ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರಿಗೂ ವಾಲ್ಮೀಕಿ ಆದರ್ಶ: ವೇಣು

Last Updated 12 ಅಕ್ಟೋಬರ್ 2011, 6:05 IST
ಅಕ್ಷರ ಗಾತ್ರ

ಚಿತ್ರದುರ್ಗ: ವಾಲ್ಮೀಕಿ ರಚಿಸಿದ ರಾಮಾಯಣ ಬೇಕು, ವಾಲ್ಮೀಕಿ ಬೇಡ ಎನ್ನುವುದು ಶೋಚನೀಯ ಸಂಗತಿ. ಸರ್ವ ಜಾತಿ, ಜನಾಂಗಗಳಿಗೆ ವಾಲ್ಮೀಕಿ ಆದರ್ಶಪ್ರಾಯ ಎಂದು ಸಾಹಿತಿ ಬಿ.ಎಲ್. ವೇಣು ಪ್ರತಿಪಾದಿಸಿದರು.

ನಗರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ರಾಜಕಾರಣಿಗಳು ರಾಮರಾಜ್ಯವಾಗಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ, ರಾಮನ ರೀತಿಯಲ್ಲಿ ಯಾವ ರಾಜಕಾರಣಿಯೂ ಇಲ್ಲ ಮತ್ತು ಯಾವ ಪಕ್ಷವೂ ಇಲ್ಲ. ರಾಮರಾಜ್ಯ ಆಡಳಿತ ಪ್ರತಿಪಾದಿಸುವ ಪಕ್ಷದಲ್ಲಿ ರಾಮನೇ ಇಲ್ಲ. ರಾವಣರ ಸಂಖ್ಯೆಯೇ ಹೆಚ್ಚಿದೆ. ರಾಮನ ಹೆಸರಿನಲ್ಲಿ ದೇಶ ಛಿದ್ರ ಮಾಡುವ ರಾವಣರಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ರಾಜಕಾರಣಿಗಳು ಭೂಮಿ ಲೂಟಿ ಮಾಡಿ, ನೈಸರ್ಗಿಕ ಸಂಪತ್ತು ನಾಶಪಡಿಸಿದ್ದಾರೆ. ಇದರಿಂದಾಗಿ ಪರಪ್ಪನ ಅಗ್ರಹಾರ ದಿನೇದಿನೇ `ಹೌಸ್‌ಫುಲ್~ ಆಗುತ್ತಿದೆ. ದೇವರಿಗೆ ಕಿರೀಟ, ಕತ್ತಿ ದೇಣಿಗೆ ನೀಡಿದರೂ ಯಾವುದೇ ರಾಜಕಾರಣಿಯನ್ನು ದೇವರು ರಕ್ಷಿಸಲಿಲ್ಲ ಎಂದು ನುಡಿದರು.

ನಾಯಕ ಜನಾಂಗಕ್ಕೆ ವಾಲ್ಮೀಕಿಯನ್ನು ಸೀಮಿತ ಮಾಡುವುದು ದ್ರೋಹವಾಗುತ್ತದೆ. ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ, ಪೈಗಂಬರ್ ಮುಂತಾದವರು ಜಾತ್ಯತೀತರು ಮತ್ತು ಧರ್ಮಾತೀತರು. ವಾಲ್ಮೀಕಿ ರಚಿಸಿದ ರಾಮಾಯಣ ಸರ್ವ ಜನಾಂಗದ ಪೂಜ್ಯ ಗ್ರಂಥವಾಗಿದೆ. ಬಾಯಿಂದ ಬಾಯಿಗೆ ಹರಡಿದ ವಾಲ್ಮೀಕಿ ರಾಮಾಯಣ ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಗೊತ್ತಿದೆ ಎಂದು ವಿವರಿಸಿದರು.

ನಮ್ಮಲ್ಲಿ ಒಗ್ಗಟ್ಟಿಲ್ಲ. ಎಲ್ಲ ಜನಾಂಗಗಳಿಗೂ ಇಂದು ನಾಯಕರಿದ್ದಾರೆ. ಆದರೆ, ನಾಯಕರ ಜನಾಂಗದಲ್ಲಿ ನಾಯಕರೇ ಇಲ್ಲ. ನಾಯಕ ಜನಾಂಗದ 6 ಶಾಸಕರಿದ್ದಾರೆ. ಅವರಿಗೂ ಅತ್ತು ಕರೆದೂ ಸಚಿವರನ್ನಾಗಿ ಮಾಡಲಾಗಿದೆ. ಎಲ್.ಜಿ. ಹಾವನೂರು ಕೂಡ ನಮ್ಮವರು. ಆದರೆ, ಅವರು ಸಹ ಎರಡು ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಬೇಕಾಯಿತು ಎಂದು ನುಡಿದರು.

ಉತ್ತಮ ಆಡಳಿತಕ್ಕೂ ನಾಯಕರು ಖ್ಯಾತಿ ಪಡೆದಿದ್ದಾರೆ. ಪಾಳೇಗಾರರು ತಮ್ಮದೇ ಆದ ಛಾಪು ಮೂಡಿಸಿದರು. ಮದಕರಿ ನಾಯಕನ ಸೇನೆಯಲ್ಲಿ 3 ಸಾವಿರ ಮುಸ್ಲಿಂ ಸೈನಿಕರಿದ್ದರು. ಹೈದರ್ ಅಲಿ ಜತೆ ಹೋರಾಡಿದ್ದರು. ಪಾಳೇಗಾರರು ಅಷ್ಟಮಠಗಳು ಮತ್ತು ಬೃಹನ್ಮಠ ಸ್ಥಾಪಿಸಿದರು. ಭಕ್ತಿ ಮತ್ತು ಶಕ್ತಿ ಸಂಗಮದ ದ್ಯೋತಕ ಪಾಳೇಗಾರರಾಗಿದ್ದಾರೆ ಎಂದು ವೇಣು ಸ್ಮರಿಸಿದರು.

ನಾಯಕ ಜನಾಂಗದ ಬೇಡರ ಕಣ್ಣಪ್ಪ ಮೊದಲ ನೇತ್ರದಾನಿ. ಏಕಲವ್ಯ ಗುರುವಿಗೆ ಭಕ್ತಿ ತೋರಿಸಿದ ಶ್ರೇಷ್ಠ ವ್ಯಕ್ತಿ. ಆದರೆ, ಪುರೋಹಿತಶಾಹಿಗಳು ಗುರುವಿನಿಂದ ಆದ ದ್ರೋಹ ಎನ್ನುವುದನ್ನು ಎತ್ತಿ ತೋರಿಸಲಿಲ್ಲ ಎಂದರು.

ಚಿತ್ರದುರ್ಗದಲ್ಲಿ ಪಾಳೇಗಾರರು ಆಡಳಿತ ನಡೆಸಿ 500 ವರ್ಷಗಳಾಗಿವೆ. ವಿವಿ ಸಾಗರಕ್ಕೆ 100 ವರ್ಷಗಳಾಗಿವೆ. ದುರ್ಗೋತ್ಸವವಾಗಿ 5-6 ವರ್ಷಗಳಾಗಿವೆ. ಇನ್ನಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಉತ್ಸವಗಳನ್ನು ಆಚರಿಸಲು ಮುಂದಾಗಬೇಕು. ನೆಲ-ಜಲ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಚಳ್ಳಕೆರೆ ಗೇಟ್‌ನಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪಿಸಲು ್ಙ 5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು. ನಗರ ಸಭೆಯಿಂದ ್ಙ 10 ಲಕ್ಷ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಪ್ರಕಟಿಸಿದರು.

ಮದಕರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ. ಬೋರಪ್ಪ ಮಾತನಾಡಿ, ಚಿತ್ರದುರ್ಗದಲ್ಲಿ ವಾಲ್ಮೀಕಿ ಪುತ್ಥಳಿ ಮಾಡಬೇಕು. ಇದಕ್ಕೆ ಸರ್ಕಾರ, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಅಂಡ್ ಕಮೀಷನರ್ ಸ್ಟ್ಯಾಂಪ್ಸ್ ಇಲಾಖೆ ಬಿ. ಶಿವಪ್ಪ, ಬುಡಕಟ್ಟು ಹಾಗೂ ನಾಯಕ ಜನಾಂಗ ರಾಜ್ಯದಲ್ಲಿ ಶೇ. 7ರಿಂದ 8ರಷ್ಟು ಜನಸಂಖ್ಯೆ ಇದ್ದರೂ ಮೀಸಲಾತಿಯ ಪ್ರಮಾಣ ಕಡಿಮೆಯಾಗಿದೆ. ಪ್ರಸ್ತುತ ಶೇ. 3ರಷ್ಟು ಮೀಸಲಾತಿ ಮಾತ್ರ ಕಲ್ಪಿಸಲಾಗಿದೆ. ಆದರೆ, ಇದು ಶೇ 7.5ರಷ್ಟು ಆಗಬೇಕಾಗಿತ್ತು. ಜನಾಂಗವು ಮುಂದೆ ಬರಬೇಕಾದರೆ ಶಾಸಕರನ್ನು ಅಥವಾ ಸಚಿವರನ್ನು ಹೆಚ್ಚು ಮಾಡುವುದರಿಂದ ಸಾಧ್ಯವಿಲ್ಲ.  ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡಿ ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಹೆಚ್ಚಿನ ಮೀಸಲಾತಿ ಕಲ್ಪಿಸಿದಾಗ ಮಾತ್ರ ಸಾಧ್ಯವಿದೆ. ಮುಂದಿನ ದಿನಗಳಲ್ಲಾದರೂ ಸಂಘಟಿತರಾಗಿ ಸಿಗಬೇಕಾದ ಸೌಲಭ್ಯಕ್ಕಾಗಿ ಹೋರಾಟ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ಸಂಸತ್ ಸದಸ್ಯ ಜನಾರ್ದನಸ್ವಾಮಿ, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಜಿ.ಪಂ. ಉಪಾಧ್ಯಕ್ಷೆ ವಿಜಯಮ್ಮ ಎಂ. ಜಯಣ್ಣ, ಸದಸ್ಯರಾದ ಟಿ. ರವಿಕುಮಾರ್, ಸಿಇಒ ಎನ್. ಜಯರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಂ. ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ, ದಲಿತ ಮುಖಂಡ ಎಂ. ಜಯಣ್ಣ, ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ, ವಾಲ್ಮೀಕಿ ಸಂಘದ ಅಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ, ನಗರಸಭೆ ಸದಸ್ಯ ಡಿ. ಪ್ರಕಾಶ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಜಿ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರಹ್ಮಣ್ಯ ಸ್ವಾಗತಿಸಿದರು.  ಕೆ. ವೆಂಕಣ್ಣಾಚಾರ್ ಕಾರ್ಯಕ್ರಮ ನಿರೂಪಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT