ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರಕ್ಕೆ ಚರಮಗೀತೆ

Last Updated 26 ಫೆಬ್ರುವರಿ 2011, 15:35 IST
ಅಕ್ಷರ ಗಾತ್ರ

ಬಿ.ಎಸ್.ಷಣ್ಮುಖಪ್ಪ

ಪ್ರಪಂಚದ ಮೊಟ್ಟಮೊದಲ ನಾಗರಿಕತೆಯ ತೊಟ್ಟಿಲು, ತೈಲ ಸಂಪನ್ಮೂಲದ ಖನಿಯಾದ ಮಧ್ಯಪ್ರಾಚ್ಯದಲ್ಲಿ ತಲೆ ಎತ್ತಿರುವ ಅಶಾಂತಿಯ ಕೂಗು ಈಗ ಜಗತ್ತಿನ ಎಲ್ಲ ಮೂಲೆಗಳಲ್ಲೂ ಅನುರಣಿಸುತ್ತಿದೆ. ಅದು ನಿಧಾನವಾಗಿ ಉತ್ತರ ಆಫ್ರಿಕಾ ಭಾಗಗಳಿಗೂ ಹಬ್ಬುತ್ತಿದೆ. ಸರ್ವಾಧಿಕಾರಿ ಆಡಳಿತದ ರಾಷ್ಟ್ರಗಳ ಜನರಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಆಸೆ ಮೂಡಿಸಿದೆ. ದೊಡ್ಡ ಮಟ್ಟದ ಬಂಡಾಯಕ್ಕೆ ನಾಂದಿ ಹಾಡಿದೆ.

ಈಜಿಪ್ಟ್‌ನ ನಂತರ ಈಗ ಹೊತ್ತಿ ಉರಿಯುತ್ತಿರುವ ಪುಟ್ಟ ರಾಷ್ಟ್ರ ಲಿಬಿಯಾದಲ್ಲಿ ಸರ್ವಾಧಿಕಾರಿ ಮುಅಮ್ಮರ್ ಅಲ್ ಗಡಾಫಿಯವರ ಕುರ್ಚಿಯನ್ನು ಅಲ್ಲಿನ ಜನ ಜೋರಾಗಿಯೇ ಅಲ್ಲಾಡಿಸುತ್ತಿದ್ದಾರೆ. ಅತ್ಯಂತ ಜನಪ್ರಿಯ ನಾಯಕನಾಗಿ ಬೆಳೆದು ಬಂದ ಗಡಾಫಿ ಈಗ ತಮ್ಮದೇ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಒಂದು ಕಾಲದಲ್ಲಿ ಅವರನ್ನು ಬಹಳ ಇಷ್ಟಪಟ್ಟಿದ್ದ ಜನರಿಗೇ ಈಗವರು ಬೇಡವಾಗಿದ್ದಾರೆ. ಕಳೆದ 42 ವರ್ಷಗಳ ಅವರ ಸುದೀರ್ಘ ಆಡಳಿತದ ಕೊನೆಯ ದಿನಗಳು ಸಮೀಪಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜಕೀಯ ಹಕ್ಕುಗಳಿಗಾಗಿ ಹೋರಾಡುತ್ತಿರುವ ಲಿಬಿಯಾ ಜನ ಗಡಾಫಿಯ ರಾಜಕೀಯ ಬದುಕಿಗೆ ಚರಮಗೀತೆ ಹಾಡುತ್ತಿದ್ದಾರೆ.

 ಮಧ್ಯ ಪ್ರಾಚ್ಯ ಎಂದರೆ ಈಜಿಪ್ಟ್, ಬಹರೇನ್, ಇರಾನ್, ಇರಾಕ್, ಇಸ್ರೇಲ್, ಸೈಪ್ರಸ್, ಜೋರ್ಡಾನ್, ಲೆಬನಾನ್, ಒಮನ್, ಪ್ಯಾಲೆಸ್ತೈನ್, ಸಿರಿಯಾ, ಟರ್ಕಿ, ಸಂಯುಕ್ತ ಅರಬ್ ರಾಷ್ಟ್ರಗಳು ಮತ್ತು ಯಮೆನ್‌ನಂತಹ ಚಿಕ್ಕಪುಟ್ಟ ದೇಶಗಳ ಸಮೂಹ. ಮರಳುಗಾಡಿನ ಬಯಲಿನಲ್ಲಿ ಹರಡಿಕೊಂಡಿರುವ  ಮಧ್ಯಪ್ರಾಚ್ಯದ ಭೌಗೋಳಿಕ ಪ್ರದೇಶವನ್ನು ಕರಾರುವಾಕ್ಕಾಗಿ ಇಂತಿಷ್ಟೇ ಎಂದು ಗಡಿ ಹಾಕಿ ಗುರುತಿಸುವಂತಿಲ್ಲ. ಮಧ್ಯಭಾಗದಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಹೊಂದಿರುವ ಈ ಭೂಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಸಮುದಾಯ ನೆಲೆ ನಿಂತಿದೆ. ಅದ್ಭುತ ಎನಿಸುವಂತಹ ಸಂಸ್ಕೃತಿ ಮತ್ತು ಕಲೆಗಳನ್ನು ಮೈಗೂಡಿಸಿಕೊಂಡಿರುವ ಇಲ್ಲಿನ ಮುಸ್ಲಿಂ ಸಮುದಾಯದ ದೊಡ್ಡ ದುರಂತವೆಂದರೆ ಹೇಳಿಕೊಳ್ಳುವಂತಹ ರಾಜಕೀಯ ಮತ್ತು ಪ್ರಖರ ಚಿಂತಕರೇ ಇಲ್ಲದಿರುವುದು! ಬಹುಶಃ ಇರುವ ಚಿಂತಕರ ಸಂಖ್ಯೆಯೂ  ತೀರಾ ಬೆರಳೆಣಿಕೆಯಷ್ಟು.

ಆದ್ದರಿಂದಲೇ ಈ ಎಲ್ಲಾ ರಾಷ್ಟ್ರಗಳಲ್ಲಿ ಪಾಳೆಗಾರಿಕೆ ಸ್ವರೂಪದ ಆಡಳಿತ ಅನೂಚಾನವಾಗಿ ಸಾಗಿ ಬಂದಿದೆ. ಒಂದೇ ಕುಟುಂಬದ ಸದಸ್ಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಅದು ಟ್ಯುನಿಷಿಯಾ ಆಗಬಹುದು, ಜೋರ್ಡಾನ್, ಬಹರೇನ್, ಈಜಿಪ್ಟ್ ಅಥವಾ ಸಂಯುಕ್ತ ಅರಬ್ ರಾಷ್ಟ್ರವಾಗಬಹುದು. ಇಲ್ಲೆಲ್ಲಾ ಒಂದೇ ಕುಟುಂಬದ ಸರ್ವಾಧಿಕಾರಿಗಳು ಅಧಿಕಾರವನ್ನು ಸದಾ ತಮ್ಮ ಕೈಯಲ್ಲಿ ಹಿಡಿದೇ ನಡೆಸುತ್ತ ಬಂದಿದ್ದಾರೆ. ನೆಪಮಾತ್ರಕ್ಕೆ ಅಲ್ಲಿ ಚುನಾವಣೆಗಳು ನಡೆಯುತ್ತವೆ. ಕುಟುಂಬ ಸದಸ್ಯರ ಕೈಯಲ್ಲೇ ವಿದೇಶಾಂಗ, ಹಣಕಾಸು, ಒಳಾಡಳಿತಗಳಂತಹ ಪ್ರಮಖ ಅಧಿಕಾರ ಖಾತೆಗಳು ಕೇಂದ್ರೀಕೃತಗೊಂಡಿವೆ. ಅದರ ಪರಿಣಾಮವೇ ದುರಾಳಿತದ ಸುದೀರ್ಘ ಪರ್ವ.

ಶೇ. 97ರಷ್ಟು ಸುನ್ನಿ ಮುಸ್ಲಿಮರನ್ನು ಹೊಂದಿರುವ ಲಿಬಿಯಾವನ್ನೇ ನೋಡಿ. ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿದಿರುವ ಗಡಾಫಿ ರಾಜರೂ ಅಲ್ಲ, ಅಧ್ಯಕ್ಷರೂ ಅಲ್ಲ. ಸೇನೆಯನ್ನು ಕೈಯಲ್ಲಿಟ್ಟುಕೊಂಡಿರುವ ಪ್ರಬಲ ಪಾಳೆಗಾರ. ಪ್ಯಾಲೆಸ್ತೈನ್-ಇಸ್ರೇಲ್, ಕುರ್ದಿಸ್ತಾನ್ ದೇಶಗಳ ನಡುವಿನ ಜಲ ಸಂಪನ್ಮೂಲ ವಿವಾದಗಳು, ಲೆಬನಾನ್‌ನಲ್ಲಿ ಸಿರಿಯಾದ ಹಾಜರಿ, ಸಿರಿಯಾ-ಟರ್ಕಿ, ಈಜಿಪ್ಟ್- ಸೂಡಾನ್, ಸೌದಿ ಅರೇಬಿಯಾ, ಯೆಮೆನ್ ನಡುವಿನ ಗಡಿ ವಿವಾದಗಳಂತಹ ಸಾಂಪ್ರದಾಯಿಕ ಸಂಘರ್ಷಗಳಲ್ಲೇ ತೊಳಲಾಡುತ್ತಿದ್ದ ಮಧ್ಯಪ್ರಾಚ್ಯದ ಜನರು ಈಗ ಹೊಸ ದನಿಯಲ್ಲಿ ರಾಜಕೀಯ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿರುವುದು ಸಹಜವಾಗಿಯೇ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇಲ್ಲಿ ನಡೆಯುತ್ತಿರುವ ಸದ್ಯದ ಬೆಳವಣಿಗೆ ಮತ್ತು ಅವು ಹುಟ್ಟು ಹಾಕಿರುವ ಸವಾಲುಗಳನ್ನು ಗಮನಿಸಿದಾಗ ಇಲ್ಲಿ ರಾಜಕೀಯ ಸಾಧ್ಯತೆಗಳ ಹೊಸ ಪ್ರಯೋಗ ನಡೆದೀತೇ ಎಂಬ ದೊಡ್ಡ ಪ್ರಶ್ನೆ ಎಲ್ಲರ ಮುಂದಿದೆ. ಈ ಹಿಂದೆ ಇಲ್ಲೆಲ್ಲಾ ನಡೆಯುತ್ತಿದ್ದ ಜನಾಂಗೀಯ ಮತ್ತು ಸಾಂಪ್ರದಾಯಿಕ ಸಂಘರ್ಷಗಳ ಇತಿಹಾಸವನ್ನು ಗಮನಿಸಿದಾಗ ಜನರು ಈಗ ಹೊಸತೊಂದು ಬೇಡಿಕೆ ಮುಂದಿಟ್ಟುಕೊಂಡು ಬೀದಿಗೆ ಇಳಿದಿರುವುದು ಮತ್ತೊಂದು ಭಿನ್ನ ಚರಿತ್ರೆಗೆ ಮುನ್ನುಡಿಯಾಗಿ ಗೋಚರಿಸುತ್ತಿದೆ.

ಧರ್ಮಾಂಧ ನೇತಾರರು, ಸರ್ವಾಧಿಕಾರಿಗಳು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಂದೂ ಒಪ್ಪಿಕೊಳ್ಳದ  ಧಾರ್ಮಿಕ ಚೌಕಟ್ಟುಗಳ ವ್ಯವಸ್ಥೆ ಈಗಿನ ‘ಕ್ರಾಂತಿ’ಗೆ ಕಹಳೆ ಊದಿವೆ. ಇದನ್ನು ಕ್ರಾಂತಿ ಎಂದು ಕರೆಯುವುದು ಅಷ್ಟೊಂದು ಸೂಕ್ತವಲ್ಲ. ಆದರೂ ಕ್ರಾಂತಿಯ ಕಿಡಿಯಂತೂ ಹೊತ್ತಿಕೊಂಡಿದೆ. ಇಲ್ಲಿನ ಜನರ ರಾಜಕೀಯ ಹಕ್ಕುಗಳ ಹೋರಾಟಕ್ಕೆ ಹೊಸ ಭಾಷ್ಯ ಬರೆಯುವ ಮಹೂರ್ತ ನಿಶ್ಚಿತವಾಗಿಯೂ ಕೂಡಿಬಂದಿದೆ.

 ಉನ್ನತ ಶಿಕ್ಷಣ ಪಡೆದು ಮಹತ್ವಾಕಾಂಕ್ಷೆ ಹೊತ್ತ ಹತಾಶ ಮನೋಭಾವದ ನಿರುದ್ಯೋಗಿ ಯುವಕರ ಸಮೂಹಗಳ ಒಂದೇ ಒಂದು ಬೇಡಿಕೆ ಎಂದರೆ ಬೇರುಬಿಟ್ಟಿರುವ ಸುದೀರ್ಘ ಆಡಳಿತಗಳನ್ನು ಕೊನೆಗಾಣಿಸುವುದು. ಇದರ ಹಿಂದೆ ಹಲವಾರು ಸಾಮಾಜಿಕ ಬೇಡಿಕೆಗಳೂ ಅಡಗಿವೆ. ಬುದ್ಧಿವಂತರು ಆಡಳಿತದ ಚುಕ್ಕಾಣಿ ಹಿಡಿಯಬೇಕು. ದೇಶದ ಜನರ ಬಡತನವನ್ನು ನೀಗಿಸಬೇಕು ಎಂಬುದು ಇವರೆಲ್ಲರ ಒಕ್ಕೊರಲ ಆಗ್ರಹ. ಸಾಂಪ್ರದಾಯಿಕವಾಗಿ ಇಲ್ಲಿನ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದವರು ಈಗ ಆಕ್ರೋಶಗೊಂಡಿರುವ ಯುವ  ಸಮೂಹಕ್ಕೆ ತೆರೆಯ ಮರೆಯಲ್ಲೇ ತುಪ್ಪ ಸುರಿಯುತ್ತಿದ್ದಾರೆ. ಸಂಪ್ರದಾಯವಾದಿಗಳು ಮೀಸೆಯ ಮರೆಯಲ್ಲೇ ಕೇಕೆ ಹಾಕುತ್ತಿದ್ದಾರೆ. ಹೇಗಾದರೂ ಮಾಡಿ ವ್ಯವಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಹುನ್ನಾರಗಳೊಂದಿಗೆ ಕಾದು ಕುಳಿತಿದ್ದಾರೆ.

ಇಂಟರ್‌ನೆಟ್, ಫೇಸ್‌ಬುಕ್, ಯೂ ಟ್ಯೂಬ್, ಟ್ವಿಟರ್‌ಗಳು ಈ ದೇಶಗಳ ಬುದ್ಧಿವಂತ ಜನರ ಆಕ್ರೋಶಕ್ಕೆ ಉತ್ತೇಜನ ನೀಡಿ ಅಶಾಂತ ಮನಸ್ಥಿತಿಯವರನ್ನು ಒಂದು ವೇದಿಕೆಯಡಿ ತರುತ್ತಿವೆ. ಈಗ ಬೀದಿಗಿಳಿದಿರುವ ಜನರೆಲ್ಲಾ ಗರಿಷ್ಠ ಮಟ್ಟದ ಸ್ವಾತಂತ್ರ್ಯ ಅಥವಾ ಮುಕ್ತತೆಯನ್ನೇನೂ ಕೇಳುತ್ತಿಲ್ಲ. ನಮಗೆ ಕನಿಷ್ಠ ಅಭಿವ್ಯಕ್ತಿ ಸ್ವಾತಂತ್ರ್ಯವನ್ನಾದರೂ ಕೊಡಿ ಎಂಬುದಷ್ಟೇ ಅವರ ಮೊದಲ ಅಹವಾಲು. ಇಲ್ಲಿರುವ ಪ್ರಾಕೃತಿಕ ಸಂಪನ್ಮೂಲ ಹಾಗೂ ಅಪಾರ ಪ್ರಮಾಣದ ಸಾಮಾಜಿಕ ಉತ್ಪನ್ನಗಳನ್ನು ಬಳಸಿಕೊಂಡು ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವ ಆಡಳಿತ ನೆಲೆಯೂರಬೇಕೆಂಬುದೇ ಬಂಡೆದ್ದಿರುವವರ ಇಚ್ಛೆ.

ಲಿಬಿಯಾದಲ್ಲಿ ಸೇನಾಡಳಿತ ‘ಜುಂಟಾ’ ವ್ಯವಸ್ಥೆ ವಿರೋಧಿ ಪ್ರತಿಭಟನಾಕಾರರನ್ನು ಗುಂಡಿಟ್ಟು ಕೊಲ್ಲುತ್ತಿರುವುದನ್ನು ನೋಡಿದರೆ ಪರಿವರ್ತನೆ ಅಷ್ಟು ಸರಳವಾಗಿ ಆದೀತು ಎಂದು ಭಾವಿಸುವುದು ತಪ್ಪಾದೀತು. ಸಾಂಪ್ರದಾಯಿಕ ಆಡಳಿತ ವಿರೋಧಿಗಳು ಈ ಬೆಳವಣಿಗೆಗಳನ್ನು ಹೈಜಾಕ್ ಮಾಡಲೂಬಹುದು. ಲಿಬಿಯಾ ಧಾರ್ಮಿಕ ಮೂಲಭೂತವಾದಿಗಳ ತೆಕ್ಕೆಗೆ ಸೇರಿದರೂ ಆಶ್ಚರ್ಯವೇನಿಲ್ಲ. ಆದರೆ ಹೊಸ ಜನಾಂಗದ ಯುವ ಸಮೂಹ ಕೇಳುತ್ತಿರುವ ರಾಜಕೀಯ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಬೇಡಿಕೆ ಅಷ್ಟು ಸುಲಭವಾಗಿ ಅಳಿಸಿ ಹೋಗುತ್ತವೆ ಎಂದು ಹೇಳಲಿಕ್ಕಾಗದು. ಏಕೆಂದರೆ ಅವರ ಬೇಡಿಕೆಗಳ ಮೂಲ ಉದ್ದೇಶ ಅಲ್ಲಿನ ದಟ್ಟ ದರಿದ್ರರಿಗೂ ಮತ್ತು ನಿರಕ್ಷರಿಗಳಿಗೂ ಅರ್ಥವಾಗಿದೆ.  ನಾವು ಶೋಷಣೆಗೆ ಒಳಗಾಗಿದ್ದೇವೆ ಎಂಬುದು ಅವರಿಗೆ ಅರ್ಥವಾಗಿದೆ.

ಲಿಬಿಯಾದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮೇಲೆ ಅಮೆರಿಕ ಹದ್ದಿನ ಕಣ್ಣಿಟ್ಟಿದೆ. ಅಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿದೆ ಎಂದು ಸಣ್ಣ ಕೂಗೆಬ್ಬಿಸಿದೆ. ಕಾರಣವಿಲ್ಲದೆ ಲಿಬಿಯಾ ಬೆಳವಣಿಗೆಗಳಲ್ಲಿ  ಮೂಗು ತೂರಿಸುತ್ತಿದೆ. ಗಡಾಫಿಯ ಪದಚ್ಯುತಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿಸಲು ತನ್ನದೇ ಆದ ಮಸಲತ್ತು ಮಾಡುತ್ತಿದೆ. ಅದಕ್ಕೆಂದೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಲಿಬಿಯಾವನ್ನು ಉಚ್ಚಾಟಿಸಬೇಕೆಂಬ ಯುರೋಪ್ ಒಕ್ಕೂಟದ ಪ್ರಸ್ತಾವವನ್ನು ಅದೀಗ ಬೆಂಬಲಿಸಿದೆ. ಗಡಾಫಿ ಆಡಳಿತದ ವಿರುದ್ಧ ದಿಗ್ಭಂಧನ ಹೇರಲೂ ಅದು ಚಿಂತನೆ ನಡೆಸಿದೆ.

ಇದೆಲ್ಲಾ ಏನು?
ಅಂತರ್‌ರಾಷ್ಟ್ರೀಯ ಸಂಬಂಧಗಳ ಮೂಲತತ್ವ ಯಾವುದೇ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಆಂತರಿಕ ಬೆಳವಣಿಗೆಗಳಲ್ಲಿ ಮೂಗು ತೂರಿಸಬಾರದು ಹಾಗೂ ಬಲ ಪ್ರಯೋಗ ಮಾಡಬಾರದು ಎಂಬುದು. ಆದರೆ ಈ ಅಂಶವನ್ನು ಅಮೆರಿಕ ಪಾಲಿಸುತ್ತಿದೆಯೇ? ಅದು ಎಂದಾದರೂ ಈ ನಿಯಮವನ್ನು ಅನುಸರಿಸಿದೆಯೇ?

ಬೇರೆ ಯಾವುದೇ ರಾಷ್ಟ್ರ ಆಂತರಿಕ ಸಂಘರ್ಷಕ್ಕೆ ಗುರಿಯಾದರೆ ಅಮೆರಿಕಕ್ಕೆ ಹೋಳಿಗೆ ಉಂಡಷ್ಟೇ ಸಂತೋಷ. ಮಧ್ಯಪ್ರಾಚ್ಯದ ತೈಲ ಸಂಪತ್ತಿನ ಮೇಲೆ ಅದು ಬಹಳ ಹಿಂದಿನಿಂದ  ಕಣ್ಣಿಟ್ಟುಕೊಂಡು ಕುಳಿತಿದೆ. ಈ ‘ಹಿರಿಯಣ್ಣ’ನಿಗೆ ಲಿಬಿಯಾದ ಬೆಳವಣಿಗೆಗಳು ಪುಳಕ ಉಂಟು ಮಾಡಿರಲೂ ಸಾಕು. ಇರಾಕ್ ಮೇಲೆ ಯುದ್ಧ ನಡೆಸಿದಾಗ ಮತ್ತು ಈಗ ಆಫ್ಘಾನಿಸ್ತಾನದಲ್ಲಿ ಅದು ನಡೆಸುತ್ತಿರುವ ಮಾನವ ಹಕ್ಕುಗಳ ದಮನವನ್ನು ಯಾರೂ ಪ್ರಶ್ನಿಸುವಂತಿಲ್ಲ. ಮೊದಲಿನಿಂದಲೂ ನಾನು ಇಡೀ ಜಗತ್ತಿನ ಯಜಮಾನ ಎಂಬ ಧೋರಣೆಯಲ್ಲೇ ಅದು ನಡೆದುಕೊಳ್ಳುತ್ತಿದೆ.

ರಷ್ಯಾದ ಪ್ರಬಲ ಒಕ್ಕೂಟ ವ್ಯವಸ್ಥೆ ‘ಮುಕ್ತಸ್ವಾತಂತ್ರ್ಯ’ ಮತ್ತು ‘ಜಾಗತೀಕರಣ’ದ ಪ್ರಕ್ರಿಯೆಗೆ ಒಳಗಾಗಿ ಯಾವಾಗ ಕುಸಿದು ಬಿತ್ತೋ ಅಂದೇ ಅಮೆರಿಕ ಎದೆ ಸೆಟೆಸಿ ನಿಂತಿತು. ಜಗತ್ತಿನ ಯಾವುದೇ ಮೂಲೆಯಲ್ಲೇ ಏನೇ ನಡೆಯಲಿ ಅಲ್ಲಿ ಕೂಡಲೇ ಹಾಜರಾಗಿ ತನ್ನ ‘ದಾದಾಗಿರಿ’ ಪ್ರದರ್ಶಿಸುವುದು ಅದರ ಜಾಯಮಾನವಾಯಿತು. ಈಗ ಲಿಬಿಯಾ ವಿಷಯದಲ್ಲೂ ಅಮೆರಿಕದ್ದು ಇದೇ ಧೋರಣೆ. ಲಿಬಿಯಾದ ಆಂತರಿಕ ಬೆಳವಣಿಗೆಗಳಲ್ಲಿ ಅಮೆರಿಕ ಏಕಪಕ್ಷೀಯ ನಿರ್ಧಾರಗಳಿಗೆ ಮುಂದಾಗುತ್ತಿದೆ. ಬ್ರಿಟನ್, ಫ್ರಾನ್ಸ್ ಮತ್ತು ಜರ್ಮನಿಯಂತಹ ‘ಡಬಲ್ ವಿಟೊ’ ಅಧಿಕಾರ ಹೊಂದಿದ ವಿಶ್ವಸಂಸ್ಥೆಯ ಕಾಯಂ ಸದಸ್ಯ ರಾಷ್ಟ್ರಗಳ ಜೊತೆ ಸೇರಿ ತನ್ನ ಅಟಾಟೋಪ ಮುಂದುವರಿಸಿದೆ. ಅಷ್ಟಕ್ಕೂ ವಿಶ್ವಸಂಸ್ಥೆ ಎಂದರೆ ಅಮೆರಿಕ ಎಂದು ಬಿಡಿಸಿ ಹೇಳುವ ಅಗತ್ಯ ಇಲ್ಲ. ತೈಲ ಬಂಡವಾಳದ ಹೊಸ ರಾಜಕೀಯದಾಟಕ್ಕೆ ಅಮೆರಿಕ ಬಲೆ  ಬೀಸಿದೆ.

ನಲವತ್ತೆರಡು ವರ್ಷಗಳಿಂದ ಅಧಿಕಾರದ ಗದ್ದುಗೆಮೇಲೆ ಕುಳಿತಿರುವ ಮುಅಮ್ಮರ್ ಗಡಾಫಿ ಜನರ ಆಕ್ರೋಶವನ್ನು ಶಮನಗೊಳಿಸುವ ಪ್ರಯತ್ನದಲ್ಲಿ ಇಟ್ಟಿರುವ ಅಪಾಯಕಾರಿ ಹೆಜ್ಜೆಗಳು ಅವರಿಗೆ ಮುಳುವಾಗಬಹುದು. ಧಾರ್ಮಿಕ ವ್ಯವಸ್ಥೆ ಮತ್ತು ಪಾಳೇಗಾರಿಕೆಯಿಂದ ನಲುಗಿ ಹೋಗಿರುವ ಇಡೀ ಮಧ್ಯ ಪ್ರಾಚ್ಯ ಮತ್ತೊಂದು ಲ್ಯಾಟಿನ್ ಅಮೆರಿಕ ಆಗಬಹುದೇ? ಧರ್ಮವನ್ನು ಮೀರಿ ನಿಲ್ಲುವ ಪ್ರಜಾಪ್ರಭುತ್ವ  ವ್ಯವಸ್ಥೆ  ಇಲ್ಲಿ ನೆಲೆಯೂರಬಹುದೇ ಎಂಬುದು ನಿಜಕ್ಕೂ ಯಕ್ಷ ಪ್ರಶ್ನೆ. ಅದಕ್ಕೆ ಸಲೀಸಾದ ಉತ್ತರ ಸಿಗುವ ಸಾಧ್ಯತೆ ಕಡಿಮೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT