ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾರರ ಕಿರಿಕ್ ನಿಮ್ಮದೇ ಕ್ಲಿಕ್!

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನಿಮ್ಮ ಕಣ್ಣಮುಂದೆಯೇ ಯಾರೋ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ. ದುರದೃಷ್ಟಕ್ಕೆ ಅಲ್ಲಿ ಯಾರೂ ಟ್ರಾಫಿಕ್ ಪೊಲೀಸ್ ಇಲ್ಲ. ಆದರೆ ಆ ಸವಾರನ ಅನಾಗರಿಕ ವರ್ತನೆ ಅಮಾಯಕರ ಪ್ರಾಣಕ್ಕೆ ಕುತ್ತು ತರುವುದಕ್ಕೂ ಮುನ್ನ ಅವನನ್ನು ಕಾನೂನಿನ ಕೈಗೆ ಹಿಡಿದುಕೊಡಬೇಕಿತ್ತು. ಆದರೆ ಅಂತಹ `ಅಧಿಕಾರ~ ಸಾರ್ವಜನಿಕರಿಗೂ ಇದ್ದಿದ್ದರೆ ಎಂದು ಯೋಚಿಸುತ್ತೀರಿ...

`ಅಂತಹ ಸನ್ನಿವೇಶಗಳ ದಾಖಲೆ ನಮಗೆ ಒದಗಿಸಿ ನಾವು ಕ್ರಮ ಕೈಗೊಳ್ಳುತ್ತೇವೆ~ ಎಂದು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ, ನಗರ ಸಂಚಾರ ಪೊಲೀಸರು!

ಹೌದು, ನಿಮ್ಮ ಕಣ್ಮುಂದೆ ನಡೆಯುವ ಸಂಚಾರ ನಿಯಮ ಉಲ್ಲಂಘನೆ, ಹಿಟ್ ಅಂಡ್ ರನ್, ಪಿಕ್ ಪಾಕೆಟ್ ಅಥವಾ ಇನ್ನಿತರ ಯಾವುದೇ `ಟ್ರಾಫಿಕ್~ ಅಪರಾಧ ಪ್ರಕರಣಗಳನ್ನು ಸಾರ್ವಜನಿಕರೇ ಫೋಟೊ ಇಲ್ಲವೇ ವೀಡಿಯೊ ಕ್ಲಿಪಿಂಗ್ ರೂಪದಲ್ಲಿ ಸೆರೆಹಿಡಿದು ಸಂಚಾರ ಪೊಲೀಸ್ ವಿಭಾಗಕ್ಕೆ ಒಪ್ಪಿಸಿದರೆ ಕಾನೂನು ಕ್ರಮ ಜರುಗಿಸುವ ಬಗ್ಗೆ ಯೋಜನೆಯೊಂದು ಸಿದ್ಧವಾಗುತ್ತಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಹೇಳುವುದು ಹೀಗೆ: ರಸ್ತೆ ಸಂಚಾರ ನಿಯಮಗಳ ಬಗ್ಗೆ ನಾವು ಒಂದಿಲ್ಲ ಒಂದು ಜನಜಾಗೃತಿ ಕಾರ್ಯಕ್ರಮ ರೂಪಿಸುತ್ತಲೇ ಇದ್ದೇವೆ. ನೋಟಿಸ್ ಕೊಡುವುದು, ದಂಡ ವಿಧಿಸುವುದು ನಮ್ಮ ಕರ್ತವ್ಯ. ಆ ಮೂಲಕ ನಾವು ತಪ್ಪಿತಸ್ಥರನ್ನು ಎಚ್ಚರಿಸುತ್ತಾ ಇರಬಹುದು.

ಆದರೆ ಕಾನೂನು ಪಾಲನೆಯಲ್ಲಿ ಜನರ ಸಹಭಾಗಿತ್ವ, ಪಾಲು ಇದ್ದಲ್ಲಿ ಯಾವುದೇ ಯೋಜನೆ ಬಹಳ ಬೇಗನೆ ಯಶಸ್ಸು ಸಾಧಿಸುತ್ತದೆ ಎಂಬುದು ನಮ್ಮ ಆಶಯ. ಈ ಹಿನ್ನೆಲೆಯಲ್ಲಿ `ಪಬ್ಲಿಕ್ ಐ~ ಎಂಬ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದೇವೆ.
ಪಬ್ಲಿಕ್ ಐ ಅಂದರೆ...

`ಪಬ್ಲಿಕ್ ಐ~ನಲ್ಲಿ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಜನರೇ ಮೊಬೈಲ್ ಫೋನ್, ಕ್ಯಾಮೆರಾ, ವೀಡಿಯೊ ಕ್ಯಾಮೆರಾ, ಮೊಬೈಲ್ ವೀಡಿಯೊ ಮೂಲಕ ಸೆರೆ ಹಿಡಿದು ನಮಗೆ ತಲುಪಿಸಿದರೆ ನಾವು ಸಂಬಂಧಪಟ್ಟವರಿಗೆ ನೋಟಿಸ್ ಕಳುಹಿಸಿ ದಂಡ ವಸೂಲು ಮಾಡಲು ಅವಕಾಶವಿದೆ.

ಇದಕ್ಕೆಂದೇ ವೆಬ್‌ಸೈಟ್‌ವೊಂದನ್ನು ವಿನ್ಯಾಸಗೊಳಿಸುತ್ತಿದ್ದು, ಈ ಮಾಸಾಂತ್ಯದೊಳಗೆ ಅನುಷ್ಠಾನಕ್ಕೆ ಬರುವ ನಿರೀಕ್ಷೆಯಿದೆ. ಪ್ರಸ್ತುತ `ಆಂಬುಲೆನ್ಸ್‌ಗೆ ದಾರಿಬಿಡಿ~ ಎಂಬ ಜಾಗೃತಿ ಅಭಿಯಾನ ನಗರದೆಲ್ಲೆಡೆ ನಡೆಯುತ್ತಿದೆ. ಇದು ಮುಗಿಯುತ್ತಲೇ `ಪಬ್ಲಿಕ್ ಐ~ ಸರದಿ~ ಎನ್ನುತ್ತಾರೆ, ಸಲೀಂ ಅವರು.

ಹಾಗಿದ್ದರೆ, ವಾಹನ ಸವಾರರು ಇನ್ನು ಮುಂದೆ ಮೈಯೆಲ್ಲ ಕಣ್ಣಾಗಿ ವಾಹನ ಚಲಾಯಿಸುವುದು ಒಳಿತು. ನಿಮ್ಮನ್ನು ರೆಡ್‌ಹ್ಯಾಂಡೆಡ್ ಆಗಿ ಕಾನೂನಿನ ಕೈಗೆ ಹಿಡಿದುಕೊಡಲು ಸಂಚಾರ ಪೊಲೀಸರೇ ಸ್ಥಳದಲ್ಲಿ ಇರಬೇಕಾಗಿಲ್ಲ. ಎಲ್ಲಿಂದ ಯಾವ ಕ್ಯಾಮೆರಾ ಕ್ಲಿಕ್ ಆಗುವುದೋ? ಯಾರ ಮೊಬೈಲ್ ಆಗಲಿ, ಹ್ಯಾಂಡ್‌ಕ್ಯಾಮ್ ಆಗಲಿ ನೀವು ಅಪರಾಧ ಎಸಗುತ್ತಿರುವುದನ್ನು `ಲೈವ್~ ಆಗಿ ದಾಖಲಿಸಿಕೊಳ್ಳುವುದೋ ಯಾರಿಗೆ ಗೊತ್ತು?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT