ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಂವಿಧಾನಿಕ ಹಕ್ಕು ರಕ್ಷಣೆ ನ್ಯಾಯಾಂಗದ ಹೊಣೆ'

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ಡಾನ್ಸ್ ಬಾರ್ ನಿಷೇಧ ತೆರವುಗೊಳಿಸಿದ ತೀರ್ಪಿನ ಬಗ್ಗೆ ಕೇಳಿಬಂದಿರುವ ಟೀಕೆಗಳನ್ನು ಸುಪ್ರೀಂ ಕೋರ್ಟ್ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಗುರುವಾರ ತಳ್ಳಿಹಾಕಿದರು.

ರಾಷ್ಟ್ರದ ಜನತೆಯ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ, ಹಾಗಾಗದಂತೆ ತಡೆಯೊಡ್ಡುವುದು ನ್ಯಾಯಾಂಗದ ಕರ್ತವ್ಯ ಎಂದು ಪ್ರತಿಪಾದಿಸಿದರು.

`ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಯಾವ ಸಂಘರ್ಷವೂ ಇಲ್ಲ. ಕಾರ್ಯಾಂಗಕ್ಕೆ ತನ್ನ ಕೆಲಸ ಮಾಡುವಂತೆ ನೆನಪಿಸುವುದು ನ್ಯಾಯಾಲಯಗಳ ಕರ್ತವ್ಯ. ಹೀಗೆ ಮಾಡುವುದರಿಂದ ನ್ಯಾಯಾಲಯಗಳು ಅಧಿಕಾರ ವ್ಯಾಪ್ತಿ ಮೀರಿದಂತಾಗುವುದಿಲ್ಲ' ಎಂದು ಗುರುವಾರ ಸೇವಾವಧಿಯ ಕೊನೆಯ ದಿನ ಕರ್ತವ್ಯ ಮುಗಿಸಿ ಹೊರಬಂದ ಸಂದರ್ಭದಲ್ಲಿ ಸುದ್ದಿಗಾರರ ಬಳಿ ಹೇಳಿದರು.

`ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಹಾಗೆಯೇ ಶಾಸಕಾಂಗ, ಕಾರ್ಯಾಂಗಗಳು ತಂತಮ್ಮ ಕೆಲಸ ಮಾಡುತ್ತಿವೆ. ಜನತೆಯ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆಯೊದಗಿದ ಸಂದರ್ಭದಲ್ಲಿ ಅದನ್ನು ಗಮನಿಸುವುದು ನಮ್ಮ ಕೆಲಸವೇ ಹೊರತು ಶಾಸಕಾಂಗ ಅಥವಾ ಕಾರ್ಯಾಂಗದ ಕೆಲಸವಲ್ಲ' ಎಂದರು.

ಮುಂಬೈ ಡಾನ್ಸ್ ಬಾರ್ ನಿಷೇಧ ತೆರುವುಗೊಳಿಸಿದ ತೀರ್ಪಿನ ಬಗ್ಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಟೀಕೆಗಳು ಕೇಳಿಬಂದಿರುವ ಬಗ್ಗೆ ಹಾಗೂ `ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಆಡಳಿತ ನಡೆಸಲು ಇಚ್ಛಿಸುವುದಾದರೆ ಅವರೇ ಜನರಿಂದ ಚುನಾಯಿತರಾಗಿ ಬರಲಿ' ಎಂಬ ಸವಾಲು ಕೇಳಿಬಂದಿರುವ ಕುರಿತು ಕೇಳಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.

ತಮ್ಮ ಸೇವಾವಧಿಯಲ್ಲಿ ಮಾಡಿದ ಕೆಲಸದ ಬಗ್ಗೆ ಸಂಪೂರ್ಣ ತೃಪ್ತಿ ಇದೆ ಎಂದು ಅಲ್ತಮಸ್ ಕಬೀರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ತೀರ್ಪು ಸೋರಿಕೆಗೆ ಅಚ್ಚರಿ
ಭಾರತೀಯ ವೈದ್ಯಕೀಯ ಮಂಡಳಿಯ ಉದ್ದೇಶಿತ ರಾಷ್ಟ್ರೀಯಅರ್ಹತಾ ಪ್ರವೇಶ ಪರೀಕ್ಷೆ   ಸಂಬಂಧದ ತೀರ್ಪು ಪ್ರಕಟವಾಗುವ ಮುನ್ನವೇ ಸೋರಿಕೆ ಆಗಿದ್ದರಬಗ್ಗೆ ಗುರುವಾರ ಸೇವಾವಧಿ ಪೂರೈಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲ್ತಮ ಕಬೀರ್ ಅಚ್ಚರಿ ವ್ಯಕ್ತಪಡಿಸಿದರು.

`ನನಗೆ ಗೊತ್ತಿರುವ ಪ್ರಕಾರ ತೀರ್ಪು ಪ್ರಕಟವಾಗುವ ಮುನ್ನ ಅದು ಅತ್ಯಂತ ಗೋಪ್ಯವಾಗಿರಬೇಕು. ಅದಕ್ಕೆ ಸಂಬಂಧಿಸಿದ ಕಡತ ನನ್ನ ಕೊಠಡಿಯಲ್ಲೇ ಇತ್ತು. ಅದು ಹೇಗೆ ಸೋರಿಕೆಯಾಯಿತು ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT