ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಳು– ಜವಳು ನಿವಾರಣೆಗೆ ಆದ್ಯತೆ: ಪಾಟೀಲ

Last Updated 8 ಏಪ್ರಿಲ್ 2014, 8:08 IST
ಅಕ್ಷರ ಗಾತ್ರ

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಶ್ರೀಮಂತ ಪಾಟೀಲ ಕೃಷಿಯಲ್ಲಿ ಬಿಎಸ್ಸಿ ಪದವೀ­ಧರರು. ಗಡಿಭಾಗವಾದ ಅಥಣಿ ತಾಲ್ಲೂಕಿನ ಕೆಂಪವಾಡದ ನಿವಾಸಿಯಾಗಿರುವ ಇವರಿಗೆ ಕೃಷಿ ಮೇಲೆ ವಿಶೇಷ ಒಲವು ಇದೆ. ಜೊತೆಗೆ ಅಥಣಿ ಫಾರ್ಮರ್ಸ್‌ ಶುಗರ್‌ ಫ್ಯಾಕ್ಟರಿಯನ್ನೂ ನಡೆಸುತ್ತಿದ್ದಾರೆ.

ಸಹಕಾರಿ ಸಂಘ ಹಾಗೂ ನೀರಾವರಿ ಸಂಘಗಳನ್ನು ನಿರ್ಮಿ­ಸುವ ಮೂಲಕ ಸುಮಾರು ಹತ್ತು ಸಾವಿರ ಎಕರೆಗೂ ಹೆಚ್ಚು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಇವರು ನೆರವಾಗಿದ್ದರು. ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಮೂಲಕ ರಾಯಬಾಗ, ಅಥಣಿ ತಾಲ್ಲೂಕಿನ ರೈತರೊಂದಿಗೆ ನಂಟು ಬೆಳೆಸಿಕೊಂಡಿದ್ದರು. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ಆಶಯದೊಂದಿಗೆ ಹತ್ತು ವರ್ಷಗಳ ಹಿಂದೆ ರಾಜಕೀಯ ರಂಗ ಪ್ರವೇಶ ಮಾಡಿದ್ದರು.

‘ಮೊದಲು ಕಾಂಗ್ರೆಸ್‌ನಲ್ಲಿದ್ದೆ. ಆದರೆ, ಈ ಪಕ್ಷದಲ್ಲಿ ಗುಲಾಮಗಿರಿ ವ್ಯವಸ್ಥೆ ಇದೆ. ಪಕ್ಷದೊಳಗೆ ಇದ್ದು ಮಾನಹಾನಿ ಮಾಡಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ ನಮ್ಮನ್ನು ಗೌರ­ವ­ದಿಂದ ಕಾಣುವ ಎಚ್‌.ಡಿ. ಕುಮಾರಸ್ವಾಮಿ ನಾಯ­ಕತ್ವ ಮೆಚ್ಚಿಕೊಂಡು ಜೆಡಿಎಸ್‌ ಪಕ್ಷವನ್ನು ಆಯ್ಕೆ ಮಾಡಿ­ಕೊಂಡಿದ್ದೇನೆ’ ಎಂಬುದು ಶ್ರೀಮಂತ ಪಾಟೀಲರ ವಿವರಣೆ.

ತಮ್ಮ ಬಿಡುವಿಲ್ಲದ ಪ್ರಚಾರದ ನಡುವೆಯೂ ಪಾಟೀಲರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಪ್ರಶ್ನೆ: ಪ್ರಚಾರಕ್ಕೆ ಕ್ಷೇತ್ರದ ಜನರಿಂದ ಹೇಗೆ ಪ್ರತಿಕ್ರಿಯೆ ಸಿಗುತ್ತಿದೆ?
ಉತ್ತರ:
ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ ಕಡೆಗಳಲ್ಲೆಲ್ಲ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಎಲ್ಲೆಡೆ ಬೇಸರ ವ್ಯಕ್ತವಾಗುತ್ತಿದೆ. ಚಿಕ್ಕೋಡಿ ತಾಲ್ಲೂಕಿನಲ್ಲಿ ಸಂಚರಿಸಿದಾಗ, ರಸ್ತೆ, ಚರಂಡಿ ಸೇರಿದಂತೆ ಮೂಲಸೌಲಭ್ಯ ಇಲ್ಲದಿರುವುದು ಕಂಡು ಬಂತು. ಸಚಿವರಾ­ಗಿಯೂ ಪ್ರಕಾಶ ಹುಕ್ಕೇರಿ ಅವರು ಹೇಳಿಕೊಳ್ಳುವಂತಹ ಕೆಲಸವನ್ನು ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನರೇಂದ್ರ ಮೋದಿ ಬಗ್ಗೆ ಜನರು ಮಾತನಾಡುತ್ತಿಲ್ಲ. ಮೋದಿ ಪ್ರಭಾವೂ ಕ್ಷೇತ್ರದಲ್ಲಿ ಕಾಣುತ್ತಿಲ್ಲ.

* ಪ್ರಶ್ನೆ: ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳು ಯಾವುವು?
ಉತ್ತರ:
ಇದುವರೆಗೆ ಯಾವ ಜನಪ್ರತಿನಿಧಿಯೂ ನೀರಾವರಿಗೆ ಒತ್ತು ನೀಡದೇ ಇರುವುದರಿಂದ ನೀರಾವರಿ ಸೌಲಭ್ಯ ಇಲ್ಲದೇ ಇನ್ನೂ ಬಹಳಷ್ಟು ಒಣಭೂಮಿ ಹಾಗೆಯೇ ಇದೆ. ಕ್ಷೇತ್ರದಲ್ಲಿ ಕೃಷ್ಣಾ ನದಿ ಹರಿದಿರುವುದರಿಂದ ಸುಮಾರು 50 ಸಾವಿರ ಎಕರೆಗೂ ಹೆಚ್ಚು ಪ್ರದೇಶಗಳಲ್ಲಿ ಸವಳು–ಜವಳು ಸಮಸ್ಯೆ ಇದೆ. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ಹಳ್ಳಿಗಳಲ್ಲಿ ನೈರ್ಮಲ್ಯತೆ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯ ನಿರ್ಮಾಣಗೊಳ್ಳದೇ ಇರುವುದರಿಂದ ಮಹಿಳೆಯರು ನಿತ್ಯ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ರಸ್ತೆ, ಚರಂಡಿ ನಿರ್ಮಾಣದಂತಹ ಸರ್ಕಾರಿ ಕಾಮಗಾರಿಗಳಲ್ಲಿ ಶೇ. 80ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ.

* ಪ್ರಶ್ನೆ: ನಿಮಗೆ ಪ್ರಮುಖ ಎದುರಾಳಿ ಯಾರು?
ಉತ್ತರ:
ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರದಿಂದ ಈ ಪಕ್ಷವನ್ನೇ ಜನರು ತಿರಸ್ಕರಿಸುತ್ತಾರೆ. ಹೀಗಾಗಿ ಪ್ರಕಾಶ ಹುಕ್ಕೇರಿ ಅಷ್ಟು ಪೈಪೋಟಿ ನೀಡುವುದಿಲ್ಲ. ಹಾಗೆ ನೋಡಿದರೆ, ನಮಗೆ ಬಿಜೆಪಿ ಅಭ್ಯರ್ಥಿಯೇ ಇಲ್ಲಿ ಪ್ರಮುಖ ಎದುರಾಳಿ. ಆದರೆ, ಸ್ಥಳೀಯ ಅಭ್ಯರ್ಥಿಯ ವರ್ತನೆ ಬಗ್ಗೆ ಜನರಿಗೆ ಬೇಸರ ಇದೆ.

* ಪ್ರಶ್ನೆ: ನಿಮಗೆ ಮತ್ತು ನಿಮ್ಮ ಪಕ್ಷಕ್ಕೇ ಏಕೆ ಮತ ಹಾಕಬೇಕು?
ಉತ್ತರ:
ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಕಳೆದ ಬಾರಿ ಆಯ್ಕೆ ಮಾಡಿ ಕಳುಹಿಸಿದ್ದ ಬಿಜೆಪಿ ಅಭ್ಯರ್ಥಿ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಇವರಡು ಪಕ್ಷಕ್ಕೆ ಪರ್‍ಯಾಯವಾಗಿ ಜೆಡಿಎಸ್‌  ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಈಗ ಉತ್ತಮ ಅವಕಾಶ ಸಿಕ್ಕಿದೆ. ಬದಲಾವಣೆಗಾಗಿ ಜನ ನನಗೇ ಮತ ಹಾಕಬೇಕು.

*ಪ್ರಶ್ನೆ: ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಗವಾಡ ಕ್ಷೇತ್ರದಲ್ಲಿ ನೀವು ಸೋತಿದ್ದೀರಿ. ಲೋಕಸಭಾ ಕ್ಷೇತ್ರ ವ್ಯಾಪ್ತಿ ಇನ್ನೂ ದೊಡ್ಡದು. ಗೆಲ್ಲುವ ವಿಶ್ವಾಸ ಇದೆಯೇ?
ಉತ್ತರ:
ಶೇಕಡಾ 100ರಷ್ಟು ಗೆಲ್ಲುವ ವಿಶ್ವಾಸ ಇದೆ. ಪ್ರಚಾರಕ್ಕೆ ಹೋದ ಹಳ್ಳಿಗಳಲ್ಲೆಲ್ಲ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಜನ ಬೇಸರದಿಂದ ಮಾತನಾಡುತ್ತಿದ್ದಾರೆ. ನಮಗೆ ಮೂರನೇ ಆಯ್ಕೆಯ ಅವಕಾಶವನ್ನು ನೀಡಿದ್ದೀರಿ. ನಿಮ್ಮನ್ನೇ ಬೆಂಬಲಿಸುತ್ತೇವೆ ಎಂಬ ಭರವಸೆಯ ಮಾತು ಜನರಿಂದ ಸಿಗುತ್ತಿದೆ.

* ಪ್ರಶ್ನೆ: ಸಂಸದರಾದರೆ ಕ್ಷೇತ್ರದ ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಳ್ಳುತ್ತೀರಿ?
ಉತ್ತರ:
ನಾನು ಸಂಸದನಾದರೆ ಗ್ರಾಮೀಣ ಅಭಿವೃದ್ಧಿಗೆ, ಕೃಷಿ ಭೂಮಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನವನ್ನು ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಸಂಸದರು ಪ್ರಯತ್ನ ಪಟ್ಟರೆ, ಅಭಿವೃದ್ಧಿ ಕಾಮಗಾರಿಗಾಗಿ ಒಂದು ವರ್ಷಕ್ಕೆ ಸುಮಾರು ₨ 200 ಕೋಟಿಯನ್ನು ತರಲು ಸಾಧ್ಯವಿದೆ. 5 ವರ್ಷಕ್ಕೆ ನಮ್ಮ ಕ್ಷೇತ್ರಕ್ಕೆ ಸುಮಾರು ₨ 1,000 ಕೋಟಿ ವಿಶೇಷ ಅನುದಾನ ಹರಿದು ಬರಲಿದೆ. ಆದರೆ, ಇದುವರೆಗಿನ ಯಾವ ಸಂಸದರೂ ವಿಶೇಷ ಅನುದಾನವನ್ನು ತಂದಿಲ್ಲ. ಒಣ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡುತ್ತೇನೆ. ಸವಳು– ಜವಳು ಸಮಸ್ಯೆ ನಿವಾರಣೆಗೆ ಕೃತಕ ಚರಂಡಿ ನಿರ್ಮಾಣ ಮಾಡಿಸುತ್ತೇನೆ. ಸರ್ಕಾರಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುವುದನ್ನು ತಡೆದು, ಗುಣಮಟ್ಟದ ಕೆಲಸ ನಡೆಯುವಂತೆ ನೋಡಿಕೊಳ್ಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT