜಾರಿಗೆ ತರುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಬೇಕು. ವಿವಾದ ಬಗೆಹರಿಯುವವರೆಗೂ ನಿಯೋಗ ಕ್ರಿಯಾಶೀಲವಾಗಿರಬೇಕು. ಸುಪ್ರಿಂಕೋರ್ಟ್‌ನಲ್ಲಿ ನೆನೆಗುದಿಗೆ ಬಿದ್ದಿರುವ ಗಡಿ ವಿವಾದ ಪ್ರಕರಣಗಳನ್ನು ಶೀಘ್ರವೇ ಬಗೆಹರಿಸಬೇಕು...

ಕನ್ನಡ ಗೆಳೆಯರ ಬಳಗವು ಮಿಥಿಕ್ ಸೊಸೈಟಿ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಕರ್ನಾಟಕ, ಮಹಾರಾಷ್ಟ್ರ, ಕೇರಳ ಗಡಿ ವಿವಾದ: ಮುಂದೇನು?~ ಕುರಿತ ಚಿಂತನಾ ಸಭೆಯಲ್ಲಿ ಮೇಲ್ಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನಿರ್ಣಯ ಮಂಡಿಸಿ ಮಾತನಾಡಿದ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ವಿ.ಎಸ್.ಮಳಿಮಠ, `ಮಹಾಜನ ವರದಿ ಸಂಪೂರ್ಣ ಜಾರಿಯಾಗುವ ನಿಟ್ಟಿನಲ್ಲಿ ಹೊಸ ಚಳವಳಿ ಆರಂಭವಾಗಬೇಕಿದೆ. ಇದು ಸಮಸ್ತ ಕನ್ನಡಿಗರ ಚಳವಳಿಯಾಗಬೇಕು. ವರದಿ ಪ್ರಕಾರ ಬರಬೇಕಾದ ಪ್ರದೇಶಗಳು ಬರಬೇಕು. ಕೊಡಬೇಕಾದದ್ದನ್ನು ಕೊಡಲು ಸಿದ್ಧವಿರಬೇಕು~ ಎಂದರು.

`ಸುಪ್ರೀಂಕೋರ್ಟ್‌ನಲ್ಲಿ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. ಈ ಸಂಬಂಧ ಕೋರ್ಟ್‌ಗೆ ಸರ್ಕಾರ ಮನವಿ ಸಲ್ಲಿಸಬೇಕು. ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ನಾಡಿನ ಗಣ್ಯರ ಸಮಿತಿ ರಚನೆಯಾಗಬೇಕು. ಈ ಸಮಿತಿಯಲ್ಲಿ ಕಾಸರಗೋಡು, ಬೆಳಗಾವಿಯ ಪ್ರತಿನಿಧಿಗಳೂ ಇರಬೇಕು~ ಎಂದು ಆಗ್ರಹಿಸಿದರು.

`ರಾಜ್ಯದ ಯಾವ ಸರ್ಕಾರಗಳೂ ಗಡಿ ಸಮಸ್ಯೆ ಬಗೆಹರಿಸಲು ಸರಿಯಾದ ಪ್ರಯತ್ನ ನಡೆಸುತ್ತಿಲ್ಲ. ಸಂಸತ್ತಿನಲ್ಲಿ ಮಹಾಜನ್ ವರದಿಯ ಜಾರಿಗಾಗಿ ಸಮಗ್ರ ಚರ್ಚೆ ನಡೆಯಬೇಕಿದೆ. ವರದಿ ಅಂತಿಮ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಬೇಕಿದೆ~ ಎಂದರು.

ಕರ್ನಾಟಕ ಗಡಿ ಸಲಹಾ ಸಮಿತಿ ಅಧ್ಯಕ್ಷ, ನ್ಯಾಯಮೂರ್ತಿ ಎಂ.ರಾಮಕೃಷ್ಣ ಮಾತನಾಡಿ, `ಮಹಾಜನ್ ಆಯೋಗ ರಚಿಸಿದಾಗ ಅದರ ನಿರ್ಣಯವನ್ನು ಒಪ್ಪುವುದಾಗಿ ಮಹಾರಾಷ್ಟ್ರದ ಮುಖಂಡರು ಹೇಳಿದರು. ಆದರೆ, ವರದಿ ಹೊರ ಬಂದಾಗ ತಮ್ಮ ನಿಲುವನ್ನು ಬದಲಿಸಿದರು. ಅಲ್ಲದೇ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಯಿತು~ ಎಂದು ಹೇಳಿದರು.

`ಸಂವಿಧಾನದ 2 ಮತ್ತು 3ನೇ ಕಲಂ ಪ್ರಕಾರ ಯಾವ ರಾಜ್ಯದ ಭೂರೇಖೆಯನ್ನು ಬದಲಿಸಲು ಅಥವಾ ರಾಜ್ಯದ ಭಾಗಗಳನ್ನು ಬೇರೆ ರಾಜ್ಯಕ್ಕೆ ಸೇರಿಸಲು ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಆದ್ದರಿಂದ ಸುಪ್ರೀಂಕೋರ್ಟ್‌ಗೆ ಈ ಅಧಿಕಾರ ಇಲ್ಲ ಎಂಬುದು ರಾಜ್ಯದ ನಿಲುವಾಗಿದೆ~ ಎಂದರು.

ಕಾಲ ಮಿಂಚಿಲ್ಲ: ಸಮಿತಿಯ ಸದಸ್ಯ ಕೆ.ಎನ್.ಬೆಂಗೇರಿ, `ದುರಂತ ಎಂದರೆ ಗಡಿ ವಿವಾದ ಬಗೆಹರಿಸುವ ಸಂಬಂಧ ಯಾವುದೇ ಕಾಲಮಿತಿಯನ್ನು ಗೊತ್ತುಪಡಿಸಿಲ್ಲ. ವಿವಾದ ಇತ್ಯರ್ಥಕ್ಕಾಗಿ ಕೇಂದ್ರಕ್ಕೆ ವಿಸ್ತೃತ ವರದಿ ಸಲ್ಲಿಸಿ ಒಂದು ವರ್ಷವೇ ಕಳೆದಿದ್ದರೂ ಏನೂ ತೀರ್ಮಾನ ಬಂದಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ~ ಎಂದರು.

`ಕಾಸರಗೋಡು ವಿಚಾರದಲ್ಲಿ ಕಾಲ ಮಿಂಚಿಲ್ಲ. 71 ಹಳ್ಳಿಗಳನ್ನು ಪಡೆಯುವುದು ದೊಡ್ಡ ವಿಷಯವಲ್ಲ. ಈ ಸಂಬಂಧ ರಾಜಕೀಯ ಇಚ್ಛಾಶಕ್ತಿ ಮೂಡಬೇಕಿದೆ~ ಎಂದರು.

ಮುಚ್ಚುತ್ತಿರುವ ಕನ್ನಡ ಶಾಲೆಗಳು: ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, `ಗಡಿ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ. ಕನ್ನಡ ಕಲಿಯುವ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕೊರತೆ ಇದೆ. ಗಡಿಭಾಗಗಳ ಜನರಲ್ಲಿ ಕನ್ನಡದ ಬಗ್ಗೆ ಉತ್ಸಾಹ ಇದ್ದರೂ ಪ್ರೋತ್ಸಾಹ ಮಾತ್ರ ಕಾಣುತ್ತಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ಮುಖ್ಯ: ನ್ಯಾಯವಾದಿ ಹೇಮಲತಾ ಮಹಿಷಿ, `ಭಾಷೆಯ ಆಧಾರದಲ್ಲಿ ಹೋರಾಟ ಅಪ್ರಸ್ತುತವಾಗುತ್ತಿದೆ. ಗಡಿ ಭಾಗಗಳಲ್ಲಿ ಎಂಇಎಸ್, ಶಿವಸೇನೆಯ ಪ್ರಭಾವ ಕುಂದುತ್ತಿರುವುದು ಇದಕ್ಕೆ ಸಾಕ್ಷಿ. ಹೀಗಾಗಿ ಗಡಿ ಭಾಗಗಳ ಅಭಿವೃದ್ಧಿಗೆ ಮುಂದಾಗಬೇಕು~ ಎಂದರು.

ರಾಜಕಾರಣಿಗಳ ಪಾತ್ರ:  ಶಾಸನ ತಜ್ಞ ಡಾ.ಎಚ್.ಎಸ್.ಗೋಪಾಲರಾವ್, `ಬೆಳಗಾವಿಯ ಜನ ಸೌಹಾರ್ದದಿಂದಲೇ ಇದ್ದಾರೆ. ಆದರೆ, ಜನಪ್ರತಿನಿಧಿಗಳಲ್ಲಿ ಮಾತ್ರ ಸಂಘರ್ಷ ಇದೆ. ಅಧಿಕಾರಕ್ಕೆ ಬಂದ ಮೇಲೆ ರಾಜಕಾರಣಿಗಳು ಪಕ್ಷಭೇದ ಮರೆತು ವರ್ತಿಸಬೇಕು~ ಎಂದರು.

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್, ಸಮಿತಿ ಸದಸ್ಯ ಎಚ್.ಪಿ.ಪಾಟೀಲ, ಕನ್ನಡ ಗಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್, ವಿಧಾನ ಪರಿಷತ್ ಸದಸ್ಯೆ ಡಾ.ಎಸ್.ಆರ್.ಲೀಲಾ, ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಸಾಹಿತಿ ಡಾ. ಎಸ್.ಬಿ.ಮಿಣಜಿಗಿ, ಐಐಎಂ ನಿವೃತ್ತ ಪ್ರಾಧ್ಯಾಪಕ ಪ್ರೊ. ತೀ.ಶ್ರೀ.ನಾಗಭೂಷಣ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವ.ಚ.ಚನ್ನೇಗೌಡ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಸಿದ್ದಯ್ಯ, ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾ ಖಾನ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT