ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗರತಿಗೆ ಬಿಜೆಪಿ ವಿರೋಧ

ಪಕ್ಷದ ಅಧಿಕೃತ ನಿಲುವು ಪ್ರಕಟಿಸಿದ ರಾಜನಾಥ್‌ ಸಿಂಗ್‌
Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಲಿಂಗರತಿ­ಯನ್ನು ನಿಷೇಧಿಸುವ ಸುಪ್ರೀಂ ಕೋರ್ಟ್‌ ಆದೇಶವನ್ನು ಬಿಜೆಪಿ ಬೆಂಬಲಿಸಿದೆ. ಆದೇಶದ ಬಗ್ಗೆ ಮೌನ ಮುರಿದಿ­ರುವ ಬಿಜೆಪಿ, ಯಾವುದೇ ‘ಅನೈಸರ್ಗಿಕ ಕ್ರಿಯೆ’­ಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.

ಆರಂಭದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಬಗ್ಗೆ ಯಾವುದೇ ನಿಲುವು ತಳೆಯಲು ಬಿಜೆಪಿ ನಾಯಕರು ನಿರಾ­ಕರಿಸಿ­ದ್ದರು. ಒಂದು ವೇಳೆ ಸರ್ಕಾರ ಈ ವಿಷಯದ ಬಗ್ಗೆ ಸರ್ವ ಪಕ್ಷ ಸಭೆ ಕರೆ­ದರೆ, ಬಿಜೆಪಿಯು ಸಲಿಂಗರತಿಯನ್ನು ನಿಷೇಧಿಸುವ 377ನೇ ಸೆಕ್ಷನನ್ನು ಬೆಂಬಲಿ­ಸ­ಲಿದೆ ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್‌ ಹೇಳಿದ್ದಾರೆ.

ಸಮಾಜದಲ್ಲಿ ಈ ವಿಷಯದ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯ ಇರುವುದರಿಂದ ಬಿಜೆಪಿ ಅತ್ಯಂತ ಎಚ್ಚ­ರಿಕೆ­­ಯಿಂದ ತನ್ನ ನಿಲುವು ವ್ಯಕ್ತಪಡಿಸಿದೆ. ಆರಂಭದಲ್ಲಿ ಬಿಜೆಪಿಯ ಕೆಲವು ನಾಯ­ಕರು ಸುಪ್ರೀಂ ಕೋರ್ಟ್‌ ತೀರ್ಪನ್ನು ವಿರೋಧಿಸುವ ಸೂಚನೆ ನೀಡಿದ್ದರು. ಆದರೆ ಈಗ ರಾಜನಾಥ್‌ ಸಿಂಗ್‌ ಹೇಳಿಕೆ ಪಕ್ಷದ ಅಧಿಕೃತ ನಿಲುವಾಗಿದೆ.

‘ರಾಜನಾಥ್‌ ಸಿಂಗ್‌ ಅವರ ಹೇಳಿಕೆ ಪಕ್ಷದ ಅಧಿಕೃತ ನಿಲುವು. ನಮಗೆ ನಮ್ಮದೇ ಆದ ಸಂಸ್ಕೃತಿ ಮತ್ತು ಪರಂಪರೆ ಇದೆ. ಸಲಿಂಗರತಿ ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ಹೊಸ ಸಂಸ್ಕೃತಿ ರೂಪು­ಗೊಳ್ಳಲು ನಾವು ಅವ­ಕಾಶ ನೀಡ­ಬಾರದು’ ಎಂದು ಬಿಜೆಪಿಯ ಉಪಾ­ಧ್ಯಕ್ಷ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿರೋಧಿಸಿದ್ದರು. ಬಿಜೆಪಿ ಈಗ ಕಾಂಗ್ರೆಸ್‌­­­ಗಿಂತ ಭಿನ್ನ ನಿಲುವು ತಳೆದಿದೆ.

ಆರ್‌ಎಸ್‌ಎಸ್‌ ನಿಲುವು ತಿಳಿಸಲಿ: ಬಿಜೆಪಿ ಸುಪ್ರೀಂಕೋರ್ಟ್‌ ತೀರ್ಪಿನ ಪರ­ವಾದ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆ­­ಯಲ್ಲಿ ಆರ್‌ಎಸ್‌ಎಸ್‌ ಕೂಡ ಮೌನ ಮುರಿದು ನಿಲುವು ಸ್ಪಷ್ಟಪಡಿಸ­ಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಸೆಕ್ಷನ್‌ 377ರ ಬಗ್ಗೆ ಆರ್‌ಎಸ್‌ಎಸ್‌ ತನ್ನ ನಿಲುವನ್ನು ಪ್ರಕಟಿಸಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರೆ.

ಪ್ರತಿಭಟನೆ ನಿಲ್ಲದು: ಸಲಿಂಗರತಿ ನಿಷೇಧಿ­ಸುವ ಸುಪ್ರೀಂಕೋರ್ಟ್‌ ತೀರ್ಪನ್ನು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಬಲವಾಗಿ ಖಂಡಿಸಿದೆ. ತಮ್ಮ ಹಕ್ಕು­ಗಳನ್ನು ರಕ್ಷಿಸಿಕೊಳ್ಳಲು ಮತ್ತು 377ನೇ ಸೆಕ್ಷನ್‌ ತಿದ್ದುಪಡಿಗೆ ತಮಿಳುನಾಡು ಸರ್ಕಾರ ಬೆಂಬಲ ನೀಡಬೇಕು ಎಂದು ಸಮುದಾಯ ಒತ್ತಾಯಿಸಿದೆ.

‘ನಾವು ಸಮಾಜದ ಅಲ್ಪಸಂಖ್ಯಾತ ವರ್ಗ. ಹಾಗಾಗಿ ನಮ್ಮನ್ನು ಗುರಿಯಾಗಿ­ಸ­ಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶ ನಮಗೆ ನೋವುಂಟುಮಾಡಿದೆ. ನಾವು ಪ್ರತಿಭಟನೆ ಮುಂದುವರಿಸಲಿದ್ದೇವೆ’ ಎಂದು ಲೈಂಗಿಕ ಅಲ್ಪಸಂಖ್ಯಾತ ಸಮು­ದಾಯವನ್ನು ಪ್ರತಿನಿಧಿಸುವ ಚೆನ್ನೈ ರೈನ್‌ಬೊ ಕೊಯಲಿಷನ್‌ ಎಂಬ ಸಂಸ್ಥೆ ಹೇಳಿದೆ.

ಸಲಿಂಗರತಿ ನಿಷೇಧ ತೀರ್ಪನ್ನು ಹಿಂತೆ­ಗೆ­ದುಕೊಳ್ಳಬೇಕು ಎಂದು ಆಗ್ರಹಿಸಿ   ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ದೆಹಲಿಯಲ್ಲಿಯೂ ಪ್ರತಿಭಟನೆ ನಡೆಸಿದ್ದಾರೆ.

‘ನಾವು ಅಪರಾಧಿಗಳಲ್ಲ’, ‘ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಅಪರಾಧ­ವಲ್ಲ’ ಮುಂತಾದ ಘೋಷಣೆಗಳ ಫಲಕಗಳು ಮತ್ತು ಬ್ಯಾನರ್‌ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.

ಸಲಿಂಗರತಿ ಅಪರಾಧ ಮಾಹಿತಿ ಸಂಗ್ರಹ
ನವದೆಹಲಿ (ಪಿಟಿಐ):
ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ (ಅನೈಸರ್ಗಿಕ ಲೈಂಗಿಕತೆ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಸಂಗ್ರಹ ಕಾರ್ಯವನ್ನು ಶೀಘ್ರ ಆರಂಭಿಸಲಿದೆ.

ಈ ಮಾಹಿತಿ ಸಂಗ್ರಹಕ್ಕೆ ರಾಜ್ಯಗಳಿಗೆ ಕಳುಹಿಸಲು ಹೊಸ ಮಾಹಿತಿ ನಮೂನೆಯನ್ನು ಸಿದ್ಧಪಡಿಸಲಾಗುತ್ತಿದೆ. 1986ರಲ್ಲಿ ಸ್ಥಾಪನೆಗೊಂಡ ಎನ್‌ಸಿಆರ್‌ಬಿ ಇದೇ ಮೊದಲ ಬಾರಿ ಇಂತಹ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಸೆಕ್ಷನ್‌ 377ರ ಅಡಿಯಲ್ಲಿ ರಾಜ್ಯ ಪೊಲೀಸ್‌ ಇಲಾಖೆಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹ ಮುಂದಿನ ವರ್ಷದಿಂದ ಆರಂಭವಾಗಲಿದೆ. ಪ್ರತಿ ವರ್ಷ ಪ್ರಕಟವಾಗುವ ಅಪರಾಧಗಳ ಬಗೆಗಿನ ವರದಿಯಲ್ಲಿ ಈ ಮಾಹಿತಿ ಸೇರಲಿದೆ.

ಸಲಿಂಗರತಿ ಅಪರಾಧ ಮಾಹಿತಿ ಸಂಗ್ರಹ
ನವದೆಹಲಿ (ಪಿಟಿಐ):
ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ (ಅನೈಸರ್ಗಿಕ ಲೈಂಗಿಕತೆ) ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಸಂಗ್ರಹ ಕಾರ್ಯವನ್ನು ಶೀಘ್ರ ಆರಂಭಿಸಲಿದೆ.

ಈ ಮಾಹಿತಿ ಸಂಗ್ರಹಕ್ಕೆ ರಾಜ್ಯಗಳಿಗೆ ಕಳುಹಿಸಲು ಹೊಸ ಮಾಹಿತಿ ನಮೂನೆಯನ್ನು ಸಿದ್ಧಪಡಿಸಲಾಗುತ್ತಿದೆ. 1986ರಲ್ಲಿ ಸ್ಥಾಪನೆಗೊಂಡ ಎನ್‌ಸಿಆರ್‌ಬಿ ಇದೇ ಮೊದಲ ಬಾರಿ ಇಂತಹ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಸೆಕ್ಷನ್‌ 377ರ ಅಡಿಯಲ್ಲಿ ರಾಜ್ಯ ಪೊಲೀಸ್‌ ಇಲಾಖೆಗಳಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹ ಮುಂದಿನ ವರ್ಷದಿಂದ ಆರಂಭವಾಗಲಿದೆ. ಪ್ರತಿ ವರ್ಷ ಪ್ರಕಟವಾಗುವ ಅಪರಾಧಗಳ ಬಗೆಗಿನ ವರದಿಯಲ್ಲಿ ಈ ಮಾಹಿತಿ ಸೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT