ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರಿನಲ್ಲಿ ವಾಂತಿ-ಭೇದಿ ಉಲ್ಬಣ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಹಾವೇರಿ: ಸವಣೂರು ಪಟ್ಟಣಕ್ಕೆ ಪೂರೈಕೆಯಾಗುವ ಕುಡಿವ ನೀರಿನ ಗುಣಮಟ್ಟ ತೃಪ್ತಿಕರವಾಗಿಲ್ಲ ಎಂಬ ಆರೋಗ್ಯ ಇಲಾಖೆಯ ವರದಿಯನ್ನು ಗಂಭೀರವಾಗಿ ಪರಿಗಣಿಸದ ಪುರಸಭೆ ಅಧಿಕಾರಿಗಳು ಅದೇ ನೀರನ್ನೇ ಪೂರೈಕೆ ಮಾಡುತ್ತಿರುವುದರಿಂದ 400ಕ್ಕೂ ಹೆಚ್ಚು ಮಂದಿ ವಾಂತಿ-ಭೇದಿಯಿಂದ ನರಳುವಂತಾಗಿದೆ.

ಇದಕ್ಕೆ ಕಾರಣ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಪಟ್ಟಣಕ್ಕೆ ಪೂರೈಕೆ ಆಗುವ ಕುಡಿಯುವ ನೀರನ್ನು ಪರೀಕ್ಷ್ಷಿಸಿತು. ಅದರಲ್ಲಿ ಗಾಳಿ ದುರ್ಗಮ್ಮನ ದೇವಸ್ಥಾನದ ಬಳಿ ಇರುವ ಬೋರವೆಲ್ ನೀರು ಹಾಗೂ ನಾಗನೂರು ಕೆರೆಯಿಂದ ಪೂರೈಕೆಯಾಗುವ ನೀರು ಕುಡಿಯಲು ಯೋಗ್ಯವಾಗಿಲ್ಲ (ಅತೃಪ್ತಿಕರ) ಎಂಬ ಅಂಶ ಬೆಳಕಿಗೆ ಬಂದಿದೆ.
 
ಈ ಕುರಿತು 2011 ರ ಜುಲೈ 18 ರಿಂದ ಡಿಸೆಂಬರ್ 26 ರೊಳಗೆ ಐದಾರು ಬಾರಿ ಪುರಸಭೆಗೆ ವರದಿ ನೀಡಿದೆ.
ಈ ಬಗ್ಗೆ ಪುರಸಭೆ ನೀರಿನ ಗುಣಮಟ್ಟವನ್ನು ಪರೀಕ್ಷ್ಷಿಸಿ ವರದಿ ನೀಡುವಂತೆ ತಾಲ್ಲೂಕು ಆರೋಗ್ಯ ಇಲಾಖೆಗೂ ಪತ್ರ ಬರೆದು ವರದಿ ತರಿಸಿಕೊಂಡಿದೆ. ಆದರೆ, ಆರೋಗ್ಯ ಇಲಾಖೆ ನೀಡಿದ ನೀಡಿದ ಸಲಹೆಯನ್ನು ಜಾರಿಗೆ ತಂದಿಲ್ಲ. ಸಮಸ್ಯೆ ನಿವಾರಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದೇ ಪಟ್ಟಣದಲ್ಲಿ ವಾಂತಿ, ಭೇದಿ ಪ್ರಕರಣಗಳು ಉಲ್ಬಣವಾಗಲು ಪ್ರಮುಖ ಕಾರಣ  ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಈಶ್ವರ ಮಾಳೋದೆ ಹೇಳುತ್ತಾರೆ.

ತಾಲ್ಲೂಕಿನ ನಾಗನೂರು ಕೆರೆಯಿಂದ ಪೈಪ್‌ಲೈನ್ ಮೂಲಕ ಸವಣೂರು ಪಟ್ಟಣಕ್ಕೆ 10 ವರ್ಷದಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ನಾಗನೂರು-ಸವಣೂರು ಪೈಪ್‌ಲೈನ್‌ನಲ್ಲಿ ನೀರಿನ ಒತ್ತಡ ತಾಳಲು 21 ಕಡೆ  ಗಾಳಿ ಹೋಗಲು ಅವಕಾಶ ಮಾಡಲಾಗಿದೆ. ಆದರೆ ಇವುಗಳಿಗೆ ಕೆಲವಡೆ ಸರಿಯಾದ ಕ್ಯಾಬಿನ್ ನಿರ್ಮಾಣ ಮಾಡಿಲ್ಲ.
 
ಒತ್ತಡ ಹೆಚ್ಚಾದಾಗ ನೀರು ಹೊರಗೆ ಬಂದು ತಗ್ಗು ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಅಲ್ಲಿಯೇ  ದನಗಳಿಗೆ ನೀರು, ಮೈ ತೊಳೆಯುವುದು, ಜನರು ಮಲ ಮೂತ್ರ ವಿಸರ್ಜಿಸಿ, ತೊಳೆದುಕೊಳ್ಳುವುದನ್ನೂ ಮಾಡುತ್ತಾರೆ.

ಪೈಪ್‌ಲೈನ್‌ನಲ್ಲಿ ನೀರಿನ ಒತ್ತಡ ಕಡಿಮೆಯಾದಾಗ ಅದೇ ನೀರು ಪೈಪ್ ಸೇರಿ ಪಟ್ಟಣಕ್ಕೆ ಪೂರೈಕೆಯಾಗುತ್ತದೆ. ಅದನ್ನು ಸರಿಯಾಗಿ ಶುದ್ಧೀಕರಿಸದ ಕಾರಣ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎನ್ನುತ್ತಾರೆ ಅವರು.

ಕೇವಲ ನೀರಷ್ಟೆ ಕಾರಣವಲ್ಲ: ಕೆಲವೇ ಭಾಗದಲ್ಲಿ ವಾಂತಿ, ಭೇದಿ ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ, ವಾಂತಿ, ಭೇದಿ ಪ್ರಕರಣಗಳಿಗೆ ನೀರಷ್ಟೇ ಕಾರಣವಲ್ಲ. ಆಹಾರ ಸೇರಿದಂತೆ ಬೇರೆ ಕಾರಣಗಳು ಇರಬಹುದು. ಆದರೂ ನಾಗನೂರು ಕೆರೆ ಹಾಗೂ ಬೋರವೆಲ್ ನೀರನ್ನು ಗುರುವಾರ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಸುರೇಶ ಇಟ್ನಾಳ  `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT