ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಘಮದ `ಪನೋರಮಾ'

Last Updated 6 ಡಿಸೆಂಬರ್ 2012, 19:57 IST
ಅಕ್ಷರ ಗಾತ್ರ

`ಅನ್ಹೆ ಘೋರೆಯ್ ದಾ ದಾನ್' ಪಂಜಾಬ್‌ನ ಗ್ರಾಮೀಣ ಪ್ರದೇಶದ ದಲಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಚಿತ್ರ. ಇದು ಭಾರತದ ದಲಿತರ ಬದುಕಿನ ವಾಸ್ತವದ ಸಂಕೇತ ಕೂಡ.

ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಚಿತ್ರವೊಂದು ಪ್ರದರ್ಶನಕ್ಕೆ ಆಯ್ಕೆಯಾಗುವುದೆಂದರೆ ಪ್ರಾದೇಶಿಕ ಭಾಷೆಗಳ ನಿರ್ದೇಶಕರಿಗೆ ಅದು ಅತ್ಯಂತ ಗೌರವದ ಮತ್ತು ಪ್ರತಿಷ್ಠೆಯ ವಿಷಯ. ತಮ್ಮ ಸಿನಿಮಾವನ್ನು ದೇಶ, ವಿದೇಶಗಳ ಚಿತ್ರೋದ್ಯಮದವರು, ಪ್ರತಿನಿಧಿಗಳು ನೋಡುತ್ತಾರೆ. ದೇಶದ ಮಾಧ್ಯಮಗಳು ಅವನ್ನು ಗಮನಿಸುತ್ತವೆ ಎಂಬ ನಿರೀಕ್ಷೆ ಅವರಲ್ಲಿ ಇರುತ್ತದೆ.

ಆಯಾ ವರ್ಷ ರಾಷ್ಟ್ರೀಯ ಇಲ್ಲವೇ ರಾಜ್ಯ ಸರ್ಕಾರಗಳ ಪ್ರಶಸ್ತಿ ಪಡೆದ ಬಹುತೇಕ ಸಿನಿಮಾಗಳು ಈ ವಿಭಾಗಕ್ಕೆ ಆಯ್ಕೆಯಾಗುತ್ತವೆ. ಎರಡು ವರ್ಷಗಳ ಹಿಂದೆ `ತ್ರೀ ಈಡಿಯಟ್ಸ್', `ಪಾ', `ತೇರೆ ಬಿನ್ ಲ್ಯಾಡೆನ್' ಇತ್ಯಾದಿ ಬಾಲಿವುಡ್‌ನ ಜನಪ್ರಿಯ ಸಿನಿಮಾಗಳು ಈ ವಿಭಾಗಕ್ಕೆ ಆಯ್ಕೆಯಾಗಿದ್ದವು. ಇಂತಹ ಸಿನಿಮಾಗಳನ್ನು ನೋಡಲು ಚಿತ್ರೋತ್ಸವಕ್ಕೆ ಬರಬೇಕೇ ಎಂಬ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ನಂತರದ ವರ್ಷಗಳಲ್ಲಿ ಪ್ರಾದೇಶಿಕ ಭಾಷೆಗಳ ಪರ್ಯಾಯ ಸಿನಿಮಾಗಳಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ.

ಈ ವರ್ಷ ಪಣಜಿ ಚಿತ್ರೋತ್ಸವಕ್ಕೆ (ನ.20-30) ಆಯ್ಕೆಯಾದ 20 ಚಿತ್ರಗಳ ಪೈಕಿ ಮೂರು 2011ರಲ್ಲಿ ನಿರ್ಮಾಣವಾದವು. ಉಳಿದವು ಈ ವರ್ಷದವು. ಪನೋರಮಾ ವಿಭಾಗದ ಎರಡು ಚಿತ್ರಗಳು ಚಿತ್ರೋತ್ಸವದ ಸ್ಪರ್ಧೆಯಲ್ಲೂ ಇದ್ದವು. ನಮ್ಮ ಸರ್ಕಾರ ಸಂಘಟಿಸುವ ಚಿತ್ರೋತ್ಸವದಲ್ಲಿ ನಮ್ಮದೇ ಒಂದು ಸಿನಿಮಾ ಮೊದಲ ಪ್ರಶಸ್ತಿಗೆ ಆಯ್ಕೆಯಾದಾಗ ಸಹಜವಾಗಿಯೇ ಆಶ್ಚರ್ಯವಾಗುತ್ತದೆ.

ನಮ್ಮ ಚಿತ್ರದ ಗುಣಮಟ್ಟ ಸ್ಪರ್ಧೆಯಲ್ಲಿದ್ದ ವಿದೇಶಿ ಚಿತ್ರಗಳಿಗಿಂತ ನಿಜವಾಗಿಯೂ ಉತ್ತಮವಾಗಿತ್ತೇ ಎಂಬ ಭಾವನೆ ಬರುತ್ತದೆ. ಸ್ವರ್ಣಕಮಲ ಪ್ರಶಸ್ತಿ ಪಡೆದ ಪಂಜಾಬಿ ಭಾಷೆಯ “ಅನ್ಹೆ ಘೋರೆಯ್ ದಾ ದಾನ್‌” ಚಿತ್ರವನ್ನು ನೋಡುವ ಅವಕಾಶ ಕಳೆದುಕೊಂಡ ಚಿತ್ರೋತ್ಸವದ ಪ್ರತಿನಿಧಿಗಳು ಈಗ ಹಳಹಳಿಸುತ್ತಿರಬಹುದು. ಪಂಜಾಬ್‌ನ ಗ್ರಾಮೀಣ ಪ್ರದೇಶದ ದಲಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಆ ರಾಜ್ಯದ ಸಮಸ್ಯೆಯನ್ನಷ್ಟೇ ಬಿಂಬಿಸುವುದಿಲ್ಲ.

ಅದು ಭಾರತದ ದಲಿತರ ಬದುಕಿನ ವಾಸ್ತವದ ಸಂಕೇತ. ಈ ಸಿನಿಮಾ ನೋಡುವ ಆಸೆ ದೇಶದ ಲಕ್ಷಾಂತರ ಜನರಿಗೆ ಇರಬಹುದು. ಆದರೆ ಅದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಹೆಚ್ಚೆಂದರೆ ಅದರ ಸೀಡಿ ಅಥವಾ ಡಿವಿಡಿ ಖರೀದಿಸಿ ಚಿಕ್ಕತೆರೆಯ ಮೇಲೆ ನೋಡಬಹುದಷ್ಟೆ. ದೂರದರ್ಶನದ ರಾಷ್ಟ್ರೀಯ ಜಾಲದಲ್ಲಿ ಪ್ರದರ್ಶನವಾದರೆ ದೇಶದ ಜನರು ನೋಡಲು ಸಾಧ್ಯವಾಗಬಹುದು.

ಪನೋರಮಾ ವಿಭಾಗದ ಪರ್ಯಾಯ ಸಿನಿಮಾಗಳನ್ನು ಎಲ್ಲರೂ ನೋಡುವ ಅವಕಾಶ ಇಲ್ಲ. ಹೆಚ್ಚೆಂದರೆ ಆಯಾ ರಾಜ್ಯಗಳ ಚಿತ್ರೋತ್ಸವಗಳಲ್ಲಿ ನೋಡಬಹುದು ಅಥವಾ ಅಲ್ಲಿ ಬಿಡುಗಡೆಯಾದರೆ ಹೆಚ್ಚಿನ ಸಂಖ್ಯೆಯ ಜನರು ನೋಡಬಹುದು. ಆದರೆ ಅಂತಹ ಪರಿಸ್ಥಿತಿ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಲ್ಲ.

ಈ ವರ್ಷದ ಪನೋರಮಾ ವಿಭಾಗಕ್ಕೆ ಆಯ್ಕೆಯಾದ ಸಿನಿಮಾಗಳಲ್ಲಿ ಐದು ಮಲಯಾಳಂ, ಮರಾಠಿ ಮತ್ತು ಬೆಂಗಾಳಿ ಭಾಷೆಗಳ ತಲಾ ಮೂರು ಹಾಗೂ ಕನ್ನಡ, ಬ್ಯಾರಿ, ಅಸ್ಸಾಮಿ, ಕೊಂಕಣಿ, ಹಿಂದಿ, ತಮಿಳು, ಭೋಜಪುರಿ ಹಾಗೂ ಇಂಗ್ಲಿಷ್‌ನ ತಲಾ ಒಂದು ಚಿತ್ರಗಳಿದ್ದವು. ಪನೋರಮಾ ವಿಭಾಗದ ಸಿನಿಮಾಗಳು ಗಮನ ಸೆಳೆಯುವುದು ಪ್ರಾದೇಶಿಕ ಸೊಗಡಿನಿಂದ. ಇತ್ತೀಚಿನ ವರ್ಷಗಳಲ್ಲಿ ಪನೋರಮಾ ವಿಭಾಗದಲ್ಲಿ ಸಿಂಹಪಾಲು ಮಲಯಾಳಂ ಸಿನಿಮಾಗಳಿಗೆ ಸಿಗುತ್ತಿದೆ.

ಮೂರು ವರ್ಷಗಳ ಹಿಂದೆ ಮಲಯಾಳಂನ ಒಂದು ಚಿತ್ರವೂ ಆಯ್ಕೆಯಾಗಿರಲಿಲ್ಲ. ಆಗ ಕೇರಳದ ವ್ಯಕ್ತಿಯೊಬ್ಬರು ಅದರ ವಿರುದ್ಧ ಅಲ್ಲಿನ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಪನೋರಮಾ ಚಿತ್ರಗಳ ಪ್ರದರ್ಶನಕ್ಕೆ ತಡೆಯಾಜ್ಞೆ ಕೋರಿದ್ದರು. ತಮಗೆ ಅನ್ಯಾಯವಾಗಿದೆ ಎಂದು ಮಲಯಾಳಂ ಚಿತ್ರೋದ್ಯಮದ ಮಂದಿ ಪಣಜಿಯಲ್ಲಿ ಸಣ್ಣ ಪ್ರತಿಭಟನೆಯನ್ನೂ ನಡೆಸಿದ್ದರು.

ಆನಂತರ ಪ್ರತಿವರ್ಷ ಮಲಯಾಳಂ ಸಿನಿಮಾಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿದೆ. ಅದಕ್ಕೆ ನಿಜವಾದ ಕಾರಣ ಏನು ಎನ್ನುವುದು ಅರ್ಥವಾಗದ ವಿಷಯ. ಆದರೆ ಈ ವರ್ಷದ ಐದೂ ಚಿತ್ರಗಳು ಕಥಾ ವಸ್ತು, ನಿರೂಪಣೆ ಹಾಗೂ ಛಾಯಾಗ್ರಹಣದಿಂದ ಗಮನ ಸೆಳೆದವು. ಅವುಗಳಲ್ಲಿ ಕೇರಳದ ಸಾಂಸ್ಕೃತಿಕ ವೈಶಿಷ್ಟ್ಯತೆ ಕೆನೆಗಟ್ಟಿತ್ತು.

ಪಣಜಿ ಚಿತ್ರೋತ್ಸವಕ್ಕೆ ಬರುವ ದಕ್ಷಿಣ ಭಾರತದ ಪ್ರತಿನಿಧಿಗಳು ಮತ್ತು ಮಾಧ್ಯಮದವರು ನಾಲ್ಕೂ ಭಾಷೆಗಳ ಸಿನಿಮಾಗಳನ್ನು `ನಮ್ಮ' ಚಿತ್ರಗಳು ಎಂಬಷ್ಟೇ ಅಭಿಮಾನದಿಂದ ನೋಡುತ್ತಾರೆ. ಈ ವರ್ಷದ ಪನೋರಮಾ ಸಿನಿಮಾಗಳ ಪೈಕಿ ಸಮಕಾಲೀನ ಅನ್ನಿಸಿದ್ದು ಭೋಜಪುರಿ ಭಾಷೆಯ ಚಿತ್ರ `ದೇಸ್ವಾ' ಮತ್ತು `ಅನ್ಹೆ ಘೋರೆಯ್ ದಾ ದಾನ್', ಅಸ್ಸಾಮಿಯ `ಭಾಂದೂನ್', ಬಂಗಾಳಿಯ `ಚಿತ್ರಾಂಗದ' ಮತ್ತು ಇಂದಿಗೂ ಪ್ರಸ್ತುತವೆನಿಸುವ ತಮಿಳಿನ `ವಾಗೈ ಸೂಡಾ ವಾ'. 

ದೇಸ್ವಾ ಬಿಹಾರದ ಬಡತನ, ನಿರುದ್ಯೋಗ, ಅಲ್ಲಿ ಹಣಕ್ಕಾಗಿ ನಡೆಯುವ ಅಪಹರಣ, ಗೂಂಡಾಗಿರಿ ಇತ್ಯಾದಿ ಕಾನೂನುಬಾಹಿರ ಕೃತ್ಯಗಳನ್ನು (ನಿತೀಶ್ ಕುಮಾರ್ ಆಡಳಿತದಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿರಬಹುದು) ಕಟ್ಟಿಕೊಡುತ್ತದೆ. ಕೆಲ ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ `ಡಿ' ಗ್ರೂಪ್ ಹುದ್ದೆಗಳ ನೇಮಕಾತಿಗಾಗಿ ಮುಂಬೈನಲ್ಲಿ ನಡೆದ ಲಿಖಿತ ಪರೀಕ್ಷೆಗೆ ಬಂದ ಬಿಹಾರ ಹಾಗೂ ಉತ್ತರ ಭಾರತದ ರಾಜ್ಯಗಳ ಅಭ್ಯರ್ಥಿಗಳ ಮೇಲೆ ಸ್ಥಳೀಯರಿಂದ ಎದುರಾದ ಹಿಂಸಾತ್ಮಕ ವಿರೋಧದ ಹಿನ್ನೆಲೆಯಲ್ಲಿ ಬಿಹಾರಿ ಯುವಜನರ ಮನಃಸ್ಥಿತಿ ಮತ್ತು ಅಸಹಾಯಕತೆಗಳನ್ನು ಈ ಚಿತ್ರ ತೆರೆದಿಡುತ್ತದೆ.

ಗ್ರಾಮೀಣ ಬಿಹಾರಿ ಯುವಕರು ಉದ್ಯೋಗ ಹುಡುಕಿಕೊಂಡು ದೇಶದ ಇತರ ಭಾಗಗಳಿಗೆ ವಲಸೆ ಹೋಗುವುದು ಮತ್ತು ಕುಟುಂಬದ ಜವಾಬ್ದಾರಿಗಳ ನಿರ್ವಹಣೆ ಮಾಡಲಾಗದ ಅಸಹಾಯಕತೆ, ದುಡಿದು ಸಂಪಾದಿಸುವ ಮಾರ್ಗದಲ್ಲಿ ಎದುರಾಗುವ ಅಡಚಣೆಗಳ ವಾಸ್ತವ ಪರಿಸ್ಥಿತಿಯ ಚಿತ್ರಣವಿದೆ. ಹತಾಶರಾದ ಮೂವರು ಯುವಕರು ಹಣಕ್ಕಾಗಿ ನಕ್ಸಲೀಯ ಮುಖಂಡನೊಬ್ಬನನ್ನು ಹೋಟೆಲ್ ಉದ್ಯಮಿ ಎಂದು ತಪ್ಪಾಗಿ ಭಾವಿಸಿ ಅಪಹರಿಸುತ್ತಾರೆ.

ನಂತರ ಅಪಹೃತನನ್ನು ಬಿಹಾರದ ಗಡಿ ದಾಟಿಸುವ ಪ್ರಯತ್ನದಲ್ಲಿ ಕಾನೂನಿನ ಕ್ರಮಕ್ಕೆ ಒಳಗಾಗುತ್ತಾರೆ. ಈ ಚಿತ್ರ ಸಮಕಾಲೀನ ಬಿಹಾರದ ಅರಾಜಕ ಪರಿಸ್ಥಿತಿಯನ್ನು ಅನಾವರಣಗೊಳಿಸಿದೆ.

ಜಾನ್ಹು ಬರುವಾ ನಿರ್ದೇಶನದ ಅಸ್ಸಾಮಿ ಚಿತ್ರ `ಭಾಂಧೂನ್' 26/11ರ (2008) ಮುಂಬೈ ಘಟನೆ ಹಿನ್ನೆಲೆಯಲ್ಲಿ ವೃದ್ಧ ದಂಪತಿಯ ಅಸಹಾಯಕತೆಯನ್ನು ಕಟ್ಟಿಕೊಡುತ್ತದೆ. ಭಾರತೀಯ ಸಮಾಜದ ರೂಢಿಗಳನ್ನು ಮೀರುವ ಮನೋಧರ್ಮದ ಹಿನ್ನೆಲೆ ಸಿನಿಮಾ ರಿತು ಪರ್ಣೋಘೋಷ್ ನಿರ್ದೇಶನದ ಬಂಗಾಳಿ ಸಿನಿಮಾ `ಚಿತ್ರಾಂಗದ'. ಕಥಾನಾಯಕ ರಂಗ ನಿರ್ದೇಶಕ ರುದ್ರ ಚಟರ್ಜಿ ಸಲಿಂಗಕಾಮಿಯಾಗಿ, ನಂತರ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹೆಣ್ಣಾಗಿ, ಕೊನೆಗೆ ಜೊತೆಗಾರನಿಂದ ಮೋಸಕ್ಕೆ ಒಳಗಾಗಿ ಹತಾಶನಾಗುವ ವಿಶಿಷ್ಟ ಸಿನಿಮಾ.

ಮಹಾಭಾರತ ಕಾಲದ ಮಣಿಪುರದ ರಾಜನ ಮಗಳು (ಪುರುಷನಂತೆ ಬೆಳೆದ) ಅರ್ಜುನನ ಪತ್ನಿ ಚಿತ್ರಾಂಗದೆಯ ಪ್ರಸಂಗವನ್ನಿಟ್ಟುಕೊಂಡು ಕವಿ ರವೀಂದ್ರನಾಥ ಟ್ಯಾಗೋರರು ಬರೆದ ನೃತ್ಯನಾಟಕದ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಚಿತ್ರ ಹೆಣ್ಣಾಗುವ ಮನಃಸ್ಥಿತಿ ಪ್ರಜ್ಞಾವಂತ ಕಲಾವಿದನ ಮಾನಸಿಕ ತಳಮಳಗಳನ್ನು ಅನಾವರಣಗೊಳಿಸುತ್ತದೆ. ರಿತು ಪರ್ಣೋಘೋಷ್ ಚಿತ್ರದ ಪ್ರಧಾನ ಪಾತ್ರಧಾರಿ. ಹೆಣ್ಣಾಗುವ ಮನಃಸ್ಥಿತಿಯನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ್ದಾರೆ.

`ವಾಗೈ ಸೂಡ ವಾ' (ನಿರ್ದೇಶನ: ಎ. ಸರ್ಗುಣನ್) ತಮಿಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಇಟ್ಟಿಗೆ ತಯಾರಿಕೆಯಲ್ಲಿ ದುಡಿಯುವ ಕೂಲಿಯಾಳುಗಳ ಬಡತನ, ಅನಕ್ಷರತೆ, ಅಸಹಾಯಕತೆಗಳನ್ನು ಕುರಿತದ್ದು. ಮೂರ್ನಾಲ್ಕು ದಶಕಗಳ ಹಿಂದಿನ ಪರಿಸ್ಥಿತಿಯನ್ನು ಕಟ್ಟಿಕೊಡುವ ಈ ಚಿತ್ರದಲ್ಲಿ ಕಾಣುವ ಬಡತನ ಸಹಜತೆಯನ್ನು ಮೈಗೂಡಿಸಿಕೊಂಡು ಗಮನ ಸೆಳೆಯುತ್ತದೆ.

ಇಟ್ಟಿಗೆ ಕಾರ್ಮಿಕರೇ ಇರುವ ಹಳ್ಳಿಯೊಂದರ ಮಕ್ಕಳಿಗೆ ಅಕ್ಷರ ಕಲಿಸಲು ಸರ್ಕಾರೇತರ ಸಂಸ್ಥೆಯಿಂದ ನಿಯೋಜಿತನಾದ ಶಿಕ್ಷಕನೊಬ್ಬ ಮಕ್ಕಳಿಗೆ ಅಕ್ಷರ ಕಲಿಸುವ ಪ್ರಯತ್ನ ಮಾಡುತ್ತಲೇ ಅವರ ಪಾಲಕರ ಮೇಲೆ ನಡೆಯುವ ಶೋಷಣೆ ವಿರುದ್ಧ ಅವರಲ್ಲಿ ಜಾಗೃತಿ ಮೂಡಿಸುತ್ತಾನೆ. ಚಿತ್ರದಲ್ಲಿ ಒಬ್ಬಿಬ್ಬರು ಅನುಭವಿ ನಟರಿದ್ದಾರೆ. ಸ್ಥಳೀಯರನ್ನೇ ಬಳಸಿಕೊಂಡು ನಿರ್ಮಿಸಿದ ಈ ಚಿತ್ರ ನೋಡುವಾಗ ಅದು ಸಿನಿಮಾ ಅನ್ನಿಸುವುದಿಲ್ಲ.

ಇನ್ನು, ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕೂರ್ಮಾವತಾರ', ಸುವೀರನ್ ನಿರ್ದೇಶನದ ಬ್ಯಾರಿ ಭಾಷೆಯ `ಬ್ಯಾರಿ', ಮರಾಠಿಯ `ಗಂಗೂಬಾಯಿ' ಮತ್ತು `ಸಂಹಿತಾ', ಕೊಂಕಣಿಯ `ದಿಗಂತ್', ಬೆಂಗಾಳಿಯ `ಶಬ್ಧೂ', ಹಿಂದಿಯ `ಐ.ಡಿ.', ಭಾರತೀಯ ಇಂಗ್ಲಿಷ್ ಚಿತ್ರ `ಲೆಸೆನ್ಸ್ ಇನ್ ಫರ್ಗಾಟಿಂಗ್' ಇತ್ಯಾದಿ ಸಿನಿಮಾಗಳು ಪ್ರಾದೇಶಿಕ ವೈವಿಧ್ಯತೆಯಿಂದ ಗಮನ ಸೆಳೆದವು.

ಪನೋರಮಾ ವಿಭಾಗದಲ್ಲಿ ದೇಶದಲ್ಲಿ ನಿರ್ಮಾಣವಾಗುವ ಎಲ್ಲಾ ಪ್ರಾದೇಶಿಕ ಭಾಷೆಗಳ ಮತ್ತು ಉಪಭಾಷೆಗಳ ಸಿನಿಮಾಗಳಿಗೆ ಪ್ರಾತಿನಿಧ್ಯ ಸಿಗಬೇಕು. ಅದು ಸಾಧ್ಯವಾದರೆ ಭಾರತೀಯ ಅಂತರರಾಷ್ಟ್ರೀಯ ಚಿತ್ರೋತ್ಸವ ಇನ್ನಷ್ಟು ವೈವಿಧ್ಯಮಯವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT