ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಶಿಕ್ಷಣ ಅಭಿಯಾನ ಕಾಮಗಾರಿ ಅಪೂರ್ಣ: ಸಚಿವ ಕಾರಜೋಳ ಕಳವಳ

Last Updated 13 ಸೆಪ್ಟೆಂಬರ್ 2011, 6:00 IST
ಅಕ್ಷರ ಗಾತ್ರ

ಬಾಗಲಕೋಟೆ: ಸರ್ವಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ  ಕೈಗೊಳ್ಳಲಾದ ಕಾಮಗಾರಿ ಹಾಗೂ  ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಶಾಲೆಗಳ ಎಲ್ಲ ಎಸ್.ಡಿ.ಎಂ.ಸಿ.ಗಳಿಗೆ ಹಾಗೂ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ  ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಸೋಮವಾರ ನಡೆದ  ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಅನುಷ್ಠಾನ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ  ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಿಸಬೇಕಾದ ಶಾಲಾ ಕೊಠಡಿಗಳು ಹಾಗೂ ಮುಖ್ಯ ಶಿಕ್ಷಕರ ಕೊಠಡಿಗಳ ನಿರ್ಮಾಣವನ್ನು ಈವರೆಗೆ ಪೂರ್ಣಗೊಳಿಸದ ಮತ್ತು 2009-10 ನೇ ಸಾಲಿನ ಯೋಜನೆ ಯನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಾಡಲಾದ ಶಾಲಾ ಅಭಿವೃದ್ಧಿ ಸಮಿತಿಗಳು ಹಾಗೂ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವ ಶಿಕ್ಷಣ ಅಭಿಯಾನ ಯೋಜನೆ ಯಡಿ ವಿವಿಧ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಕುರಿತು ಮೇಲ್ವಿಚಾರಣೆ ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.
ಸಮರ್ಪಕವಾಗಿ ಕಾರ್ಯನಿರ್ವಹಿಸದ  ಬಿಆರ್‌ಪಿ -ಸಿಆರ್‌ಸಿ  ಅಧಿಕಾರಿಗಳನ್ನು ವಾಪಸ್ ಕಳಿಸುವಂತೆ ತಿಳಿಸಿದರು.

ಸಿವಿಲ್ ಕಾಮಗಾರಿಗಳ ವಿಳಂಬಕ್ಕೆ ಕಾರಣವಾಗುತ್ತಿರುವ  ಸರ್ವ ಶಿಕ್ಷಣ ಅಭಿಯಾನದ ಎಂಜನಿಯರ್‌ಗಳ ಜವಾ ಬ್ದಾರಿಯನ್ನು ಜಿ.ಪಂ. ಎಂಜನಿಯರ್‌ಗಳಿಗೆ ವಹಿಸುವಂತೆ ಅವರು ಸೂಚಿಸಿದರು.ಪುನರ್ವಸತಿ ಗ್ರಾಮಗಳಿಗೆ  ಸ್ಥಳಾಂತರ ಗೊಳ್ಳದ ಗ್ರಾಮಗಳ ಶಾಲೆಗಳಲ್ಲಿ  ಕೊಠಡಿಗಳ ನಿರ್ಮಾಣ ಮಾಡಲು  ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದು ಕೊಠಡಿ ನಿರ್ಮಾಣಕ್ಕೆ  ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲ್ಲೂಕುವಾರು ಸರ್ವ ಶಿಕ್ಷಣ ಅಭಿಯಾನ ಯೋಜನೆ ಕಾರ್ಯಕ್ರಮಗಳ ಮಾಹಿತಿ ಪಡೆದ ಸಚಿವರು, ಕಸ್ತೂರಬಾ ವಿದ್ಯಾರ್ಥಿನಿಯರ ವಸತಿ ನಿಲಯಗಳ ಮೇಲ್ವಿಚಾರಣೆ ಹಾಗೂ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಿಸಿದ ಬಿಆರ್‌ಪಿ ಗಳು ಜವಾಬ್ದಾರಿಯಿಂದ ಮೇಲ್ವಿಚಾರಣೆ ನಡೆಸುವಂತೆ ಸಚಿವರು ತಿಳಿಸಿದರು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕವಿತಾ ದಡ್ಡೇನ್ನವರ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ,  ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ,  ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ,  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜಿ.ಸಿ. ಪ್ರಕಾಶ, ಡಿಡಿಪಿಐ ಸಿದ್ಧರಾಮ ಮನಹಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿ, ಸಿಆರ್‌ಸಿ ಅಧಿಕಾರಿಗಳು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT