ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗ ತಡೆಯುವಲ್ಲಿ ಕಳಪೆ ಸಾಧನೆ: ಡಿಸಿ ಕಳವಳ

Last Updated 16 ಜನವರಿ 2012, 5:40 IST
ಅಕ್ಷರ ಗಾತ್ರ

ವಿಜಾಪುರ: ಸಾಂಕ್ರಾಮಿಕ ರೋಗ ತಡೆ, ಎಚ್‌ಐವಿ ರಕ್ತ ಪರೀಕ್ಷೆ ಸೇರಿದಂತೆ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅತ್ಯಂತ ಕಳಪೆ ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಸಾಂಕ್ರಾಮಿಕ ರೋಗ ಹಾಗೂ ಹೆಚ್.ಐ.ವಿ., ಟಿಬಿ, ಹಾಗೂ ಎನ್‌ಆರ್‌ಎಚ್‌ಎಂ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುದ್ದೇಬಿಹಾಳ ಮತ್ತು ಇಂಡಿ ತಾಲ್ಲೂಕುಗಳಲ್ಲಂತೂ ಸಾಧನೆ ಅತ್ಯಂತ ಕಡಿಮೆಯಾಗಿದೆ. ಒಂದು ತಿಂಗಳೊಳಗಾಗಿ ಸುಧಾರಣೆಯಾಗಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಎನ್‌ಆರ್‌ಎಚ್‌ಎಂ ಯೋಜನೆಯಡಿ ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರು ಹಾಗೂ ಆರೋಗ್ಯ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಸೂಚಿಸಿದರು.

ಉಣ್ಣೆ ಜ್ವರ ನಿಯಂತ್ರಣಕ್ಕಾಗಿ ಜಾನುವಾರುಗಳ ಉಣ್ಣೆಯ ನಿರ್ಮೂಲನೆಗೆ ಪಶು ಇಲಾಖೆ ವತಿಯಿಂದ ಸಾಮೂಹಿಕವಾಗಿ ಮಾತ್ರೆ ಹಾಗೂ ಸಿಂಪರಣೆಗಳನ್ನು ವಿತರಿಸಬೇಕು. ಮಕ್ಕಳನ್ನು ಜಾನುವಾರುಗಳಿಂದ ದೂರ  ಇಡುವಂತೆ ನೋಡಿಕೊಳ್ಳಲು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಚಿಕೂನ ಗುನ್ಯಾ, ಮಲೇರಿಯಾ, ಡೆಂಗೆ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಕಾಲಕಾಲಕ್ಕೆ ಸಿಂಪರಣೆ, ಚರಂಡಿಗಳ ಸ್ವಚ್ಛತೆಗೆ ಆರೋಗ್ಯಾಧಿಕಾರಿಗಳು ಕ್ರಮ ವಹಿಸಬೇಕು. ನಗರಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ವಹಿಸಬೇಕು. ಕುಡಿಯುವ ನೀರಿನ ಮಾದರಿಯನ್ನು ಪರೀಕ್ಷೆ ಮಾಡಿಸಬೇಕು ಎಂದು ಸೂಚಿಸಿದರು.

ಎಚ್.ಐ.ವಿ. ಬಾಧಿತ ಕುಟುಂಬಗಳ ನೆರವಿಗಾಗಿ ವಸತಿ ಸೌಕರ್ಯ, ಪಡಿತರ ಚೀಟಿಯನ್ನು ಆದ್ಯತೆಯ ಮೇರೆಗೆ ಕಲ್ಪಿಸಬೇಕು. ಎಚ್‌ಐವಿಯಿಂದ ನರಳುತ್ತಿರುವ ಕುಟುಂಬದ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿರುವ ಅನುದಾನವನ್ನು ಬಳಸಿಕೊಳ್ಳಬೇಕು. ಆ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಘಟನೆಗಳಿಗೆ ಸಾಧ್ಯವಾದಷ್ಟು ನೆರವನ್ನು ಕಲ್ಪಿಸಬೇಕು ಎಂದರು.

ಜಿಲ್ಲೆಯಲ್ಲಿ ಎಚ್.ಐ.ವಿ. ಸೋಂಕು ಇಳಿಮುಖವಾಗುತ್ತಿದ್ದು, ಲೈಂಗಿಕ ಕಾರ್ಯಕರ್ತೆಯರು ಸೇರಿದಂತೆ ಹಲವರಲ್ಲಿ ಜಾಗೃತಿ ಮೂಡಿದೆ. ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಆದರೆ, ಮುಖ್ಯ ವಾಹಿನಿಯಲ್ಲಿರುವ ಜನರಲ್ಲಿ ಈ ಬಗ್ಗೆ ಅರಿವಿನ ಕೊರತೆ ಇಲ್ಲದಾಗಿದೆ. ಇದರಿಂದ ಮೇಲ್ವರ್ಗದಲ್ಲಿ ಎಚ್.ಐ.ವಿ. ಬಾಧಿತರು ಕಂಡು ಬರುತ್ತಿದ್ದು, ಜನವರಿ 30ರಿಂದ ಫೆಬ್ರುಬರಿ 4ರ ವರೆಗೆ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ರಮ  ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎ.ಎನ್. ಪಾಟೀಲ, ಜಿ.ಪಂ. ಉಪಕಾರ್ಯದರ್ಶಿ ಅಮರೇಶ ನಾಯಕ, ಪೌರಾಯುಕ್ತ ರಾಜಶೇಖರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಆರ್.ಎಂ. ಸಜ್ಜನ, ಡಾ. ಬೆಳ್ಳುಬ್ಬಿ, ಡಾ. ಲಕ್ಕಣ್ಣ, ಡಾ. ಮಸಳಿ, ಡಾ. ಬಿರಾದಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿ.ಪಿ. ವಸಂತಪ್ರೇಮ, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳಾದ ರವಿ ಕಿತ್ತೂರ, ಸುನಂದಾ ತೋಳಬಂದಿ, ವಿಜಯಕುಮಾರ  ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT