ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ನೆಡುವ ಸಂಸ್ಕೃತಿ ಬೆಳಸಬೇಕು

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವೆಗಳ ವಿಭಾಗ ಹಾಗೂ ರಾಜ್ಯ ತೋಟಗಾರಿಕಾ ಇಲಾಖೆ ಜಂಟಿಯಾಗಿ ನಗರದ ಕಬ್ಬನ್ ಉದ್ಯಾನವನದಲ್ಲಿ ಭಾನುವಾರ ವಿವಿಧ ಬಗೆಯ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವೆಗಳ ವಿಭಾಗದ ಅಧ್ಯಕ್ಷ ನ್ಯಾಯಮೂರ್ತಿ ಎನ್.ಕೆ.ಪಾಟೀಲ್, `ಪ್ರಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಇಂದಿನ ಒತ್ತಡದ ಜೀವನದಲ್ಲಿ ನಿಸರ್ಗದ ಕಡೆಗೆ ಹೆಚ್ಚು ಗಮನ ನೀಡುತ್ತಿಲ್ಲ. ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಮರಗಳನ್ನು ಉಳಿಸುವ ಹಾಗೂ ಗಿಡಗಳನ್ನು ನೆಡುವ ಸಂಸ್ಕೃತಿಯನ್ನು ಬೆಳೆಸಬೇಕು~ ಎಂದರು.

ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಮಾತನಾಡಿ, `ಜನರಲ್ಲಿ ಪರಿಸರ ಕಾಳಜಿ ಮೂಡಿ ಮರ ಗಿಡಗಳ ಬಗ್ಗೆ ಜವಾಬ್ದಾರಿ ಹೆಚ್ಚಬೇಕು. ನಗರಗಳು ಕಾಂಕ್ರೀಟ್ ಕಾಡುಗಳಾಗುತ್ತಿರುವ ದಿನಗಳಲ್ಲಿ ಇದನ್ನು ತಡೆಯಲು ಗಿಡಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸಲಾಗ್ತುತಿದೆ. ಇದೊಂದು ಉತ್ತಮ ಕಾರ್ಯ. ಕೇವಲ ಗಿಡಗಳನ್ನು ನೆಡುವುದು ಮಾತ್ರವಲ್ಲ, ಅವುಗಳ ಸಮರ್ಪಕ ನಿರ್ವಹಣೆ ಕೂಡಾ ಅಗತ್ಯ. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಹೆಚ್ಚಿನದ್ದಾಗಿದೆ~ ಎಂದು ಹೇಳಿದರು.

ನವಚೇತನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ವಿ.ಶ್ರೀನಿವಾಸರಾಜು, `ಉದ್ಯಾನವನಗಳ ಅಗತ್ಯತೆ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ. ಉದ್ಯಾನವನಗಳ ನಿರ್ವಹಣೆ ಸರ್ಕಾರದ್ದು ಮಾತ್ರ ಎಂಬ ಧೋರಣೆಯಿಂದಾಗಿ ಉದ್ಯಾನವನಗಳ ಸರಿಯಾದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮುಂದಿನ ಜನಾಂಗಕ್ಕೆ ವೃಕ್ಷ ಸಂಸ್ಕೃತಿ ಉಳಿಸಿ, ಬೆಳೆಸುವ ಜವಾಬ್ದಾರಿ ಇಂದಿನ ಜನಾಂಗದ ಮೇಲಿದೆ~ ಎಂದರು.
 
ದೇವಕಣಗಿಲೆ (ಪ್ಲೂಮೇರಿಯಾ) ಜಾತಿಯ ಆಲ್ಬ, ಬ್ರಾಸಿಟೇಟಾ, ಕ್ಲೂಸಿಯಾಡಿಸ್, ಅಬ್‌ಟುಸಾ, ಪುಡಿಕಾ ಹಾಗೂ ರೂಬ್ರಾ ಪ್ರಭೇದಗಳ ಸುಮಾರು 210 ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯ ಮೂರ್ತಿಗಳಾದ ಜಗನ್ನಾಥನ್, ಅರವಿಂದ ಕುಮಾರ್, ಕೆ.ಎಲ್.ಮಂಜುನಾಥ್, ಕೆ.ಗೋವಿಂದ ರಾಜುಲು, ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT