ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಲದ ಸ್ವಪ್ರಜ್ಞೆ.. .ಮಾಡಿ ಅವಜ್ಞೆ

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪ್ರಪಂಚದ ಅದ್ಭುತ ಕೊಡುಗೆ ಮೆದುಳು. ಆದರೆ ಅದನ್ನು ಸರಿಯಾಗಿ ಉಪಯೋಗಿಸಿ ಕೊಳ್ಳದಿದ್ದರೆ ನಾವು ಸಂಕಷ್ಟಕ್ಕೆ ಸಿಲುಕಬಹುದು. ಕೆಲವರು ತಮ್ಮ ಮೆದುಳನ್ನು ನಕಾರಾತ್ಮಕ ಯೋಚನೆಗಳಿಂದ ತುಂಬಿಕೊಂಡಿರುತ್ತಾರೆ. ಅತಿಯಾದ ಸ್ವಪ್ರಜ್ಞಾ ಭಾವನೆಯಿಂದ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತಾರೆ.

`ಬೇರೆಯವರು ನನ್ನನ್ನು ಗಮನಿಸುತ್ತಿದ್ದಾರೆ, ಪರೀಕ್ಷಿಸುತ್ತಿದ್ದಾರೆ, ನಾನು ಗುಂಪಿನ ಅನವಶ್ಯಕ ಕೇಂದ್ರ ಬಿಂದು ಆಗಿಬಿಟ್ಟಿದ್ದೇನೆ~ ಎಂದು ಒಳಗೊಳಗೆ ಕೊರಗುವುದೇ ಸ್ವಪ್ರಜ್ಞಾ ಭಾವನೆ. ಇದು ಬಹಳ ಅಪಾಯಕಾರಿ. ನಿಜ, ಕೆಲವು ಸಂದರ್ಭಗಳಲ್ಲಿ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಿರಬಹುದು ಎಂದು ಚಿಂತಿಸುತ್ತಾ ನಾವು ಜಾಗೃತರಾಗುತ್ತೇವೆ.

ಇದು ಪ್ರಾಕೃತಿಕವೂ ಹೌದು. ಆದರೆ ಸಮಸ್ಯೆ ಆರಂಭವಾಗುವುದು ಎಲ್ಲ ಸಮಯದಲ್ಲೂ ನಾವು ಸ್ವಪ್ರಜ್ಞರಾಗಿಬಿಟ್ಟಾಗ. ಆಗ ಸಮಾಜದಲ್ಲಿ ಬದುಕುವುದು ಬಹಳ ಕಷ್ಟವಾಗಿ ಬಿಡುತ್ತದೆ. ನಮ್ಮ ಸಂತೋಷವನ್ನು ನಾವೇ ಕೊಲೆ ಮಾಡಿಕೊಂಡಂತಾಗಿ ಹೋಗುತ್ತದೆ.

ಕೊನೆಗೆ ಎಲ್ಲರಿಂದ ದೂರಾಗಿ ಒಬ್ಬಂಟಿಯಾಗಿ ಬದುಕಬೇಕಾಗುತ್ತದೆ. ಸ್ವಪ್ರಜ್ಞೆ ನಮ್ಮನ್ನು ಸಂತೋಷ ಪಡುವುದರಿಂದ, ಸಹಜವಾಗಿ ವರ್ತಿಸುವುದರಿಂದ, ಹೊಸ ವಿಷಯಗಳನ್ನು ಕಲಿಯುವುದರಿಂದ ಅಥವಾ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದರಿಂದ, ಅವರನ್ನು ಅರ್ಥ ಮಾಡಿಕೊಳ್ಳುವುದರಿಂದ ತಡೆಯುತ್ತದೆ.

ಬಹಳಷ್ಟು ಬಾರಿ ಸ್ವಪ್ರಜ್ಞಾ ಪೀಡಿತ ವ್ಯಕ್ತಿಯ ಯೋಚನೆಗಳಿಗೆ ಅರ್ಥವೇ ಇರುವುದಿಲ್ಲ. `ಬೇರೆಯವರು ನನ್ನನ್ನು ಇಷ್ಟ ಪಡುವುದಿಲ್ಲ ಅಥವಾ ನಾನು ಅವರಿಂದ ಸಂಪೂರ್ಣವಾಗಿ ಟೋಪಿ ಹಾಕಿಸಿಕೊಳ್ಳುತ್ತಿದ್ದೇನೆ~ ಎಂಬಂತಹ ತಳ ಬುಡವಿಲ್ಲದ ಯೋಚನೆಗಳನ್ನು ಅವರು ಮನಸ್ಸಿನಲ್ಲಿ ಹುಟ್ಟುಹಾಕಿಕೊಳ್ಳುತ್ತಾ ಇರುತ್ತಾರೆ.
 
ಇದಕ್ಕೆ ಮೂಲ ಕಾರಣ ಅವರ ಯೋಚನೆಯ ರೀತಿ. ಸ್ವತಃ ತಾವೇ ಯೋಚನೆಗಳನ್ನು ಸೃಷ್ಟಿ ಮಾಡಿಕೊಳ್ಳುವುದರಿಂದ ಅವೆಲ್ಲವೂ ಸತ್ಯವಾದವು ಎಂದೇ ನಂಬುತ್ತಾರೆ. ಅಂತಹವರು ತಮ್ಮ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಬೇರೆಯವರು ಏನು ಯೋಚಿಸುತ್ತಿರಬಹುದು ಎಂಬುದು ನನಗೆ ತಿಳಿಯುತ್ತದೆ, ಅವರ ಮನಸ್ಸನ್ನು ನಾನು ಓದಬಲ್ಲೆ ಎಂದು ಊಹಿಸಿಕೊಂಡಿರುತ್ತಾರೆ.

ಇಂತಹ ಅತಿಯಾದ ಸ್ವಪ್ರಜ್ಞೆ ಒಂದು ರೀತಿಯ ಪಿಡುಗೆಂದೇ ಹೇಳಬಹುದು. ಬಹುತೇಕ ಸಂದರ್ಭಗಳಲ್ಲಿ ನಿಮ್ಮ ಬಗ್ಗೆ ಬೇರೆಯವರು ಯೋಚನೆಯನ್ನೇ ಮಾಡಿರುವುದಿಲ್ಲ. ಅವರ ಹತ್ತಿರ ಅಷ್ಟು ಸಮಯವೂ ಇರದಿರಬಹುದು.
 
ಒಂದು ರೀತಿಯ ದೊಡ್ಡ ಕಾಲ್ಪನಿಕ ಚಿತ್ರವನ್ನೇ ನಿಮ್ಮ ಮನಸ್ಸಿನಲ್ಲಿ ನೀವೇ ನಿರ್ಮಾಣ ಮಾಡಿಕೊಂಡು, ಅದು ಸತ್ಯವೆಂದು ನಂಬಿ ನಿಮ್ಮ ಮನಸ್ಸನ್ನು ಅಸೂಯೆ, ದ್ವೇಷ, ಕಾಮ, ಅಹಂ, ಕೀಳರಿಮೆ, ಆಯಾಸ, ದುಃಖ, ಉದ್ವೇಗ, ಕಳವಳಗಳ ಗೂಡನ್ನಾಗಿ ಪರಿವರ್ತಿಸಿಕೊಂಡು ಬಿಡುತ್ತೀರಿ. ಇದರಿಂದ ನಿಮ್ಮ ಸಮಯ ಮತ್ತು ಶಕ್ತಿ ವ್ಯರ್ಥವಾಗುತ್ತದೆ. ನೆಮ್ಮದಿ ಹಾಳಾಗುತ್ತದೆ. ನಿಮ್ಮ ಜೀವನದ ನಿಜವಾದ ಗುರಿಯಿಂದ ಗಮನ ತಪ್ಪಿ, ಆಗಬಾರದ ಅನಾಹುತಗಳಿಗೆ ಹೊಣೆಯಾಗುತ್ತೀರಿ.

ಈ ದಿನ ಯಾಕೆ ಅವನು/ ಅವಳು ಆ ರೀತಿ ನನ್ನನ್ನು ನೋಡಿದ್ದು, ಏನಿರಬಹುದು? ಏನಾದರೂ ನನ್ನಿಂದ ತಪ್ಪು ನಡೆದು ಹೋಯಿತೇ? ನನ್ನ ಹತ್ತಿರ ಆತ/ ಆಕೆ ಹಣ ಕೇಳಬಹುದಾ? ಈ ಸಲ ನನ್ನ ಬಡ್ತಿಗೆ ಏನಾದರೂ ಬತ್ತಿ ಇಟ್ಟು ಬಿಡುತ್ತಾನಾ/ ಬಿಡುತ್ತಾಳಾ? ಟ್ರೀಟ್ ಕೊಡಿಸಲಿ ಅಂತ ಆ ರೀತಿ ಮುಖ ಮಾಡಿದ್ದನಾ? ಅವನನ್ನು/ ಅವಳನ್ನು ನೋಡಿದಾಗಿನಿಂದ ಹಿಡಿದು ಮಲಗುವವರೆಗೂ ಅದೇ ಯೋಚನೆ, ಮನಸ್ಸಿನಲ್ಲಿ ಒಂದು ರೀತಿಯ ಕಳವಳ. ನಾಳೆ ಕೇಳೇ ಬಿಡೋಣ. `ನಿನ್ನೆ ಯಾಕೆ ನೀವು ಆ ರೀತಿ ನೋಡಿದ್ದು?~

`ಯಾವಾಗ? ನಿನ್ನೆನಾ, ನನಗೆ ಮೈ ಪರಚಿಕೊಳ್ಳಲು ಸಹ ಪುರುಸೊತ್ತಿರಲಿಲ್ಲ. ನನ್ನ ಕೆಲಸ ನನಗೆ ....!~ ಉತ್ತರ ಸಿಕ್ಕ ತಕ್ಷಣ ಮೀಟರ್ ಡೌನ್. `ಛೆ.... ನಾನು ಏನೇನೋ ಅಂದುಕೊಂಡೆ~. ಇಂತಹ ಅದೆಷ್ಟೋ ವಿಷಯಗಳನ್ನು ಪ್ರತಿ ದಿನ ಯೋಚನೆ ಮಾಡಿ ಮಾಡಿ ಸಮಯ ವ್ಯರ್ಥ ಮಾಡಿಕೊಂಡು ಮನಃಶಾಂತಿಯನ್ನು ಭಂಗ ಮಾಡಿಕೊಳ್ಳುತ್ತೇವೆ.

ಸ್ವಪ್ರಜ್ಞಾ ಯೋಚನೆಗಳನ್ನು ನಿಲ್ಲಿಸುವುದೇ ಈ ಸಮಸ್ಯೆಗೆ ತಕ್ಕ ಔಷಧಿ. ಬೇರೆಯವರು ಏನೋ ಪಿಸುಗುಟ್ಟುತ್ತಿದ್ದರೆ ನನ್ನ ಬಗ್ಗೆಯೇ ಅವರು ಮಾತನಾಡುತ್ತಿರುವುದು ಎಂದು ಊಹಿಸಿಕೊಳ್ಳದೆ ನಿಮ್ಮ ಕೆಲಸದಲ್ಲಿ ನೀವು ನಿರತರಾಗಿ. ಊಹೆಗಳಿಗೆ ಎಡೆ ಮಾಡಿಕೊಡಬೇಡಿ. ಅವರು ನಿಜವಾಗಲೂ ಹಾಗೆ ಮಾತನಾಡುತ್ತಿದ್ದುದೇ ಆದರೆ ಅದು ಅವರ ಮೂರ್ಖತನ.

ತಮ್ಮ ಬುದ್ಧಿ ಮತ್ತು ಬಾಯಿಗೆ ವ್ಯರ್ಥ ಸಮಸ್ಯೆ ಕೊಡುತ್ತಿದ್ದಾರೆ, ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ, ತಮ್ಮ ಶಾಂತಿ ಮತ್ತು ಪ್ರಗತಿಗೆ ತಾವೇ ಮುಳ್ಳಾಗುತ್ತಿದ್ದಾರೆ ಎಂದರ್ಥ. ಅದಕ್ಕಾಗಿ ನೀವು ತಲೆ ಕೆಡಿಸಿಕೊಳ್ಳಬೇಡಿ, ಅತ್ತ ಗಮನವನ್ನೇ ಹರಿಸದೆ ಅನವಶ್ಯಕ ಯೋಚನೆಗಳನ್ನು ನಿಲ್ಲಿಸಿ. ಮನಸ್ಸಿಗೆ ಶಾಂತಿ ಕೊಡಿ. ಇದನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಳ್ಳಿ. ಕಾಲ್ಪನಿಕ ಯೋಚನೆಗಳ ಸರಮಾಲೆಯನ್ನು ಸೃಷ್ಟಿಸದೆ ಹಾಯಾಗಿ ಇದ್ದು ಬಿಡಿ.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT