ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂತ್ವನ ಕೇಂದ್ರ: ಸಕ್ರಿಯಗೊಳಿಸಲು ಸೂಚನೆ

Last Updated 23 ಫೆಬ್ರುವರಿ 2011, 6:20 IST
ಅಕ್ಷರ ಗಾತ್ರ

ಶಿವಮೊಗ್ಗ: ಸಮಾಜದ ವಿವಿಧ ಹಂತಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಆರ್ಥಿಕ, ಕಾನೂನು ಹಾಗೂ ಮಾನಸಿಕ ನೆರವು ನೀಡಲು ಜಿಲ್ಲೆಯ ಪ್ರತಿ ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಂತ್ವನ ಕೇಂದ್ರಗಳು ಇನ್ನಷ್ಟು ಸಕ್ರಿಯಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ತಿಳಿಸಿದರು.

ನಗರದಲ್ಲಿ ಸೋಮವಾರ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ’ ಅಧಿನಿಯಮದ ಅಡಿ ಕಾರ್ಯ ನಿರ್ವಸುತ್ತಿರುವ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಾಲ್ಲೂಕುಮಟ್ಟದಲ್ಲಿ ಸಾಂತ್ವನ ಕೇಂದ್ರಗಳ ಮೂಲಕ ಅನುಷ್ಠಾನಗೊಂಡ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಪ್ರಕರಣಗಳನ್ನು ಕೇವಲ ಆರ್ಥಿಕ ಪರಿಹಾರ ಒದಗಿಸುವ ದೃಷ್ಟಿಯಿಂದ ನೋಡದೇ, ಗೌರವಯುತ ಭವಿಷ್ಯಕ್ಕಾಗಿ ಅವರಿಗೆ ವಿದ್ಯಾಭ್ಯಾಸ ಹಾಗೂ ಸ್ವ-ಉದ್ಯೋಗ ಅವಕಾಶಗಳನ್ನು ನೀಡುವ ಮೂಲಕ ಸ್ವಾವಲಂಬನೆಗೆ ದಾರಿ ಮಾಡಿಕೊಡಬೇಕು ಎಂದರು.

ಬಹುತೇಕ ಪ್ರಕರಣಗಳು ಎಲ್ಲ ಹಂತಗಳನ್ನು ದಾಟಿ ಸಾಂತ್ವನ ಕೇಂದ್ರದ ಗಮನಕ್ಕೆ ಬರುತ್ತವೆ. ಇದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ, ಸಮಸ್ಯೆ ಎದುರಾಗುವುದನ್ನು ತಡೆಯುವ ಕೆಲಸಗಳು ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಸಹಾಯವಾಣಿ (1091) ಕುರಿತು ಇನ್ನೂ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದ ಅವರು, ಗ್ರಾಮ ಮಟ್ಟದಲ್ಲಿ ಕಾಲ ಕಾಲಕ್ಕೆ ನಡೆಯುವ ಸಭೆಗಳಲ್ಲಿ, ಕರ ವಸೂಲಿಗಾಗಿ ಮನೆಮನೆಗೆ ತೆರಳುವ ಕಾರ್ಯಕರ್ತರ ಮೂಲಕ ಹಾಗೂ ಇತರೆ ಸಭೆ, ಸಮಾರಂಭಗಳಲ್ಲಿ ಈ ಕುರಿತು ಮಾಹಿತಿ ಒದಗಿಸುವಂತೆ ಸಾಂತ್ವನ ಕಾರ್ಯಕರ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ವರದಕ್ಷಿಣೆ ನಿಷೇಧ ಕಾಯ್ದೆಯಡಿ 2010-11ನೇ ಸಾಲಿನಲ್ಲಿ ಈವರೆಗೆ ಒಟ್ಟು 23 ಪ್ರಕರಣಗಳು ದಾಖಲಾಗಿದ್ದು, 17 ಪ್ರಕರಣಗಳು ಶಿವಮೊಗ್ಗ ತಾಲ್ಲೂಕಿನಲ್ಲಿ ದಾಖಲಾಗಿವೆ. ತೀರ್ಥಹಳ್ಳಿ 3, ಭದ್ರಾವತಿ 2 ಹಾಗೂ ಸಾಗರದಲ್ಲಿ 1 ಪ್ರಕರಣ ದಾಖಲಾಗಿದ್ದು, ಎಲ್ಲಾ ಪ್ರಕರಣಗಳು ತನಿಖೆ ಹಂತದಲ್ಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜ್ ಸಭೆಗೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ರಾಜಗೋಪಾಲ್ ಮತ್ತು ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸಾಂತ್ವನ ಕೇಂದ್ರಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT