ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದ್ಯೋಗಿಗಳ ನೋಂದಣಿಗಾಗಿ ಅರುಣನ ಹರಸಾಹಸ

ಪ್ರವಾಸದಲ್ಲಿ ಕಂಡದ್ದು, ಕೇಳಿದ್ದು...
Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ಉತ್ತರ:  ರಾಜಧಾನಿಯಲ್ಲೇ ಹುಟ್ಟಿ ಬೆಳೆದ ಅರುಣ ಈಗ ಬ್ರಿಟನ್ ಮೂಲದ ಎಂಎನ್‌ಸಿಯಲ್ಲಿ ಟೆಲಿಕಾಂ ಸಾಫ್ಟ್ ವೇರ್ ಎಂಜಿನಿಯರ್. ಈ ಸಲದ ಚುನಾವಣೆ ಬಗ್ಗೆ ಅವರಿಗೆ ತೀವ್ರ ಕುತೂಹಲ. ಬಿಜೆಪಿಯು ತೆಂಗಿನಕಾಯಿಯಂತೆ ಒಡೆದು ಹೋಳಾಗಿ, ಅದರಿಂದ ಮತ್ತೊಂದು ಪಕ್ಷ ಅವತರಿಸಿ ಕಣಕ್ಕಿಳಿದಿರುವುದು ರಾಜ್ಯ ರಾಜಕೀಯ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರುತ್ತದೋ ನೋಡಬೇಕು ಎಂದುಕೊಂಡು ದಿನಗಳನ್ನು ಎಣಿಸುತ್ತಿದ್ದಾರೆ.

ಓದುವ ಕಾಲದಲ್ಲೆಲ್ಲಾ ರಾಜಕೀಯದ ಬಗ್ಗೆ ಸಿನಿಕತೆಯನ್ನೇ ಆವಾಹಿಸಿಕೊಂಡಿದ್ದ ಅವರಿಗೆ ಮೂರ‌್ನಾಲ್ಕು ವರ್ಷಗಳ ಹಿಂದೆ `ಜ್ಞಾನೋದಯ'ವಾಯಿತು; ಒಂದು ವ್ಯವಸ್ಥೆಯಲ್ಲಿ ರಾಜಕಾರಣದ ಮಹತ್ವ ಎಷ್ಟೆಂಬುದು ಮನದಟ್ಟಾಯಿತು. ಆಗಿನಿಂದ ಈಚೆಗೆ ರಾಜೀಯ ಪ್ರಜ್ಞಾವಂತನಾಗುವ ಹಾದಿಯಲ್ಲಿ ಹೆಜ್ಜೆ ಇಡುತ್ತಾ ಸಾಗಿದ್ದಾರೆ.

ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಅರುಣ ಮೂಲತಃ ಯಶವಂತಪುರದವರು. ತನ್ನ ಕ್ಷೇತ್ರದಲ್ಲಿ ಯಾರ ಅಲೆ ಇದೆ, ಪಕ್ಕದ ಕ್ಷೇತ್ರಗಳಲ್ಲಿ ಯಾವ ಪಕ್ಷದ ಗಾಳಿ ಬೀಸುತ್ತಿದೆ ಎನ್ನುವುದು ಅವರಿಗೆ ಗೊತ್ತು. ಯಾವ ಪಕ್ಷದ ಅಭ್ಯರ್ಥಿ ಪುಕ್ಕಟೆ ಸಿನಿಮಾಗಳನ್ನು ತೋರಿಸಿದರು, ಯಾವ ಸ್ಪರ್ಧಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಗಾಗ್ಗೆ ನಡೆಸುತ್ತಲೇ ಇರುತ್ತಾರೆ ಎಂಬುದನ್ನೆಲ್ಲಾ ಅರಿತಿದ್ದಾರೆ.

ಆದರೆ, ಇದೇ ಮಾತನ್ನು ಅವರ ಸಹೋದ್ಯೋಗಿಗಳ ವಿಷಯದಲ್ಲಿ ಹೇಳುವಂತಿಲ್ಲ. ಸುಮಾರು 350 ಸಿಬ್ಬಂದಿಯಿರುವ ಅವರ ಕಂಪೆನಿಯಲ್ಲಿ ಕನ್ನಡ ಮೂಲದವರ ಸಂಖ್ಯೆ ಶೇ 20ಕ್ಕಿಂತಲೂ ಕಡಿಮೆ. ಉತ್ತರ ಭಾರತದವರೇ ಹೆಚ್ಚು. ತಮ್ಮನ್ನು ಈಗ ಪೊರೆಯುತ್ತಿರುವ ಊರು- ಬೆಂಗಳೂರು, ರಾಜ್ಯ- ಕರ್ನಾಟಕವಾದರೂ, ಅವರೆಲ್ಲಾ ಇಲ್ಲಿನ ರಾಜಕಾರಣಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ.

ಇದೆಲ್ಲಾ ಗೊತ್ತಿದ್ದೂ ಉತ್ತರ ಭಾರತದ ಸಹೋದ್ಯೋಗಿಗಳಲ್ಲಿ ರಾಜಕೀಯ ಆಸಕ್ತಿ ಮೂಡಿಸಬೇಕು, ಕನಿಷ್ಠ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಬರಬೇಕು ಎಂಬ ಹಟ ಅರುಣ ಅವರದು. ಇದಕ್ಕಾಗಿ, ಸಮಯ ಸಿಕ್ಕಾಗಲೆಲ್ಲಾ ಅವರನ್ನು ರಾಜಕೀಯದ ಮಾತಿಗೆ ಎಳೆಯಲು ಯತ್ನಿಸುತ್ತಾರೆ. ಆದರೆ ಇವರು ರಾಜಕಾರಣದ ಕುರಿತು ಮಾತು ಶುರು ಮಾಡುತ್ತಿದ್ದಂತೆಯೇ ಅವರು, `ನೋಡಪ್ಪಾ, ರಾಜಕೀಯದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಅದರಲ್ಲಿ ನಮಗೆ ಆಸಕ್ತಿಯೂ ಇಲ್ಲ. ಆದರೂ ನೀನು ಬಿಡುತ್ತಿಲ್ಲ. ಹೋಗಲಿ, ಇಲ್ಲಿ ಯಾವ್ಯಾವ ಪಕ್ಷಗಳು ಇವೆ ಅನ್ನೋದನ್ನ ಮೊದಲು ತಿಳಿಸು' ಎನ್ನುತ್ತಾರೆ (ಹಿಂದಿಯಲ್ಲಿ).

ಇವರಿಗೆ, ಇಲ್ಲಿ ಯಾವ್ಯಾವ ಪಕ್ಷಗಳು ಇವೆ ಎಂಬುದೂ ಗೊತ್ತಿಲ್ಲ, ಅದನ್ನು ತಿಳಿದುಕೊಳ್ಳುವುದೂ ಬೇಕಾಗಿಲ್ಲವಲ್ಲ ಎಂಬ ಆಶ್ಚರ್ಯ- ಕಳವಳ ಅರುಣನಿಗೆ. `ಇದರ ನಡುವೆಯೂ ತುಂಬಾ ದಿನಗಳಿಂದ ಹೇಳಿ ಹೇಳಿ ನಾಲ್ಕು ಜನರನ್ನು ನೋಂದಣಿ ಮಾಡಿಸಿದ್ದೇನೆ' ಎಂದು ಅರುಣ ಹೇಳುವಾಗ, ಅವರು ಇದಕ್ಕಾಗಿ ಎಷ್ಟು ಕಷ್ಟಪಟ್ಟಿರಬಹುದು ಎನ್ನುವುದು ಯಾರಿಗಾದರೂ ಗೊತ್ತಾಗುತ್ತದೆ.

ಈಗಿರುವ ಕಂಪೆನಿ ಸೇರುವುದಕ್ಕೆ ಮುಂಚೆ ಅರುಣ ಇನ್ಫೋಸಿಸ್ ಕಂಪೆನಿಯಲ್ಲಿ ಏಳೆಂಟು ವರ್ಷ ಕೆಲಸ ಮಾಡಿದ್ದರು. ಈಗಿನ ಕಂಪೆನಿಗೂ ಆ ಕಂಪೆನಿಗೂ `ರಾಜಕೀಯ ಸ್ಪಂದನ'ದ ವಿಷಯದಲ್ಲಿ ಇರುವ ದೊಡ್ಡ ವ್ಯತ್ಯಾಸ ಏನೆಂಬುದನ್ನೂ ಅವರು ಹೇಳುತ್ತಾರೆ- `ಆ ಕಂಪೆನಿಯಲ್ಲಿ ಸಿಬ್ಬಂದಿಯನ್ನು ಮತದಾನದ ಬಗ್ಗೆ ಪ್ರೇರೇಪಿಸಲು ಒಂದು ಪ್ರತ್ಯೇಕ ತಂಡವೇ ಕೆಲಸ ಮಾಡುತ್ತದೆ. ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಲು ಆ ತಂಡ ಸಹಾಯ ಮಾಡುತ್ತದೆ.

ಅಲ್ಲದೇ, ಆ ತಂಡದವರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು  ತಾಕೀತನ್ನೂ ಮಾಡುತ್ತಾರೆ. ಆದರೆ, ಇಲ್ಲಿ ಅಂತಹ ಯಾವ ವ್ಯವಸ್ಥೆಯೂ ಇಲ್ಲ' ಎನ್ನುತ್ತಾರೆ. ಜತೆಗೆ, ಅಲ್ಲಿನ ಸಿಬ್ಬಂದಿ ಕೂಡ ಇಲ್ಲಿಗೆ ಹೋಲಿಸಿದರೆ ರಾಜಕೀಯದ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿದ್ದರು ಎಂಬುದನ್ನೂ ತಿಳಿಸುತ್ತಾರೆ.

ಹೀಗೆ, ಟೆಕ್ಕಿಗಳೂ ಸೇರಿದಂತೆ ನಗರದ ಬಹುಪಾಲು ಯುವ ಜನತೆಯಲ್ಲಿ ಚುನಾವಣೆ ಬಗ್ಗೆ ನಿರಾಸಕ್ತಿ; ಇದರ ನಡುವೆಯೂ ಅಲ್ಲೊಬ್ಬ ಇಲ್ಲೊಬ್ಬರಿಗೆ ಅರುಣನಂತೆ ಉತ್ಸಾಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT