ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯ ವೈವಿಧ್ಯ

Last Updated 28 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸುವರ್ಣ ಗೆಡ್ಡೆಯಂತೆ ಕಾಣುವ, ಕಾಡುಗಳಲ್ಲಿ ಸಹಜವಾಗಿ ಬೆಳೆಯುವ ಕಾಡು ಕೇನೆಯನ್ನು ಯಾರೂ ವ್ಯವಸ್ಥಿತವಾಗಿ ಬೇಸಾಯ ಮಾಡಿ ಬೆಳೆಯುವುದಿಲ್ಲ. ಕೇನೆ ಕಾಡಿನ ಫಲವತ್ತಾದ ಪ್ರದೇಶಗಳಲ್ಲಿ, ಪೊದೆಗಳಲ್ಲಿ ಮಳೆಗಾಲದಲ್ಲಿ ತಾನಾಗಿ ಬೆಳೆದು ಮಳೆಗಾಲದ ಕೊನೆಯಲ್ಲಿ ಕಣ್ಮರೆಯಾಗುತ್ತದೆ. ಸಂಸ್ಕೃತದಲ್ಲಿ ಈ ಸಸ್ಯಕ್ಕೆ ವನಸೂರಣ ಎಂಬ ಹೆಸರಿದೆ.

ಕಾಡು ಕೇನೆ ಗಿಡ ಎಲ್ಲ ರೀತಿಯಲ್ಲೂ ಸುವರ್ಣಗೆಡ್ಡೆಯ ಗಿಡವನ್ನು ಹೋಲುತ್ತದೆ. ಆದರೆ ಗಿಡದ ಕಾಂಡ ಮತ್ತು ಎಲೆಗಳು ಕಪ್ಪುಮಿಶ್ರಿತ ಹಸಿರು ಬಣ್ಣದಲ್ಲಿವೆ. ದಂಟಿನಲ್ಲಿ ಬಿಳಿ ನೇರಳೆ ಮಿಶ್ರಬಣ್ಣದ ಮಚ್ಚೆಗಳಿರುತ್ತವೆ. `ಅನುರ್ಫೊ ಫಾಲ್ಲಸ್ ಕಾಂಪ್ನುಲಾಟಸ್~ ಸಸ್ಯವರ್ಗಕ್ಕೆ ಅದು ಸೇರಿದೆ. ಕೇನೆ ಗೆಡ್ಡೆಗಳು ಸುವರ್ಣ ಗೆಡ್ಡೆಯನ್ನೇ ಹೋಲುತ್ತವೆ. ಆದರೆ ತೀವ್ರ ತುರಿಕೆಯ ಗುಣ ಇರುವುದರಿಂದ ಇವನ್ನು ತರಕಾರಿಯಾಗಿ ಬಳಸುವುದಿಲ್ಲ.

ಗಡ್ಡೆಯನ್ನು ಇಡಿಯಾಗಿ ಆವಿಯಲ್ಲಿ ಬೇಯಿಸಿ, ಸಿಪ್ಪೆ ತೆಗೆಯುತ್ತಾರೆ. ಅನಂತರ ಕತ್ತರಿಸಿ, ಸಾಕಷ್ಟು ಹುಳಿ ಸೇರಿಸಿ ಅಕ್ಕಿಯೊಂದಿಗೆ ಅರೆದು ಕಡುಬು ಮಾಡಬಹುದು. ಹೀಗೆ ಸಾಕಷ್ಟು ಮುನ್ನೆಚ್ಚರಿಕೆ  ವಹಿಸಿದರೆ ಕೇನೆ ಗೆಡ್ಡೆಗಳನ್ನು ತಿನ್ನಬಹುದು. ಕಾಡು ಕೇನೆಯ ಬಲಿತ ದಂಡಿನ ಸಿಪ್ಪೆಯಂತಿರುವ ನಾರು ತೆಗೆದು, ಸಣ್ಣಗೆ ಕತ್ತರಿಸಿ, ಅಕ್ಕಿ ಹಿಟ್ಟಿನೊಂದಿಗೆ ಹುಳಿ ಸೇರಿಸಿ ದೋಸೆ ಮಾಡಬಹುದು.

 ಕಾಡು ಕೇನೆಯಲ್ಲಿ ಔಷಧೀಯ ಗುಣಗಳಿವೆ ಎಂಬ ಮಾಹಿತಿ ಆಯುರ್ವೇದ ಗ್ರಂಥಗಳು ಉಲ್ಲೇಖವಾಗಿದೆ. ಗುಲ್ಮವ್ಯಾಧಿಗೆ ಹಿಪ್ಪಲಿ ಅಣಿಲೆಕಾಯಿ ಇತ್ಯಾದಿಗಳೊಂದಿಗೆ ಇದರ ಗೆಡ್ಡೆಯನ್ನು ಸೇರಿಸಿ ತಯಾರಿಸಿದ ಚೂರ್ಣವನ್ನು ಬಳಸುತ್ತಾರೆ. ಕಾಡು ಕೇನೆ ಗೆಡ್ಡೆಯ ಸಿಪ್ಪೆ ತೆಗೆದು ಬೆಂಕಿಯಲ್ಲಿ ಸುಟ್ಟು ಚೂರ್ಣ ತಯಾರಿಸಿ ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಿದರೆ ಮೂಲವ್ಯಾಧಿ ಶಮನವಾಗುತ್ತದೆಂದು ಹೇಳಲಾಗಿದೆ.
 
ಗೆಡ್ಡೆಯನ್ನು ಬಿಲ್ಲೆಗಳಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ಹುಳಿ ಮಜ್ಜಿಗೆಯೊಂದಿಗೆ ತಂಬಳಿ ತಯಾರಿಸಿ ಬಳಸುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT