ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಯಕ್ಷಗಾನಕ್ಕೆ

Last Updated 7 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ವೈವಿಧ್ಯಕ್ಕೆ ಹೆಸರಾದುದು. ತೆಂಕು, ಬಡಗು, ಬಡಾ ಬಡಗು.... ಹೀಗೆ ಹತ್ತು ಹಲವು ತಿಟ್ಟುಗಳನ್ನೊಳಗೊಂಡ ಯಕ್ಷಗಾನದ ಒಂದೊಂದು ತಿಟ್ಟುಗಳಿಗೂ ಒಂದೊಂದು ವೈಶಿಷ್ಟ್ಯ.

ಯಕ್ಷ ಕಲಿಕೆಗೆ ನಿರ್ದಿಷ್ಟ ಪಠ್ಯ ಎಂಬುದು ಇದುವರೆಗೆ ಇರಲಿಲ್ಲ. ಗುರು ಕಲಿಸಿದ್ದೇ ಪಾಠ; ವಿದ್ಯಾರ್ಥಿಗಳು ಅರಗಿಸಿಕೊಂಡಷ್ಟೇ ಕಲಿಕೆ. ಉಳಿದಂತೆ ಸ್ವಂತ ಪ್ರತಿಭೆ ಹಾಗೂ ಅನುಭವದ ಸಿದ್ಧಿ. ಹರಿಸಿದ ಬೆವರು, ದುಡಿಸಿದ ನಾಲಗೆ, ಪಳಗಿಸಿದ ಹೆಜ್ಜೆ ಮತ್ತು ಪಾತ್ರದಲ್ಲಿನ ತನ್ಮಯತೆಯ ಬಲದಿಂದ ಕಲಾವಿದ ಬೆಳೆಯುತ್ತಿದ್ದ. ಈ ಪ್ರಾದೇಶಿಕ ವೈವಿಧ್ಯತೆ ಒಂದರ್ಥದಲ್ಲಿ ಒಳ್ಳೆಯದೇ. ಅದೇ ರೀತಿ ನಿಜವಾದ ಪ್ರತಿಭಾವಂತನ ಸಂಪೂರ್ಣ ವಿಕಸನಕ್ಕೂ ಸಾಂಪ್ರದಾಯಿಕ ರೀತಿಯ ಕಲಿಕೆ ಒಂದು ಮಿತಿಯೂ ಆಗಿರುತ್ತಿತ್ತು. ವೈವಿಧ್ಯಗಳನ್ನು ಉಳಿಸಿಕೊಂಡು ಯಕ್ಷಗಾನಕ್ಕೊಂದು ಏಕರೂಪದ ಶಾಸ್ತ್ರೀಯ ಶಿಸ್ತು ಒದಗಿಸುವ ನಿಟ್ಟಿನಲ್ಲಿ ಮಹತ್ವಪೂರ್ಣ ಬೆಳವಣಿಗೆ ಆಗುತ್ತಿದೆ.
ಯಕ್ಷಗಾನ ಎಲ್ಲ ವೈವಿಧ್ಯಗಳ ಹೂರಣವನ್ನು ಒಳಗೊಂಡ ಏಕರೂಪಿ ಶಿಕ್ಷಣ ವ್ಯವಸ್ಥೆಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಭರದಿಂದ ನಡೆದಿದೆ.

ಏಕರೂಪಿ ಶಿಕ್ಷಣ ಸುಲಭದ ಮಾತಲ್ಲ. ವೈವಿಧ್ಯ ಹೆಚ್ಚಿರುವಲ್ಲಿ ಅಪಸ್ವರಗಳೂ ಅಧಿಕ. ಹಾಗಾಗಿ ಈ ಕ್ಷೇತ್ರದ ಪ್ರಾಜ್ಞರನ್ನು, ಅನುಭವಿಗಳನ್ನು ಒಗ್ಗೂಡಿಸಿ, ಶಿಕ್ಷಣ ತಜ್ಞರ ಸಲಹೆ ಸೂಚನೆ ಪಡೆದು ಯಕ್ಷಗಾನಕ್ಕೂ ಶೈಕ್ಷಣಿಕ ಚೌಕಟ್ಟು ತೊಡಿಸುವ ಪ್ರಯತ್ನ ಕಳೆದ ಎರಡು ವರ್ಷಗಳಲ್ಲಿ ಸದ್ದಿಲ್ಲದೆ ನಡೆದಿದೆ. ಕರ್ನಾಟಕ ಪಠ್ಯ ಪುಸ್ತಕ ಸಂಘ ಯಕ್ಷಗಾನಕ್ಕೂ ಪಠ್ಯ ಪುಸ್ತಕ ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದಲ್ಲಿ ಅಧ್ಯಕ್ಷರು, ಪರಿಶೀಲಕರು, ಐವರು ಸದಸ್ಯರು ಹಾಗೂ ಚಿತ್ರಕಲಾವಿದರನ್ನು ಒಳಗೊಂಡ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. 

ಸಮಿತಿಯಲ್ಲಿ ಯಾರ್ಯಾರು?: ಪ್ರಾಥಮಿಕ ವಿಭಾಗದ ಪಠ್ಯ ಪುಸ್ತಕ ರಚನಾ ಸಮಿತಿಗೆ ಹೊಸ್ತೋಟ ಮಂಜುನಾಥ ಭಾಗವತರು ಅಧ್ಯಕ್ಷರು. ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ಅವರು ಪರಿಶೀಲಕರು. ಹಿರಿಯ ಕಲಾವಿದರಾದ ಗೋವಿಂದ ಭಟ್, ಗಣರಾಜ ಕುಂಬಳೆ, ತಾರಾನಾಥ ವರ್ಕಾಡಿ, ಸುಜಯೀಂದ್ರ ಹಂದೆ, ಪ್ರಕಾಶ ಮೂಡಿತ್ತಾಯ ಸಮಿತಿಯ ಸದಸ್ಯರು.

ಮಾಧ್ಯಮಿಕ ವಿಭಾಗದ ಪಠ್ಯ ಪುಸ್ತಕ ಸಮಿತಿಗೆ ಹಿರಿಯ ಕಲಾವಿದ ಕುಂಬಳೆ ಸುಂದರ ರಾವ್ ಅಧ್ಯಕ್ಷರು. ಪ್ರೊ.ಜಿ.ಎಸ್.ಭಟ್ ಪರಿಶೀಲಕರು. ಕರ್ಗಲ್ಲು ವಿಶ್ವೇಶ್ವರ ಭಟ್, ಸದಾನಂದ ಐತಾಳ್, ರಾಧಾಕೃಷ್ಣ ಕಲ್ಚಾರ್, ಡಾ.ಕಮಲಾಕ್ಷ, ಡಾ.ಸುಂದರ ಕೇನಾಜೆ ಸದಸ್ಯರು. ದಿನೇಶ್ ಕುಕ್ಕುಜಡ್ಕ ಚಿತ್ರಕಲಾವಿದರು.

ಪಠ್ಯದಲ್ಲಿ ಏನೇನಿದೆ?: `ಎರಡೂ ವಿಧದ ಪಠ್ಯಗಳಲ್ಲೂ ಮೊದಲ ಅಧ್ಯಾಯದಲ್ಲಿ ಯಕ್ಷಗಾನದ ಚರಿತ್ರೆ, ಸ್ವರೂಪ, ಅಧ್ಯಯನ ಮತ್ತು ಬೆಳವಣಿಗೆ ಕುರಿತ ವಿವರಗಳಿವೆ. ಅಧ್ಯಾಯ 2ರಲ್ಲಿ ರಂಗಸ್ಥಳ ಮತ್ತು ವೇಷ ಭೂಷಣ, ಮೂರನೇ ಅಧ್ಯಾಯದಲ್ಲಿ ಯಕ್ಷಗಾನ ಪ್ರಸಂಗಗಳು ಮತ್ತು ಅರ್ಥಗಾರಿಕೆ, ನಾಲ್ಕನೇ ಅಧ್ಯಾಯದಲ್ಲಿ ಯಕ್ಷರಂಗ ಶಿಕ್ಷಣ, ಹೆಜ್ಜೆಗಾರಿಕೆ, ಅಭಿನಯ, ರಂಗಕ್ರಮಗಳು ಹಾಗೂ ಐದನೇ ಅಧ್ಯಾಯದಲ್ಲಿ ಮೌಲ್ಯಮಾಪನ ತಂತ್ರಗಳ ವಿವರಗಳಿವೆ.

ದೃಕ್‌ಶ್ರವಣ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ, ವೇಷಭೂಷಣ, ಕುಣಿತ ಅರ್ಥಗಾರಿಕೆ ವಿಭಾಗದಲ್ಲೂ ಪರೀಕ್ಷೆಗಳು ನಡೆಯಲಿವೆ. ಎರಡೂ ವಿಭಾಗಕ್ಕೂ ಪಠ್ಯ ವಿಷಯಗಳು ಅವೇ. ಆದರೆ ಕಲಿಕೆಯ ಪಾಂಡಿತ್ಯ ಬೇರೆ ಬೇರೆ ಸ್ತರದವು. ಉದಾಹರಣೆಗೆ ಪ್ರಾಥಮಿಕ ವಿಭಾಗದ ಅಧ್ಯಾಯದಲ್ಲಿ ಒಟ್ಟಾರೆ ಯಕ್ಷಗಾನದ ಪ್ರವೇಶ ಹೇಗೆ ಎಂಬುದನ್ನು ಕಲಿಸಿದರೆ, ಮಾಧ್ಯಮಿಕ ವಿಭಾಗದಲ್ಲಿ ಪುಂಡುವೇಷ, ರಾಜವೇಷ, ಬಣ್ಣದ ವೇಷಗಳ ಪ್ರವೇಶ ಹೇಗೆ ಎಂಬುದನ್ನು ನಿರ್ದಿಷ್ಟವಾಗಿ ಕಲಿಸಲಾಗುತ್ತದೆ~ ಎನ್ನುತ್ತಾರೆ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಪ್ರಕಾಶ್ ಮೂಡಿತ್ತಾಯ.

`ಪಠ್ಯಪುಸ್ತಕದಲ್ಲಿ ಸ್ವಯಂ ಕಲಿಕೆಗೂ ಅವಕಾಶ ಇರುವಂತಿದೆ. ತೆಂಕು ಮತ್ತು ಬಡಗು ತಿಟ್ಟಿನಲ್ಲಿ ವಿಶೇಷ ಕಲಿಕೆಗೆ ಅವಕಾಶವಿದೆ. ಆದರೆ ಇವುಗಳ ಪಠ್ಯದ ಮೊದಲ ಮೂರು ಅಧ್ಯಾಯಗಳು ಒಂದೇ. ನಾಲ್ಕನೇ ಅಧ್ಯಾಯ ಮಾತ್ರ ಬೇರೆ ಬೇರೆ.

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಪ್ರಾಥಮಿಕ ಹಾಗೂ ಮಾಧ್ಯಮಿಕ ಪರೀಕ್ಷೆಗಳನ್ನು ನಡೆಸಲಿದೆ~ ಎನ್ನುತ್ತಾರೆ ಅವರು.

ವೈವಿಧ್ಯಕ್ಕೆ ಧಕ್ಕೆ ಇಲ್ಲ: `ಏಕರೂಪಿ ಕಲಿಕೆಯಿಂದ ಯಕ್ಷಗಾನದ ವೈವಿಧ್ಯ ಹಾಳಾಗುತ್ತದೆ ಎಂಬ ಆತಂಕ ಬೇಡ. ಕಲಾವಿದನ ಸ್ವಂತ ಪ್ರತಿಭೆಯ ವಿಕಸನಕ್ಕೆ ಹೊಸ ವ್ಯವಸ್ಥೆಯಲ್ಲಿ ಹಿಂದಿಗಿಂತ ಹೆಚ್ಚು ಅವಕಾಶಗಳಿವೆ. ಈ ವ್ಯವಸ್ಥೆಯಿಂದ ಯಕ್ಷಗಾನಕ್ಕೆ ಶೈಕ್ಷಣಿಕವಾಗಿಯೂ ಒಂದು ಸ್ಥಾನಮಾನ ಲಭಿಸುತ್ತದೆ~ ಎನ್ನುತ್ತಾರೆ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಎಂ.ಎಲ್.ಸಾಮಗ.

`ಪಠ್ಯಕ್ರಮ ಪೂರ್ಣಗೊಳಿಸುವ ಮುನ್ನ ರಾಜ್ಯದಾದ್ಯಂತ ಇರುವ ವಿದ್ವಾಂಸರನ್ನು ಸಂಪರ್ಕಿಸಲಾಗಿದೆ. ಸಮಿತಿ ಸದಸ್ಯರು ಯಕ್ಷಗಾನ ಕ್ಷೇತ್ರದ ಪರಿಣಿತರನ್ನು ಸೇರಿಸಿಕೊಂಡು ಹತ್ತಾರು ಸಭೆಗಳನ್ನು ನಡೆಸಿ ಪಠ್ಯಕ್ರಮಕ್ಕೊಂದು ಮೂರ್ತ ರೂಪ ನೀಡಿದ್ದಾರೆ. ಸಾಂಪ್ರದಾಯಿಕ ಯಕ್ಷಗಾನಕ್ಕೆ ಶೈಕ್ಷಣಿಕ ಪೊಷಾಕು ತೊಡಿಸುವ ನಿಟ್ಟಿನಲ್ಲಿ ಇದು ಪುಟ್ಟ ಹೆಜ್ಜೆ ಮಾತ್ರ. ಇನ್ನು ಸಾಗಬೇಕಾದ ಹಾದಿ ಬಹಳಷ್ಟಿದೆ~ ಎನ್ನುತ್ತಾರೆ ಅವರು.

ಪಠ್ಯಕ್ರಮ ರಚಿಸಿದರಷ್ಟೇ ಸಾಲದು, ಅದನ್ನು ಬೋಧಿಸಲು ಶೈಕ್ಷಣಿಕ ಅರ್ಹತೆ ಇರುವ ಗುರುವೃಂದವೂ ತಯಾರಾಗಬೇಕು. ಸಂಗೀತ ಮತ್ತು ನೃತ್ಯ ಗುರು ಪರಂಪರೆಗೆ ಸರಿಸಮನಾಗಿ ಈಗಿರುವ ಯಕ್ಷಗಾನದ ಗುರುಗಳನ್ನು ಸಜ್ಜುಗೊಳಿಸಬೇಕು. ಪ್ರಸ್ತುತ ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಸುವ ಸಂಸ್ಥೆಗಳು ಬೆರಳೆಣಿಕೆಯಲ್ಲಿವೆ. ಬಹುತೇಕ ಸಣ್ಣ ಪುಟ್ಟ ಸಂಘಗಳು, ಯಕ್ಷಗಾನವನ್ನು ಯುವ ಪೀಳಿಗೆಗೆ ಕಲಿಸುತ್ತಿವೆ.

ಹಂಚಿಹೋಗಿರುವ ಗುರುಗಳನ್ನು ಒಗ್ಗೂಡಿಸಿ ಹೊಸ ವ್ಯವಸ್ಥೆಗೆ ಅವರು ಒಗ್ಗುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ಯಕ್ಷಗಾನ ಗುರುಗಳಿಗೂ ಸೇತುಬಂಧ ಕಾರ್ಯಕ್ರಮಗಳನ್ನು ನಡೆಸಲಿದೆ. ಮೊದಲ ಪ್ರಯತ್ನವಾಗಿ ಬಿ.ಸಿ.ರೋಡ್‌ನಲ್ಲಿ ಗುರುಗಳಿಗೆ ಏಕರೂಪಿ ಯಕ್ಷ ಶಿಕ್ಷಣದ ಬಗ್ಗೆ ತರಬೇತಿ ನೀಡಲಾಗುತ್ತಿದೆ.
ಯಕ್ಷಗಾನ ಕಲಿಸುವವರ ಶೈಕ್ಷಣಿಕ ಅರ್ಹತೆಗಾಗಿ ವಿದ್ವತ್ ಪದವಿಯನ್ನು ಆರಂಭಿಸುವ ಚಿಂತನೆಯೂ ನಡೆದಿದೆ. ಇದರ ಪಠ್ಯ ಕ್ರಮದ ತಯಾರಿಯೂ ಪ್ರಗತಿಯಲ್ಲಿದೆ.

`ಯಕ್ಷಗಾನದಲ್ಲೂ ಏಕರೂಪಿ ಶಿಕ್ಷಣಕ್ಕೆ ಪಠ್ಯ ರಚನೆ ಕಾರ್ಯ ಪೂರ್ಣಗೊಂಡಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಭಾಗದ ಪಠ್ಯಗಳ ಕರಡು ಅಂತಿಮಗೊಂಡಿದೆ. ವಿದ್ವತ್‌ನ ಪಠ್ಯ ರಚನೆ ಪ್ರಕ್ರಿಯೆ ಪ್ರಗತಿಯಲ್ಲಿದೆ~ ಎನ್ನುತ್ತಾರೆ ಕುಂಬಳೆ ಸುಂದರ ರಾವ್.

ಪಠ್ಯಪುಸ್ತಕ ಪೂರ್ಣಗೊಂಡ ಬಳಿಕ ಸಂಗೀತ ಪ್ರಕಾರಗಳಲ್ಲಿ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಿದ್ದಂತೆಯೇ ಯಕ್ಷಗಾನದ್ಲ್ಲಲೂ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಮಾಧ್ಯಮಿಕ ಪರೀಕ್ಷೆಗೆ ಹಾಜಾರಾಗಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ, 2014ರ ಮಾರ್ಚ್‌ನಲ್ಲಿ ಯಕ್ಷಗಾನದ ಮೊದಲ ಶೈಕ್ಷಣಿಕ `ಪರೀಕ್ಷೆ~ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT