ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಿಯಲ್ಲ ಕಹಿ ನೆನಪುಗಳೇ ಎಲ್ಲ

Last Updated 16 ಜನವರಿ 2011, 20:30 IST
ಅಕ್ಷರ ಗಾತ್ರ

ವಿಶ್ವ ಕಪ್ ಕ್ರಿಕೆಟ್‌ಗೆ ಇನ್ನೇನು ಹೆಚ್ಚು ದಿನಗಳು ಉಳಿದಿಲ್ಲ.33 ದಿನಗಳು ಮಾತ್ರ. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಎದೆ ಹೇಗೆ ಡವ ಡವ ಹೊಡೆದುಕೊಳ್ಳುತ್ತಿದೆಯೋ ಹಾಗೆಯೇ ಕ್ರಿಕೆಟ್‌ಪ್ರೇಮಿಗಳ ಅದರಲ್ಲೂ ಭಾರತವೇ ಗೆಲ್ಲುತ್ತದೆ, ಗೆಲ್ಲಬೇಕು ಎಂಬ ಒಂದು ರೀತಿಯ ಅಂಧ ಉನ್ಮಾದಿಗಳ ಹಾಗೂ ಬಾಜಿ ಕಟ್ಟಲಿರುವ ಕ್ರಿಕೆಟ್‌ಮಾಮಾಗಳ ಎದೆಬಡಿತವೂ ಏರುತ್ತಿದೆ. ಎಲ್ಲ ರೀತಿಯ ಲೆಕ್ಕಾಚಾರಗಳೂ ಶುರುವಾಗಿವೆ. ಕ್ರಿಕೆಟ್ ಪಂಡಿತರ ಭವಿಷ್ಯವಾಣಿಗಳೂ ಜಾತ್ರೆಗೆ ರಂಗೇರಿಸುತ್ತಿವೆ.ಅದರೊಂದಿಗೇ ಹಿಂದಿನ ನೆನಪುಗಳು ತೆರೆದುಕೊಳ್ಳುತ್ತಿವೆ. ಮುಂಬೈನಲ್ಲಿ ಬಿದ್ದ ಪೆಟ್ಟು, ಕೋಲ್ಕತ್ತದಲ್ಲಿ ಆದ ಅವಮಾನ ಈ ಬಾರಿ ಆತಿಥೇಯರು ‘ಗೆಲುವಿನ ಫೇವರಿಟ್’ ಎಂಬ ಕುದುರೆಯ ಲಗಾಮನ್ನು ಬಿಗಿಯಾಗಿ ಹಿಡಿಯುತ್ತಿವೆ.  

ಭಾರತದಲ್ಲಿ ನಡೆಯಲಿರುವ ಮೂರನೇ ವಿಶ್ವ ಕಪ್ ಕ್ರಿಕೆಟ್ ಟೂರ್ನಿ ಇದು. ಹೌದು, ಭಾರತದ ಮುನ್ನಡೆಗೆ ಸವಿನೆನಪುಗಳು ಬೇಕು.ಆದರೆ, ಹಿಂದಿನ ಅಂದರೆ 1987 ಮತ್ತು 1996ರಲ್ಲಿ ನಡೆದ ವಿಶ್ವ ಕಪ್‌ಗಳಲ್ಲಿ ಫೇವರಿಟ್ ಆಗಿಯೇ ಆಡಲು ಇಳಿದಿದ್ದ ಭಾರತಕ್ಕೆ ಕಹಿ ನೆನಪುಗಳೇ ಎಲ್ಲ. 87ರಲ್ಲಿ ಇಂಗ್ಲೆಂಡ್ ಭಾರತದ ಕನಸನ್ನು ನುಚ್ಚುನೂರುಗೊಳಿಸಿದ್ದರೆ, 96ರಲ್ಲಿ ಜನರ ಗಲಾಟೆಯ ಮಧ್ಯೆ ಶ್ರೀಲಂಕಾ, ಅಜರುದ್ದೀನ್ ಅವರ ಮಾನವನ್ನು ಹರಾಜು ಹಾಕಿತು. ಮೋಸದಾಟದ ನರಿ ತನ್ನ ಮೂತಿ ತೂರಿಸಿಬಿಟ್ಟಿತ್ತು. ಇನ್ನೂ ಆ ನರಿ ಬದುಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕ್ರಿಕೆಟ್ ಜಗತ್ತಿನಲ್ಲಿ ಮೋಸದಾಟ ಅಥವಾ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಎಂಬ ತಿಪ್ಪೆಗುಂಡಿಗಳು ಇನ್ನೂ ನಾರುತ್ತಲೇ ಇದೆ. ಯಾರಿಗೆ ಗೊತ್ತು? ಮೂರಕ್ಕೆ ಮುಕ್ತಾಯವಾಗಬಹುದು. ಭಾರತ ಹಿಂದಿನ ಆ ಎರಡು ಕಹಿನೆನಪುಗಳು ಅಳಿಸಿಹಾಕಿ, 83ರಂತೆ ಪುಟಿದೆದ್ದು ವಿಶ್ವ ಕಪ್ ಗೆಲ್ಲಬಹುದು. ಅಂದರೆ ಭಾರತ ಮೂರನೇ ಸಲ ಎಡವದೇ ಫೈನಲ್ ವರೆಗೂ ಮುನ್ನಡೆದು 1983ರ ಸಂಭ್ರಮ ಮರುಕಳಿಸುವಂತೆ ಮಾಡಬಹುದು. ಮನಸ್ಸಿನಲ್ಲಿ ಮಂಡಿಗೆ ತಿನ್ನಲು ದುಡ್ಡೇನೂ ಖರ್ಚಾಗುವುದಿಲ್ಲವಲ್ಲ! ಆದರೆ ಬೆಟ್ ಕಟ್ಟುವ ಮೊದಲು ಸ್ವಲ್ಪ ಹುಶಾರಾಗಿ ಲೆಕ್ಕ ಹಾಕಿದರೆ ಒಳ್ಳೆಯದು.

ಕ್ರಿಕೆಟ್‌ನಲ್ಲಿ ಟಾಸ್ ಎಂಬುವುದು ಪಂದ್ಯ ಆರಂಭಿಸಲು ಒಂದು ಸೂಚನೆ, ಸಂಪ್ರದಾಯ ಅಷ್ಟೇ ಎಂದು ಹೇಳಲಾಗುತ್ತದೆ.ಆದರೆ ಆ ನಾಣ್ಯ ಕೆಳಗೆ ಬೀಳುವ ಮೊದಲು ರಾಜ ಮೇಲೋ ರಾಣಿ ಮೇಲೋ ಎಂಬ ಬಗ್ಗೆ ಇಬ್ಬರೂ ನಾಯಕರಲ್ಲಿ ತಳಮಳ ಉಂಟುಮಾಡಿರುತ್ತದೆ. ಟಾಸ್ ಎಂಬ ಈ ರಾಜ-ರಾಣಿಯ ಆಟ ಮುಂದಿನ ನೂರು ಓವರುಗಳ ಬ್ಯಾಟು-ಚೆಂಡಿನ ಆಟದಲ್ಲಿ ಅನಿರೀಕ್ಷಿತ, ರೋಚಕ ತಿರುವುಗಳನ್ನು ತೋರಿಸುತ್ತದೆ. ಟಾಸ್ ಗೆದ್ದರೆ ಮೊದಲು ಬ್ಯಾಟ್ ಮಾಡಬೇಕು ಅಥವಾ ಮೊದಲು ಫೀಲ್ಡ್ ಮಾಡಬೇಕು ಎಂಬ ಲೆಕ್ಕಾಚಾರ ಒಮ್ಮೊಮ್ಮೆ ಸರಿಹೋದರೂ ಬುಡಮೇಲಾಗುವ ಸಂದರ್ಭಗಳೇ ಹೆಚ್ಚು. ಆಗ ನೆಪಗಳು ಹೊರಬರುತ್ತವೆ.ಭಾರತ 1987 ಮತ್ತು 96 ರ ಸೆಮಿಫೈನಲ್‌ಗಳಲ್ಲಿ ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಸೋಲು ಅನುಭವಿಸಿತು.

ಅನುಭವಿಗಳ ಪ್ರಕಾರ, ಪಿಚ್ ಬಗ್ಗೆ ಅನುಮಾನವಿದ್ದರೆ ಮೊದಲು ಬ್ಯಾಟ್ ಮಾಡುವುದು ಸೂಕ್ತ. ಮುಂಬೈನಲ್ಲಿ ಕಪಿಲ್ ದೇವ್ ಅವರಿಗೆ ಪಿಚ್ ಬಗ್ಗೆ ಅನುಮಾನಕ್ಕಿಂತ ಹೆಚ್ಚಾಗಿ ತಂಡದ ಬ್ಯಾಟಿಂಗ್ ಮೇಲೆ ಬಹಳ ವಿಶ್ವಾಸ ಇದ್ದುದರಿಂದ ಅವರು ಇಂಗ್ಲೆಂಡ್ ತಂಡವನ್ನು ಆಡಲು ಇಳಿಸಿದರು. ಆದರೆ ಕೋಲ್ಕತ್ತದಲ್ಲಿ, ಅಜರುದ್ದೀನ್ ಹೊಚ್ಚ ಹೊಸ ಪಿಚ್ ಮೇಲೆ ಆಡಲಿದ್ದರು. ಅವರಿಗೆ ಅನುಮಾನ ಬರಬೇಕಿತ್ತು. ಆದರೆ ಫೀಲ್ಡಿಂಗ್ ಆಯ್ದುಕೊಳ್ಳಲು ಅವರು ಮೊದಲೇ ನಿರ್ಧರಿಸಿದಂತಿತ್ತು. ದೇಶದ ಎಲ್ಲ ಜನರಿಗಿಂತ ತಾವೇ ಶಾಣ್ಯಾ ಎಂದು ಕೊಚ್ಚಿಕೊಳ್ಳುವ ಬಂಗಾಲಿಗಳು ಬೆಂಕಿ ಹಚ್ಚಿ ಗದ್ದಲ ಮಾಡಿದರು. ಪಂದ್ಯ ಮುಗಿಯಲಿಲ್ಲ. ಮ್ಯಾಚ್ ರೆಫರಿ ಕ್ಲೈವ್ ಲಾಯ್ಡಿ ಗೆಲುವಿನ ಮುದ್ರೆಯನ್ನು ಶ್ರೀಲಂಕಾ ತಂಡದ ಮೇಲೆ ಒತ್ತಿದರು.

ಆ ಎರಡೂ ಪಂದ್ಯಗಳ ವರದಿಗಾರಿಕೆ ವಿಲಕ್ಷಣ ಅನುಭವಗಳಾಗಿದ್ದವು. 1983 ರಲ್ಲಿ ಲಾರ್ಡ್ಸ್‌ನಲ್ಲಿ, ದಿಢೀರ್ ಕ್ರಿಕೆಟ್‌ನ ಸಮ್ರಾಟರೆನಿಸಿದ್ದ ವೆಸ್ಟ್‌ಇಂಡೀಸರನ್ನು ಮಣಿಸಿ, ಇಡೀ ಕ್ರಿಕೆಟ್ ಜಗತ್ತೇ ಬೆರಗಾಗುವಂತೆ ವಿಶ್ವ ಕಪ್ ಎತ್ತಿ ಹಿಡಿದಿದ್ದ ಕಪಿಲ್ ದೇವ್ ನಾಲ್ಕು ವರ್ಷಗಳ ನಂತರ ಸ್ವದೇಶದಲ್ಲಿ ಖಂಡಿತವಾಗಿಯೂ ಮೆರೆಯುವರೆಂಬ ನಿರೀಕ್ಷೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ತುಂಬಿತ್ತು. ಹಿಂದಿನ ಮೂರೂ ವಿಶ್ವ ಕಪ್ ಟೂರ್ನಿಗಳಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲದಿದ್ದ ಇಂಗ್ಲೆಂಡ್ ತಂಡವನ್ನು ಮಣಿಸುವುದು ಭಾರತಕ್ಕೆ ಕಷ್ಟವಲ್ಲ ಎಂಬ ಅಭಿಪ್ರಾಯವೇ ಇತ್ತು. ಆದರೆ ಗ್ರಹಾಮ್ ಗೂಚ್ ಭಾರತದ ಆಸೆ ಅಭಿಲಾಷೆಗಳನ್ನೆಲ್ಲ ಕಸಗುಡಿಸುವಂತೆ ‘ಸ್ವೀಪ್’ ಮಾಡಿಬಿಟ್ಟರು. ಶತಕ ಬಾರಿಸಿದ ಗೂಚ್ ಹೆಚ್ಚಿನ ರನ್ನುಗಳನ್ನು ಸ್ಪಿನ್ನರುಗಳಾದ ಮಣಿಂದರ್ ಸಿಂಗ್ ಮತ್ತು ರವಿ ಶಾಸ್ತ್ರಿ ಬೌಲಿಂಗ್‌ನಲ್ಲಿ ಸ್ವೀಪ್ ಮೂಲಕವೇ ಗಳಿಸಿದರು. ಸ್ಕ್ವೇರ್ ಲೆಗ್ ಮತ್ತು ಫೈನ್‌ಲೆಗ್ ಮಧ್ಯೆ ಒಬ್ಬ ಫೀಲ್ಡರ್‌ನನ್ನು ನಿಲ್ಲಿಸುವ ಹೊತ್ತಿಗೆ ಸಾಕಷ್ಟು ರನ್ನುಗಳು ಇಂಗ್ಲೆಂಡ್ ಮೊತ್ತದಲ್ಲಿ ಸೇರಿಹೋಗಿದ್ದವು. ಇಂಗ್ಲೆಂಡ್‌ನ 254 ರನ್ ಮೊತ್ತದಲ್ಲಿ ರವಿ ಶಾಸ್ತ್ರಿ ಮತ್ತು ಮಣಿಂದರ್ ಕೊಟ್ಟದ್ದು 103 ರನ್. ಪ್ರೆಸ್ ಬಾಕ್ಸ್‌ನಲ್ಲಿ ಯಾರ್ಕ್‌ಷೈರ್ ಹ್ಯಾಟ್ ಧರಿಸಿಯೇ ಕುಳಿತಿದ್ದ ಜೆಫರಿ ಬಾಯ್‌ಕಾಟ್ ‘ಇವತ್ತು ಇಂಗ್ಲೆಂಡ್ ಗೆಲ್ಲುತ್ತದೆ’ ಎಂದು ತಮ್ಮ ಎಂದಿನ ಅಧಿಕಾರಯುತ ಸ್ಕಾಟಿಷ್ ಧಾಟಿಯಲ್ಲಿ ಹೇಳಿದಾಗ ಬಹಳಷ್ಟು ಜನ ಭಾರತೀಯ ಪತ್ರಕರ್ತರಿಗೆ ಕಸಿವಿಸಿಯಾಗಿತ್ತು. ‘ಏ ಗೋರಾ ಲೋಗೋಂಕೊ ...ಮೇ ಮಸ್ತಿ ಬಹುತ್ ಹೋತಾರೇ’ ಎಂದು ಒಬ್ಬ ಹೇಳಿಯೂ ಬಿಟ್ಟ.

ಗೆಲ್ಲಲು 255 ರನ್ ಗಳಿಸುವುದು ಭಾರತಕ್ಕೆ ದೊಡ್ಡ ಸವಾಲೇ ಆಗಿತ್ತು. ಅಜರುದ್ದೀನ್ ಮತ್ತು ಕಪಿಲ್ ದೇವ್ ಆಡುತ್ತಿದ್ದಾಗ, ರನ್ನುಗಳು ಹರಿಯತೊಡಗಿದವು. ಆದರೆ ಕಪಿಲ್ ಆಫ್‌ಸ್ಪಿನ್ನರ್ ಹೆಮ್ಮಿಂಗ್ಸ್ ಅವರ ಬಲೆಗೆ ಬಿದ್ದಾಗ ವಾಂಖೇಡೆ ಕ್ರೀಡಾಂಗಣದಲ್ಲಿ ಮೌನ ಆವರಿಸಿತು. ಸ್ಕೋರು 204 ಆಗಿದ್ದಾಗ ಅಜರ್ ಅವರನ್ನು ಹೆಮ್ಮಿಂಗ್ಸ್ ಎಲ್‌ಬಿ ಬಲೆಗೆ ಕೆಡವಿದಾಗ ಸ್ಮಶಾನಮೌನ ಆವರಿಸಿತು.ಆನಂತರ ಪ್ರೇಕ್ಷಕರ ಹರ್ಷೋದ್ಗಾರ ಕೇಳಿಬರಲೇ ಇಲ್ಲ. ಬಾಯ್‌ಕಾಟ್ ಹೇಳಿದ್ದು ಸುಳ್ಳಾಗಲಿಲ್ಲ.ಆದರೆ ಭಾರತ ತಂಡದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಬಾಯ್‌ಕಾಟ್ ಭಾರತ ತಂಡದ ದೌರ್ಬಲ್ಯಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರಿಂದಲೇ ಹಾಗೆ ಹೇಳಿದ್ದರು. ಭಾರತ ಫೀಲ್ಡಿಂಗ್ ಬದಲು ಬ್ಯಾಟಿಂಗ್ ಆಯ್ದುಕೊಂಡಿದ್ದರೆ?

ಒಂಬತ್ತು ವರ್ಷಗಳ ನಂತರ ಕೋಲ್ಕತ್ತದ ಪಂದ್ಯ ಹಾಗಿರಲಿಲ್ಲ. ಈಡನ್ ಗಾರ್ಡನ್ಸ್‌ನಲ್ಲಿ ವಿಶ್ವ ಕಪ್‌ಗಾಗಿಯೇ ಹೊಸ ಪಿಚ್ ಸಿದ್ಧವಾಗಿತ್ತು.ಅಜರುದ್ದೀನ್ ಟಾಸ್ ಗೆದ್ದರೂ ಬ್ಯಾಟಿಂಗ್ ಆಯ್ದುಕೊಳ್ಳಲಿಲ್ಲ. ಶ್ರೀಲಂಕಾದ ಸ್ಫೋಟಕ ಬ್ಯಾಟ್ಸಮನ್ನರಾದ ಸನತ್ ಜಯಸೂರ್ಯ ಮತ್ತು ಕಲುವಿತರಣ ಎರಡು ರನ್ನುಗಳಾಗುವಷ್ಟರಲ್ಲಿ ಜಾವಗಲ್ ಶ್ರೀನಾಥರಿಗೆ ವಿಕೆಟ್ ಒಪ್ಪಿಸಿದಾಗ ಅಜರ್ ನಿರ್ಧಾರ ಸರಿ ಎಂದೆನಿಸಿತ್ತು. ಆದರೆ ಅರವಿಂದ ಡಿ’ಸಿಲ್ವ, ರೋಷನ್ ಮಹಾನಾಮ ಮತ್ತು ಅರ್ಜುನ ರಣತುಂಗ ತಮ್ಮ ತಂಡ 251 ರನ್ ಗಳಿಸುವಲ್ಲಿ ನೆರವಾದರು. ನವಜೋತ್ ಸಿಂಗ್ ಸಿಧು ಬೇಗ ನಿರ್ಗಮಿಸಿದರೂ ಸಚಿನ್ ತೆಂಡೂಲ್ಕರ್ (65) ಮತ್ತು ಸಂಜಯ್ ಮಾಂಜ್ರೇಕರ್ (25) ಎರಡನೇ ವಿಕೆಟ್‌ಗೆ 90 ರನ್ ಸೇರಿಸಿದಾಗ ಮುಂದಾಗಬಹುದಾದ ಘಟನೆಗಳ ಅರಿವು ಯಾರಿಗೂ ಇರಲಿಲ್ಲ.

ಸಚಿನ್ ನಿರ್ಗಮನದ ನಂತರ ಪಟಪಟನೆ 22 ರನ್ನುಗಳಿಗೆ ಏಳು ವಿಕೆಟ್‌ಗಳು ಬಿದ್ದವು. ಭಾರತ ಸೋಲುವುದು ಖಚಿತವಾದಾಗ ಜನ ರೊಚ್ಚಿಗೆದ್ದರು. ಬೆಂಕಿ ಹಚ್ಚಿ ಕೈಗೆ ಸಿಕ್ಕಿದ್ದನ್ನು ಕ್ರೀಡಾಂಗಣದೊಳಗೆ ಎಸೆದರು. ಆಟ ನಿಂತಿತು. ಸ್ವಲ್ಪ ಸಮಯದ ನಂತರ ಆಟ ಮುಂದುವರಿಯುವ ಲಕ್ಷಣಗಳು ಕಂಡುಬಂದರೂ ಜನರನ್ನು ಸಮಾಧಾನಪಡಿಸಲು ಆಗಲಿಲ್ಲ. ಪರಿಸ್ಥಿತಿ ಕೈಮೀರುವಂತೆ ಕಂಡಾಗ ಆಟ ರದ್ದುಪಡಿಸಿದ ಕ್ಲೈವ್ ಲಾಯ್ಡಿ ಶ್ರೀಲಂಕಾ ವಿಜಯಿ ಎಂದು ಘೋಷಿಸಿದರು. ಔಟಾಗದೆ ಉಳಿದಿದ್ದ ವಿನೋದ್ ಕಾಂಬ್ಳಿ ಅಳುತ್ತ ಪೆವಿಲಿಯನ್‌ಗೆ ವಾಪಸ್ಸಾದರು. ಅಜರುದ್ದೀನ್ ಫೀಲ್ಡಿಂಗ್ ಬದಲು ಬ್ಯಾಟಿಂಗ್ ಆಯ್ದುಕೊಂಡಿದ್ದರೆ?

ಮರುದಿನ ಕೋಲ್ಕತ್ತದ ಪತ್ರಿಕೆಗಳಲ್ಲಿ 1500 ಕೋಟಿ ರೂಪಾಯಿ ಬೆಟ್ಟಿಂಗ್ ನಡೆದ ಬಗ್ಗೆ ವರದಿಗಳಿದ್ದವು. ವಿಮಾನದಲ್ಲಿ ವಾಪಸ್ಸು ಬೆಂಗಳೂರಿಗೆ ಬರುವಾಗ, ಜಾವಗಲ್ ಶ್ರೀನಾಥ್, “ಇಷ್ಟೊಂದು ಹಣ ಬೆಟ್ ಮಾಡುತ್ತಾರೆಯೇ” ಎಂದು ಮುಗ್ಧವಾಗಿ ಕೇಳಿದ್ದು ಇನ್ನೂ ನೆನಪಿದೆ. ಕಳೆದ 15 ವರ್ಷಗಳಲ್ಲಿ ಕ್ರಿಕೆಟ್ ನದಿಯಲ್ಲಿ ಬಹಳಷ್ಟು ನೀರು ಮತ್ತು ಹಣ ಎರಡೂ ಹರಿದುಹೋಗಿವೆ. ಭಾರತ ಜಯಭೇರಿ ಹೊಡೆಯುವುದೋ ಇಲ್ಲವೋ ಹೇಳುವುದು ಕಷ್ಟ. ಆದರೆ ರಾಜಕೀಯ ಹಗರಣಗಳನ್ನೂ ಮೀರಿಸುವಷ್ಟು ಹಣ ಮಾತ್ರ ಬೆಟ್ಟಿಂಗ್‌ನಲ್ಲಿ ಹರಿಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT