ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ ನಿಜಗಳು

ಕವಿತೆ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಾವಿಲ್ಲದ ಮನೆಯ ಸಾಸಿವೆಗೆ ಸುತ್ತಿದವಳ ಮಗ
ಕೊನೆಗೂ ಅಳಿಸಲಾಗದ ನೆನಪಿನಲ್ಲಷ್ಟೇ ಉಳಿದ,
ಸಾವೇ ಇಲ್ಲದ ಅಶ್ವತ್ಥಾಮ
ಕಾಲವನ್ನು ಧಿಕ್ಕರಿಸಲಾಗದೇ ಹತಾಶನಾದ,
ಇನ್ನೊಬ್ಬನಿದ್ದ- ಪ್ರೀತಿಯ ಹುಡುಗ- ಈಗ
ಮನುಷ್ಯರೂಪ ಕಳಚಿಕೊಂಡು ಹಸಿರು
ಮಿಡಿತೆಯಾಗಿ ಗದ್ದೆ ತೋಟಗಳಲ್ಲಿ ಸುತ್ತುತ್ತಿದ್ದಾನೆ.

ಬೆಳೆದೂ ಬೆಳೆದೂ ಸುಸ್ತಾದವರಿಗೆ
ಮನುಷ್ಯತನ ಕಳೆದುಕೊಂಡವರಿಗೆ
ಕಬಂಧ ದೇಹ ಅನಿವಾರ್ಯ;
ಬಾಹುಬಲಕ್ಕೆ ಬಲಿ ಬೇಕೇಬೇಕು;
ಪಾತಾಳಕ್ಕೆ ತಳ್ಳುವ ವಾಮನರಿಲ್ಲದೆ
ತ್ರಿವಿಕ್ರಮವೆಂತು ಉದಿಸಬೇಕು?
ಬಕಧ್ಯಾನವಿಲ್ಲದಿದ್ದರೆ ನಿರಂತರ ಉಪವಾಸ.

ತಾನೇ ಒಂದು ಕಾಡಿನಂತೆ ಬೆಳೆವ,
ವಿಶಾಲ ವ್ಯಾಪಿಸುವ ವೃಕ್ಷಗಳಿವೆ,
ತನ್ನೆಲ್ಲವನ್ನೂ ಆಕಾಶಕ್ಕೆ ಅರ್ಪಿಸುವಂತೆ
ಫೋಸು ಕೊಟ್ಟು ಗೆಲ್ಲು-
ಎಲೆ-ಚಿಗುರು-ಹೂವು-ಹಣ್ಣುಗಳನ್ನು ಎತ್ತಿಹಿಡಿಯುತ್ತವೆ,
ಬಿಳಲುಗಳನ್ನಿಳಿಸಿ ನೆಲವನ್ನೇ ಕಿತ್ತು ಆಗಸಕ್ಕೆಸೆಯುವಂತಿದೆ ನೆಲೆ.

ಭೂತಳದಲ್ಲಿರುವ ಬೇರಿನ ಬುಡವನ್ನು ಕತ್ತರಿಸಲು
ರಾಮಬಾಣವೂ ತುಕ್ಕುಹಿಡಿದು ನಿರಾಕರಿಸುತ್ತಿದೆ
ದಶಕಂಠದ ಕೊರಳಿಗೆ ಹಾರವಾಗುತ್ತಿದೆ.

ಅಸ್ಥಿಪಂಜರವನ್ನು ಎತ್ತಿ ಇಳಿಸಿ ಬೆವರು ಸುರಿಸುವುದೇ
ನಿತ್ಯದ ವ್ಯಾಯಾಮ.
ಭೀಮ ಸೌಟು ಹಿಡಿದು ಬಕಾಸುರನಿಗಾಗಿ ಅಡುಗೆಯಲ್ಲಿ ತಲ್ಲೆನ
ಏಕಚಕ್ರಕ್ಕೀಗ ಮುಕ್ತಿಯೆಲ್ಲಿ?

ರಾಮಲೀಲಾಜಾಲದಲ್ಲಿ
ಸತ್ತವನು ರಾವಣನೆಂದುಕೊಂಡರೆ
ರಕ್ತವರ್ಷಕ್ಕೆ ಎಲ್ಲ ಕಡೆ ಮೊಳೆತಿದೆ ಹತ್ತು ತಲೆಗಳ ಬೆಳೆ.

ಸದಾಚಾರದ ನೂರು ರೂಪಗಳಲ್ಲಿ ಅವತರಿಸಲು
ಭಗವಂತನಿಗೂ ಭೀತಿ;
ಭ್ರಷ್ಟಭೂತಗಳೆಲ್ಲ ಗುಡಿಗೋಪುರಗಳಲ್ಲಿ ಪೂಜೆಗೊಳ್ಳುವಾಗ,
ನಿರ್ವೀರ್ಯ ಸಜ್ಜನರೆಲ್ಲ
ಅಷ್ಟಿಷ್ಟು ಅಮೃತಕ್ಕೆ ಕೈಯೊಡ್ಡಿ ನಿಂತಾಗ,
ರೋಮ್ ಉರಿಯುತ್ತಿರುವಾಗ
ನೀರೋ ಎಂಬ ಬುದ್ಧಿಜೀವಿ ಪಿಟೀಲು ನುಡಿಸುವಾಗ,
ದ್ರೌಪದಿಯ ವಸ್ತ್ರಹರಣ, ಖಾಂಡವವನ ಹನನ ನಡೆಯುವಾಗ
ವೇದಿಕೆಗಳಿಂದ ಪಂಪ-ಪರಿಸರಾದಿಗಳ ವಿಮರ್ಶೆಯ ಜಾಗತೀ-ಗತಿಗೆ
ಬಡವರಿಗೂ ಬಡದೇವರೇ ಗತಿ!

ದೀಪದಡಿ ಮಾತ್ರವಲ್ಲ
ಹಬ್ಬಿದ ದೊಡ್ಡ ಮರದಡಿಯಲ್ಲೂ ಕತ್ತಲು,
ಬೆಳಕು ಬೇಕೆಂದರೆ ಕಡ್ಡಿ ಗೀರಬೇಕು.
ಗೋಲಿಯಾತನ ಎದುರು
ಗೋಲಿಯಾಡುವ ಹುಡುಗನ ಆಟವೆಂತು?

ನಾನು ಪ್ರಾಮಾಣಿಕ,
ನಿಮ್ಮೆದುರು ನಡುಬಗ್ಗಿಸಿ ನಿಂತಿದ್ದೇನೆ
ನಿಮ್ಮದೇ ಅನ್ನವುಂಡ ತಪ್ಪಿಗೆ
ಸಮುದ್ರ ಮಥನದಲ್ಲಿ ದೇವದಾನವರೆಲ್ಲ ಒಂದಾಗಿದ್ದೇವೆ
ಹಾಲಾಹಲವನ್ನಿಳಿಸಿಕೊಳ್ಳುವ ಗಂಟಲು ಯಾರಿಗೂ ಇಲ್ಲ.

ನೀವೆಂಬ ಉಪ್ಪಿನ ಸಮುದ್ರಕ್ಕೆ ನಾನಿಳಿಯಲಾರೆ;
ಏಕೆಂದರೆ ನಾನೂ ಉಪ್ಪಿನ ಗೊಂಬೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT