ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಉತ್ಸವ: ಆಶಯ ನೇಪಥ್ಯಕ್ಕೆ ಸರಿಯದಿರಲಿ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಸಾಂಸ್ಕೃತಿಕ ಉತ್ಸವಗಳ ಸರದಿ.  ಅಕ್ಟೋಬರ್‌ನಲ್ಲಿ  ಜಗತ್ಪ್ರಸಿದ್ಧ ಮೈಸೂರು ದಸರಾ ನಡೆಯಲಿದೆ.

  ನಾಡಿನ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಗತವೈಭವಗಳ ಪುನರ್ ದರ್ಶನ ಮಾಡಿಕೊಡುವ ಸದುದ್ದೇಶದಿಂದ ಹಂಪಿ ಉತ್ಸವ, ಕದಂಬೋತ್ಸವ, ಚಾಲುಕ್ಯ ಉತ್ಸವ, ಹೊಯ್ಸಳೋತ್ಸವ, ಕರಾವಳಿ ಉತ್ಸವ, ಕಿತ್ತೂರು ಉತ್ಸವ, ಲಕ್ಕುಂಡಿ ಉತ್ಸವ, ನವರಸಪುರ ಉತ್ಸವಗಳ ಜೊತೆಗೆ ಆಯಾ ಜಿಲ್ಲೆಗಳ ಸಾಂಸ್ಕೃತಿಕ ವೈಭವಗಳ ಪುನರುತ್ಥಾನದ ದೃಷ್ಟಿಯಿಂದ ಜಿಲ್ಲಾ ಉತ್ಸವಗಳನ್ನು ಹಮ್ಮಿಕೊಳ್ಳಲು ೯೦ರ ದಶಕದಲ್ಲಿ ಅಂದಿನ ಸರ್ಕಾರಗಳು ಚಾಲನೆ ನೀಡಿದ್ದವು. ಪ್ರತಿಯೊಂದು ಉತ್ಸವದ ಹಿಂದೆ ಒಂದು ಮಹತ್ವದ ಹಿನ್ನೆಲೆ ಹಾಗೂ ಆಶಯವಿದೆ.

ದಸರಾ ಮಹೋತ್ಸವಕ್ಕೆ ತನ್ನದೇ ಆದ ವೈಶಿಷ್ಟ್ಯ ಇದೆ. ನವರಾತ್ರಿಯಲ್ಲಿ ಅಂಬಾವಿಲಾಸ ಅರಮನೆ ಮುಂದೆ  ಜರುಗುವ ಸಾಂಸ್ಕೃತಿಕ ಕಾರ್ಯಕ್ರಮ­ಗಳು ಇಡೀ ನಾಡಹಬ್ಬಕ್ಕೆ ವಿಶೇಷ ಮೆರುಗನ್ನು ನೀಡುತ್ತವೆ. ಇಲ್ಲಿ ಪಾರಂಪರಿಕ ಶಾಸ್ತ್ರೀಯ ಸಂಗೀತ ಹಾಗೂ ಕಾವ್ಯ ಗಾಯನ ಕಾರ್ಯ­ಕ್ರಮಗಳನ್ನು ನಡೆಸಿಕೊಂಡು ಬರಲಾ­ಗುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ದೇಸಿ ಸಂಗೀತ ಅಂದರೆ ನಮ್ಮಲ್ಲಿ ಸಂಪದ್ಭರಿತವಾಗಿರುವ ಜಾನಪದ ಸಂಗೀತವನ್ನೂ ಸೇರಿಸಿರುವುದು ಸ್ವಾಗತಾರ್ಹ.

ಆದರೆ ಇದೇ ವೇದಿಕೆಯ ಮೇಲೆ ಹಾಸ್ಯ, ಮಿಮಿಕ್ರಿ, ನೃತ್ಯ ಇವುಗಳಿಗೆ ಅವಕಾಶ ಮಾಡಿ­ಕೊಟ್ಟಿ­ರುವುದು ವಿಪರ್ಯಾಸ. ಹಿಂದೆ ಜಗನ್ಮೋ­ಹನ ಅರಮನೆಯ ಸಭಾಂಗಣವನ್ನು ನೃತ್ಯಕ್ಕೆ;  ಪುರಭವನ­ವನ್ನು ನಾಟಕ, ಯಕ್ಷಗಾನದಂತಹ ಕಲೆಗಳಿಗೆ ಮೀಸಲು ಇ­ಡಲಾಗು­ತ್ತಿತ್ತು.

ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯನ್ನು ಮರೆಯ­ಲಾಗದ ಪ್ರವಾಸಿ ತಾಣವಾಗಿ ಬಿಂಬಿ­ಸುತ್ತದೆ. ಅಂದಿನ ವೈಭವಗಳ ಪುನರ್‌ದರ್ಶನ ಮಾಡಿಕೊಡುವ ಹಿನ್ನೆಲೆಯಲ್ಲಿ ೧೯೮೭ರಲ್ಲಿ ‘ವಿಜಯನಗರ ಉತ್ಸವ’ ಎಂದು ಆರಂಭವಾಗಿ ನಿಂತು ಹೋಗಿದ್ದ ಉತ್ಸವವನ್ನು ೧೯೯೫ರಲ್ಲಿ ಹಂಪಿ ಉತ್ಸವವೆಂದು ಆರಂಭಿಸಲಾಯಿತು.

ಕನ್ನಡನಾಡಿನಲ್ಲಿ ಹಾಸುಹೊಕ್ಕಾಗಿರುವ ಪ್ರಾಚೀನ ಕಲೆಗಳನ್ನು, ಸಾಂಸ್ಕೃತಿಕ ಮೆರುಗನ್ನು ಪರಿಚಯಿ­ಸುವ ಪ್ರಯತ್ನವೇ ಹಂಪಿ ಉತ್ಸವದ ಉದ್ದೇಶ. ಜಾನಪದ, ಶಿಲ್ಪ, ಲಲಿತಕಲೆ, ಶಾಸ್ತ್ರೀಯ ನೃತ್ಯ­ಗಳು, ನಾಟಕಗಳು, ಕಾವ್ಯಗಾಯನ ಮುಂತಾದ ಕಲೆಗಳಿಗೆ ವೇದಿಕೆ ಒದಗಿಸಿ ಪ್ರವಾಸಿಗರಿಗೆ ಪರಿಚಯಿಸುವ ಪ್ರಯತ್ನ ಇದಾಗಿತ್ತು. ಇಡೀ ಉತ್ಸವವನ್ನು  ಕನ್ನಡ ಮತ್ತು ಸಂಸ್ಕೃತಿ
ಇಲಾಖೆ­ಯು ಜಿಲ್ಲಾ ಆಡಳಿತದ ಸಹಕಾರ ದೊಂದಿಗೆ ನಿರ್ವಹಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇಡೀ ಉತ್ಸವವನ್ನು ಗಣಿ ಉದ್ಯಮಿಗಳ ವಶಕ್ಕೆ ಒಪ್ಪಿಸಿ ಉತ್ಸವದ ಸ್ವರೂಪವನ್ನೇ ಅದರ ಆಶಯದ ವಿರುದ್ಧವಾಗಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಹಿಂದಿ ಸಿನಿಮಾ ವಾದ್ಯ­ಗೋಷ್ಠಿಗಳು, ನೃತ್ಯಗಳು ಇಲ್ಲಿ ವಿಜೃಂಭಿ­ಸಲು ಆರಂಭಿಸಿವೆ.

ಕದಂಬೋತ್ಸವ: ಆದಿಕವಿ ಪಂಪನ ಕಾರ್ಯಕ್ಷೇತ್ರ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ­ವನ್ನು ಹೊರತುಪಡಿಸಿದರೆ ಕದಂಬ ಸಾಮ್ರಾಜ್ಯದ ಯಾವ ಕುರುಹುಗಳೂ ಅಲ್ಲಿ ಕಾಣಸಿಗುವುದಿಲ್ಲ. ಈ ಕಾರಣದಿಂದ ಮತ್ತು ಬನವಾಸಿ ನಾಡಿನ ಪ್ರಾಚೀನತೆಯನ್ನು ಸಾಂಸ್ಕೃತಿಕವಾಗಿ ಪರಿಚಯಿ­ಸುವ ಸಲುವಾಗಿ, ೧೯೯೬ ರಲ್ಲಿ ಕದಂಬೋತ್ಸವ­ವನ್ನು ಆರಂಭಿಸಲಾಯಿತು.

ಈ ಉತ್ಸವವು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಬೇಕೆಂಬುದು ಆಶಯ. ಜೊತೆಗೆ ಆದಿ ಕವಿ ಪಂಪನ ಹೆಸರಿನಲ್ಲಿ ಕೊಡಮಾಡುವ ‘ಪಂಪ ಪ್ರಶಸ್ತಿ’ ಯನ್ನು ಇದೇ ಸಂದರ್ಭದಲ್ಲಿ ಕೊಡಬೇಕೆಂಬುದು ಅಂದಿನ ಸರ್ಕಾರದ ನಿಲುವು.  ಆದರೆ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ತಾಲ್ಲೂಕು ಮಟ್ಟದ ಉತ್ಸವವಾಗಿ ಬದಲಾಗಿರುವುದು ಶೋಚನೀಯ.

ಎರಡು ಮೂರು ವರ್ಷಗಳಿಂದ ಈ ಉತ್ಸವ ಕೂಡ ನಡೆದಿಲ್ಲ. ಇಲ್ಲೂ ಕರ್ನಾಟಕದ, ವಿಶೇಷವಾಗಿ ಉತ್ತರ ಕನ್ನಡ ಭಾಗದ ಕಲಾಪ್ರಕಾರಗಳು ಹಿಂದಿನ ಸಾಲಿಗೆ ಸರಿದಿವೆ.

ಚಾಲುಕ್ಯ ಉತ್ಸವ: ಬಾದಾಮಿ, ಐಹೊಳೆ, ಪಟ್ಟದಕಲ್ಲು  ಐತಿಹಾಸಿಕ ಪ್ರವಾಸಿತಾಣಗಳು. ಅಂದಿನ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಮೂಲಕ ಪ್ರವಾಸಿಗರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸಲು ಹಾಗೂ ರಾಜ್ಯದ ಸಾಂಸ್ಕೃತಿಕ ಸಂಪತ್ತನ್ನು ಪರಿಚಯಿಸುವ ಉದ್ದೇಶದಿಂದ ಈ ಉತ್ಸವಗಳನ್ನು ನಡೆಸಲಾಗುತ್ತಿದೆ.

ಹೊಯ್ಸಳೋತ್ಸವ:  ಅತ್ಯಂತ ವಿಸ್ಮಯಕರ­ವಾದ ವಾಸ್ತುಶಿಲ್ಪದ ತಾಣಗಳು ಬೇಲೂರು, ಹಳೇಬೀಡು.  ಇವುಗಳ ವೈಭವ­ವನ್ನು ಪರಿಚಯಿ­ಸುವ ಉದ್ದೇಶದಿಂದ ಈ ಉತ್ಸವವನ್ನು ಆರಂಭಿಸಲಾಯಿತು. ನಾಟ್ಯಶಾಸ್ತ್ರಕ್ಕೆ  ಹೊಸ ಆಯಾಮ­ವನ್ನು  ನೀಡಿದಂತಹ, ನಾಟ್ಯರಾಣಿ ಶಾಂತಲೆ ಹೆಸರಿನಲ್ಲಿ ಇಲ್ಲಿ ನಡೆಯಬೇಕಾಗಿ­ರುವುದು ರಾಷ್ಟ್ರೀಯ ಮಟ್ಟದ ಸಂಗೀತ,- ನೃತ್ಯೋತ್ಸವ. ರಾಜಕೀಯ ಧುರೀಣರು ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಹಸ್ತಕ್ಷೇಪದಿಂದ ಅಲ್ಲಿ ಆಗುತ್ತಿರುವುದೇ ಬೇರೆ.

ನವರಸಪುರ ಉತ್ಸವ: ನವರಸ ಭರಿತವಾದ ಸಂಗೀತ ಮತ್ತು ಸಾಂಪ್ರದಾಯಿಕ ನೃತ್ಯಗಳಿಗೆಂದೇ ಪ್ರಸಿದ್ಧವಾಗಿರುವ ಈ ಉತ್ಸವವನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಬೇಕಾಗಿದ್ದು, ಇಂದು ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗಿ ಅರ್ಥ ಕಳೆದುಕೊಂಡಿದೆ.  
  
ಇನ್ನು ಕರಾವಳಿ ಉತ್ಸವ, ಕಿತ್ತೂರು ಉತ್ಸವ, ಲಕ್ಕುಂಡಿ ಉತ್ಸವ ಹಾಗೂ ಜಿಲ್ಲಾ ಉತ್ಸವಗಳ ಬಗ್ಗೆ ಹೇಳಬೇಕೆಂದರೆ ಈ ಎಲ್ಲಾ ಉತ್ಸವಗಳನ್ನು ಆರಂಭಿಸಿದ್ದು, ಆಯಾ ಭಾಗದ ಕಲಾಪ್ರಕಾರ­ಗಳು ಮತ್ತು ಕಲಾಪ್ರತಿಭೆಗಳಿಗೆ, ಸೂಕ್ತವೇದಿಕೆ­ಗಳನ್ನು ಕಲ್ಪಿಸಿ, ನಶಿಸಿಹೋಗುತ್ತಿರುವ ಕಲೆಗಳನ್ನು ಉಳಿಸಿ, ಪೋಷಿಸುವ ಉದ್ದೇಶದಿಂದ. ಆದರೆ  ಸ್ಥಳೀಯ ಪ್ರತಿಭೆಗಳಿಗೆ ಯಾವುದೇ ಪ್ರಾಮುಖ್ಯ ನೀಡದೇ, ಅವುಗಳನ್ನು ಸಾಂಕೇತಿಕವಾಗಿ ಬಳಸಿ­ಕೊಂಡು, ಆಮದು ಮಾಡಿಕೊಂಡ ಕಲಾವಿದ­ರಿಂದ ಕಾರ್ಯಕ್ರಮ  ಹಮ್ಮಿಕೊಳ್ಳುವ ಪರಿಪಾಠ­ವನ್ನು ರೂಢಿಸಿಕೊಂಡಿರುವುದು ಸರಿಯಲ್ಲ.

ಕರಾವಳಿ ಉತ್ಸವದ ಮೂಲಕ ಅಲ್ಲಿನ ಸುಪ್ರಸಿದ್ಧ ಯಕ್ಷಗಾನ, ಭಾಗವತಿಕೆ, ಬಯಲಾಟ, ಭೂತನೃತ್ಯ ಮುಂತಾದ ಕಲೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ ಮತ್ತು ಅದರ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಕೆಲಸವಾಗಬೇಕು. ಇತ್ತೀಚೆಗಂತೂ ಕನ್ನಡ ನಾಡಿನ ಸಂಸ್ಕೃತಿ, -ಕಲೆಗಳ ಬಗ್ಗೆ ಗಾಳಿಗಂಧ ಅರಿಯದ ಕೆಲವು ಜಿಲ್ಲಾಧಿಕಾರಿಗಳೂ, ಅವರ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕುವ ನಮ್ಮ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಕಲಾವಿದರನ್ನು ಆಮದು ಮಾಡಿಕೊಳ್ಳುವುದು ಒಂದು ಷೋಕಿಯಾಗಿಬಿಟ್ಟಿದೆ

ಪ್ರಮುಖವಾಗಿ ಮೈಸೂರು ದಸರಾ,  ಹಂಪಿ ಉತ್ಸವ, ಕದಂಬೋತ್ಸವ ಹಾಗೂ ಮೇಲಿನ ಹಲವಾರು ಉತ್ಸವಗಳ ಪರಿಕಲ್ಪನೆ ಮತ್ತು ಅನುಷ್ಠಾನಕ್ಕೆ ದುಡಿದಿರುವ ಹಿನ್ನೆಲೆಯಲ್ಲಿ ನಾನು ಈ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತರಬಯಸುವುದೇನೆಂದರೆ, ಕರ್ನಾಟಕದಲ್ಲೇ ಹಾಸುಹೊಕ್ಕಾಗಿರುವ, ವೈವಿಧ್ಯಮಯ ಸಂಗೀತ ಮತ್ತು ಕಲಾಪ್ರಕಾರಗಳನ್ನು ಗುರುತಿಸಿ ಆದ್ಯತೆ ನೀಡಬೇಕು.

ಅದನ್ನು ಬಿಟ್ಟು, ಪಾಶ್ಚಾತ್ಯ ಸಂಗೀತ, ಸಿನಿಮಾ ವಾದ್ಯಗೋಷ್ಠಿಗಳು, ನೃತ್ಯತಂಡಗಳನ್ನು ಕರೆಸಿಕೊಂಡು ಅವರಿಗೆ ಲಕ್ಷಾಂತರ ರೂಪಾಯಿಗಳ ಸಂಭಾವನೆ ನೀಡಿ ಅವರಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ  ಪರಿಪಾಠಕ್ಕೆ ಕಡಿವಾಣ ಹಾಕಬೇಕು.  ಸೋನು ನಿಗಮ್, ಕೈಲಾಶ್‌ ಖೇರ್, ಶಂಕರ ಮಹದೇವನ್, ಹೇಮಮಾಲಿನಿ ಅಂತಹವರು  ನಮಗೆ ಅನಿವಾರ್ಯವಾಗಬಾರದು. ಐತಿಹಾಸಿಕ ಪ್ರಸಿದ್ಧ ಸ್ಥಳಗಳು ಬರೀ ಮನರಂಜನಾ ತಾಣಗಳಾಗಬಾರದು. ಬದಲಿಗೆ ನಮ್ಮ ಭವ್ಯ ಪರಂಪರೆಯನ್ನು, ಸಾಂಸ್ಕೃತಿಕ ಹಿರಿಮೆ ಗರಿಮೆಯನ್ನು ಬಿಂಬಿಸುವ ಕೇಂದ್ರಗಳಾಗಬೇಕು.

  ವ್ಯಾಪಾರಿ ಸಂಸ್ಕೃತಿಯನ್ನು ತಿರಸ್ಕರಿಸಿ,  ವಿವಿಧ ರಾಜ್ಯಗಳಲ್ಲಿರುವ ಶ್ರೀಮಂತ ಕಲೆಗಳನ್ನು ಸಾಂಸ್ಕೃತಿಕವಾಗಿ ವಿನಿಮಯ ಮಾಡಿಕೊಳ್ಳ­ಬೇಕು. ಕರ್ನಾಟಕದಲ್ಲಿ ಎಲ್ಲಾ ಕಲಾಪ್ರಾಕಾರಗಳಲ್ಲೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ  ಕಲಾವಿದ­ರಿದ್ದಾರೆ. ಅವರಿಗೆ ಸೂಕ್ತ ಅವಕಾಶ ಒದಗಿಸಬೇಕು.

ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಚ್ಚಿನ ಜವಾಬ್ದಾರಿ ಹಾಗೂ ನಿಗಾ ವಹಿಸುವುದು ಸೂಕ್ತ. ಉತ್ಸವಗಳ ಬಗ್ಗೆ ಸ್ಪಷ್ಟ ಹಾಗೂ ಸೂಕ್ತವಾದ ಮಾರ್ಗಸೂಚಿಗಳನ್ನು ರೂಪಿಸಿ, ಅವುಗಳ ಚೌಕಟ್ಟಿನಲ್ಲಿಯೇ ರೂಪುರೇಷೆ­ಗಳನ್ನು ಸಿದ್ಧಪಡಿಸಿ, ಎಲ್ಲಾ ಕಾರ್ಯಕ್ರಮಗಳು ನಡೆಯುವಂತೆ ನೋಡಿ­ಕೊಳ್ಳಬೇಕು. ಇಂತಹ ಸಂದರ್ಭಗಳಲ್ಲಿ ವಿವಿಧ ಅಕಾಡೆಮಿಗಳಿಂದ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ಪಡೆಯಬೇಕು.  ಮೂಲ ಆಶಯಗಳಿಗೆ ಧಕ್ಕೆ ಬಾರದಂತೆ ಸರ್ಕಾರ ಎಚ್ಚರ ವಹಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT