ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಬಾಳ್ವೆಗೊಂದು ಮಾದರಿ

Last Updated 6 ಮಾರ್ಚ್ 2011, 7:30 IST
ಅಕ್ಷರ ಗಾತ್ರ

ಕೊಲ್ಹಾರ: ಇಲ್ಲಿನ ಗಾಂಧಿ ವೃತ್ತದಲ್ಲಿ ನೀವೊಮ್ಮೆ ಹಾದು ಬಂದರೆ ಅಲ್ಲಿ ಅಪರೂಪದ ಗೆಳೆಯರು ನಿಮ್ಮನ್ನು ಖಂಡಿತವಾಗಿ ಎದುರುಗೊಳ್ಳುತ್ತಾರೆ. ಇಲ್ಲಿನ ಹೋಟೆಲ್, ಪಾನಶಾಪ್, ಸ್ವೀಟ್‌ಮಾರ್ಟ್‌ಗಳ ಜನರಿಗೆ ಚಿರಪರಿಚಿತರು. ಅವರು ಮನುಷ್ಯರಂತೂ ಖಂಡಿತ ಅಲ್ಲ! 

ಕಳೆದ ಆರೇಳು ವರ್ಷಗಳಿಂದ ಅನ್ಯೋನ್ಯವಾಗಿ ಪ್ರೀತಿಯಿಂದ ಬದುಕುತ್ತಿರುವ ಮಂಗ-ಹಂದಿಗಳ ಕಥೆಯಿದು. ಇಲ್ಲಿರುವ ಹೆಣ್ಣು ಮಂಗ ಅಲೆಮಾರಿಗಳು ಸಾಕಿದ್ದು. ಅವರಿಂದ ಹೇಗೋ ತಪ್ಪಿಸಿಕೊಂಡು ಇಲ್ಲಿದ್ದ ಗಂಡು ಕೋತಿಯೊಂದಿಗೆ ಪರಿಚಯವಾಯಿತು. ಪರಿಚಯ ಪ್ರೇಮಕ್ಕೆ ತಿರುಗಿತು. ಹಲವು ದಿನಗಳ ಕಾಲ ಗಾಂಧಿ ಸರ್ಕಲ್‌ನಲ್ಲಿ ರೋಮಿಯೋ-ಜುಲಿಯೆಟ್ ಆಗಿ ಓಡಾಡಿಕೊಂಡಿದ್ದ ಇವುಗಳಿಗೆ, ಕೆಲವೇ ದಿನಗಳಲ್ಲಿ ಒಂದು ಮರಿ(ಕೋತಿ) ಜನಿಸಿತು. ಮುದ್ದಾದ ಮರಿಯೊಂದಿಗೆ ಕಾಲ ಕಳೆಯುತ್ತಿದ್ದ ಈ ಜೋಡಿ ಆಘಾತವೊಂದು ಕಾದಿತ್ತು. ಅದೊಂದು ದಿನ ಕಲ್ಲಿನ ಗುಡ್ಡೆಯ ಮೇಲೆ ಕುಳಿತು ಹಣ್ಣು ತಿನ್ನುತ್ತಿರುವಾಗ ಉರುಳಿದ ಕಲ್ಲೊಂದು ಮರಿಯನ್ನು ಹೊಸಕಿ ಹಾಕಿತು. ಇದಾದ ಕೆಲವು ದಿನಗಳಲ್ಲಿ ಗಂಡು ಕೋತಿಯು ಇಲ್ಲಿನ ಗ್ರಾ.ಪಂ. ಪಕ್ಕದಲ್ಲಿರುವ ಬಿ.ಎಸ್.ಎನ್.ಎಲ್. ಗೋಪುರವನ್ನೇರಿಳಿಯುವಾಗ ಕಾಲು ಜಾರಿ ಆಯತಪ್ಪಿ ಬಿದ್ದು ಸತ್ತು ಹೋಯಿತು. ಹೀಗೆ ಕೆಲವೇ ದಿನಗಳ ಅಂತರದಲ್ಲಿ ತನ್ನವರನ್ನು ಕಳೆದುಕೊಂಡು ತಬ್ಬಲಿಯಾದ ಈ ಕೋತಿಗೆ ಆಗ ಆಸರೆಯಾಗಿದ್ದು ಇಲ್ಲಿನ ಹಂದಿಗಳು! ಅವುಗಳ ಒಡನಾಟದಲ್ಲಿ ತನ್ನೆಲ್ಲ ನೋವುಗಳನ್ನು ಮರೆತು, ಸಹಬಾಳ್ವೆಯಿಂದ ಬದುಕಲು ಆರಂಭಿಸಿತು. ಈಗ ಹಂದಿಗಳನ್ನು ಅರಘಳಿಗೆ ಬಿಟ್ಟು ಇರಲಾರದು. ಹಂದಿಗಳ ಹೇನು ತೆಗೆಯುವುದು, ಬೆನ್ನ ಮೇಲೆ ಕುಳಿತು ತಿರುಗುವುದೇ ಮಂಗನ ದಿನಚರಿ.
ಹಂದಿ-ಮಂಗನ ಈ ಸಹಬಾಳ್ವೆ, ಸ್ನೇಹವೂ ಸಮಾಜಕ್ಕೆ ಮಾದರಿ ಎಂದರೆ ಅತಿಶಯೋಕ್ತಿಯೇನಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT