ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಸಂಘ ಸಿಬ್ಬಂದಿಗೆ ಆವರ್ತ ನಿಧಿ

Last Updated 18 ಜನವರಿ 2013, 20:11 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ಸಹಕಾರ ಸಂಘಗಳ ಸಿಬ್ಬಂದಿಗೆ ಕನಿಷ್ಠ ವೇತನ, ಸೇವಾ ಸೌಲಭ್ಯ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಒದಗಿಸಲು ನೆರವಾಗಲು ಆವರ್ತ ನಿಧಿಯನ್ನು ಸ್ಥಾಪಿಸಲಾಗುವುದು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿದರು.

ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸಹಕಾರ ಭಾರತಿಯ ನಾಲ್ಕನೇ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೃಷಿ ಪತ್ತಿನ ಸಹಕಾರ ಸಂಘಗಳ ಸಿಬ್ಬಂದಿಗೆ ಕನಿಷ್ಠ ಸೇವಾಸೌಲಭ್ಯ ಕಲ್ಪಿಸಲುರೂ150 ಕೋಟಿ ಮಂಜೂರು ಮಾಡಬೇಕು ಎಂದು ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮನವಿ ಸಲ್ಲಿಸಿದೆ. ಎಲ್ಲ ಸಹಕಾರ ಸಂಘಗಳ ಪ್ರಮುಖರ ಜೊತೆಗೆ ಸಮಾಲೋಚಿಸಿ ನಿಧಿ ಸ್ಥಾಪಿಸಲಾಗುವುದು ಎಂದರು.

ದೇಶದಲ್ಲಿ ಮೊದಲ ಬಾರಿಗೆ ಸೌಹಾರ್ದ ಸಹಕಾರಿ ಕಾನೂನು ಜಾರಿಗೆ ತಂದ ರಾಜ್ಯ ನಮ್ಮದು. ಸಹಕಾರ ಕಾನೂನಿಗೆ ಈಗಾಗಲೇ 97ನೇ ತಿದ್ದುಪಡಿ ತರಲಾಗಿದೆ. ಸಹಕಾರ ಸಂಘಗಳ ಆರು ಲಕ್ಷ ಸದಸ್ಯರು ಯಶಸ್ವಿನಿ ಯೋಜನೆಯ ಲಾಭ ಪಡೆದಿದ್ದಾರೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸಮಾವೇಶ ಉದ್ಘಾಟಿಸಿ, `ಸಮಾಜದಲ್ಲಿ ಪರಿವರ್ತನೆ ತರುವುದು ಸಹಕಾರಿ ಚಳವಳಿಯ ಧ್ಯೇಯವಾಗಬೇಕು. ಸಮಾಜದ ಪ್ರತಿ ಕುಟುಂಬದ ಅಭಿವೃದ್ಧಿಗೂ ಸಹಕಾರ ಕ್ಷೇತ್ರ ಶ್ರಮಿಸಬೇಕು' ಎಂದು ಅವರು ಕಿವಿಮಾತು ಹೇಳಿದರು.

`ಸಹಕಾರಿ ಆಂದೋಲನ ವಿಶ್ವವ್ಯಾಪಿ. ಸಹಕಾರ ಚಳವಳಿಗೆ ಚಾಲನೆ ದೊರಕಿದ್ದು ಪಶ್ಚಿಮ ರಾಷ್ಟ್ರಗಳಲ್ಲೇ. ಅಲ್ಲಿನ ಸಹಕಾರ ಚಳವಳಿಯ ಮುಖ್ಯ ಉದ್ದೇಶ ಲಾಭ ಗಳಿಸುವುದು' ಎಂದು ಗಮನ ಸೆಳೆದರು.`ಆರ್ಥಿಕ ಸಶಕ್ತೀಕರಣದ ಉದ್ದೇಶ ಹೊಂದಿರುವ ಸಹಕಾರ ಚಳವಳಿ ಬಹುಕಾಲ ಬಾಳದು. ಚಳವಳಿಯ ಉದ್ದೇಶ ಶುದ್ಧ ಆಗಿರಬೇಕು. ಅಲ್ಲಿ ಸ್ವಾರ್ಥಕ್ಕೆ ಅವಕಾಶ ಇಲ್ಲ. ಸಹಕಾರವನ್ನು ಧರ್ಮವಾಗಿ ಪಾಲಿಸಬೇಕು' ಎಂದರು.

`ಸ್ವಾವಲಂಬನೆ ಹಾಗೂ ಅಹಿಂಸೆಯಿಂದ ಮನುಷ್ಯ ಸ್ವತಂತ್ರನಾಗುತ್ತಾನೆ. ಈ ಮೂಲಕ ಸಹಕಾರ ಚಳವಳಿ ಯಶಸ್ವಿಯಾಗುತ್ತದೆ. ನಾವು ಆತ್ಮವಿಶ್ವಾಸ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ದೇಶದ ಪ್ರತಿ ಕುಟುಂಬವೂ ನೋಂದಣಿಯಾಗದ ಸಹಕಾರಿ ಸಂಘಗಳು ಇದ್ದಂತೆ. ಕುಟುಂಬದ ಸದಸ್ಯರನ್ನು ಜೋಡಿಸುವುದು ಆತ್ಮೀಯತೆ. ಈ ಗುಣವನ್ನೇ ಸಹಕಾರಿ ಸಂಘಗಳು ಪಾಲಿಸಬೇಕು' ಎಂದು ಕಿವಿಮಾತು ಹೇಳಿದರು.

ಸಂಸದ ಅನಂತ ಕುಮಾರ್, `ಸಹಕಾರಿ ಸಂಘಟನೆಗಳು ಸಮಾಜಮುಖಿ ಹಾಗೂ ರಾಷ್ಟ್ರಮುಖಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಹಕಾರ ಚಳವಳಿಯನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು' ಎಂದರು.

ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಸತೀಶ ಮರಾಠೆ, `ಕಳೆದ ಮೂರು ಪಂಚವಾರ್ಷಿಕ ಯೋಜನೆಗಳಲ್ಲೂ ಸಹಕಾರಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ' ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT