ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾರಾ ಬೇಡಿಕೆ ಒಪ್ಪದ ಬಿಸಿಸಿಐ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಪಿಎಲ್ ಐದನೇ ಅವತರಣಿಕೆಯಲ್ಲಿ ವಿದೇಶದ ಆರು ಮಂದಿ ಆಟಗಾರರನ್ನು ಆಡಿಸಲು ಅವಕಾಶ ನೀಡುವಂತೆ ಸಹಾರಾ ಸಮೂಹ ಮುಂದಿಟ್ಟಿದ್ದ ಬೇಡಿಕೆಯನ್ನು ಬಿಸಿಸಿಐ ಕಾರ್ಯಕಾರಿ ಸಮಿತಿ ತಿರಸ್ಕರಿಸಿದೆ.

`ಸಹಾರಾ ಮುಂದಿಟ್ಟಿರುವ ಬೇಡಿಕೆಗಳನ್ನು ಮಂಡಳಿಯ ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪಿಸಿದರು. ಐಪಿಎಲ್ ಐದನೇ ಅವತರಣಿಕೆಯಲ್ಲಿ ವಿದೇಶದ ಆರು ಮಂದಿ ಆಟಗಾರರನ್ನು ಕಣಕ್ಕಿಳಿಸಲು ಅವಕಾಶ ನೀಡುವ ಬೇಡಿಕೆಯೂ ಒಂದು. ಆದರೆ ಇದಕ್ಕೆ ಇಡೀ ಕಾರ್ಯಕಾರಿ ಸಮಿತಿ ವಿರೋಧ ವ್ಯಕ್ತಪಡಿಸಿತು. ಹಾಗಾಗಿ ಅದನ್ನು ಸಭೆಯಲ್ಲಿ ತಿರಸ್ಕರಿಸಲಾಯಿತು~ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅನಾರೋಗ್ಯಕ್ಕೆ ಒಳಗಾಗಿರುವ ಯುವರಾಜ್ ಸಿಂಗ್ ಅಲಭ್ಯರಾಗಿರುವ ಕಾರಣ ಸಹಾರಾ ಪುಣೆ ವಾರಿಯರ್ಸ್ ತಂಡ ಈ ಮನವಿ ಮಾಡಿತ್ತು. ಆದರೆ ಯುವಿ ಬದಲಿಗೆ ಬೇರೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ. ಸಹಾರಾ ಬೇಡಿಕೆಗಳ ಬಗ್ಗೆ ಕಾರ್ಯಕಾರಿ ಸಮಿತಿ ಮೂರು ಗಂಟೆ ಸಮಾಲೋಚನೆ ನಡೆಸಿತು ಎನ್ನಲಾಗಿದೆ.

`ಈ ಬೇಡಿಕೆಯೇ ನಿಯಮ ಬಾಹಿರ. ಸಹಾರಾಕ್ಕೆ ಈ ಅವಕಾಶ ನೀಡಿದರೆ ಉಳಿದ ಫ್ರಾಂಚೈಸಿಗಳು ಕೂಡ ಬೇಡಿಕೆ ಮುಂದಿಡುವ ಸಾಧ್ಯತೆ ಇದೆ. ಹಾಗಾಗಿ ನಿಯಮಗಳನ್ನು ತಿರುಚಲು ಸಾಧ್ಯವಿಲ್ಲ~ ಎಂದು ಮೂಲಗಳು ಸ್ಪಷ್ಟಪಡಿಸಿವೆ.

`ಹಾಗೇ, ಕಳೆದ ಐಪಿಎಲ್‌ನಲ್ಲಿ ಪಂದ್ಯಗಳನ್ನು 94ರಿಂದ 74ಕ್ಕೆ ಇಳಿಸಿದ ಕಾರಣ ಬ್ಯಾಂಕ್ ಖಾತರಿ ಹಣದಲ್ಲಿ ಕಡಿತಗೊಳಿಸುವಂತೆ ಕೋರಿದ್ದರು. ಆದರೆ ಇದು ಒಪ್ಪಲಾಗದ ಬೇಡಿಕೆ~ ಎಂದು ಬಿಸಿಸಿಐ ತಿಳಿಸಿದೆ.

ಆದರೆ ಇನ್ನುಳಿದ ಎರಡು ಬೇಡಿಕೆಗಳಿಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ. `ಯುವಿ ಬದಲಿಗೆ ಬೇರೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಲು ಅನುಮತಿ ಇದೆ. ಈ ಬಗ್ಗೆ ಅಧ್ಯಕ್ಷರೂ ಒಪ್ಪಿಗೆ ನೀಡಿದ್ದಾರೆ. ಇನ್ನೊಂದು ಬೇಡಿಕೆ ಎಂದರೆ ನೀತಿ ನಿರೂಪಕ ಪಾಲುದಾರರನ್ನು ಹೊಂದುವುದು. ಇದಕ್ಕೂ ಒಪ್ಪಿಗೆ ನೀಡಲಾಗಿದೆ~ ಎಂದು ಅದು ಸ್ಪಷ್ಟಪಡಿಸಿದೆ.

ಬಿಸಿಸಿಐ ತೆಗೆದುಕೊಂಡ ನಿರ್ಧಾರಗಳನ್ನು ಮಂಡಳಿಯ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ಸಹಾರಾಗೆ ರವಾನಿಸಿದ್ದಾರೆ. `ಬಿಸಿಸಿಐ ನಿಯಮಗಳಡಿ ಸಹಾರಾ ಬೇಡಿಕೆಗಳಿಗೆ ಸ್ಪಂದಿಸಿದ್ದೇವೆ. ಆದರೆ ಅವರಿಗಾಗಿಯೇ ಪ್ರತ್ಯೇಕ ನಿಯಮ ರೂಪಿಸಲು ಸಾಧ್ಯವಿಲ್ಲ~ ಎಂದು ಅವರು ನುಡಿದಿದ್ದಾರೆ.

ಭಾರತ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಸಹಾರಾ ಪ್ರತಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಪಂದ್ಯಕ್ಕೆ ತಲಾ 3.34 ಕೋಟಿ ರೂ. ನೀಡುತಿತ್ತು. ಹಾಗೇ, ಪುಣೆ ಸಹಾರಾ ವಾರಿಯರ್ಸ್ ತಂಡವನ್ನು 1702 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆದರೆ ತಮ್ಮ ಬೇಡಿಕೆಗಳಿಗೆ ಬಿಸಿಸಿಐ ಸ್ಪಂದಿಸದ ಕಾರಣ ಎಲ್ಲಾ ಒಪ್ಪಂದಗಳನ್ನು ರದ್ದು ಮಾಡಿದೆ.

ಆದರೆ ಭಾನುವಾರ ನಡೆದ ಸಭೆಯಲ್ಲಿ ವಿಷಯಗಳು ಬಿಸಿಸಿಐ ಮೂಲಕ ಮಾಧ್ಯಮಗಳಿಗೆ ಸೋರಿಕೆಯಾಗಿವೆ ಎಂದು ಸಹಾರಾ ಆರೋಪಿಸಿದೆ.

`ನಿಯಮವನ್ನು ಉಲ್ಲೇಖಿಸಿ ವಾದ ಮಾಡುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವೆಲ್ಲಾ ಬಿಸಿಸಿಐ ರೂಪಿಸಿರುವ ನಿಯಮಗಳು. ಇವು ಭಾರತ ಸರ್ಕಾರ ರೂಪಿಸಿರುವ ನಿಯಮಗಳಲ್ಲ~ ಎಂದು ಸಹಾರಾ ಸಮೂಹ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

`ಯುವರಾಜ್‌ಗೆ ಸರಿಸಮಾನರಾಗಿ ನಿಲ್ಲುವ ಆಟಗಾರರು ಈಗ ಭಾರತದಲ್ಲಿ ಇಲ್ಲ. ಇದ್ದವರು ಹರಾಜಿನಲ್ಲಿ ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಹಾಗಾಗಿ ಕಣಕ್ಕಿಳಿಯುವ ಹನ್ನೊಂದರ ಬಳಗದಲ್ಲಿ ಒಬ್ಬ ವಿದೇಶಿ ಆಟಗಾರರನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲು ಬೇಡಿಕೆ ಇಟ್ಟಿದ್ದೆವು. ಆದರೂ ಯುವಿ ಅವರ ಸ್ಥಾನ ತುಂಬಲು ಕಷ್ಟ~ ಎಂದು ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಐಪಿಎಲ್ ಸಂಬಂಧ ಈಗ ಉದ್ಭವಿಸಿರುವ ಬಿಕ್ಕಟ್ಟು ಬಗೆ ಹರಿದಲ್ಲಿ ಮಾತ್ರ ಭಾರತ ಕ್ರಿಕೆಟ್ ತಂಡದ ಪಾಯೋಜಕತ್ವದ ಬಗ್ಗೆ ಚರ್ಚೆ ಮುಂದುವರಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

`ನಾವೀಗಾಗಲೇ ಭಾರತ ತಂಡಕ್ಕೆ ಹೊಸ ಪ್ರಾಯೋಜಕರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಹೆಚ್ಚಿನವರು ಆಸಕ್ತಿ ವಹಿಸಿದ್ದಾರೆ. ಆದರೆ ಈಗ ನಾವು ನೀಡುತ್ತಿರುವ ಪ್ರಾಯೋಜಕತ್ವಕ್ಕಿಂತ 50-60ಕ್ಕಿಂತ ಹೆಚ್ಚು ಹಣ ನೀಡಲು ಯಾರೂ ಮುಂದೆ ಬರುತ್ತಿಲ್ಲ~ ಎಂದು ನುಡಿದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT