ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೋದಯ ಕರ್ನಾಟಕ ಪಕ್ಷದಿಂದ ಬೈಕ್ ರ‌್ಯಾಲಿ

Last Updated 8 ಏಪ್ರಿಲ್ 2013, 4:07 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಸರ್ವೋದಯ ಕರ್ನಾಟಕ ಪಕ್ಷದ ಕಾರ್ಯರ್ತರು ಚುನಾವಣೆ ಪ್ರಚಾರ ನಡೆಸಲು ಪಕ್ಷದ ಸಂಭಾವ್ಯ ಅಭ್ಯರ್ಥಿ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಕ್ಷೇತ್ರದ ವಿವಿಧೆಡೆ ಭಾನುವಾರ ಬೈಕ್ ರ‌್ಯಾಲಿ ನಡೆಸಿದರು.

ಪಟ್ಟಣದ ಪಕ್ಷದ ಕಚೇರಿಯಿಂದ ಆರಂಭಗೊಂಡ ಬೈಕ್ ರ‌್ಯಾಲಿ ಮುಖ್ಯ ಬೀದಿ, ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತ, ಕಿರಂಗೂರು, ಬಾಬುರಾಯನಕೊಪ್ಪಲು, ಪಾಲಹಳ್ಳಿ, ಪಿ.ಹೊಸಹಳ್ಳಿ, ಬೆಳಗೊಳ, ಗಡಿ ಭಾಗದ ಹೊಸ ಉಂಡವಾಡಿಗಳಲ್ಲಿ ಸಂಚರಿಸಿತು. ಕೆಆರ್‌ಎಸ್, ಹೊಸ ಆನಂದೂರು, ಮಜ್ಜಿಗೆಪುರ, ಹೊಂಗಹಳ್ಳಿ, ಮೊಗರಹಳ್ಳಿ ಸೇರಿದಂತೆ ಬೆಳಗೊಳ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಹಸಿರು ಟವೆಲ್‌ಗಳನ್ನು ಬೀಸಿದರು.

ರ‌್ಯಾಲಿಗೂ ಮುನ್ನ ಮಾತನಾಡಿದ ಕೆ.ಎಸ್.ನಂಜುಂಡೇಗೌಡ, ಎಲ್ಲ ಹೋಬಳಿಗಳಲ್ಲೂ ಬೈಕ್ ರ‌್ಯಾಲಿ ನಡೆಯಲಿದೆ. ಏ.16ರಂದು 15 ಸಾವಿರಕ್ಕೂ ಹೆಚ್ಚು ಬೆಂಬಲಿಗರ ಜತೆಗೂಡಿ ನಾಮಪತ್ರ ಸಲ್ಲಿಸಲಿದ್ದೇನೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬಗ್ಗೆ ಜನರು ಭ್ರಮನಿರಸಗೊಂಡಿದ್ದಾರೆ. 33 ವರ್ಷಗಳಿಂದ ಅವಿರತವಾಗಿ ಜನಪರ ಹೋರಾಟ ನಡೆಸಿಕೊಂಡು ಬಂದಿರುವ ನನಗೆ ಮತ ನೀಡಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ 5 ಬಾರಿ ಸೋತಿರುವುದರಿಂದ ಮತದಾರರಲ್ಲಿ ನನ್ನ ಬಗ್ಗೆ ಅನುಕಂಪವೂ ಇದೆ. ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಆಮಿಷಕ್ಕೆ ಒಳಗಾಗದೆ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಪೇಗೌಡ, ಉಪಾಧ್ಯಕ್ಷ ಬಿ.ಎಸ್.ರಮೇಶ್, ಪಾಂಡು, ಬಿ.ಸಿ.ಕೃಷ್ಣೇಗೌಡ, ಯುವ ಅಧ್ಯಕ್ಷ ಕಡತನಾಳು ಬಾಬು, ಕುಮಾರ್, ಕೃಷಿಕ ಸಮಾಜದ ನಿರ್ದೇಶಕ ಬಾಲಕೃಷ್ಣ, ಜಯರಾಮೇಗೌಡ ಇತರರು ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಪಕ್ಷೇತರನಾಗಿ ಸ್ಪರ್ಧೆ: ಶ್ರೀನಿವಾಸ್
ಶ್ರೀರಂಗಪಟ್ಟಣ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲಿದ್ದೇನೆ ಎಂದು ಗ್ರಾಮ ಸಹಾಯಕ ಹೊಂಗಹಳ್ಳಿ ಶ್ರೀನಿವಾಸ್ ಹೇಳಿದರು.

ಕ್ಷೇತ್ರದ ಶಾಸಕರಾಗಿ ಇದುವರೆಗೆ ಆಯ್ಕೆಯಾದವರು ಜನರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ವಿಫಲರಾಗಿದ್ದಾರೆ. ಕುಡಿಯುವ ನೀರು, ರಸ್ತೆ, ಬೀದಿ ದೀಪ, ವಸತಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಗಮನ ಹರಿಸಿಲ್ಲ. ಕಳೆದ 20 ವರ್ಷಗಳಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನನಗೆ ಕ್ಷೇತ್ರದ ಮತದಾರರು ಬೆಂಬಲ ನೀಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಕೋರಿದರು.

ಕ್ಷೇತ್ರದ ವಿವಿಧ ಭಾಗಗಳಲ್ಲಿರುವ ಸ್ನೇಹಿತರು, ಬಂಧುಗಳು ಚುನಾವಣಾ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ. ಮತದಾರರಿಗೆ ಸುಳ್ಳು ಭರವಸೆ ನೀಡದೆ ಮತ ಕೋರುತ್ತೇನೆ ಎಂದರು. ಎ.ಎಂ.ಚಂದ್ರಶೇಖರ್, ನಂಜುಂಡಯ್ಯ, ಕೃಷ್ಣ, ಭೈರೇಶ್ ಇದ್ದರು.

ತಬಸ್ಸುಮ್ ಜಹೆರಾ ನಿಯೋಜನೆ
ಶ್ರೀರಂಗಪಟ್ಟಣ: ಮಂಡ್ಯ ವಿಭಾಗದ ವಿಶೇಷ ಭೂ ಸ್ವಾಧೀನಾಧಿಕಾರಿ ತಬಸ್ಸುಮ್ ಜಹೆರಾ ಅವರನ್ನು ಚುನಾವಣಾ ಆಯೋಗ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯನ್ನಾಗಿ ನಿಯೋಜಿಸಿದ್ದು, ಚುನಾವಣಾ ಪ್ರಕ್ರಿಯೆ ಕುರಿತು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಭಾನುವಾರ ಅಧಿಕಾರಿಗಳ ಜತೆ ಅವರು ಚರ್ಚೆ ನಡೆಸಿದರು. ತಬಸ್ಸುಮ್ ಜಹೆರಾ ಅವರ ಮೊಬೈಲ್ ಸಂಖ್ಯೆ 97408 22663 ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT