ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವೆಯುತಿರುವ ಕುಡಿ: ಬಾಡಿದ ಬದುಕು

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ದೇವದುರ್ಗ: ಭಾರವಾದ ಮನಸು ಹೊತ್ತು ಮನೆ ಬಾಗಿಲಿಗೆ ಹೋದೆವು. ಊರಿಗೆ ತಾಗಿಕೊಂಡೇ ಇರುವ ಹೊಲದಲ್ಲಿ ಶೆಡ್‌ನಂತಹ ಪುಟ್ಟ ಗೂಡು. ಒಳಗೆ ಇಣುಕಿದರೆ ಹಸುಗೂಸಿನೊಂದಿಗೆ ಬಾಣಂತಿ! ಅಂಗನವಾಡಿ ಕಾರ್ಯಕರ್ತೆ ಮಾರ್ತಾ, `ಇವರೇ ಮಲ್ಲಮ್ಮ~ ಎಂದು ಪರಿಚಯಿಸಿದರು.

ಬರಿ ಒಂದೂವರೆ ತಿಂಗಳ ಅಂತರದಲ್ಲಿಯೇ ಇವರ ಐದು ವರ್ಷದ ಮಗ ಆಂಜನೇಯ ಹಾಗೂ ಎರಡೂವರೆ ವರ್ಷದ ಮಗಳು ಮಹಾಲಕ್ಷ್ಮಿ ಕಣ್ಣು ಮುಚ್ಚಿದ್ದರು. ಅಪೌಷ್ಟಿಕತೆಯಿಂದ ಈ ಮಕ್ಕಳು ಸತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕುತೂಹಲದಿಂದ ಮನೆ ಹುಡುಕಿ ಹೋದರೆ ವಾರದ ಹಿಂದಷ್ಟೇ ಕಣ್ತೆರೆದ ಕೂಸಿನೊಂದಿಗೆ ತಾಯಿ ಕಂಡರು.

ಸಿರಿವಾರದಿಂದ ದೇವದುರ್ಗಕ್ಕೆ ಹೋಗುವ ರಸ್ತೆಯಲ್ಲಿ ಸಿಗುವ ಮಲ್ಲೆದೇವರಗುಡ್ಡ ಗ್ರಾಮದ ಮಲ್ಲಮ್ಮಗೆ ಇನ್ನೂ 23 ವರ್ಷ ವಯಸ್ಸು. ಅಷ್ಟರಲ್ಲೇ ಮೂರು ಮಕ್ಕಳ ತಾಯಿ!

ಬಾಗಲಕೋಟೆ, ರಾಯಚೂರು, ವಿಜಾಪುರ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಶೇಕಡಾವಾರು ಪ್ರಮಾಣ ಅಧಿಕವಾಗಿದೆ. ಏಕಿರಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕಿ ಡಾ.ಶಮ್ಲಾ ಇಕ್ಬಾಲ್ ಅವರನ್ನು ಪ್ರಶ್ನಿಸಿದಾಗ, ಬಡತನ, ವಲಸೆ ಸೇರಿದಂತೆ ಕೆಲವೊಂದು ಕಾರಣಗಳನ್ನು ಪ್ರಸ್ತಾಪಿಸಿದರು. ಅದರಲ್ಲಿ ಮುಖ್ಯವಾದದು- `ಉತ್ತರ ಕರ್ನಾಟಕ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿಗೇ ಮದುವೆ ಮಾಡುವ ರೂಢಿ~. ಅದಕ್ಕೆ ನಿದರ್ಶನವಾಗಿ ಮಲ್ಲಮ್ಮನ ನೋವಿನ ಕಥೆ ಕಣ್ಣುಮುಂದೆ ಹಾದುಹೋಯಿತು.

ರಾಜ್ಯದಲ್ಲಿ ಪ್ರತಿ ಐದು ಮದುವೆಗಳಲ್ಲಿ ಒಂದು ವಿವಾಹ 18 ವರ್ಷದೊಳಗಿನ ಹೆಣ್ಣುಮಕ್ಕಳದಾಗಿರುತ್ತದೆ. ಐದು ಜಿಲ್ಲೆಗಳಲ್ಲಿ ಈ ಪ್ರಮಾಣ ಅಧಿಕ ಎಂದು `ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ~ ದಾಖಲಿಸಿದೆ.

ಅಪೌಷ್ಟಿಕತೆ ಹೆಚ್ಚಿಗೆ ಕಂಡುಬಂದಿರುವ ಜಿಲ್ಲೆಗಳು ಆ ಯಾದಿಯಲ್ಲಿಯೂ ಸ್ಥಾನ ಪಡೆದಿವೆ. ಬಾಲ್ಯ ವಿವಾಹ ನಿಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳು ಕಳೆದ 5 ವರ್ಷಗಳಲ್ಲಿ ಅಧಿಕ ಸಂಖ್ಯೆಯಲ್ಲಿ ದಾಖಲಾಗಿರುವುದು ಕೂಡ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿಯೇ.

ಮಲ್ಲಮ್ಮ-ವೆಂಕಟೇಶ ದಂಪತಿಯ ಮೊದಲೆರಡೂ ಮಕ್ಕಳಲ್ಲಿ ಬುದ್ಧಿಮಾಂದ್ಯತೆ ಇತ್ತು. 16-17 ವರ್ಷಕ್ಕೇ ಮಲ್ಲಮ್ಮಗೆ ಮದುವೆ ಆಗಿದೆ.

ಅದರಲ್ಲೂ ರಕ್ತ ಸಂಬಂಧಿಗಳಲ್ಲೇ ಮದುವೆ ಇಂತಹ ಪ್ರಕರಣಗಳಲ್ಲಿ `ಜೆನೆಟಿಕ್~ ಸಮಸ್ಯೆಗೆ ಅವಕಾಶಗಳು ಹೆಚ್ಚು ಎಂದು ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ ವೈ. ನಾಯಕ ವಿಶ್ಲೇಷಿಸಿದರು.

`ಮೊಮ್ಮಗ ಮೊದಲಿಗೆ ಬೇಶ್ ಇದ್ದ. ಬರ‌್ತಾ ಬರ‌್ತಾ ಸವ್ಕೋತಾ ಹೋದ. ಕೊನೆಗೆ ಸೊಂಟ ನಿಲ್ತಿರಲಿಲ್ಲ. ಡಾಕ್ಟ್ರಿಗೆ ತೋರಿಸಿದೆವು. ಕಾಯಿಲೆ ಏನು ಅಂತಾನೇ ಗೊತ್ತಾಗಲಿಲ್ಲ~ ಎಂದು ನೋವು ತೋಡಿಕೊಂಡ ಅಜ್ಜಿ ರಂಗಮ್ಮ, `ಈಗ ಹೆಣ್ಣು ಕೂಸಾಗಿದೆ. ಅದಾದರೂ ಮನೆ ಬೆಳಗಲಿ ಅಂತ ಮನೆದೇವರಿಗೆ ಹರಕೆ ಹೊತ್ತಿದೀವಿ~ ಎಂದರು.

`ಒಂದು ಎಕರೆ ಜಮೀನಿದೆ. ಸಕಾಲಕ್ಕೆ ಮಳೆ ಬಂದರೆ ಬೆಳೆ. ಇಲ್ಲದಿದ್ದರೆ ಕೂಲೀನೆ ಗತಿ. ಅದೂ ಸಿಕ್ಕರೆ ಉಂಟು ಇಲ್ಲದಿದ್ದರೆ ಇಲ್ಲ~ ಎಂದರು ಅಕ್ಷರ ಭಾಗ್ಯದಿಂದ ವಂಚಿತರಾದ ವೆಂಕಟೇಶ. ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಪ್ರಸ್ತಾಪಿಸಿದರೆ `ಆ ಕಾರ್ಡ್ ಮೇಸ್ತ್ರಿ ಬಳಿ ಇದೆ~ ಎಂದರು, ಅದರಿಂದ ಯಾವ ಪ್ರಯೋಜನವೂ ಆಗಿಲ್ಲ ಎಂಬಂತೆ. 

ಹೆಣ್ಣುಮಕ್ಕಳೇ ಅಧಿಕ: ಅಪೌಷ್ಟಿಕತೆಗೆ ಒಳಗಾದವರಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಅಧಿಕ. ಅಂಗನವಾಡಿ ಕೇಂದ್ರಗಳಲ್ಲಿ ನವೆಂಬರ್‌ನಲ್ಲಿ ತೂಕ ಪರಿಶೀಲನೆಗೆ ಒಳಗಾದ ಆರು ವರ್ಷದೊಳಗಿನ 33,54,141 ಮಕ್ಕಳಲ್ಲಿ 61,142 ಮಕ್ಕಳ ತೂಕ ತೀವ್ರ ಕಡಿಮೆ ಎಂದು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅಂಶಗಳೇ ಹೇಳುತ್ತವೆ. ಪೌಷ್ಟಿಕಾಂಶದ ತೀವ್ರ ಕೊರತೆಯಿಂದ ಬಳಲುತ್ತಿರುವ ಈ ಮಕ್ಕಳಲ್ಲಿ 27,782 ಗಂಡು, 33,360 ಹೆಣ್ಣು. ಇವರೊಂದಿಗೆ ಇನ್ನೂ ಶೇ 33.88ರಷ್ಟು ಮಕ್ಕಳು ಸ್ವಲ್ಪ ಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕಮತಗಿ ಗ್ರಾಮದ 4 ವರ್ಷ ವಯಸ್ಸಿನ ಸುಮಿತ್ರಾ ಅತಿ ಕಡಿಮೆ ತೂಕದ ಮಕ್ಕಳ ಗುಂಪಿಗೆ ಸೇರುತ್ತಾಳೆ. ಹುಚ್ಚವ್ವ ಮತ್ತು ಲಕ್ಷ್ಮಣ ದಂಪತಿ ಗಂಡು ಸಂತಾನದ ನಿರೀಕ್ಷೆಯಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಐದೂ ಹೆಣ್ಣೇ! ಬಡತನದ ಬೇಗೆಯೊಂದಿಗೆ ಗಂಡು ಮಗುವಿನ ಬಯಕೆಯೂ ಸೇರಿಕೊಂಡು ಮಕ್ಕಳ ಸಂಖ್ಯೆ ಹೆಚ್ಚಿದೆ; ಆದರೆ ಅವರ ಶಕ್ತಿ ಕುಂದಿದೆ. `ಮಕ್ಕಳ ಸಂಖ್ಯೆ ಹೆಚ್ಚಿದಷ್ಟೂ ಅವರಲ್ಲಿ ಅಪೌಷ್ಟಿಕತೆಯ ಸಾಧ್ಯತೆಯೂ ಹೆಚ್ಚುತ್ತದೆ~ ಎಂದರು ಅದೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀಧರ ಪತ್ತಾರ.

ರಾಜ್ಯದ ಶೇ 70ರಷ್ಟು ಮಕ್ಕಳಲ್ಲಿ ರಕ್ತಹೀನತೆ ಇದೆ. ಶೇ 50ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ತೂಕ ಹೊಂದಿಲ್ಲ ಎಂದು `ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-3~ (ಎನ್‌ಎಫ್‌ಎಚ್‌ಎಸ್) ತಿಳಿಸಿದೆ. ಈ ನ್ಯೂನತೆಯು ರೋಗನಿರೋಧಕ ಶಕ್ತಿಗೆ ಸವಾಲಾಗಿದ್ದು, ಮಕ್ಕಳನ್ನು ರೋಗ-ರುಜಿನಗಳಿಗೆ ಪಕ್ಕಾಗುವಂತೆ ಮಾಡುತ್ತದೆ ಎನ್ನುತ್ತಾರೆ ವೈದ್ಯರು.

ರಕ್ತಹೀನತೆ: ರಾಜ್ಯದಲ್ಲಿ 15ರಿಂದ 45 ವರ್ಷದೊಳಗಿನ ಶೇ 50ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ ಎಂದು ಎನ್‌ಎಫ್‌ಎಚ್‌ಎಸ್ (2005-06) ವರದಿ ಹೇಳಿದೆ. ಮಕ್ಕಳ ತೂಕ ಕಡಿಮೆಗೆ ಈ ನ್ಯೂನತೆಯೂ ಒಂದು ಕಾರಣ ಎಂದು ಗುರುತಿಸಲಾಗಿದೆ.  

ಎಚ್‌ಐವಿ ಸೋಂಕಿಗೆ ಒಳಗಾದವರ ಸಂಖ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ರಾಜ್ಯದ ಇನ್ನಿತರೆ ಜಿಲ್ಲೆಗಳಿಗೆ ಹೋಲಿಸಿದರೆ ತುಸು ಹೆಚ್ಚು. ಆಚರಣೆಯಲ್ಲಿದ್ದ ದೇವದಾಸಿ ಪದ್ಧತಿ ಇದಕ್ಕೆ ಕಾರಣ ಇರಬಹುದು. ಜಿಲ್ಲೆಯ ಹಲವೆಡೆ ಬಾಲಕ್ಷಯ ಪ್ರಕರಣಗಳೂ ದಾಖಲಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಬಿ. ಚೌಧರಿ ಅವರು ಅಪೌಷ್ಟಿಕತೆಗೆ ಕಾರಣ ಆಗಬಹುದಾದ ಕೆಲವೊಂದು ಅಂಶಗಳನ್ನು ಉಲ್ಲೇಖಿಸಿದರು.



ಎಚ್‌ಐವಿ ಸೋಂಕಿಗೆ ಒಳಗಾದ ತಾಯಂದಿರ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಹೆಚ್ಚಾಗಿ ಕಾಣಸಿಗುತ್ತದೆ. ರೋಗ ನಿರೋಧಕ ಶಕ್ತಿ ಕೊರತೆಯಿಂದ ಅಂತಹ ಮಕ್ಕಳು ಪದೇ ಪದೇ ಕಾಯಿಲೆಗೆ ತುತ್ತಾಗುತ್ತಾರೆ. ಇದರೊಂದಿಗೆ ನೈರ್ಮಲ್ಯ ಕೊರತೆಯೂ ಸೇರಿಕೊಂಡು ಮಕ್ಕಳನ್ನು ಕಾಡತೊಡಗಿದೆ ಎಂದು ಜಮಖಂಡಿಯಲ್ಲಿನ ಮಕ್ಕಳತಜ್ಞ ಡಾ.ರಂಗನಾಥ ಸೋನವಾಲ್ಕರ ಅಭಿಪ್ರಾಯಪಟ್ಟರು.

ಅಪೌಷ್ಟಿಕತೆಗೆ ಒಳಗಾದವರಲ್ಲಿ ಪರಿಶಿಷ್ಟ ಸಮುದಾಯದ ಮಕ್ಕಳ ಸಂಖ್ಯೆ ಅಧಿಕ ಎಂದು ಎನ್‌ಎಫ್‌ಎಚ್‌ಎಸ್ ವರದಿಯಲ್ಲಿ ಉಲ್ಲೇಖ ಆಗಿದೆ. ಈ ನ್ಯೂನತೆಗೆ ಒಳಗಾದ ಮಕ್ಕಳು ಹೆಚ್ಚಿಗಿರುವ ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಜನರು ರಾಜ್ಯದ ಸರಾಸರಿಗಿಂತ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಮತ್ತೊಂದು ಕುತೂಹಲದ ಸಂಗತಿ.

`ಅಪೌಷ್ಟಿಕತೆ ಬರಿ ವೈದ್ಯಕೀಯ ಸಮಸ್ಯೆ ಅಲ್ಲ. ಆರ್ಥಿಕ, ಶೈಕ್ಷಣಿಕ ಅಂಶಗಳ ಜತೆ ಅನೇಕ ಸಾಮಾಜಿಕ ಕಾರಣಗಳೂ ಸೇರಿಕೊಂಡಿವೆ. ಜೀವನಶೈಲಿ, ಆಹಾರ ಪದ್ಧತಿ, ಮನೋಭಾವ, ನಂಬಿಕೆ, ಆಚರಣೆಗಳು, ಕೂಲಿ ಅರಸಿ ವಲಸೆ ಹೋಗುವ ಪ್ರವೃತ್ತಿ ಸೇರಿದಂತೆ ಇನ್ನೂ ಹಲವಾರು ಅಂಶಗಳು ಇದಕ್ಕೆ ಕಾರಣ ಆಗಬಲ್ಲವು.

ಪ್ರತಿ ತಾಲ್ಲೂಕನ್ನು ಒಂದು ಘಟಕವಾಗಿ ಪರಿಗಣಿಸಿ ಸಮಗ್ರವಾಗಿ ಅಧ್ಯಯನ ನಡೆಸಿದರೆ ಈ ಕುರಿತು ನಿಖರವಾದ ಮಾಹಿತಿಯೊಂದಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ~ ಎಂದು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಸಲಹೆ ನೀಡಿದರು.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT