ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗರತಿ: ಸಂಸತ್‌ ತೀರ್ಮಾನಕ್ಕೆ

ದೆಹಲಿ ಹೈಕೋರ್ಟ್‌ ಆದೇಶ ಅಸಿಂಧು * ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು
Last Updated 11 ಡಿಸೆಂಬರ್ 2013, 19:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ ಐಎಎನ್‌ಎಸ್‌): ವಯಸ್ಕರ ನಡುವೆ ಸಮ್ಮತಿಯ ಸಲಿಂಗರತಿ ಅಪರಾಧ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ. ದೆಹಲಿ ಹೈಕೋರ್ಟ್‌ 2009ರಲ್ಲಿ  ಸಮ್ಮತಿಯ ಸಲಿಂಗರತಿಯನ್ನು ಅಪರಾಧಮುಕ್ತಗೊಳಿಸಿ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಜಿ.ಎಸ್‌.ಸಿಂಘ್ವಿ ಮತ್ತು ಎಸ್‌.ಜೆ.ಮುಖ್ಯೋ­ಪಾಧ್ಯಾಯ ಅವರ ಪೀಠ ವಜಾಗೊಳಿಸಿದೆ. ಇದು ಸಲಿಂಗಿ, ದ್ವಿಲಿಂಗಿ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಅತೃಪ್ತಿಗೆ ಕಾರಣವಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 377ರ ಬದಲಾವಣೆಗೆ ಸಾಂವಿಧಾನಿಕವಾಗಿ ಯಾವುದೇ ಅವಕಾಶ ಇಲ್ಲ. ಸೆಕ್ಷನ್‌ 377ರ ಪ್ರಕಾರ, ಒಂದೇ ಲಿಂಗದ ಜನರು ಲೈಂಗಿಕ ಸಂಬಂಧ ಹೊಂದುವುದು ನಿಸರ್ಗದ ವಿರುದ್ಧವಾಗಿದ್ದು ಅಪರಾಧ ಎಂದು ಪರಿಗಣಿತವಾಗಿದೆ. ಈ ಅಪರಾಧಕ್ಕೆ ಗರಿಷ್ಠ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಇದೆ.

ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ ರದ್ದುಪಡಿಸುವುದಕ್ಕೆ ಸಂಸತ್‌ಗೆ ಅಧಿಕಾರ ಇದೆ. ಆದರೆ ಅಲ್ಲಿವರೆಗೆ ಸಲಿಂಗರತಿ ಅಪರಾಧ­ವಾಗಿಯೇ ಮುಂದು­ವರಿಯುತ್ತದೆ. ಸಲಿಂಗರತಿ ಯನ್ನು ಅಪ­ರಾಧ­­­ಮುಕ್ತಗೊ­ಳಿ­ಸುವುದು ಕೋರ್ಟ್‌ಗೆ ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಹೇಳಿದೆ.
ದೆಹಲಿ ಹೈಕೋರ್ಟ್‌ ತೀರ್ಪಿನ ವಿರುದ್ಧ ಸಲಿಂಗರತಿ ವಿರೋಧಿ ಸಂಘಟನೆಗಳು, ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್‌ ಈ ಆದೇಶ ಹೊರಡಿಸಿದೆ.

ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಪೀಠವು, ಸಲಿಂಗರತಿ ವಿಷಯಕ್ಕೆ ಸಂಬಂಧಿಸಿ ಸರ್ಕಾರದ ಲಘು ಧೋರಣೆಯನ್ನು ತರಾಟೆಗೆ ತೆಗೆದು­ಕೊಂಡಿತ್ತು. ಇಷ್ಟೊಂದು ಮಹತ್ವದ ವಿಷಯದ ಬಗ್ಗೆ ಸಂಸತ್‌ ಚರ್ಚೆ ಮಾಡ­ದಿರುವುದರ ಬಗ್ಗೆ ಪೀಠ ಕಳವಳ ವ್ಯಕ್ತಪಡಿಸಿತು. ಸಂಸತ್‌ ಈ ಬಗ್ಗೆ ಚರ್ಚಿ­ಸದೆ ನ್ಯಾಯಾಂಗ ತನ್ನ ಮಿತಿ ಮೀರುತ್ತಿದೆ ಎಂದು ಹೇಳುವುದು ಅರ್ಥಹೀನ ಎಂದೂ ಅಭಿಪ್ರಾಯ­ಪಟ್ಟಿತು.

ಬ್ರಿಟಿಷ್‌ ವಸಾಹತುಶಾಹಿಯಿಂದಾಗಿ ಸಲಿಂಗ­ರತಿ­ಯನ್ನು ಅಪರಾಧ ಎಂದು ಪರಿಗಣಿಸುವ ಕಾನೂನು ಅಸ್ತಿತ್ವದಲ್ಲಿದೆ. ಭಾರತೀಯ ಸಮಾಜ ಹಿಂದಿನಿಂದಲೂ ಸಲಿಂಗರತಿ ಬಗ್ಗೆ ಸಹಿಷ್ಣುತೆ ಹೊಂದಿತ್ತು ಎಂದು ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಹೇಳಿತ್ತು.

ನಿರಾಶಾದಾಯಕ ತೀರ್ಪು
ನಾವಿಂದು ಮುಕ್ತವಾದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ಈ ತೀರ್ಪು ನಿರಾಶಾದಾಯಕ
–ಡೆರಿಕ್‌ ಓ’ಬ್ರಿಯನ್‌ (ಟಿಎಂಸಿ ನಾಯಕ)

ಕಪ್ಪು ದಿನ
ಸಲಿಂಗಿ, ದ್ವಿಲಿಂಗಿ ಮತ್ತು ಲೈಂಗಿಕ ಅಲ್ಪ­ಸಂಖ್ಯಾತ ಸಮುದಾಯಕ್ಕೆ ಇದು ಕಪ್ಪು ದಿನ. ನಮ್ಮ ಹಕ್ಕುಗಳ ಪುನಃಸ್ಥಾಪನೆಗೆ ಹೋರಾಟ ನಡೆಸುತ್ತೇವೆ ಎಂದು ಸಲಿಂಗಿ ಹಕ್ಕುಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ರಚನೆ ಅಧಿಕಾರ ನಮ್ಮದು
ಸಂವಿಧಾನ ಪ್ರಕಾರ, ಕಾನೂನಿನ ಸಾಂವಿಧಾನಿಕತೆ ಪರಿಶೀಲಿಸು­ವುದು ಸುಪ್ರೀಂ ಕೋರ್ಟ್‌ನ ಅಧಿಕಾರ ವಾಗಿದೆ. ಅವರ ಅಧಿಕಾರ ವನ್ನು ಅವರು ಚಲಾಯಿಸಿ ದ್ದಾರೆ. ಕಾನೂನು ರಚಿಸುವ ಅಧಿಕಾರ ನಮ್ಮದು. ಅದನ್ನು ನಾವು ಚಲಾಯಿಸಲಿದ್ದೇವೆ.
–ಕಪಿಲ್‌ ಸಿಬಲ್‌,(ಕೇಂದ್ರ ಕಾನೂನು ಸಚಿವ)

ಸಲಿಂಗರತಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT