ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಎದುರಿಸುವರೇ ತೆರೆಸಾ

ವ್ಯಕ್ತಿ
Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ಬ್ರಿಟನ್ನಿನ ಹಳ್ಳಿಯೊಂದರಲ್ಲಿ ಜನಿಸಿದ ತೆರೆಸಾ ಬ್ರೇಜರ್ ಎಂಬ ಹೆಣ್ಣು ಮಗಳಿಗೆ, ಆ ದೇಶದ ಮೊದಲ ಮಹಿಳಾ ಪ್ರಧಾನಿಯಾಗಬೇಕು ಎಂಬ ಆಸೆ ಇತ್ತು. ಆಕೆ ಉನ್ನತ ವ್ಯಾಸಂಗ ನಡೆಸಿದ್ದು ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ. ಆದರೆ ಅದಕ್ಕೂ ಮೊದಲು ಆಕೆ ಹಣ ಸಂಪಾದಿಸಲು ವಾರಾಂತ್ಯದ ಬಿಡುವಿನಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ‘ಎತ್ತರದ ನಿಲುವಿನ, ಫ್ಯಾಷನ್‌ ಬಗ್ಗೆ ತುಸು ಒಲವಿನ ಈ ಹೆಣ್ಣು ಮಗಳು ದೇಶದ ಮೊದಲ ಮಹಿಳಾ ಪ್ರಧಾನಿಯಾಗಬೇಕು ಎಂಬ ಆಸೆ ಹೊತ್ತಿದ್ದು ನೆನಪಿದೆ’ ಎನ್ನುತ್ತಾರೆ ಆಕೆಯ ಸ್ನೇಹಿತರು.

ಆದರೆ, ತೆರೆಸಾ ಅವರ ಈ ಆಸೆ ಕೈಗೂಡಲಿಲ್ಲ– ಮಾರ್ಗರೇಟ್ ಥ್ಯಾಚರ್ ಬ್ರಿಟನ್ನಿನ ಮೊದಲ ಮಹಿಳಾ ಪ್ರಧಾನಿಯಾದರು. ಆದರೇನಂತೆ, ತೆರೆಸಾ ಅವರನ್ನು ವಿಧಿ, ದೇಶದ ಜನ ಮತ್ತು ಅಲ್ಲಿನ ಕನ್ಸರ್ವೇಟಿವ್ ಪಕ್ಷ ಎರಡನೆಯ ಮಹಿಳಾ ಪ್ರಧಾನಿ ಪಟ್ಟಕ್ಕೆ ಏರಿಸಿವೆ. ಈ ದಿಟ್ಟೆಯ ಈಗಿನ ಹೆಸರು ತೆರೆಸಾ ಮೇ. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಪರಿಚಯವಾದ ಫಿಲಿಪ್ ಮೇ ಅವರನ್ನು ವಿವಾಹವಾಗಿ ‘ತೆರೆಸಾ ಬ್ರೇಜರ್’ ಅವರು ‘ತೆರೆಸಾ ಮೇ’ ಆದರು.

ಐರೋಪ್ಯ ಒಕ್ಕೂಟದ ಭಾಗವಾಗಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ಜನಮತಗಣನೆ ನಡೆಸುವುದಾಗಿ ಬ್ರಿಟನ್ನಿನ ಹಿಂದಿನ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಘೋಷಿಸಿದ್ದರು. ಮಾತಿನಂತೆ ನಡೆದುಕೊಂಡರು. ಅಲ್ಲಿನ ಜನ ಒಕ್ಕೂಟದಿಂದ ಹೊರಬರುವುದಕ್ಕೆ ಒಲವು ತೋರಿದರು. ನಂತರ, ಪ್ರಧಾನಿ ಸ್ಥಾನಕ್ಕೆ ಕ್ಯಾಮರೂನ್ ರಾಜೀನಾಮೆ ನೀಡಿದರು. ಅವರಿಂದ ತೆರವಾದ ಸ್ಥಾನಕ್ಕೆ ತೆರೆಸಾ ಅವರು ಒಂದರ್ಥದಲ್ಲಿ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾದರು. ಇವೆಲ್ಲ ಈಗ ಇತಿಹಾಸ.

ಬ್ರಿಟನ್ ತನ್ನ ಈಚಿನ ಇತಿಹಾಸದಲ್ಲೇ ಅತ್ಯಂತ ನಾಜೂಕಿನ ಹಾದಿಯನ್ನು ಕ್ರಮಿಸುತ್ತಿದೆ. ಒಕ್ಕೂಟದಿಂದ ಹೊರಬರುವ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಹೊರಬಂದ ನಂತರವೂ ಒಕ್ಕೂಟದ ಸದಸ್ಯ ಹಾಗೂ ಯುರೋಪಿನ ಇತರ ರಾಷ್ಟ್ರಗಳ ಜೊತೆ ಒಳ್ಳೆಯ ಸಂಬಂಧ ಕಾಯ್ದುಕೊಳ್ಳಬೇಕಿದೆ. ಜೊತೆಯಲ್ಲೇ ತನ್ನ ದೇಶದ ಅರ್ಥವ್ಯವಸ್ಥೆ ಕುಸಿಯದಂತೆ ಕಾಪಾಡಿಕೊಳ್ಳಬೇಕಿದೆ.

ವಲಸಿಗರ ವಿರುದ್ಧ ದೇಶವಾಸಿಗಳಲ್ಲಿ ವ್ಯಕ್ತವಾಗಿರುವ ಆಕ್ರೋಶವನ್ನು ನಿಭಾಯಿಸಬೇಕಿದೆ. ಬ್ರಿಟನ್ನಿನ ಪಾಲಿಗೆ ಐತಿಹಾಸಿಕ ಕಾಲಘಟ್ಟವಿದು. ಈ ಸಂದರ್ಭದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುವ ವ್ಯಕ್ತಿ ಇತಿಹಾಸದಲ್ಲಿ ಚಿರಸ್ಥಾಯಿ ಆಗುತ್ತಾರೆ. ಅಂಥದ್ದೊಂದು ಅವಕಾಶ, ಸವಾಲು 59 ವರ್ಷ ವಯಸ್ಸಿನ ತೆರೆಸಾ ಅವರ ಎದುರು ನಿಂತಿದೆ.

ತೆರೆಸಾ ಅವರ ತಂದೆ ಹ್ಯೂಬರ್ಟ್ ಬ್ರೇಜರ್ ಅವರು ಚರ್ಚ್‌ ಆಫ್‌ ಇಂಗ್ಲೆಂಡಿನ ಪ್ರಮುಖ ಹುದ್ದೆಯಲ್ಲಿದ್ದವರು. ತೆರೆಸಾ ಅವರು ಸಾರ್ವಜನಿಕ ಜೀವನದಲ್ಲಿ ಒಂದೊಂದೇ ಹಂತ ದಾಟಿ ಮೇಲೆ ಬಂದವರು. ಕೌನ್ಸಿಲರ್ ಆಗಿದ್ದವರು, ವಿರೋಧ ಪಕ್ಷದಲ್ಲಿ ವಿವಿಧ ಸ್ಥಾನಗಳನ್ನು ನಿಭಾಯಿಸಿದವರು. ಕ್ಯಾಮರೂನ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿ, ಮಹಿಳೆ ಮತ್ತು ಸಮಾನತೆ ಇಲಾಖೆಯ ಸಚಿವೆ ಆಗಿದ್ದವರು.

ಬೇರೆ ಬೇರೆ ಹಂತಗಳ, ಬೇರೆ ಬೇರೆ ಹುದ್ದೆಗಳನ್ನು ನಿಭಾಯಿಸಿದ ಅನುಭವ ಅವರಲ್ಲಿ ದಟ್ಟವಾಗಿರುವಂತೆ ಭಾಸವಾಗುತ್ತಿದೆ. ಏಕೆಂದರೆ, ಕಳೆದ ವಾರ ಸ್ಕಾಟ್ಲೆಂಡ್‌ಗೆ ಭೇಟಿ ನೀಡಿದ್ದ ತೆರೆಸಾ, ‘ಈ ಭಾಗ (ಸ್ಕಾಟ್ಲೆಂಡ್‌) ಮುಂದಿನ ದಿನಗಳಲ್ಲಿ ಐರೋಪ್ಯ ಒಕ್ಕೂಟದ ಜೊತೆ ಯಾವ ಬಗೆಯ ಸಂಬಂಧ ಹೊಂದಲು ಬಯಸುತ್ತದೆ ಎಂಬ ಬಗ್ಗೆ ಮಾತುಕತೆಗೆ ಮುಕ್ತವಾಗಿದ್ದೇನೆ’ ಎಂಬ ಸಂದೇಶ ನೀಡಿದ್ದಾರೆ.

ಒಕ್ಕೂಟದಿಂದ ಹೊರನಡೆಯಲು ಬ್ರಿಟನ್ನಿನ ಜನ ತೀರ್ಮಾನಿಸಿದರೂ, ಅದರದ್ದೇ ಭಾಗವಾಗಿರುವ ಸ್ಕಾಟ್ಲೆಂಡಿನ ಜನ ಒಕ್ಕೂಟದ ಜೊತೆ ಇರುವ ಇರಾದೆ ವ್ಯಕ್ತಪಡಿಸಿದ್ದರು. ‘ಸ್ಕಾಟ್ಲೆಂಡಿನ ಜನರ ಆಶಯದ ಜೊತೆ ಸಂಘರ್ಷಕ್ಕೆ ಮುಂದಾಗದೆ, ಅವರ ಮಾತನ್ನು ಆಲಿಸುತ್ತೇನೆ’ ಎನ್ನುವ ಮೂಲಕ ತೆರೆಸಾ ಅವರು ಸಮತೂಕದ ನಿಲುವು ಪ್ರದರ್ಶಿಸಿದ್ದಾರೆ ಎನ್ನುವ ಮಾತುಗಳು ಯುರೋಪಿನ ಮಾಧ್ಯಮಗಳಲ್ಲಿ ಕೇಳಿ ಬಂದಿವೆ.

ಅಲ್ಲದೆ, ಬ್ರಿಟನ್ನಿನ ಸಮಗ್ರತೆಯ ಬಗ್ಗೆಯೂ ತೆರೆಸಾ ಅವರಿಗೆ ಬಹುದೊಡ್ಡ ಬದ್ಧತೆ ಇದ್ದಂತೆ ಕಾಣುತ್ತಿದೆ. ಸ್ಕಾಟ್ಲೆಂಡ್‌ ಭೂಭಾಗ, ಯುನೈಟೆಡ್‌ ಕಿಂಗ್‌ಡಮ್‌ನ ಭಾಗವಾಗಿ ಮುಂದುವರಿಯಬೇಕೇ ಬೇಡವೇ ಎಂಬ ಬಗ್ಗೆ ಮತ್ತೊಮ್ಮೆ ಜನಮತಗಣನೆ ಇಲ್ಲ ಎನ್ನುವ ಮೂಲಕ ಈ ನಿಲುವನ್ನು ಅವರು ಬಹಿರಂಗಪಡಿಸಿದ್ದಾರೆ.

‘ಬ್ರೆಕ್ಸಿಟ್‌’ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರನಡೆಯಬೇಕು ಎಂದು ಜನ ನೀಡಿರುವ ತೀರ್ಪು) ಮುನ್ನ ಹಾಗೂ ಅದರ ನಂತರದಲ್ಲಿ ಬ್ರಿಟನ್ನಿನ ಅರ್ಥ ವ್ಯವಸ್ಥೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಲ್ಲಿ ಉದ್ಯೋಗ ಅವಕಾಶಗಳ ಪ್ರಮಾಣ ಕಡಿಮೆ ಆಗುತ್ತಿರುವುದರ ಬಗ್ಗೆ ಕೆಳ ಮಧ್ಯಮ ವರ್ಗದ ಜನರಲ್ಲಿ ತೀವ್ರ ಆಕ್ರೋಶ ಮಡುಗಟ್ಟಿದೆ. ಇನ್ನು ಮುಂದೆ ಒಕ್ಕೂಟದ ಜೊತೆ ಬ್ರಿಟನ್ ಯಾವ ರೀತಿಯ ಆರ್ಥಿಕ ಸಂಬಂಧ ಹೊಂದಿರುತ್ತದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಆದರೆ, ಬ್ರಿಟಿಷ್ ಕಂಪೆನಿಗಳನ್ನು ಬೇರೆ ರಾಷ್ಟ್ರಗಳ ಕಂಪೆನಿಗಳು ಖರೀದಿಸುವ ಪ್ರಕ್ರಿಯೆ ಬಗ್ಗೆ ನಿಗಾ ಇಡಲಾಗುತ್ತದೆ ಎನ್ನುವ ಮೂಲಕ, ತೆರೆಸಾ ಮೇ ನೇತೃತ್ವದ ಸರ್ಕಾರ, ಆರ್ಥಿಕ ಹಾಗೂ ಔದ್ಯಮಿಕ ವಿಚಾರಗಳಲ್ಲಿ ‘ಬ್ರ್ಯಾಂಡ್ ನ್ಯಾಷನಲಿಸಂ’ ಪಾಲಿಸುವ ಸೂಚನೆಯೂ ಕಾಣುತ್ತಿದೆ. ವಲಸಿಗರ ವಿರುದ್ಧ ಆಕ್ರೋಶ ಹೊಂದಿರುವ, ತಮ್ಮ ದೇಶ ಬೇರೆಯವರಿಂದಾಗಿ ಹಾಳಾಗುತ್ತಿದೆ ಎಂದು ಭಾವಿಸಿರುವ ಬ್ರಿಟನ್ನಿನ ಹಲವರಿಗೆ ತೆರೆಸಾ ಅವರ ಈ ನಿಲುವು ಆಪ್ಯಾಯಮಾನ ಆಗಬಹುದು.

‘ಬ್ರೆಕ್ಸಿಟ್’ ಜನಮತಗಣನೆಗೂ ಮೊದಲು ತೆರೆಸಾ ಅವರು ಒಕ್ಕೂಟದ ಜೊತೆ ಇರುವುದರ ಪರವಿದ್ದರು. ಆದರೆ ಜನರ ಆಶಯ ಏನು ಎಂಬುದನ್ನು ಅರಿತ ನಂತರ ಅವರು, ‘ಜನರ ಮತಕ್ಕೆ ಜಯ ತಂದುಕೊಡುತ್ತೇವೆ’ ಎಂದು ಘೋಷಿಸಿದರು.

ಅಲ್ಲದೆ, ‘ಸ್ಥಿತಿವಂತರಾದ ಕೆಲವರಿಗೆ ಮಾತ್ರವೇ ನಮ್ಮ ಸರ್ಕಾರ ಇರುವುದಲ್ಲ. ದುಡಿಯುವ ವರ್ಗದ ಪರವಾಗಿಯೂ ಇರುತ್ತೇವೆ’ ಎನ್ನುವ ಮೂಲಕ ವಲಸೆ ಕಾನೂನುಗಳ ಬಗ್ಗೆ ತಮ್ಮ ನಿಲುವು ಏನಿರಬಹುದು ಎಂಬುದನ್ನು ತೆರೆಸಾ ಸೂಚ್ಯವಾಗಿ ಹೇಳಿದ್ದಾರೆ.

‘ಬ್ರೆಕ್ಸಿಟ್’ ಪರ ಮತ ಚಲಾಯಿಸಿದವರಲ್ಲಿ ದುಡಿಯುವ ವರ್ಗದ, ಅಷ್ಟೇನೂ ಸುಶಿಕ್ಷಿತರಲ್ಲದವರೇ ಹೆಚ್ಚು ಎಂಬ ವಿಶ್ಲೇಷಣೆಗಳು ಈಗಾಗಲೇ ಬಂದಿವೆ. ಈ ವರ್ಗದ ಜನ ಅನಿರ್ಬಂಧಿತ ವಲಸೆಗೆ ವಿರುದ್ಧವಾಗಿದ್ದಾರೆ ಎಂಬುದೂ ಬಹಿರಂಗವಾಗಿದೆ. ಹಾಗಾಗಿ, ತೆರೆಸಾ ಅವರು ವಲಸೆ ನಿಯಮಗಳ ಬಗ್ಗೆ ಕಠಿಣ ಕ್ರಮ ಜರುಗಿಸುವ ಸಾಧ್ಯತೆಯೇ ಹೆಚ್ಚು ಎಂಬ ಮಾತು ಯುರೋಪಿನ ಮಾಧ್ಯಮಗಳಲ್ಲಿ ಕಾಣಿಸುತ್ತಿದೆ.

‘ಬ್ರೆಕ್ಸಿಟ್’, ಒಕ್ಕೂಟದಿಂದ ಬ್ರಿಟನ್ನಿನ ಹೊರಬರುವಿಕೆ, ಅಲ್ಲಿನ ಅರ್ಥವ್ಯವಸ್ಥೆಯ ಬೆಳವಣಿಗೆ ಹಾಗೂ ತೆರೆಸಾ ಅವರ ರಾಜಕೀಯ ಜಾಣ್ಮೆ... ಇವೆಲ್ಲವೂ ಈಗ ಒಂದಕ್ಕೊಂದು ಬೆಸೆದುಕೊಂಡಿವೆ. ಇವೆಲ್ಲದರ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT