ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಬ್ಯಾಂಕುಗಳಿಂದ ಸಾಮಾಜಿಕ ಕಾರ್ಯ

Last Updated 20 ಜೂನ್ 2011, 7:10 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಷ್ಟ್ರೀಯ ಬ್ಯಾಂಕುಗಳಿಂದ ಆಗದ ಸಾಮಾಜಿಕ ಸೇವಾ ಕಾರ್ಯಗಳು ಸಹಕಾರಿ ಬ್ಯಾಂಕುಗಳಿಂದ ಆಗುತ್ತಿದೆ ಎಂದು ಬೆಳಗಾವಿ ನಾಗನೂರ ಮಠದ ಸಿದ್ಧರಾಮ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಹೊಳೆ ಆಂಜನೇಯ ದೇವಸ್ಥಾನದ ಹಿಂದೆ ಸಿ.ಟಿ. ಪಾಟೀಲ ಕಟ್ಟಡದಲ್ಲಿ ಭಾನುವಾರ ನೂತನವಾಗಿ ಆರಂಭಗೊಂಡ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ದೇಶದಲ್ಲಿ ಅಪ್ರಮಾಣಿಕತೆ ಮತ್ತು ಲಂಚ  ತೆಗೆದುಕೊಳ್ಳುವುದು ಸಾರ್ವತ್ರಿಕವಾಗಿದೆ. ದೇವರು ಇಲ್ಲದ ಸ್ಥಳ ಇರಬಹುದು ಆದರೆ ಲಂಚ ತೆಗೆದುಕೊಳ್ಳದ ಸ್ಥಳ ಇಲ್ಲದಂತಾಗಿದೆ. ಗುಪ್ತವಾಗಿ ತೆಗೆದುಕೊಳ್ಳುತ್ತಿದ್ದ ಲಂಚವನ್ನು ಇಂದು ಬಹುರಂಗವಾಗಿಯೇ ತೆಗೆದುಕೊಳ್ಳುತ್ತಿದ್ದಾರೆ. ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದು ಜೈಲಿಗೆ ಹೋದರೆ ಅಲ್ಲಿ ಮತ್ತೆ ಲಂಚ ನೀಡಿ ಹೊರಬರುತ್ತಾರೆ~ ಎಂದು ಹೇಳಿದರು.

`ಜನರಲ್ಲಿ ನಿಸ್ವಾರ್ಥ ಮನೋಭಾವ ಬೆಳೆಯಬೇಕು, ನಿಸ್ವಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಮತ್ತು ಅಂಥವರನ್ನು ಅನುಸರಿಸಬೇಕು~ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್. ಪಾಟೀಲ, `1997ರಲ್ಲಿ ಕೇವಲ 1600 ಠೇವಣಿದಾರದಿಂದ 11 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಆರಂಭಗೊಂಡ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಇದೀಗ 6800 ಸದಸ್ಯರನ್ನು ಒಳಗೊಂಡು 81 ಕೋಟಿ ದುಡಿಯುವ ಬಂಡವಾಳ ಹೊಂದಿದೆ~ ಎಂದರು.

ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಕೇವಲ ಹಣದ ವ್ಯವಹಾರ ಮಾಡದೇ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆ ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಠೇವಣಿದಾರರ ಹಿತಾಸಕ್ತಿ ಕಾಯ್ದುಕೊಂಡು, ಸಾಲಗಾರರನ್ನು ಗೌರವದಿಂದ ಕಾಣುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅತ್ಯಂತ ವಿಶ್ವಾಸಾರ್ಹತೆ ಪಡೆದುಕೊಂಡಿದೆ ಎಂದರು.

ಕಲಾವಿದ ಡಾ. ಬಿ.ಕೆ. ಹಿರೇಮಠ ಮಾತನಾಡಿ, ಹಣದ ಸ್ವಭಾವವನ್ನು ಸರಿಯಾಗಿ ಅರ್ಥಮಾಡಿಕೊಂಡವರು ಬ್ಯಾಂಕನ್ನು ಮುನ್ನಡೆಸಬಲ್ಲರು ಎಂದರು.

ಸ್ವಾವಲಂಬಿ ಜೀವನ ಮತ್ತು ಶ್ರಮ ಸಂಸ್ಕೃತಿಗೆ ಪೂರಕವಾಗಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಡಾ. ಸತ್ಯಾನಂದ ಪಾತ್ರೋಟ, ಎಸ್.ಆರ್. ಮೇಲ್ನಾಡ, ಡಾ. ದೇವರಾಜ ಪಾಟೀಲ, ಪಲ್ಲವಿ ಪಾತ್ರೋಟ ಮತ್ತು ಅನುಷಾ ಪಾಟೀಲ ಇದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಿದ್ದರಾಮಯ್ಯ ಮಠಪತಿ ಅವರಿಂದ ವಚನಗಾಯನ ಮತ್ತು ಭಾವಗೀತೆ ಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT