ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಕಲೆಗಳನ್ನು ಪಠ್ಯವಾಗಿಸಿ: ಅನಂತಮೂರ್ತಿ

Last Updated 13 ಅಕ್ಟೋಬರ್ 2011, 11:30 IST
ಅಕ್ಷರ ಗಾತ್ರ

ಮೈಸೂರು: ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಲೆಗಳನ್ನು ಪಠ್ಯವನ್ನಾಗಿ ಅಳವಡಿಸಿದರೆ ವಿದ್ಯಾರ್ಥಿಗಳು ಮತ್ತುಷ್ಟು ಹುಮ್ಮಸ್ಸಿನಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವರು ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಭವನದಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಅಂತರ ಕಾಲೇಜು ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು. ಜ್ಞಾನ ಎಲ್ಲರಿಗೂ ಮೆದುಳಿನಲ್ಲೇ ಇರುವುದಿಲ್ಲ.

ಕೆಲವರಿಗೆ ಕೈಯಲ್ಲಿ, ಬೆರಳಲ್ಲಿ, ಕಾಲಲ್ಲಿ, ಕಣ್ಣಲ್ಲಿ, ಕಿವಿಯಲ್ಲಿ ಇರುತ್ತದೆ. ಅರ್ಥಾತ್ ಅಕ್ಕಸಾಲಿ ಬೆರಳಿನಿಂದ ಕಲಾತ್ಮಕತೆ ಮೆರೆದರೆ, ಕಮ್ಮಾರನ ಕೈ ಹೊಡೆತದಿಂದ ಕಬ್ಬಿಣ ಆಕಾರ ಪಡೆಯುತ್ತದೆ, ಕುಂಬಾರನ ಕಾಲ್ತುಳಿತದಿಂದ ಮಣ್ಣು ಹದವಾಗುತ್ತದೆ... ಹೀಗೆ ಪ್ರತಿಯೊಬ್ಬರಲ್ಲೂ ಒಂದು ಕೌಶಲ ಇದ್ದೇ ಇರುತ್ತದೆ. ಬೌದ್ಧಿಕ ಪ್ರತಿಭೆಯಷ್ಟೇ ಶ್ರೇಷ್ಠ ಎಂದು ತಿಳಿಯುವುದು ತಪ್ಪು ಎಂದು ತಿಳಿಸಿದರು.

ಗ್ರಾಮೀಣ ಹುಡುಗನೊಬ್ಬ ಮರ ಹತ್ತುವುದರಲ್ಲಿ, ಈಜುವುದರಲ್ಲಿ, ಬೇಲಿ ಹಾರುವುದರಲ್ಲಿ ಮುಂದಿರಬಹುದು ಆದರೆ ಆತ ಗಣಿತ, ವಿಜ್ಞಾನ ಕಲಿಕೆಯಲ್ಲಿ ನಪಾಸಾಗಿರಬಹುದು. ಅಂದಮಾತ್ರಕ್ಕೆ ಆತ ದಡ್ಡ ಎಂದು ಪರಿಗಣಿಸುವುದು ತಪ್ಪು. ಕ್ರೀಡೆ ಮತ್ತು ಸಾಂಸ್ಕೃತಿಕ ಕಲೆಗಳನ್ನು ಪಠ್ಯವನ್ನಾಗಿಸಿದರೆ ವಿದ್ಯಾವಂತರ ಸಂಖ್ಯೆಯು ಹೆಚ್ಚಲಿದೆ. ಸಾಂಸ್ಕೃತಿಕ ಶ್ರೀಮಂತಿಕೆಯು ಹೆಚ್ಚಲಿದೆ ಎಂದು ಹೇಳಿದರು.

ಹಿಂದೆ ಅಜ್ಜಿಯರು ಮಕ್ಕಳಿಗೆ ಕಥೆಗಳನ್ನು ಹೇಳುತ್ತಿದ್ದರು. ಇದರಿಂದ ಮಕ್ಕಳಿಗೆ ಪುರಾಣ, ಚರಿತ್ರೆಯ ವಿವಿಧ ವಿಚಾರಗಳು ತಿಳಿಯುತ್ತಿದ್ದವು. ಈಗಿನ ಮಹಿಳೆಯರಿಗೆ ಕಥೆ ಹೇಳುವುದು ತಿಳಿದೂ ಇಲ್ಲ ಅಷ್ಟು ತಾಳ್ಮೆಯೂ ಇಲ್ಲ. ಅಜ್ಜಿಯಂದಿರನ್ನು ಶಾಲೆ-ಕಾಲೇಜುಗಳಿಗೆ ಸಂದರ್ಶಕ ಪ್ರಾಧ್ಯಾಪಕಿಯರನ್ನಾಗಿ ನೇಮಕ ಮಾಡಿ ಅವರಿಂದ ಮಕ್ಕಳಿಗೆ ಕಥೆ ಹೇಳಿಸುವಂತೆ ಮಾಡಬೇಕು.

ಕಲೆಯನ್ನು ಕಲಿತವರು ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಂಡಿರುತ್ತಾರೆ. ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಭಾಷಣಗಳಲ್ಲಿ ಸ್ಪರ್ಧಿಸುವುದರಿಂದ ನಾಯಕತ್ವ ಗುಣ ಬೆಳೆಯುತ್ತದೆ. ಶಾಲಾ ಕಾಲೇಜು ದಿನಗಳಲ್ಲಿ ಅಭಿನಯಿಸಿದ ನಾಟಕ, ನೃತ್ಯ ಇತ್ಯಾದಿಗಳು ನೆನಪಿನಿಂದ ಅಳಿಯುವುದಿಲ್ಲ ಎಂದು ಹೇಳಿದರು.

ಇಂದು ಗುರು-ಶಿಷ್ಯರ ಸಂಬಂಧ ದೂರವಾಗುತ್ತಿದೆ. ಇಂದು ಶಿಕ್ಷಕರ ಸಂಬಳ ಅವರು ರಿಯಲ್ ಎಸ್ಟೇಟ್ ವಿಷಯಗಳ ಬಗ್ಗೆ ಮಾತನಾಡುವಷ್ಟರ ಮಟ್ಟಿಗೆ ಹೆಚ್ಚಿದೆ. ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ಅಲ್ಲಿನ ಕುಲಪತಿಗಿಂತ ವಿವಿಯ ಪುಟ್ಬಾಲ್ ಕೋಚ್ ಹೆಚ್ಚು ಖ್ಯಾತಿ ಪಡೆದಿರುತ್ತಾನೆ.
 
ಜ್ಞಾನದ ಜೊತೆಗೆ ಕ್ರೀಡಾ ಸಾಧನೆ ಮೆರೆಯುವುದು ಅಲ್ಲಿ ಮುಖ್ಯವಾಗಿರುತ್ತದೆ. ಆದರೆ ನಮ್ಮಲ್ಲಿ ಅದಿಲ್ಲ. ಸಾಂಸ್ಕೃತಿಕ ಕಲೆಗಳನ್ನು ಪಠ್ಯವಾಗಿಸುವತ್ತ ವಿಶ್ವವಿದ್ಯಾಲಯಗಳು ಗಮನಹರಿಸಬೇಕು ಎಂದು ಹೇಳಿದರು.
ಭರತನಾಟ್ಯ ಕಲಾವಿದೆ ಡಾ.ತುಳಸಿ ರಾಮಚಂದ್ರ, ಸಂಗೀತ ನಿರ್ದೇಶಕ ರಘುದೀಕ್ಷಿತ್, ಕುಲಸಚಿವ (ಪರೀಕ್ಷಾಂಗ) ಬಿ.ರಾಮು ಮಾತನಾಡಿದರು.

ರಘದೀಕ್ಷಿತ್ ಅವರು `ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ...~ `ನಿನ್ನಾ ಪೂಜೆಗೆ ಬಂದೇ ಮಹದೇಶ್ವರ...~ ಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.  
 
ವಿದ್ಯಾರ್ಥಿ ಕ್ಷೇಮ ಪಾಲನಾ ವಿಭಾಗ ನಿರ್ದೇಶಕ ಪ್ರೊ.ಡಿ.ಕೆ.ಶ್ರೀನಿವಾಸ ಇತರರು ಇದ್ದರು.
ಸೆನೆಟ್ ಸಭಾಂಗಣ, ಲಲಿತ ಕಲೆಗಳ ಕಾಲೇಜು, ಇಎಂಆರ್‌ಸಿ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಾಡಿಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT