ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ವೈಭವಕ್ಕೆ ಕಲಾವಿದರ ಮೆರುಗು

ಇಂದಿನಿಂದ ಹಂಪಿ ಉತ್ಸವ ಪ್ರಾರಂಭ
Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ಹಂಪಿ (ಬಳ್ಳಾರಿ ಜಿಲ್ಲೆ):  ಮಲೆನಾಡಿನ ಮಡಿಕೇರಿಯಲ್ಲಿ ಮೂರು ದಿನಗಳ ಕಾಲ ನಡೆದ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗುಂಗಿ­ನಲ್ಲಿ­ರುವ ನಾಡಿನ ಜನರನ್ನು ಬಿಸಿಲ ನಾಡಿನ ಹಂಪಿ­ಯಲ್ಲಿ ಶುಕ್ರವಾರದಿಂದ ಆರಂಭ­ವಾ­ಗಲಿರುವ ಉತ್ಸವ ಕೈಬೀಸಿ ಕರೆ­ಯುತ್ತಿದೆ.

ತುಂಗಭದ್ರೆಯ ದಡದಗುಂಟ ಹರ­ಡಿ­ಕೊಂಡಿದ್ದ ವಿಜಯನಗರ ಸಾಮ್ರಾಜ್ಯದ ವೈಭವವು ಈ ಮೂಲಕ ಮೂರು ದಿನ­ಗಳ ಕಾಲ ಮರುಕಳಿಸಲಿದ್ದು, ಕಲ್ಲು­ಗ­ಳಲ್ಲಿ ಅರಳಿದ ಕಲೆಯಿಂದ ಜಗ­ದ್ವಿಖ್ಯಾತಿ ಪಡೆ­ದಿರುವ ಈ ತಾಣದಲ್ಲಿ ಸಾಂಸ್ಕೃತಿಕ ವೈಭವವೂ ಕಲಾಸಕ್ತರ ಮನತಣಿಸಲಿದೆ.

ವಿಜಯನಗರದ ದೊರೆ ಶ್ರೀ ಕೃಷ್ಣ­ದೇವ­ರಾಯನ ಹೆಸರಿನ ಪ್ರಧಾನ ವೇದಿ­ಕೆಯೂ ಸೇರಿದಂತೆ ಒಟ್ಟು ನಾಲ್ಕು ವೇದಿ­ಕೆಗಳು ಗಾಯನ, ನೃತ್ಯ, ನಾಟಕ, ಜನ­ಪದ ಕಲಾವಿದರ ಪ್ರತಿಭೆಯ ಪ್ರದ­ರ್ಶ­ನಕ್ಕೆ ಅಣಿಯಾಗುತ್ತಿದ್ದು, ಸಕಲ ಸಿದ್ಧ­ತೆ­ಗಳೂ ಅಂತಿಮ ಹಂತ ತಲುಪಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರ­ವಾರ ಸಂಜೆ ಉತ್ಸವಕ್ಕೆ ಚಾಲನೆ ನೀಡ­ಲಿದ್ದು, ಎಲ್ಲ ವಯೋಮಾನದ ಜನ­ರನ್ನು ಆಕರ್ಷಿಸಲೆಂದೇ ಮೊದಲ ಬಾರಿಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋ­ಜಿ­ಸಲಾಗಿದೆ.

ಮಹಿಳೆಯರು, ಮಕ್ಕಳು, ಅಂಗ­ವಿಕಲರು, ಸಾಹಸಪ್ರಿಯರು, ಛಾಯಾ­­ಗ್ರಾಹಕರು, ಕ್ರೀಡಾಪಟುಗಳು ಮತ್ತು ಚಿತ್ರ ಕಲಾವಿದರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿಜೇ­ತರಿಗೆ ಬಹು­ಮಾನ ನೀಡಲಾಗುತ್ತದೆ.

ಚಲನಚಿತ್ರ ಹಿನ್ನೆಲೆ ಗಾಯಕರಾದ ಎಂ.ಡಿ.ಪಲ್ಲವಿ, ಕಸ್ತೂರಿ ಶಂಕರ್‌, ಶಾನ್‌, ಅರ್ಚನಾ ಉಡುಪ, ಕುನಾಲ್‌ ಗಾಂಜಾ­ವಾಲಾ, ಸುನಿಧಿ ಚೌಹಾಣ್‌, ಸಂಗೀತಾ ಕಟ್ಟಿ, ವಸುಂಧರಾ ದಾಸ್‌, ರಘು ದೀಕ್ಷಿತ್‌, ಗಝಲ್‌ ಗಾಯಕರಾದ ಪಂಕಜ್‌ ಉದಾಸ್‌, ತಲತ್‌ ಅಜೀಜ್‌, ಶಾಸ್ತ್ರೀಯ ಸಂಗೀತಗಾರರಾದ ಶುಭಾ ಮುದ್ಗಲ್‌, ಎಂ.ಎಸ್‌.ಶೀಲಾ, ಪಂ. ರಾಜ­ಶೇಖರ ಮನ್ಸೂರ್‌, ರಾಜೀವ್‌ ತಾರಾನಾಥ, ಹೆಗ್ಗಾರ ಅನಂತ ಹೆಗಡೆ ಮತ್ತಿತರ ಪ್ರಮುಖರು ಉತ್ಸವಕ್ಕೆ ಮೆರುಗು ನೀಡಲಿದ್ದು, ಒಟ್ಟು ₨ 7.5 ಕೋಟಿ ವೆಚ್ಚದಲ್ಲಿ ಉತ್ಸವ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.

ಕಬಡ್ಡಿ, ಕುಸ್ತಿ, ಮಲ್ಲಕಂಭ ಒಳ­ಗೊಂಡ ಗ್ರಾಮೀಣ ಕ್ರೀಡಾಕೂಟ, ಮಹಿ­ಳೆಯರಿಗಾಗಿ ಅಡುಗೆ, ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ, ನಾಟಕ, ಯಕ್ಷಗಾನ, ವಚನ ಗಾಯನ, ನೃತ್ಯ­ರೂಪಕ, ತೊಗಲು ಗೊಂಬೆ ಆಟ, ಕವಿಗೋಷ್ಠಿ, ಮಕ್ಕಳು, ಅಂಗವಿಕಲ ಕಲಾವಿದರಿಗೆ ಅವಕಾಶ ನೀಡಿರುವುದು ಈ ಬಾರಿಯ ಉತ್ಸವದ ವಿಶೇಷ. ಹೆಲಿಕಾಪ್ಟರ್‌ ಮೂಲಕ ಆಗಸದಿಂದಲೇ ಶಿಲ್ಪಕಲಾ ವೈಭ­ವವನ್ನು ಕಣ್ತುಂಬಿ­ಸಿ­ಕೊಳ್ಳಲು ‘ಹಂಪಿ ಬೈ ಸ್ಕೈ’ ವ್ಯವಸ್ಥೆ ಮಾಡಲಾಗಿದೆ.
ಕುಂಚದಿಂದ ಹಂಪಿಯ ಕಲಾ­ಸೊಬ­ಗನ್ನು ಸೆರೆ ಹಿಡಿದ ಚಿತ್ರ ಕಲಾವಿದರಿಗಾಗಿ ‘ಹಂಪಿ ಬೈ ಆರ್ಟ್‌’, ಕ್ಯಾಮೆರಾ ಮೂಲಕ ಹಂಪಿಯ ಸ್ಮಾರಕಗಳನ್ನು ಸೆರೆ ಹಿಡಿಯುವ ಛಾಯಾಗ್ರಾಹಕರಿಗಾಗಿ ‘ಹಂಪಿ ಬೈ ಲೆನ್ಸ್‌’ ಸ್ಪರ್ಧೆಗಳು, ಸಾಹಸ ಕ್ರೀಡೆ, ದೋಣಿ ವಿಹಾರ ಪ್ರಿಯರನ್ನು ಐತಿಹಾಸಿಕ ತಾಣದೆಡೆ ಸೆಳೆಯುವಂತೆ ಮಾಡಿದೆ.

ಉತ್ಸವದ ಉದ್ಘಾಟನೆಗೆ ಮುನ್ನ ವಿರೂ­ಪಾಕ್ಷೇಶ್ವರ ದೇವಸ್ಥಾನದಿಂದ ಶೋಭಾ­­ಯಾತ್ರೆ ನಡೆಯಲಿದ್ದು, ಕೊನೆ ದಿನ ನಡೆಯುವ ‘ಜನಪದ ವಾಹಿನಿ’ ಕಲಾ ಮೆರವಣಿಗೆಯಲ್ಲಿ ನಾನಾ ತಂಡಗಳು ಭಾಗವಹಿಸಲಿವೆ.

ಉತ್ಸವದ ಹಿನ್ನೆಲೆಯಲ್ಲಿ ಹಂಪಿ­ಯಲ್ಲಿ ಭಾರಿ ಭದ್ರತೆ ಒದಗಿಸಲಾಗಿದ್ದು, ವಿವಿಧ ಜಿಲ್ಲೆಗಳಿಂದ ಸಾವಿರಾರು ಪೊಲೀ­ಸರು ಬಂದಿದ್ದಾರೆ.

ಉತ್ಸವಕ್ಕೆ ಬರುವ ಜನರಿಗೆ ಜಿಲ್ಲಾ­ಡಳಿತದ ವತಿಯಿಂದ ನಿತ್ಯವೂ ರಾತ್ರಿ ₨ 5ಕ್ಕೆ ಊಟ ಒದಗಿಸಲು ಅಕ್ಕತಂಗಿಯರ ಗುಡ್ಡ ಹಾಗೂ ಕೃಷ್ಣ ಬಝಾರ್‌ ಬಳಿ ವ್ಯವಸ್ಥೆ ಮಾಡಲಾಗಿದೆ. ಹೊಸ­ಪೇಟೆ­ಯಿಂದ ಹಂಪಿಗೆ ತೆರಳಲು ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್‌ಗಳ
ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT