ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕೇತಿಕ ಕ್ರಮ ವ್ಯರ್ಥ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರ ಘೋಷಿಸುವ ಕ್ರಮಗಳೆಲ್ಲವೂ  ಪ್ರಹಸನವಾಗಿಬಿಟ್ಟಿವೆ. ಹಣಕಾಸು ಬಿಕ್ಕಟ್ಟು ಎದುರಾದಾಗಲೆಲ್ಲಾ ಸರ್ಕಾರ ವೆಚ್ಚಕಡಿತದ ಹಲವು  ಕ್ರಮಗಳನ್ನು ಘೋಷಿಸುವುದು ಒಂದು ಸಂಪ್ರದಾಯವೇ ಆಗಿದೆ.

ಕೇಂದ್ರ ಹಣಕಾಸು ಸಚಿವಾಲಯ, ಯೋಜನೇತರ ವೆಚ್ಚವನ್ನು ಶೇಕಡಾ 10ರಷ್ಟು ಕಡಿಮೆ ಮಾಡುವ ಉದ್ದೇಶದಿಂದ ಕೆಲವು ಕ್ರಮಗಳನ್ನು ಘೋಷಿಸಿದೆ. ಇದರಲ್ಲಿ ಪಂಚತಾರಾ ಹೋಟೆಲುಗಳಲ್ಲಿ ಸಭೆ ನಿಷೇಧ, ಅಧಿಕಾರಿಗಳ ವಿದೇಶ ಪ್ರವಾಸ ಮೊಟಕು, ಹೊಸ ಹುದ್ದೆಗಳ ಸೃಷ್ಟಿಗೆ ತಡೆ ಮುಂತಾದ ಕ್ರಮಗಳಿವೆ. ಅಂದರೆ ಇಲ್ಲಿಯತನಕ ಅನಗತ್ಯವಾಗಿ ಪಂಚತಾರಾ ಹೋಟೆಲುಗಳಲ್ಲಿ ಸಭೆ ನಡೆಸ­ಲಾಗುತ್ತಿತ್ತು, ಅಧಿಕಾರಿಗಳು ಅನಗತ್ಯ ವಿದೇಶ ಪ್ರವಾಸ ಮಾಡುತ್ತಿದ್ದರು, ಅಗತ್ಯವಿಲ್ಲದೆಯೇ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿತ್ತು ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಸರ್ಕಾರ ಈಗ ಘೋಷಿಸಿರುವ ಕ್ರಮಗಳಿಂದ ಪಂಚತಾರಾ ಹೋಟೆಲುಗಳಲ್ಲಿ ಸಭೆ ನಡೆಯದೇ ಇರಬಹುದು. ಸರ್ಕಾರಿ ಕಚೇರಿಯಲ್ಲೇ ನಡೆಯುವ ಸಭೆಗೆ ಪಂಚತಾರಾ ಹೋಟೆಲುಗಳಿಂದಲೇ ಉಪಾಹಾರ ಪೂರೈಕೆಯಾಗುವುದಿಲ್ಲ ಎಂಬುದಕ್ಕೆ ಯಾವ ಖಾತರಿ ಇದೆ? ಸರ್ಕಾರ ಘೋಷಿಸುವ ಇಂಥ ಆಚರಣಾತ್ಮಕ ಕ್ರಮಗಳಿಂದ ಕಷ್ಟ ಅನುಭವಿಸುವುದು ಸಾಮಾನ್ಯ ಜನರು.

ಜನರೊಂದಿಗೆ ವ್ಯವಹರಿಸುವ ಇಲಾಖೆಗಳಲ್ಲಿ ಈಗಾಗಲೇ ಇರುವ ನೌಕರರ ಕೊರತೆ ಮತ್ತಷ್ಟು ಕಾಲ ಮುಂದುವರಿಯುತ್ತದೆ. ಈಗಾಗಲೇ ಆಗಿರುವ ಅನಗತ್ಯ ನೇಮಕಾತಿಗಳು ಹಾಗೆಯೇ ಉಳಿಯುತ್ತವೆ. ಸಚಿವರು ವಿಮಾನದಲ್ಲಿ ತಮ್ಮ ಕ್ಷೇತ್ರಕ್ಕೂ ದೆಹಲಿಗೂ ಪ್ರತಿನಿತ್ಯ ಓಡಾಡಿ ಆಡಳಿತ ನಡೆಸುತ್ತಲೇ ಇರುತ್ತಾರೆ. ಅಧಿಕಾರಿಗಳು, ಇಲ್ಲದ ತುರ್ತು ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುವಷ್ಟು ಜಾಣರಾಗಿರುವುದರಿಂದ ಅವರ ವಿದೇಶ ಪ್ರವಾಸಗಳಿಗೆ ಅಂಥ ಅಡ್ಡಿಯೇನೂ ಎದುರಾಗದು.

ಎಲ್ಲದಕ್ಕಿಂತ ಮುಖ್ಯವಾಗಿ ವೆಚ್ಚಕಡಿತ ಎಂಬುದು ಹಣಕಾಸು ಬಿಕ್ಕಟ್ಟು ಕಾಲದಲ್ಲಷ್ಟೇ ಕೇಳಿಸುವ ಮಂತ್ರವಾಗಿರಬಾರದು. 1991ರಿಂದ ಈಚೆಗೆ ಬಂದಿರುವ ಎಲ್ಲಾ ವೇತನ ಆಯೋಗಗಳು ಮತ್ತು ಆಡಳಿತ ಸುಧಾರಣಾ ಆಯೋಗಗಳು ಈ ಸಂಬಂಧ ಹಲವು ಸಲಹೆಗಳನ್ನು ನೀಡಿವೆ. ಬಹುಮುಖ್ಯವಾದುದು ಇಲಾಖೆಗಳ ಸಂಖ್ಯೆಗೆ ಮಿತಿ ಹೇರುವುದು. ಕೆಲವು ಅಧಿಕಾರಿಗಳಿಗೆ ಬಡ್ತಿ ನೀಡುವುದಕ್ಕಾಗಿ ಅಥವಾ ಯಾವುದೋ ಸಚಿವರನ್ನು ಓಲೈಸುವುದಕ್ಕಾಗಿ ಇಲಾಖೆಗಳನ್ನು ವಿಸ್ತರಿಸುವ ಮತ್ತು ಹುದ್ದೆಗಳನ್ನು ಸೃಷ್ಟಿಸುವ ಕ್ರಿಯೆಗೆ ಶಾಶ್ವತವಾಗಿ ತಡೆಯೊಡ್ಡಬೇಕು.

ಮಂತ್ರಿಗಳಿಗೆ ನೀಡುವ ಭದ್ರತೆ ಎಂಬುದು ಅಗತ್ಯವನ್ನು ಅನುಸರಿಸಿ ನಿರ್ಧಾರವಾಗಬೇಕೇ ಹೊರತು ಅವರ ಹುದ್ದೆಯನ್ನು ಅನುಸರಿಸಿಯಲ್ಲ. ಮಂತ್ರಿಯ ದರ್ಜೆಗೆ ಅನುಗುಣವಾಗಿ ಒದಗಿಸಲಾಗುವ ಬೆಂಗಾವಲು ವಾಹನಗಳ ಇಂಧನ ವೆಚ್ಚವೇ ಹಲವು ಕೋಟಿ ರೂಪಾಯಿಗಳಷ್ಟಿದೆ. ಇದರ ಜೊತೆಗೆ ಈ ವಾಹನಗಳಲ್ಲಿ ತೆರಳುವ ಭದ್ರತಾ ಸಿಬ್ಬಂದಿ, ಅಧಿಕಾರಿಗಳ ಸಂಖ್ಯೆ ಎಲ್ಲವನ್ನೂ ಕೂಡಿಸಿದರೆ ಪ್ರತೀ ವರ್ಷ ಶಿಷ್ಟಾಚಾರದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗುತ್ತಿದೆ.

  ಈಗಾಗಲೇ ನಮ್ಮ ರಾಜಸ್ವ ಆದಾಯದ ಬಹುಪಾಲು, ಸಂಬಳ ಮತ್ತು ಪಿಂಚಣಿಯಂಥ ಯೋಜನೇತರ ವೆಚ್ಚವನ್ನು ಭರಿಸುವುದರಲ್ಲೇ ಮುಗಿಯು­ತ್ತದೆ.  ಪರಿಣಾಮವಾಗಿ ಯೋಜನಾ ವೆಚ್ಚಕ್ಕೆ ಬೇಕಾದ ಸಂಪನ್ಮೂಲ­ವನ್ನು ಸಾಲ ಮತ್ತಿತರ ಮೂಲಗಳ ಮೂಲಕ ಭರಿಸಬೇಕಾಗುತ್ತದೆ. ಒಂದು ಬಗೆಯಲ್ಲಿ ಸರ್ಕಾರ ಕೊರತೆಯ ವಿಷವರ್ತುಲದೊಳಗೆ ಸಿಕ್ಕಿಬೀಳುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಂಕೇತಿಕ ಕಡಿತಗಳಂಥ ಆಚರಣಾತ್ಮಕ ಕ್ರಮಗಳಿಗೆ ಸೀಮಿತವಾಗಬಾರದು. ಅಂತಹ ಇಚ್ಛಾಶಕ್ತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT