ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಇಲಾಖೆಗೆ ತಿದ್ದುಪಡಿ ಬೇಕು

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯದ ಸಹಕಾರಿ ಇಲಾಖೆಗೆ  ತಿದ್ದುಪಡಿಗಳು ಅಗತ್ಯವಿದೆ. ರಾಜ್ಯದಲ್ಲಿ ಸಹಕಾರಿ ಇಲಾಖೆಯ ಯಾವುದೇ ರೀತಿಯ ಹಿಡಿತಗಳಿಲ್ಲದೆ, ಅನೇಕ ರೀತಿಯ ಹಣಕಾಸಿನ ವ್ಯವಹಾರಗಳು ನಡೆಯುವ ಸಂಸ್ಥೆಗಳು ಕೇವಲ ಪರವಾನಗಿಯನ್ನು ಪಡೆದುಕೊಂಡು ನಡೆಸುತ್ತಿವೆ.

ಸಾರ್ವಜನಿಕರಿಗೆ ಇದು ಸರ್ಕಾರದ ಹಿಡಿತವಿಲ್ಲದ ಸಂಸ್ಥೆಗಳು ಎಂಬ ಅರಿವು ಇಲ್ಲದ ಕಾರಣ ಹಣವನ್ನು ತೊಡಗಿಸಿ ಅವರುಗಳಿಂದ ಮೋಸವಾದಾಗ ಸಹಕಾರಿ ಇಲಾಖೆಯ ಅಧಿಕಾರಿಗಳತ್ತ ದೂರುಗಳನ್ನು ಕೊಂಡೊಯ್ಯುತ್ತಾರೆ. ಆದರೆ ಕಾನೂನಿನ ಅಡಿಯಲ್ಲಿ  ಕೇವಲ ಮೊಕದ್ದಮೆಯನ್ನು ಹೂಡಬಹುದಷ್ಟೇ ಹೊರತು ಸಹಕಾರಿ ಇಲಾಖೆಯ ನಿಯಮದಡಿಯಲ್ಲಿ ಅವರುಗಳಿಂದ ಯಾವುದೇ ರೀತಿಯ ನ್ಯಾಯವನ್ನು ದೊರಕಿಸಿಕೊಡಲು ಸಾಧ್ಯವಿರುವುದಿಲ್ಲ.

ರಾಜ್ಯದಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳು ಸೌಹಾರ್ದ ಎನ್ನುವ ವ್ಯವಸ್ಥೆಗೆ ತಮ್ಮನ್ನು ಒಳಪಡಿಸಿಕೊಂಡಿರುತ್ತಾರೆ. ಸೌಹಾರ್ದ ವ್ಯವಸ್ಥೆಗೆ ಒಳಪಟ್ಟಿರುವ ಬಹಳಷ್ಟು ಬ್ಯಾಂಕುಗಳಲ್ಲಿ ಅವ್ಯವಹಾರಗಳು ಹೆಚ್ಚಾಗಿ ನಡೆದಿರುತ್ತದೆ. ಸಾರ್ವಜನಿಕರು ಇಟ್ಟಂತಹ ಠೇವಣಿಗಳಿಗೆ ಯಾವುದೇ ರೀತಿಯ ಭದ್ರತೆಗಳು ಇರುವುದಿಲ್ಲ. ಸಹಕಾರಿ ಇಲಾಖೆಯ ಹಿಡಿತ ಯಾವುದೇ ರೀತಿಯಲ್ಲೂ ಇವರ ಮೇಲೆ ಇಲ್ಲದೆ ಇಲ್ಲಿ ಆಗುವ ಎಲ್ಲಾ ಅವ್ಯವಹಾರ ಮತ್ತು ಅನ್ಯಾಯಗಳಿಗೆ ಫೆಡರೇಷನ್‌ಗೆ ದೂರು ನೀಡುವುದರಿಂದ ನ್ಯಾಯ ಸಿಕ್ಕಿರುವ ಪ್ರಕರಣಗಳು ಬೆರಳೆಣಿಕೆಷ್ಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸೌಹಾರ್ದ ವ್ಯವಸ್ಥೆಯ ಬಗ್ಗೆ ಮರುಚಿಂತನೆ ಅಗತ್ಯವಿದೆ.

ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇಲ್ಲವೇ ಪತ್ತಿನ ಸಹಕಾರ ಸಂಘ ಇವುಗಳನ್ನು ಆರಂಭಿಸುತ್ತಾರೆ. ಇಲ್ಲಿ ಸಾರ್ವಜನಿಕರು ಸಾಕಷ್ಟು ಪ್ರಮಾಣದಲ್ಲಿ ಸ್ನೇಹಿತರ ಒತ್ತಾಯ, ಇಲ್ಲವೇ ಬ್ಯಾಂಕಿನ ಮೇಲಿನ ವಿಶ್ವಾಸದಿಂದ ಠೇವಣಿಯನ್ನು ಇಡುತ್ತಾರೆ. ಇಂತಹ ಹಲವಾರು ಸಂಸ್ಥೆಗಳು ಸಾರ್ವಜನಿಕರು ಇಟ್ಟಂತಹ ಠೇವಣಿಗೆ ನಾಮವನ್ನು ಹಾಕಿ ಸೊಸೈಟಿಗಳನ್ನೇ ಮುಚ್ಚಿಕೊಂಡು ಹೋಗಿರುತ್ತಾರೆ. ಇವರ ವಿಳಾಸ ಇವರುಗಳ ಭಾವಚಿತ್ರ (ನಿರ್ದೇಶಕರು ಮತ್ತು ಆಡಳಿತ ಮಂಡಳಿ) ಯಾವುದೂ ಎಲ್ಲೂ ದೊರೆಯುವುದಿಲ್ಲ. ಹೀಗಾಗಿ ದೂರು ನೀಡುವುದು ಕಷ್ಟವಾಗಿರುತ್ತದೆ.
 
ಈ ಹಿನ್ನೆಲೆಯಲ್ಲಿ ಇಂತಹ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾದವರು ಮತ್ತು ಮತ್ತೆ ಮತ್ತೆ ಚುನಾವಣೆಗಳಲ್ಲಿ ಮರುಆಯ್ಕೆ ಆದ ಸಂದರ್ಭಗಳಲ್ಲಿಯೂ ನಿರ್ದೇಶಕರುಗಳ ಭಾವಚಿತ್ರ, ವಿಳಾಸಗಳನ್ನು ಸಹಕಾರಿ ಇಲಾಖೆಯ ದಾಖಲೆಗಳಲ್ಲಿ ನಮೂದಿಸಬೇಕು. ಸಾಧ್ಯವಾದರೆ ಕಂಪ್ಯೂಟರೀಕರಣಗೊಳಿಸಬೇಕು. ಮತ್ತು ಪತ್ತಿನ ಸಹಕಾರಿ ಬ್ಯಾಂಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ಇತರ ಸಹಕಾರಿ ಸಂಸ್ಥೆಗಳಲ್ಲಿ ಇಡುವಂತಹ ಠೇವಣಿಗೆ ಇನ್‌ಷುರೆನ್ಸ್ ಇರಬೇಕು. ಇದರಲ್ಲಿನ ಶೇ 50 ರಷ್ಟು ಭಾಗವನ್ನು ರಾಜ್ಯ ಸರ್ಕಾರ ರಿಸರ್ವ್ ಬ್ಯಾಂಕಿನಲ್ಲಿ ಇಲ್ಲವೇ ಸರ್ಕಾರದ ಬೇರೆ ಬೇರೆ ಸಂಸ್ಥೆಗಳಲ್ಲಿ ಠೇವಣಿಯನ್ನು ಇಡುವಂತೆ ಷರತ್ತನ್ನು ವಿಧಿಸಬೇಕು.

ಬೆಂಗಳೂರು ನಗರದಲ್ಲಂತೂ ಅನೇಕ ಗೃಹ ನಿರ್ಮಾಣ ಸಹಕಾರಿ ಸಂಸ್ಥೆಗಳು ಸಾರ್ವಜನಿಕರಿಗೆ ಅಂದರೆ ಸದಸ್ಯರುಗಳಿಗೆ ಎಷ್ಟೆಲ್ಲಾ ಮೋಸವನ್ನು ಮಾಡಬಹುದೋ ಅಷ್ಟು ಮೋಸವನ್ನು ಮಾಡಿರುತ್ತಾರೆ. ಸದಸ್ಯರಾದವರಿಗೆ ನಿವೇಶನವನ್ನು ಪಡೆದುಕೊಂಡ ಸಂಭ್ರಮ ಕೇವಲ ಹಂಚಿಕೆ ಪತ್ರದಲ್ಲಿ ಮಾತ್ರವೇ ಸಿಗುತ್ತದೆ. ಬಹಳಷ್ಟು ಸಂಸ್ಥೆಗಳಲ್ಲಿ ಸದಸ್ಯರುಗಳು ಪಡೆದಿರುವ ನಿವೇಶನಗಳು ಭೂಮಾಫಿಯಾದವರ ಹಿಡಿತದಲ್ಲಿ ಇಲ್ಲವೇ ರೈತರ ಹಿಡಿತದಲ್ಲಿಯೇ ಮುಂದುವರೆದಿರುತ್ತದೆ. ನ್ಯಾಯಾಲಯಗಳಲ್ಲಿ ಮೊಕದ್ದಮೆಗಳಿದ್ದು ಹಲವಾರು ದಶಕಗಳಾದರೂ ಅವು ಇತ್ಯರ್ಥವಾಗಿರುವುದಿಲ್ಲ.

ಒಟ್ಟಾರೆ ಕರ್ನಾಟಕ ರಾಜ್ಯದ ಸಹಕಾರಿ ಇಲಾಖೆಯಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ನೋಡಿದಾಗ ಈ ಒಂದು ಇಲಾಖೆ ಹಲ್ಲಿಲ್ಲದಂತಹ ಹಾವಾಗಿರುತ್ತದೆ.
- ಕೆ.ಎಸ್. ನಾಗರಾಜ್‌ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT