ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲಿಗೆ ಸಜ್ಜಾಗಿದ್ದೇವೆ: ಪೂಜಾರ

‘ಹಳೆಯ ನೆನಪು ಕೆದಕುವುದು ಬೇಡ, ಮುಂದಿನ ಗುರಿಯಷ್ಟೇ ಮುಖ್ಯ’
Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಡರ್ಬನ್‌ (ಪಿಟಿಐ): ‘ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆಲ್ಲಲು ನಮಗೆ ಅವಕಾಶವಿತ್ತು. ಆದರೆ, ಫಾಫ್‌ ಡು ಪ್ಲೇಸಿಸ್‌ ಮತ್ತು ಎ.ಬಿ. ಡಿವಿಲಿಯರ್ಸ್‌ ಜೊತೆಯಾಟ ಇದಕ್ಕೆ ಅಡ್ಡಿಯಾಯಿತು. ಅದೇನೇ ಇರಲಿ, ಜೋಹಾನ್ಸ್‌ಬರ್ಗ್‌ನಲ್ಲಿನ ನೆನಪನ್ನು ಅಲ್ಲಿಯೇ ಮರೆತು ಇಲ್ಲಿಗೆ ಬಂದಿದ್ದೇವೆ.
ಮತ್ತೊಂದು ಸವಾಲಿಗೆ ಸಜ್ಜಾಗಿದ್ದೇವೆ...’

–ಭಾರತ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ ಪೂಜಾರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಸ್ಪಷ್ಟ ಮಾತಿದು. ಡಿಸೆಂಬರ್‌ 26ರಿಂದ ಇಲ್ಲಿ ಎರಡನೇ ಮತ್ತು ಕೊನೆಯ ಟೆಸ್ಟ್‌ ನಡೆಯಲಿದೆ. ಆ ಪಂದ್ಯವನ್ನು ಆಡಲು ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ಭಾರತ ತಂಡ ಬಂದಿದೆ. ‘ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಇನ್ನೂ ಚೆನ್ನಾಗಿ ಆಡಲು ಅವಕಾಶವಿತ್ತು. ಆ ಪಂದ್ಯ ಡ್ರಾ ಆದರೂ ಸಾಕಷ್ಟು ಹೊಸ ವಿಷಯಗಳನ್ನು ಕಲಿತುಕೊಂಡೆವು.

ಜೊತೆಗೆ ಸಕಾರಾತ್ಮಕ ಅಂಶಗಳೂ ತಿಳಿದವು’ ಎಂದು ಪೂಜಾರ ನುಡಿದರು. ಸೌರಾಷ್ಟ್ರದ ಈ ಆಟಗಾರ ಆ ಟೆಸ್ಟ್‌ನಲ್ಲಿ 153 ರನ್ ಗಳಿಸಿದ್ದರು. ‘ಪ್ರಥಮ ಪಂದ್ಯದಲ್ಲಿ ಎದುರಿಸಿದ್ದ ಒತ್ತಡದಿಂದ ಹೊರ ಬಂದಿದ್ದೇವೆ. ಎರಡನೇ ಪಂದ್ಯದಲ್ಲಿ ಏನು ಮಾಡಬೇಕೆನ್ನುವುದರತ್ತ ಮಾತ್ರ ನಮ್ಮ ಗಮನ ಎಂದ ಬಲಗೈ ಬ್ಯಾಟ್ಸ್‌ಮನ್‌ ಪೂಜಾರ, ಪ್ಲೇಸಿಸ್‌ ಮತ್ತು ಡಿವಿಲಿಯರ್ಸ್‌ ಅಂದು ತೋರಿದ ಆಟದ ಬಗ್ಗೆ  ಮೆಚ್ಚುಗೆ ವ್ಯಕ್ತಪಡಿಸಿದರು.

‘ಗೆಲುವಿನ ಹಾದಿಯಲ್ಲಿ ಸಾಗಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿ ಹಾಕಿದ ಶ್ರೇಯ ಜಹೀರ್‌ ಖಾನ್‌, ಮೊಹಮ್ಮದ್‌ ಶಮಿ ಮತ್ತು ಇಶಾಂತ್‌ ಶರ್ಮ ಅವರಿಗೆ ಸಲ್ಲಬೇಕು. ಅವರು ತೋರಿದ ಬೌಲಿಂಗ್‌ ಶ್ಲಾಘನೀಯ. ಆಶ್ವಿನ್‌ ಕೂಡಾ ಚೆನ್ನಾಗಿ ಬೌಲ್‌ ಮಾಡಿದರು. ಅವರ ಎಸೆತಗಳನ್ನು ಎದುರಿಸಲು ಪ್ಲೇಸಿಸ್‌ ಸಾಕಷ್ಟು ಒದ್ದಾಡಿದರು’ ಎಂದೂ ಪೂಜಾರ ಹೇಳಿದರು.

ಗೆಲುವಿಗೆ ಕಾದಿದ್ದೇವೆ:
‘ಮೊದಲ ಟೆಸ್ಟ್‌ನಲ್ಲಿ ಗೆಲುವಿನ ಆಸೆ ಈಡೇರಲಿಲ್ಲ. ಆದರೆ, ಕಿಂಗ್ಸ್‌ ಮೇಡ್‌ನಲ್ಲಿ ಜಯ ಪಡೆಯುವ ವಿಶ್ವಾಸವಿದೆ’ ಎಂದು ಆತಿಥೇಯ ತಂಡದ ನಾಯಕ ಗ್ರೇಮ್‌ ಸ್ಮಿತ್‌ ವಿಶ್ವಾಸ ನುಡಿದರು. ‘ಕಿಂಗ್ಸ್‌ಮೇಡ್‌ ಅಂಗಳದಲ್ಲಿ ಬ್ಯಾಟ್‌ ಮಾಡುವುದು ತುಂಬಾ ಕಷ್ಟ. ಹಿಂದಿನ ಕೆಲ ವರ್ಷಗಳಲ್ಲಿ ಡರ್ಬನ್‌ನಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ತೋರಿಲ್ಲ. ಆದರೆ, ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುವ ಭರವಸೆಯಿದೆ’ ಎಂದರು.

2008ರಲ್ಲಿ ದಕ್ಷಿಣ ಆಫ್ರಿಕಾ ಕಿಂಗ್ಸ್‌ ಮೇಡ್‌ ಕ್ರೀಡಾಂಗಣದಲ್ಲಿ ಕೊನೆಯ ಬಾರಿ  ಟೆಸ್ಟ್‌ನಲ್ಲಿ ಗೆಲುವು ಪಡೆದಿತ್ತು. ಆದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಭಾರತ ಮತ್ತು ಶ್ರೀಲಂಕಾ ತಂಡಗಳ ಎದುರು ನಿರಾಸೆ ಕಂಡಿತ್ತು. 

ಟೀಕೆ: ದಕ್ಷಿಣ ಆಫ್ರಿಕಾ ತಂಡ ಗೆಲುವು ಪಡೆಯಲು ಸಾಧ್ಯವಿದ್ದ ಟೆಸ್ಟ್‌ ಡ್ರಾದಲ್ಲಿ ಅಂತ್ಯ ಕಾರಣ ಕೆಲ ಕ್ರಿಕೆಟ್‌ ಪ್ರೇಮಿಗಳು ಮಾಡಿದ ಟೀಕಾ ಪ್ರಹಾರಕ್ಕೆ  ಡೇಲ್‌ ಸ್ಟೇನ್‌ ಮತ್ತು ವೆರ್ನಾನ್‌ ಫಿಲ್ಯಾಂಡರ್‌ ಬೇಸರಗೊಂಡಿದ್ದಾರೆ. ‘ಮೊದಲ ಟೆಸ್ಟ್‌  ನಂತರ ತಂಡದ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಇದರಿಂದ ಸ್ಟೇನ್‌ ಮತ್ತು ಫಿಲ್ಯಾಂಡರ್‌ ಸಾಕಷ್ಟು ಬೇಸರಗೊಂಡಿದ್ದಾರೆ’ ಎಂದು ಡಿವಿಲಿಯರ್ಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT