ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯ ಪ್ರೀತಿಯ ಅತಿಥಿ

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

`ಬೆಂಗಳೂರು ಉದ್ಯಾನ ನಗರಿ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಬೆಳೆಯುತ್ತಿರುವ ಬೆಂಗಳೂರಿಗೆ ಮತ್ತಷ್ಟು ಹಸಿರು ಹೊದಿಕೆಯ ಅವಶ್ಯಕತೆ ಇದೆ. ಈ ಕಾರ್ಯವನ್ನು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಮಾಡುತ್ತಿದೆ~ ಎಂದು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ವಿಂಗ್-ಕುನ್ ಟಾಮ್ ಹೇಳುತ್ತಾರೆ.

ದಕ್ಷಿಣ ಭಾರತದಲ್ಲಿ ದಾಖಲೆ ಲೆಕ್ಕದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲು ವಿಂಗ್-ಕುನ್ ಈಚೆಗೆ ಬೆಂಗಳೂರಿನಲ್ಲಿದ್ದರು. ಆಗಸ್ಟ್ 25ರಂದು ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ಒಟ್ಟು 34,81,678 ಗಿಡಗಳನ್ನು ನೆಟ್ಟು ಎಲೈಟ್ ದಾಖಲೆ ಮಾಡಿದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದರು.

ಇದರೊಂದಿಗೆ ಲಿಮ್ಕಾ ಹಾಗೂ ಗಿನ್ನೆಸ್ ದಾಖಲೆ ಪಡೆಯುವ ಹೊಸ್ತಿಲಲ್ಲಿದ್ದಾರೆ. ಈ ಸಂದರ್ಭದಲ್ಲಿ ಮೆಟ್ರೊದೊಂದಿಗೆ ಕೆಲ ಕಾಲ ವಿಂಗ್-ಟುನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

* ಸಸಿ ನೆಡುವ ಪ್ರಕ್ರಿಯೆ ಪ್ರತಿ ವರ್ಷ ನಡೆಯುತ್ತಿದೆ. ಆದರೆ ನೆಟ್ಟ ಸಸಿಗಳ ಪಾಲನೆ ಹಾಗೂ ಪೋಷಣೆಯ ಹೊಣೆ ಯಾರದ್ದು?

ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ನಗರ, ಪಟ್ಟಣ, ಹಳ್ಳಿಗಳಲ್ಲಿ ಗಿಡ ನೆಡಬೇಕಾದ್ದು ಅನಿವಾರ್ಯ. ಆದರೆ ಅದರ ಪೋಷಣೆಯೂ ಅಷ್ಟೇ ಮುಖ್ಯ. ಹೀಗಾಗಿ ರಸ್ತೆಯ ಬದಲಾಗಿ ಶಾಲಾ ಕಾಲೇಜು, ಸರ್ಕಾರಿ ಅಥವಾ ಸೇನೆಗೆ ಸೇರಿದ ಖಾಲಿ ಜಾಗಗಳನ್ನು ಗುರುತಿಸಿ ಅಲ್ಲಿ ಗಿಡ ನೆಡುವ ಕಾರ್ಯ ಕೈಗೊಳ್ಳಲಾಗಿದೆ.

ನೆಡುವ ಕಾರ್ಯವನ್ನು ಲಯನ್‌ಗಳು ಕೈಗೊಂಡರೂ, ಅವುಗಳ ಪಾಲನೆ ಹಾಗೂ ಪೋಷಣೆ ಜವಾಬ್ದಾರಿಯನ್ನು ಹೊರುವಂತೆ ಶಾಲಾ ಕಾಲೇಜು ಮಕ್ಕಳು, ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ನಾಗರಿಕರ ಮನವೊಲಿಸಬೇಕಿದೆ.

* ಬೃಹತ್ ಪ್ರಮಾಣದಲ್ಲಿ ಗಿಡ ನೆಡುವ ಕಾರ್ಯವನ್ನು ಕೈಗೆತ್ತಿಕೊಂಡಿರುವುದರ ಮುಖ್ಯ ಉದ್ದೇಶ?

ಸಮಭಾಜಕ ವೃತ್ತದಲ್ಲಿರುವ ಬ್ರೆಜಿಲ್‌ನಂಥ ರಾಷ್ಟ್ರದಲ್ಲೇ ಅರಣ್ಯ ಬಹಳಷ್ಟು ಕಡಿಮೆಯಾಗಿದೆ. ಇದೇ ರೀತಿ ಅಭಿವೃದ್ಧಿಯ ಹೆಸರಲ್ಲಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಲ್ಲೂ ಅರಣ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ.
 
ಹೀಗಾಗಿ ವಿಶ್ವದ ಎಲ್ಲ ದೇಶಗಳಲ್ಲಿರುವ ಲಯನ್ಸ್ ಸದಸ್ಯರ ಮೂಲಕ 135 ಕೋಟಿ ಸಸಿಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಅದರಲ್ಲೂ ಬೆಂಗಳೂರಿನ ಈ ಕಾರ್ಯಕ್ರಮ ಯಶಸ್ವಿಯಾಗಿದೆ.

* ಗಿಡ ನೆಡುವುದು ಹೊರತುಪಡಿಸಿ ಬೇರೆ ಯಾವ ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ?

ಯುವ ಪೀಳಿಗೆಯನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸ ಆಗಬೇಕಿದೆ. ಹೀಗಾಗಿ ಯುವ ಜನತೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.
 
ಅಂಧರ ಏಳಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಜಗತ್ತಿನಾದ್ಯಂತ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಆಫ್ರಿಕಾ ದೇಶದ ಹಲವು ಭಾಗಗಳಲ್ಲಿ ಪೌಷ್ಟಿಕ ಆಹಾರದ ಅಭಾವವಿದೆ.

ಲಯನ್ಸ್ ಅಲ್ಲಿನ ಈ ಕೊರತೆ ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೆತ್ತಿಕೊಳ್ಳಲಿದೆ. ಜತೆಗೆ ಬಿಲ್ ಕ್ಲಿಂಟನ್ ಪ್ರತಿಷ್ಠಾನದ ಜತೆಗೂಡಿ ಎಳೆಯ ಮಕ್ಕಳಿಗೆ ಅಗತ್ಯ ಲಸಿಕೆ ನೀಡುವ ಕಾರ್ಯಕ್ರಮ ಜಾರಿಗೊಳಿಸುವ ಜವಾಬ್ದಾರಿಯನ್ನು ಲಯನ್ಸ್ ಸಂಸ್ಥೆ ಹೊತ್ತುಕೊಂಡಿದೆ.

* ಕರ್ನಾಟಕ ಹಾಗೂ ಬೆಂಗಳೂರಿಗಾಗಿ ಲಯನ್ಸ್ ಯಾವ ರೀತಿಯ ಯೋಜನೆಗಳನ್ನು ಹೊಂದಿದೆ? (ಇದನ್ನು ವಿವರಿಸಲು ವಿಂಗ್-ಕುನ್ ಟಾಮ್ ಅವರ ನೆರವಿಗೆ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ನಿರ್ದೇಶಕ ವಿ.ವಿ.ಕೃಷ್ಣ ರೆಡ್ಡಿ ಸಹಕರಿಸಿದರು).


ಮೈಸೂರು, ಜೋಗ್ ಫಾಲ್ಸ್, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಕೆಲವು ಶಾಲೆಗಳ ಕೆಲವು ವಿದ್ಯಾರ್ಥಿಗಳ ಭವಿಷ್ಯದ ಹೊಣೆಯನ್ನು ಲಯನ್ಸ್ ವಹಿಸಿಕೊಂಡಿದೆ.


ಇದರೊಂದಿಗೆ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕಳೆದ ಐದು ವರ್ಷದಿಂದ ಲಯನ್ಸ್ ಸಂಸ್ಥೆ ಶಿಕ್ಷಣದ ಕಡೆ ತನ್ನ ಗಮನವನ್ನು ಕೇಂದ್ರೀಕರಿಸಿದೆ.

ಅದರಲ್ಲೂ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿನ ಓದಲಾಗದ ವಿದ್ಯಾರ್ಥಿಗಳಿಗೆ ಟೈಲರಿಂಗ್, ಟ್ಯಾಲಿ ಇತ್ಯಾದಿ ತರಬೇತಿಗಳನ್ನು ನೀಡಿ ಭವಿಷ್ಯ ರೂೂಪಿಸಿಕೊಳ್ಳಲು ನೆರವಾಗುತ್ತಿದೆ.

ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ನ ಎಲ್ಲಾ ಲಯನ್‌ಗಳು ಸರ್ವಸನ್ನದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT