ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಸ್ರಾರು ಸಂಗ್ರಹಗಳ ಸರದಾರ

Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ನಾನು ಐದನೇ ತರಗತಿ ಓದುತ್ತಿದ್ದಾಗ ನಮ್ಮ ಪಠ್ಯಪುಸ್ತಕದಲ್ಲಿ ಅಂಚೆ ಚೀಟಿ ಸಂಗ್ರಹ ಕುರಿತ ಒಂದು ಪಾಠವಿತ್ತು. ಆ ಪಾಠ ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಅಂದಿನಿಂದ ಅಂಚೆ ಸಂಗ್ರಹವನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡೆ. ಅದು ನನ್ನನ್ನು ಹೊಸ ಅನುಭವದ ಲೋಕಕ್ಕೆ ಸೆಳೆಯಿತು. ವಿಜ್ಞಾನ, ಸಾಹಿತ್ಯ, ಕ್ರೀಡೆ, ಸಿನಿಮಾ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಸ್ತು-ವಿಷಯಗಳ ಸಂಗ್ರಹಣೆ ಮಾಡಲು ನನಗೆ ಸ್ಫೂರ್ತಿ ನೀಡಿತು...'

- ಹೀಗೆ ತಮ್ಮ ಅನುಭವದ ಕುರಿತು ಒಂದೇ ಉಸಿರಿನಲ್ಲಿ ಹೇಳುವ ಬೆಂಗಳೂರಿನ ವಿನೋದ್ ಜೆ. ಪುಠಾಣಿಕರ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದರೂ ಆಸಕ್ತಿಕರ ವಿಷಯಗಳ ಸಂಗ್ರಹಣೆಯನ್ನೇ ಹವ್ಯಾಸವಾಗಿಸಿಕೊಂಡಿರುವ ಅಪರೂಪದ ವ್ಯಕ್ತಿ. ಇವರ ಸಂಗ್ರಹಣಾ ಆಸಕ್ತಿ ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿಲ್ಲ. ಸಾಹಿತಿಗಳು, ಸಿನಿಮಾ ನಟ, ನಟಿಯರು, ಕ್ರೀಡಾ ಲೋಕದ ದಿಗ್ಗಜರಿಂದ ಹಿಡಿದು ಬ್ರಿಟಿಷರ ಕಾಲದ ನಾಣ್ಯಗಳು, ನಾನಾ ದೇಶದ ಕರೆನ್ಸಿಗಳು ಹೀಗೆ ಪಟ್ಟಿ ಬೆಳೆಯುತ್ತದೆ.

ಈ ವಸ್ತುಗಳನ್ನೆಲ್ಲ ಇವರು ಅಂಚೆ ಚೀಟಿ ಸಂಗ್ರಹಕಾರರ ಸಂಘ, ಕನ್ನಡ ನಾಡು ನಾಣ್ಯ ಸಂಗ್ರಹದಿಂದ ಪಡೆದುಕೊಂಡಿದ್ದಾರೆ. ಇನ್ನು ಕೆಲವನ್ನು ಹಳೆ ಕಾಲದ ಮನೆಯ ಮಾಲೀಕರಿಂದಲೇ ಕೇಳಿ ಪಡೆದಿದ್ದಾರೆ. ಇವರ ಸಂಗ್ರಹಣಾ ಆಸಕ್ತಿಯನ್ನು ಕಂಡು ಕೆಲವರು ತಮ್ಮ ಬಳಿಯಿರುವ ಸಂಗ್ರಹವನ್ನು ಮುಕ್ತ ಮನಸ್ಸಿನಿಂದ ದಾನ ನೀಡಿದ್ದಾರೆ.  `ವಿಶೇಷ ಸಂಚಿಕೆ' ಅಥವಾ ಆಸಕ್ತಿಕರ ವಿಷಯಗಳನ್ನು ಒಳಗೊಂಡ ವಿವಿಧ ನಿಯತಕಾಲಿಕೆ ಮತ್ತು ವೃತ್ತಪತ್ರಿಕೆಗಳೂ ಇವರ ಸಂಗ್ರಹದಲ್ಲಿವೆ.

ಸಂಗ್ರಹಗಳ ಸರಮಾಲೆ
ರಾಜ್ಯದ ಸುಮಾರು 410 ಸಾಹಿತಿಗಳ ವ್ಯಕ್ತಿತ್ವ ಪರಿಚಯ, ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯ ಭಾರತದವರೆಗಿನ ನಾಣ್ಯಗಳ ಸಂಗ್ರಹ, ಸಮಗ್ರ ಕರ್ನಾಟಕ ದರ್ಶನದ ವಿವರಗಳು, ರಾಜ್ಯದ ಐತಿಹಾಸಿಕ ದೇವಸ್ಥಾನಗಳು, ಪ್ರವಾಸಿ ಸ್ಥಳಗಳು ಇವರ ಸಂಗ್ರಹದಲ್ಲಿ ಜಾಗ ಪಡೆದಿವೆ. 1984 ರಿಂದ 2012ರವರೆಗೆ ನಡೆದ ಒಲಿಂಪಿಕ್ ಕ್ರೀಡೆಯ ಸಮಗ್ರ ಮಾಹಿತಿಯುಳ್ಳ ಲೇಖನ, ಡಾ.ರಾಜ್‌ಕುಮಾರ್, ವಿಷ್ಣವರ್ಧನ್ ಅವರ ಬಾಲ್ಯದ ನೆನಪುಗಳ ಜತೆಗೆ ಅವರು ಸಿನಿಮಾ ರಂಗದಲ್ಲಿ ಎದುರಿಸಿದ ಸಾಧಕ, ಬಾಧಕಗಳ ಸಮಗ್ರ ಚಿತ್ರಣದ ಸಂಗ್ರಹ, ಹಾಕಿ, ಅಥ್ಲೆಟಿಕ್, ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿರುವ ಆಟಗಾರರ ಚಿತ್ರಗಳೂ ಇವರ ಕಣಜದಲ್ಲಿ ಲಭ್ಯ. ಜನರ ಆಸಕ್ತಿಯನ್ನು ಕೆರಳಿಸುವ ಹೊಸ ಬಗೆಯ ವಾಹನಗಳ ವಿನ್ಯಾಸ, ಬಂಗಾರದ ಚಾಕೊಲೆಟ್ ತಯಾರಿಕೆ, ಅದ್ಭುತವೆನ್ನಿಸುವ ಸಾಧನೆ ಮಾಡಿರುವ ವ್ಯಕ್ತಿಗಳೂ ಸಂಗ್ರಹದ ಪಟ್ಟಿಯಲ್ಲಿದ್ದಾರೆ.

ಪುಠಾಣಿಕರ್ ಅವರಿಗೆ ತಮ್ಮ ಈ ಅಮೂಲ್ಯ ಸಂಗ್ರಹಗಳು ಕೇವಲ ಪೆಟ್ಟಿಗೆಯಲ್ಲಿ ಕೊಳೆಯುವುದು ಇಷ್ಟವಿಲ್ಲ. ಹಾಗಾಗಿ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನ, ವಿಶ್ವಕನ್ನಡ ಸಮ್ಮೇಳನ ಮತ್ತು ವಿಶೇಷ ಸಂದರ್ಭಗಳಲ್ಲಿ ಇವುಗಳನ್ನು ಸ್ವತಃ ಹೊತ್ತೊಯ್ಯುತ್ತಾರೆ. ಅ್ಲ್ಲಲೆಲ್ಲಾ ತಮ್ಮ ಅಮೂಲ್ಯ ಸಂಗ್ರಹವನ್ನು ಪ್ರದರ್ಶಿಸುತ್ತಾರೆ. ಇವರ ಈ ಹವ್ಯಾಸಕ್ಕೆ ಸಾರ್ವಜನಿಕರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

`ಕೆಲಸದ ನಡುವೆ ಮತ್ತು ಬಿಡುವಿನ ವೇಳೆಯಲ್ಲಿ ಇಂತಹ ವಸ್ತು-ವಿಷಯಗಳ ಸಂಗ್ರಹ ಮಾಡುತ್ತೇನೆ. ಮನಸ್ಸು ಸ್ವಲ್ಪ ತಡವರಿಸಿದರೂ ಸಾಕು. ಸಂಗ್ರಹವನ್ನು ಕಣ್ಣ ಮುಂದೆ ಹರಡಿಕೊಂಡು ಕೂರುತ್ತೇನೆ. ಆ ಕ್ಷಣ ನನ್ನ ಮನದ ದುಗುಡವೆಲ್ಲ ಮಾಯವಾಗುತ್ತದೆ. ನಿಜಕ್ಕೂ ಈ ಹವ್ಯಾಸ ನನ್ನ ಬದುಕಿಗೆ ಹೊಸ ಆಯಾಮವನ್ನೇ ನೀಡಿದೆ. ಪ್ರದರ್ಶನದ ವೇಳೆ ಹೊಸ ಜನರ ಪರಿಚಯವಾಗುತ್ತದೆ. ಬಹಳಷ್ಟು ಕಡೆ ಉತ್ತಮ ಸ್ನೇಹಿತರು ದೊರಕಿದ್ದಾರೆ. ಈ ಪ್ರಪಂಚದ ವಿಶಾಲತೆ, ವೈವಿಧ್ಯತೆಯ ಅರಿವು ನೀಡಿದೆ. ಜೊತೆಗೆ ನನ್ನ ಸಾಮಾನ್ಯ ಜ್ಞಾನವನ್ನೂ ಹೆಚ್ಚಿಸಿದೆ' ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. 

`ಮೊದಮೊದಲು ಮನೆಯವರು ನನ್ನ ಈ ಸಂಗ್ರಹದ ಹುಚ್ಚನ್ನು ಕಂಡು ಮೂಗು ಮುರಿಯುತ್ತಿದ್ದರು. ಆದರೆ ನನ್ನೊಳಗೆ ಅಂತರ್ಮುಖಿಯಾಗಿರುವ ಈ ಹುಚ್ಚನ್ನು ಬಿಡಿಸಲಾಗದೆ ಎಲ್ಲರೂ ಈಗ ಪ್ರೋತ್ಸಾಹ ನೀಡುತ್ತಿದ್ದಾರೆ' ಎಂದು ಪುಠಾಣಿಕರ್ ತುಟಿಯಂಚಿನಲ್ಲೇ ನಗೆ ಸೂಸುತ್ತಾರೆ. ಇವರ ಸಂಪರ್ಕ ಸಂಖ್ಯೆ: 94481 72869.

`ಪ್ರಜಾವಾಣಿ' ಪ್ರೇಮಿ
ಇವರ ಸಂಗ್ರಹದಲ್ಲಿ `ಪ್ರಜಾವಾಣಿ' ಹಾಗೂ ಪತ್ರಿಕೆಯ ವಿವಿಧ ಪುರವಣಿಗಳಲ್ಲಿನ ಲೇಖನಗಳಿಗೆ ವಿಶೇಷ ಆದ್ಯತೆ. 1985ರಿಂದ ಇಲ್ಲಿಯವರೆಗೆ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ಲೇಖನಗಳು ಇವರ ಬಳಿಯಿವೆ. `ಕರ್ನಾಟಕ ದರ್ಶನ'ದ ಸಮಗ್ರ ಮಾಲಿಕೆ, `ಸಾಪ್ತಾಹಿಕ ಪುರವಣಿ'ಯ ಕಿರಿಯರಿಗೆ ವಿಜ್ಞಾನ, ವಿವಿಧ ಲೇಖಕರ ಅಂಕಣ, ಹಿಂದೆ ಪ್ರಕಟವಾಗುತ್ತಿದ್ದ ದೊಡ್ಡವರ ಕಥೆಯ ಎಲ್ಲಾ ಲೇಖನಗಳೂ ಇವರಲ್ಲಿವೆ. ಪ್ರಜಾವಾಣಿಯಲ್ಲಿ ಈ ಹಿಂದೆ ಪ್ರಕಟವಾಗುತ್ತಿದ್ದ `ಪೊಲೀಸ್ ಕಂಡ ಕಥೆಗಳು' ಮತ್ತು ಸುಧಾದಲ್ಲಿ ಬರುತ್ತಿರುವ ಅಂಕಣಗಳೂ ಸೇರಿದಂತೆ ಸಂಪಾದಕೀಯದಲ್ಲಿ ಬರುವ ಲೇಖನಗಳ ಬೃಹತ್ ಸಂಗ್ರಹವೇ ಇವರ ಮಾಹಿತಿ ಕಣಜದಲ್ಲಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT