ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಎದುರಿಸಲು ನಾವೂ ಸಿದ್ಧ : ಮಾರ್ಷಲ್ ಕೆ.ಜೆ. ಮ್ಯಾಥ್ಯೂಸ್

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಬೇರೆ ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆ ನಡೆಸುವುದರಿಂದ ಭಾರತ ಆತಂಕಪಡುವ ಅಗತ್ಯವಿಲ್ಲ. ಯಾವುದೇ ರೀತಿಯ ಸವಾಲು ಎದುರಿಸುವ ನಿಟ್ಟಿನಲ್ಲಿ ನಾವು ಕೂಡ ಕಾರ್ಯೋನ್ಮುಖರಾಗಿದ್ದೇವೆ~ ಎಂದು ಏರ್ ಮಾರ್ಷಲ್ ಕೆ.ಜೆ. ಮ್ಯಾಥ್ಯೂಸ್ ಶುಕ್ರವಾರ ಇಲ್ಲಿ ಹೇಳಿದರು.

ಎಚ್‌ಎಎಲ್‌ನ ಡಾ.ಘಾಟ್ಗೆ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ದೇಶದ ಮೊದಲ ಯುದ್ಧ ವಿಮಾನ `ಮಾರುತ್~ (ಎಚ್‌ಎಫ್-24)ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಹೊರ ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆ ನಡೆಸಿದಾಗಲೆಲ್ಲಾ ಮಾಧ್ಯಮಗಳಲ್ಲಿ ಉತ್ಪ್ರೇಕ್ಷಿತ ರೀತಿಯಲ್ಲಿ ವರದಿಗಳು ಪ್ರಕಟವಾಗುತ್ತವೆ. ಆದರೆ, ನಾವು ಕೂಡ ಈ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡಿದ್ದೇವೆ. ಹೀಗಾಗಿ, ದೇಶದ ಜನತೆ ಈ ಬಗ್ಗೆ ಯಾವುದೇ ರೀತಿಯ ಭಯ ಅಥವಾ ಆತಂಕಪಡುವ ಅಗತ್ಯವಿಲ್ಲ ಎಂದು ನಾನು ಈ ವೇದಿಕೆ ಮೂಲಕ ಭರವಸೆ ನೀಡುತ್ತೇನೆ~ ಎಂದು ಅವರು ಅಭಯ ನೀಡಿದರು.

`ನಾವು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುವುದು ಬೇರೆ ದೇಶಗಳ ಮೇಲೆ ಪ್ರಯೋಗಿಸುವುದಕ್ಕಲ್ಲ. ಬದಲಿಗೆ, ನಮ್ಮಲ್ಲೂ ಅಣ್ವಸ್ತ್ರ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ. ಇದು ನಮ್ಮ ದೇಶದ ಆಂತರಿಕ ದ್ರತಾ ನೀತಿ. ಎಲ್ಲವನ್ನೂ ನೇರವಾಗಿ ನಾವು ಪ್ರಧಾನಮಂತ್ರಿಗಳಿಗೆ ವಿವರಿಸಿದ್ದೇವೆ. ಆದರೆ, ಕನಿಷ್ಠ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಬೇಕಾಗಿರುವುದರಿಂದ ಯಾವುದನ್ನೂ ಬಹಿರಂಗಪಡಿಸಲಾಗದು~ ಎಂದು ಮ್ಯಾಥ್ಯೂಸ್ ಹೇಳಿದರು.

ಸಮಾರಂಭದ ನಂತರ ಈ ಬಗ್ಗೆ ಪತ್ರಕರ್ತರು ಹೆಚ್ಚಿನ ಮಾಹಿತಿ ಬಯಸಿದಾಗ, ಯಾವುದೇ ರೀತಿಯ ವಿವರ ನೀಡಲು ಏರ್ ಮಾರ್ಷಲ್ ಇಚ್ಛಿಸಲಿಲ್ಲ.

`ಮಾರುತ್~ನ ಸುವರ್ಣ ಸಂಭ್ರಮ: 1961ರ ಜೂನ್ 17ರಂದು ಭಾರತದ ಪ್ರಥಮ ಸ್ವದೇಶಿ ನಿರ್ಮಿತ `ಮಾರುತ್~ (ಎಚ್‌ಎಫ್-24) ಯುದ್ಧ ವಿಮಾನ ಯಶಸ್ವೀ ಹಾರಾಟ ನಡೆಸಿದ 50 ವರ್ಷಗಳ ಸಂಭ್ರಮದ ಅಂಗವಾಗಿ ಎಚ್‌ಎಎಲ್ ಈ ಕಾರ್ಯಕ್ರಮ ಏರ್ಪಡಿಸಿತ್ತು. ಮಾರುತ್ ಯುದ್ಧ ವಿಮಾನ ನಿರ್ಮಾಣಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ನೀಡಿದ ಸಹಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮ್ಯಾಥ್ಯೂಸ್, `ರಾಜಕೀಯವಾಗಿ ನಾವು ಎಲ್ಲರಿಂದಲೂ ಇದೇ ರೀತಿಯ ಸಹಕಾರ ನಿರೀಕ್ಷಿಸುತ್ತೇವೆ~ ಎಂದರು. ಈಗಿನ ಪ್ರಧಾನಿ ಕೂಡ ಅಷ್ಟೇ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬುದನ್ನು ಹೇಳಲು ಮರೆಯಲಿಲ್ಲ.

1964ರ ಮೇ 10ರಂದು ಎಚ್‌ಎಎಲ್ ಮೊದಲ `ಮಾರುತ್~ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತ್ತು. 1964ರಿಂದ 1977ರ ನಡುವೆ ಎಚ್‌ಎಎಲ್ 129 ಮಾರುತ್ ಏಕ ಆಸನಗಳ ವಿಮಾನಗಳು ಹಾಗೂ 18 ತರಬೇತಿ ಯುದ್ಧ ವಿಮಾನಗಳನ್ನು ನಿರ್ಮಿಸಿತು. ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ `ಮಾರುತ್~, 1984ರ ಅಕ್ಟೋಬರ್ 8ರಂದು ವಾಯುಪಡೆ ದಿನಾಚರಣೆ ಸಮಾರಂಭದಲ್ಲಿ ಕೊನೇ ಹಾರಾಟ ನಡೆಸಿದ್ದು ಇತಿಹಾಸ. ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಎಚ್‌ಎಎಲ್ ನಿರ್ದೇಶಕ ಎನ್.ಸಿ. ಅಗರ್‌ವಾಲ್ (ವಿನ್ಯಾಸ ಮತ್ತು ಅಭಿವೃದ್ಧಿ), ನಿವೃತ್ತ ಸ್ಕ್ವಾರ್ಡ್ರನ್ ಲೀಡರ್ ಹಾಗೂ ಎಚ್‌ಎಎಲ್‌ನ ಮುಖ್ಯ ಪರೀಕ್ಷಾ ಪೈಲಟ್ ಬಲದೇವ್‌ಸಿಂಗ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಿವೃತ್ತ ಗ್ರೂಪ್ ಕ್ಯಾಪ್ಟನ್ ಎಸ್. ಚೆನ್ನಕೇಶವ್, ನಿವೃತ್ತ ಸ್ಕ್ವಾರ್ಡ್ರನ್ ಲೀಡರ್ ಭೂಷಣ್ ನಾರಂಗ್ ಮತ್ತಿತರರು `ಮಾರುತ್~ ಯುದ್ಧ ವಿಮಾನದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT