ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಕ್ಷೇತ್ರಕ್ಕೆ ಶೇ 30ರಷ್ಟು ತೆರಿಗೆ: ಕಾಂಗ್ರೆಸ್‌ ನಾಯಕರಿಂದಲೇ ವಿರೋಧ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಸಹಕಾರಿ ಕ್ಷೇತ್ರದ ಮೇಲೆ ಶೇ 30 ರಷ್ಟು ತೆರಿಗೆಯನ್ನು ವಿಧಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಇದೇನಾದರೂ ಜಾರಿಗೆ ಬಂದರೆ ಈ ಕ್ಷೇತ್ರದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಆದ್ದರಿಂದ ಈ ತೆರಿಗೆಯನ್ನು ಹಾಕದಿರುವಂತೆ ಪಕ್ಷದ ಮುಖಂಡರು ಒತ್ತಡ ತರಬೇಕು’ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನುಡಿದರು.

ನಗರದಲ್ಲಿ ಬುಧವಾರ ಕೆ.ಎಚ್.ಪಾಟೀಲ್ ಅಭಿಮಾನಿಗಳ ಬಳಗ ಮತ್ತು ಬೆಂಗಳೂರು ನಗರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೆ.ಎಚ್.ಪಾಟೀಲರ 87ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಈಗಾಗಲೇ ಜಾಗತೀಕರಣ, ಖಾಸಗೀಕರಣ ನೀತಿಗಳಿಂದ ಸಹಕಾರಿ ರಂಗವು ಅಸ್ಥಿರಗೊಳ್ಳುತ್ತಿದೆ. ತೆರಿಗೆ ಹೊರೆಯೂ ಜಾಸ್ತಿಯಾದರೆ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಸಹಕಾರಿ ಸಂಸ್ಥೆಗಳ ಸ್ಥಿತಿ ಶೋಚನೀಯವಾಗಲಿದೆ’ ಎಂದರು.‘ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲೂ ಮೀಸಲಾತಿ ಜಾರಿಗೆ ಬರಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಮಾತನಾಡಿ, ‘ಪಾಟೀಲರು ಗದಗ ಜಿಲ್ಲೆಯ ಹುಲಕೋಟಿ ಎಂಬ ಚಿಕ್ಕ ಗ್ರಾಮದಲ್ಲಿ ಜನಿಸಿದರೂ ಸಹ  ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತರಾದರು.ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದ ಅವರು ರೈತರ ಹಿತಾಸಕ್ತಿ ಬಂದಾಗ ಯಾವುದೇ ಪ್ರಭಾವಿ ವ್ಯಕ್ತಿಯಾದರೂ ಅವರೊಂದಿಗೆ ರಾಜಿ ಮಾಡಿಕೊಳ್ಳುತ್ತಿರಲಿಲ್ಲ’ ಎಂದು ಬಣ್ಣಿಸಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ‘ಪಾಟೀಲರು, ದೇವರಾಜ್ ಅರಸು ಅವರ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದರು. ಅರಸು ನಂತರ ಅವರೇ ಮುಖ್ಯಮಂತ್ರಿ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ ರಾಜಕೀಯದಲ್ಲಿ ಯಾವಾಗಲೂ ಅಸ್ಥಿರತೆ, ಅನಿರೀಕ್ಷಿತ ತಿರುವುಗಳಿರುತ್ತವೆ. ಆದ್ದರಿಂದ ಅವರಿಗೆ ಮುಖ್ಯಮಂತ್ರಿ ಪಟ್ಟ ದೊರೆಯಲಿಲ್ಲ. ಆದರೆ ಅವರು ನೇರಮಾತು, ಎದೆಗಾರಿಕೆಯಿಂದ ಬಂದ ಸಮಸ್ಯೆಯನ್ನು ಎದುರಿಸಬಲ್ಲವರಾಗಿದ್ದರು’ ಎಂದರು.

ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಅಭಿಮಾನಿಗಳ ಬಳಗದ ಅಧ್ಯಕ್ಷ ಎಸ್.ಎನ್.ಕಾತರಕಿ, ಸದಸ್ಯ ರುದ್ರೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT