ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಘಿಕ ಪ್ರಯತ್ನ ಗೆಲುವಿಗೆ ಕಾರಣ: ಎಂ.ಎಸ್.ದೋನಿ

Last Updated 6 ಜನವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ: `ಈ ಗೆಲುವಿಗೆ ಯಾವುದೇ ಒಬ್ಬ ಆಟಗಾರ ಕಾರಣರಲ್ಲ. ಸಾಂಘಿಕ ಪ್ರಯತ್ನ ನೆರವಾಯಿತು. ಬೌಲಿಂಗ್ ಜತೆ ನಮ್ಮ ಕ್ಷೇತ್ರರಕ್ಷಣೆ         ಅಮೋಘವಾಗಿತ್ತು. ಅಲ್ಪಮೊತ್ತದ ಪಂದ್ಯಗಳಲ್ಲಿ 20-25 ರನ್‌ಗಳನ್ನು ಉಳಿಸಿದ್ದರೂ ಅದು ಮಹತ್ವದ್ದಾಗುತ್ತದೆ' ಎಂದು ಭಾರತ ತಂಡದ ನಾಯಕ ಎಂ.ಎಸ್.ದೋನಿ ಪ್ರತಿಕ್ರಿಯಿಸಿದರು.

ಭಾನುವಾರ ಫಿರೋಜ್ ಷಾ ಕೋಟ್ಲದಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಸಮಾಧಾನಕರ ಗೆಲುವಿನ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಂಡದ ವೇಗದ ಬೌಲರ್‌ಗಳ ಪ್ರಯತ್ನಕ್ಕೆ ಕ್ಷೇತ್ರರಕ್ಷಕರು ಸೂಕ್ತವಾಗಿ ಸ್ಪಂದಿಸಿದರು ಎಂದು ಹೇಳಿದರು.

`ನಮ್ಮ ಬ್ಯಾಟ್ಸ್‌ಮನ್ನರು ವಿಫಲರಾದ ಮೇಲೆ ನಾವು ಸ್ಕೋರ್‌ಬೋರ್ಡ್ ಕಡೆ ನೋಡದಿರಲು ನಿರ್ಧರಿಸಿದೆವು.  ಅದಕ್ಕೆ ತಕ್ಕಂತೆ ನಮ್ಮ ಬೌಲಿಂಗ್ ಶಿಸ್ತುಬದ್ಧವಾಗಿತ್ತು. ದೊಡ್ಡ ಸಂಖ್ಯೆಯ ಪ್ರೇಕ್ಷಕರೆದುರು ಶಮಿ ಅಹಮದ್ ಮೊದಲ ಪಂದ್ಯದಲ್ಲೇ ಉತ್ತಮವಾಗಿ ಬೌಲ್ ಮಾಡಿದರು. ಎದುರಾಳಿಗಳ ಆರಂಭ ಆಟಗಾರರನ್ನು ಪದೇ ಪದೇ ಸಮಸ್ಯೆಗೊಡ್ಡಿದರು' ಎಂದು      ದೋನಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಅಜಿಂಕ್ಯ ರೆಹಾನೆ ಸಂಯಮ ತೋರಿಸಬೇಕಾದ ಅಗತ್ಯವಿದೆ. ವಿಶೇಷವಾಗಿ ವೇಗದ ಬೌಲರ್‌ಗಳು ಉತ್ತಮ ನೇರದಲ್ಲಿ ಬೌಲಿಂಗ್ ಮಾಡುವಾಗ ಇಂಥ ಸಂಯಮ ಅಗತ್ಯ ಎಂದರು.

`ತಂಡ ಕಷ್ಟದ ದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಬಂದ ಈ ಗೆಲುವು ಇಂಗ್ಲೆಂಡ್ ವಿರುದ್ಧ ಸರಣಿಗೆ  ಚೈತನ್ಯ ತುಂಬಬಲ್ಲದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭುವನೇಶ್ವರ ಕುಮಾರ್ ಅವರ ಬೌಲಿಂಗ್ ಪ್ರವೀಣ್ ಕುಮಾರ್ ಅವರ ಬೌಲಿಂಗ್‌ನಂತಿದೆ. ವೇಗ, ಸ್ವಿಂಗ್ ಇದೆ. ತನ್ನ ಇತಿಮಿತಿಗಳ ಅರಿವೂ ಭುವನೇಶ್ವರ್‌ಗೆ ಇದೆ. ಯಾರ್ಕರ್‌ಗಳನ್ನು ಚೆನ್ನಾಗಿ ಬೌಲ್ ಮಾಡುತ್ತಾರೆ ಎಂದು ಉತ್ತರಪ್ರದೇಶ ಎಳೆಯ ಬೌಲರ್‌ನನ್ನು ಶ್ಲಾಘಿಸಿದ ದೋನಿ, `ಆತ ಬ್ಯಾಟಿನಿಂದಲೂ ಕೊಡುಗೆ ನೀಡಬೇಕು. ಅಲ್ಲೂ ಯಶಸ್ವಿಯಾದರೆ ತಂಡಕ್ಕೆ ಅನುಕೂಲ' ಎಂದರು.

ಸುವರ್ಣಾವಕಾಶವಿತ್ತು:
`ನಮಗೆ ಸರಣಿಯಲ್ಲಿ ವೈಟ್‌ವಾಷ್ (3-0 ಗೆಲುವು) ಮಾಡುವ ಸುವರ್ಣ ಅವಕಾಶವಿತ್ತು, ಆದರೆ ನಾವು ಭಾರತದ ಕ್ಷೇತ್ರರಕ್ಷಕರಿಗೆ ಮತ್ತು ಬೌಲರ್‌ಗಳಿಗೆ ಗೆಲುವಿನ ಶ್ರೇಯ ನೀಡಬೇಕು. ಅವರು ಅಮೋಘ ಕ್ಷೇತ್ರ ರಕ್ಷಣೆಯಿಂದ ಸುಮಾರು 35 ರನ್ ಉಳಿಸಿದರು. ಇದು ಪಂದ್ಯ ನಮ್ಮ ಕೈಜಾರುವಂತೆ ಮಾಡಿತು' ಎಂದು ಪಾಕ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಪ್ರತಿಕ್ರಿಯಿಸಿದರು.

`ಪಿಚ್‌ನಲ್ಲಿ ರನ್ ಗಳಿಸುವುದು ಸುಲಭವಾಗಿರಲಿಲ್ಲ. ಚಳಿಯಲ್ಲಿ ಆಡುವುದೂ ಕಷ್ಟವಾಗುತ್ತಿತ್ತು. ಪಿಚ್ ಬ್ಯಾಟಿಂಗ್‌ಗೆ ನೆರವಾಗಬಹುದೆಂಬ ನಿರೀಕ್ಷೆ ಹವಾಮಾನದಿಂದ ಸುಳ್ಳಾಯಿತು' ಎಂದು ಮಿಸ್ಬಾ ಅಭಿಪ್ರಾಯಪಟ್ಟರು.

`ಭಾರತದಲ್ಲಿ ನಾವು ಆಡಿದ ಪಿಚ್‌ಗಳೆಲ್ಲವೂ ಬೌಲಿಂಗ್‌ಗೆ ನೆರವಾಗಿವೆ. ನಾಸಿರ್ ಜಮ್ಷೆದ್ ಮತ್ತು ದೋನಿ ಅವರನ್ನು ಬಿಟ್ಟರೆ ಉಳಿದವರ‌್ಯಾರೂ ಬ್ಯಾಟಿನಿಂದ ಯಶಸ್ಸು ಗಳಿಸಿಲ್ಲ' ಎಂದು ಅವರು ಹೇಳಿದರು.

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ
ಸೆಹ್ವಾಗ್‌ಗೆ ಕೊಕ್; ಚೇತೇಶ್ವರ್‌ಗೆ ಕರೆ

ಪ್ರಜಾವಾಣಿ ವಾರ್ತೆ
ನವದೆಹಲಿ:
ಕಳೆದ ವರ್ಷವಿಡೀ ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳಲ್ಲಿ ವಿಫಲರಾದ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್ ಅವರನ್ನು ನಿರೀಕ್ಷೆಯಂತೆ ಇಂಗ್ಲೆಂಡ್ ವಿರುದ್ಧ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಕೈಬಿಡಲಾಗಿದೆ. ಸೌರಾಷ್ಟ್ರದ ಆರಂಭ ಆಟಗಾರ ಚೇತೇಶ್ವರ ಪೂಜಾರ ಮೊದಲ ಬಾರಿ ಸೀಮಿತ ಓವರುಗಳ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಆಯ್ಕೆ ಸಮಿತಿಯು ಭಾನುವಾರ 15 ಮಂದಿಯ ತಂಡ ಪ್ರಕಟಿಸಿದೆ. ಇಂಗ್ಲೆಂಡ್ ವಿರುದ್ಧ ಐದು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಇದೇ 11ರಂದು ಚೇತೇಶ್ವರ ಅವರ ತವರಾದ ರಾಜ್‌ಕೋಟ್‌ನಲ್ಲೇ ನಡೆಯಲಿದೆ.

ರೋಹಿತ್ ಶರ್ಮಾ ಕಳೆದ ಕೆಲವು ಸಮಯದಿಂದ ಪರದಾಡುತ್ತಿದ್ದರೂ ಆಯ್ಕೆಗಾರರ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ. ಕೊನೆಯ ಆರು ಒಂದು ದಿನದ ಪಂದ್ಯಗಳಲ್ಲಿ ಅವರು (5,0,0,4,4,4) ಒಂದಂಕಿಯ ಮೊತ್ತ ಗಳಿಸಿದ್ದರು. 

ಸೆಹ್ವಾಗ್‌ಗೆ ಹಿನ್ನಡೆ: 2011ರ ಡಿಸೆಂಬರ್‌ನಲ್ಲಿ ಇಂದೋರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಾಖಲೆಯ ದ್ವಿಶತಕ ಬಾರಿಸಿದ ನಂತರ, 35 ವರ್ಷದ ಸೆಹ್ವಾಗ್ 11 ಪಂದ್ಯಗಳಲ್ಲಿ ಬರೇ 23 ರನ್‌ಗಳ ಸರಾಸರಿ ಹೊಂದಿದ್ದಾರೆ.  ರನ್ ಬರ ಎದುರಿಸುತ್ತಿರುವ ಸೆಹ್ವಾಗ್ ಅವರನ್ನು ಭಾನುವಾರವೇ ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯಕ್ಕೆ  ಕೈಬಿಡಲಾಗಿತ್ತು.
ತಂಡ ಹೀಗಿದೆ: ಎಂ.ಎಸ್.ದೋನಿ (ನಾಯಕ), ಚೇತೇಶ್ವರ ಪೂಜಾರ, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ ಸಿಂಗ್, ರೋಹಿತ್ ಶರ್ಮಾ, ಸುರೇಶ್ ರೈನಾ, ರವೀಂದ್ರ ಜಡೇಜ, ಆರ್.ಅಶ್ವಿನ್, ಇಶಾಂತ್ ಶರ್ಮಾ, ಅಜಿಂಕ್ಯ ರೆಹಾನೆ, ಅಶೋಕ್ ದಿಂಡಾ, ಭುವನೇಶ್ವರ ಕುಮಾರ್, ಸಮಿ ಅಹ್ಮದ್ ಮತ್ತು ಅಮಿತ್ ಮಿಶ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT