ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಪ್ಪ ಸಾಕು ಕೋತಿ ಕಾಟ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳಲ್ಲಿ ವಾನರ ಪಡೆಗಳು ಹೊಸ ಕಿತಾಪತಿ ಆರಂಭಿಸಿವೆ. ಅಕ್ಕಪಕ್ಕದ ಹೊಲದವರ ನಡುವೆ ಅಸಮಾಧಾನ, ವೈಷಮ್ಯ, ಜಗಳಕ್ಕೆ ಈ ಮಂಗಳು ಕಾರಣವಾಗುತ್ತಿವೆ.

ಒಂದೊಂದು ಗುಂಪಿನಲ್ಲಿ ಐವತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ದಾಳಿ ಇಡುವ ಮಂಗಗಳು ಮಾಡದ ಉಪಟಳವಿಲ್ಲ. ಅಕ್ಕಪಕ್ಕದ ತೋಟದವರಂತೂ ಗಲಾಟೆ ಮಾಡಿಕೊಂಡೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ತೋಟದಿಂದ ಓಡಿಸಿದರೆ ಪಕ್ಕದ ತೋಟಕ್ಕೆ ವಾನರ ಪಡೆ ದಾಳಿ ಇಡುತ್ತವೆ.

ಪಕ್ಕದ ಮನೆಯವರು ತಮ್ಮ ತೋಟಕ್ಕೆ ಬೇಕಂತಲೇ ಈ ಮಂಗಗಳನ್ನು ಓಡಿಸಿದ್ದಾರೆ ಎಂದು ಕೃಷಿಕರು ಅಸಮಾಧಾನ ವ್ಯಕ್ತಪಡಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹೆಬ್ರಿ ಪರಿಸರದ ಕೆಲವು ಊರುಗಳಲ್ಲಿ ವಾನರರ ವಿಷಯದಲ್ಲಿ ರೈತರ ನಡುವೆ ಹೊಡೆದಾಟ ಕೂಡ ನಡೆದಿವೆ. ಪಕ್ಕದ ಜಮೀನಿಗೆ ಮಂಗಗಳು ಬಂದಿವೆ ಎಂದು ಗೊತ್ತಾದ ಕೂಡಲೇ ಜನ ತಮ್ಮ ತೋಟಕ್ಕೆ ಬರುವ ಮಾರ್ಗದಲ್ಲಿ ಮಂಗಗಳ ತಡೆಗೆ ಸರ್ವಸಜ್ಜಿತರಾಗಿ ನಿಲ್ಲುವುದಂತೂ ಸಾಮಾನ್ಯವಾಗಿದೆ. ಒಂದು ತೋಟದಿಂದ ಓಡಿಸಿದ ಕೂಡಲೇ ಪಕ್ಕದ ತೋಟಕ್ಕೆ ಕಾಲು ಕೀಳುತ್ತವೆ. ಅವರ ಸದ್ದು ಜೋರಾದರೆ ಒಂದು ಗಳಿಗೆಯಲ್ಲೆೀ ಪುನಃ ವಾಪಸಾಗುತ್ತವೆ. ಇವುಗಳ ಕಾಟದಿಂದ ನಮಗೆ ಮುಕ್ತಿ ಇಲ್ಲ ಎನ್ನುತ್ತಾರೆ ಶಿವಪುರದ ವೆಂಕಟೇಶ್.

ಮಂಗಗಳಿಗೆ ಸಮದ್ಧಿ: ಮಂಗಗಳ ಲೂಟಿಗೆ ಇಂಥದೇ ಕಾಲ ಎಂದೇನಿಲ್ಲ. ಮಳೆಗಾಲ ಮುಗಿಯುವ ಮತ್ತು ಬೆಳೆ ಕೈಗೆ ಬರುವ ಸಮಯದಲ್ಲಿ ಒಂದು ರೀತಿ ಹಾನಿ ಮಾಡಿದರೆ, ಬೇಸಿಗೆಯಲ್ಲಿ ಆಹಾರ ಸಿಗದ ಕಾರಣಕ್ಕೆ ಮತ್ತೊಂದು ರೀತಿ ನಷ್ಟ ಉಂಟು ಮಾಡುತ್ತವೆ ಎಂಬುದು ರೈತರ ನೋವು. ತೆಂಗಿನ ತೋಟದ ಪಕ್ಕದಲ್ಲಿ ಭತ್ತದ ಗದ್ದೆಗಳು ಇದ್ದರಂತೂ ವಾರಗಟ್ಟಲೆ ಮಂಗಗಳು ಠಿಕಾಣಿ ಹೂಡುತ್ತವೆ. ಅಲ್ಲಿರುವುದನ್ನೆಲ್ಲ ಗುಡಿಸಿ ಗುಂಡಾರ ಮಾಡಿದ ಮೇಲೆಯೇ ಅವು ಕಾಲು ಕೀಳುವುದು ಎಂಬುದು ಹೆಬ್ರಿಯ ರಾಮ ಅವರ ನುಡಿ.

~ನಾವಂತೂ ಈಗ ಮಂಗಗಳನ್ನು ಓಡಿಸುವುದನ್ನೇ ಬಿಟ್ಟಿದ್ದೇವೆ. ಅವುಗಳು ಬೇಕಾದಷ್ಟು ತಿನ್ನಲಿ. ಅವುಗಳನ್ನು ಓಡಿಸಲು ನಾವು ತೋಟಕ್ಕೆ ಹೋದರೆ ಮನೆಯತ್ತ ಬರುತ್ತವೆ. ಒಳಗೆ ನುಗ್ಗಿ ಅನ್ನದ ಪಾತ್ರೆಯನ್ನೇ ಲಪಟಾಯಿಸುತ್ತವೆ. ಮನೆಯಲ್ಲಿ ಒಂದಿಬ್ಬರು ಇದ್ದರೂ ನೋಡಿ ಸುಮ್ಮನಿರಬೇಕಷ್ಟೇ~ ಎಂದು ಹೇಳುತ್ತಾರೆ ಕಬ್ಬಿನಾಲೆಯ ಶ್ರೀಕರ ಭಾರದ್ವಾಜ್.

~ನಾಲ್ಕು ವರ್ಷಗಳ ಹಿಂದೆ ಕಪಿಗಳ ಕಾಟ ಇಷ್ಟು ಇರಲಿಲ್ಲ. ಉಡುಪಿ, ಕುಂದಾಪುರ, ಕಾರ್ಕಳ ಮತ್ತಿತರ ಕಡೆಗಳಿಂದ ಮಂಗಗಳನ್ನು ಹಿಡಿದು ಬೋನಿನಲ್ಲಿ ತಂದು ಸೋಮೇಶ್ವರ ಪರಿಸರದಲ್ಲಿ ಬಿಡುತ್ತಾರೆ. ಆಗುಂಬೆ ಘಾಟಿಯಲ್ಲಿ ಬಿಟ್ಟರೆ ನಮಗೇನು ತೊಂದರೆಯಿಲ್ಲ. ಇಲ್ಲೆೀ ಬಿಟ್ಟರೆ ಸೀದಾ ಬರುವುದು ನಮ್ಮ ತೋಟಕ್ಕೆ. ಒಂದು ಬಾರಿ ಕಾಲಿಟ್ಟರೆ ಸರ್ವನಾಶ ಮಾಡದೆ ಅವುಗಳು ಹೋಗುವುದಿಲ್ಲ. ಒಂದೆರಡು ಬಾರಿ ಬೋನಿನಲ್ಲಿ ಮಂಗಗಳನ್ನು ತಂದು ಅರ್ಧ ದಾರಿಯಲ್ಲಿಯೇ ಬಿಟ್ಟವರನ್ನು ಬೈದು ಕಳುಹಿಸಿದ್ದೇವೆ~ ಎಂದು ತಣ್ಣೀರಿನ ಲಚ್ಚು ಆಚಾರ್ ಸಮಸ್ಯೆ ತಲೆದೋರಿದ ಬಗೆಯನ್ನು ಬಿಚ್ಚಿಡುತ್ತಾರೆ.

ಬಲು ಕಿಲಾಡಿ: ತೋಟಕ್ಕೆ ದಾಂಗುಡಿ ಇಡುವ ಮಂಗಗಳು ಹೈಟೆಕ್ ಮಂಗಗಳು. ಕುಡಿಯೋದು ಒಂದು ಎಳನೀರು. ಆದರೆ ಹಾಳು ಮಾಡೋದು ಅದರ ನಾಲ್ಕರಷ್ಟು. ಈಗ ಅಡಿಕೆಯನ್ನೂ ಬಿಡುವುದಿಲ್ಲ. ಎಳೆ ಅಡಿಕೆ, ಸಿಂಗಾರವನ್ನು ಕಿತ್ತು ಎಸೆದು ಖುಷಿ ಪಡುತ್ತವೆ. ಮನೆಯೊಳಗೆ ಯಾವುದೇ ಭಯ ಇಲ್ಲದೆ ನುಗ್ಗುತ್ತವೆ. ಹೆಂಗಸರು, ಮಕ್ಕಳನ್ನು ಕಂಡರಂತೂ ಕುಚೇಷ್ಟೆ ಹೆಚ್ಚು ಮಾಡುತ್ತವೆ. ಗಂಡಸರಿಗೆ ಸ್ವಲ್ಪ ಹೆದರುತ್ತವೆ ಅಷ್ಟೇ. ಈಗ ಪಟಾಕಿ, ಗುಂಡಿನ ಸದ್ದಿಗೆ ಭಯ ಪಡಲ್ಲ. ಎತ್ತರದ ಮರದಲ್ಲಿ ಹೋಗಿ ಕುಳಿತು ತಮಾಷೆ ನೋಡುತ್ತವೆ~ ಎಂದು ಅಳಲು ತೋಡಿಕೊಳ್ಳುತ್ತಾರೆ ಹೆಬ್ರಿಯ ಕೃಷಿಕರೊಬ್ಬರು.

~ಈ ಬಾರಿ ಒಂದೂವರೆ ಎಕರೆ ಜಾಗದಲ್ಲಿ ಭತ್ತದ ಕೃಷಿ ಮಾಡುವುದನ್ನೇ ನಿಲ್ಲಿಸಿದ್ದೇನೆ. ಕಳೆದ ವರ್ಷ 25 ಆಳು ಜಾಗದಲ್ಲಿ 25 ಕ್ವಿಂಟಲ್ ಭತ್ತ ಆಗಿತ್ತು. ಈಗ ಫಸಲು ಎಷ್ಟೇ ಹುಲುಸಾಗಿ ಬಂದರೂ ಮಂಗಗಳ ಹಾವಳಿಯಿಂದ ಕೈಗೆ ದಕ್ಕುವುದಿಲ್ಲ. ಹೀಗಾಗಿ ಭೂಮಿ ಖಾಲಿ ಬೇಕಾದರೂ ಇರಲಿ; ಬೆಳೆ ಕಣ್ಣೆದುರೇ ಹಾಳಾಗುವುದು ಯಾಕೆ ಎಂದು ಬೇಸಾಯವನ್ನೇ ಬಿಟ್ಟಿದ್ದೇನೆ~ ಎಂದು ಹೇಳುತ್ತಾರೆ ಶಿವಪುರದ ವಸಂತ್.

ಬೆಳೆ ಹಾಳು ಮಾಡುವಲ್ಲಿ ಮಂಗಗಳಿಗೆ ನವಿಲು, ಹಂದಿ, ಕಡವೆ, ಕಾಡುಕೋಣಗಳು ಜತೆ ನೀಡುತ್ತಿವೆ. ಹೆಬ್ರಿ ಪರಿಸರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ನವಿಲುಗಳ ಕಾಟ ವಿಪರೀತವಾಗಿದೆ. ಒಟ್ಟಾರೆ ಕೃಷಿಯಲ್ಲಿ ಬಂಡವಾಳ ಹಾಕಿ ಮನೆಮಂದಿಯೆಲ್ಲ ದುಡಿದರೂ ಅಕ್ಕಿ ಹೊರಗಿನಿಂದ ಕೊಂಡು ತರುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕೃಷಿಕರು ಕಾಡು ಪ್ರಾಣಿಗಳ ಉಪಟಳದಿಂದ ರೋಸಿ ಕೃಷಿಯೇ ಬೇಡ ಎಂಬ ನಿರ್ಧಾರಕ್ಕೆ ಬರುವಂತಾಗಿದೆ.

 

ಮಂಕಿ ಪಾರ್ಕ್ ಏಲ್ಲಿ?
ಮಂಗಗಳ ಉಪಟಳ ತಡೆಗೆ ಜಿಲ್ಲೆಯಲ್ಲಿ ಮಂಕಿ ಪಾರ್ಕ್ ಸ್ಥಾಪಿಸುವ ಪ್ರಸ್ತಾಪವಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಪೆರ್ಡೂರಿನಲ್ಲಿ ಮಂಕಿ ಪಾರ್ಕ್ ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಆರು ಜನರ ನಿಯೋಗವೊಂದು ಅಧ್ಯಯನಕ್ಕಾಗಿ ಶಿಮ್ಲೋಕ್ಕೆ ತೆರಳಿತ್ತು. ನಂತರ ಈ ಪ್ರಸ್ತಾಪ ನೆನೆಗುದಿಗೆ ಬಿತ್ತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT