ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಪ್ಪ ಸಾಕು ಕೋತಿ ಕಾಟ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅಡಿಕೆ ಬೆಳೆಗಾರರು ಕಳೆದ ಹಲವು ವರ್ಷಗಳಿಂದ ವಿಧವಿಧವಾದ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ವಾನರ ಕಾಟವೂ ಈ ಸಮಸ್ಯೆಗಳ ಸಾಲಿಗೆ ಕೆಲವು ವರ್ಷಗಳಿಂದ ಸೇರ್ಪಡೆಯಾಗಿದ್ದು, ಈ `ಕೋತಿ ಹಾವಳಿ~ಯಂತೂ ಈ ವರ್ಷ ತಾರಕಕ್ಕೇರಿದೆ.


ಹೊತ್ತು ಗೊತ್ತಿಲ್ಲದೇ ಅಡಿಕೆ ತೋಟಕ್ಕೆ ದಾಳಿಯಿಡುವ ಮಂಗಗಳನ್ನು ತಡೆಯುವ ಯಾವುದೇ ಉಪಾಯ ಸಂಪೂರ್ಣ ಯಶಸ್ಸು ಪಡೆಯದಿರುವ ಹಿನ್ನೆಲೆಯಲ್ಲಿ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಮಳೆಗಾಲದಲ್ಲಿ ಕೊಳೆ ರೋಗ ಎಂದರೇ ಭಯ ಬೀಳುತ್ತಿದ್ದ ಇಲ್ಲಿನ ಅಡಿಕೆ ರೈತರು, ಈಗ ಮಂಗಗಳ ಕಾಟಕ್ಕೆ ಬೆಚ್ಚಿ ಬೀಳುತ್ತಿದ್ದಾರೆ.

ಅಡಿಕೆ ಮರಗಳ ಮೇಲೆ ಕುಳಿತು ಅಡಿಕೆ ಕಾಯಿಗಳನ್ನು ಕೊಯ್ದು, ಅದರಲ್ಲಿರುವ ಸಿಹಿರಸವನ್ನು ಹೀರುವ ಮಂಗಗಳನ್ನು ಓಡಿಸಲು ವಿಧ-ವಿಧವಾದ ಪ್ರಯೋಗ ಮಾಡಲಾಗಿದೆ. ಕಾವಲು ಕಾಯುವುದು, ಪಟಾಕಿ ಸಿಡಿಸುವುದು, ಡಬ್ಬಗಳನ್ನು ಬಡಿಯುವುದು  ಹೀಗೆ ಎಷ್ಟೇ  ಪ್ರಯತ್ನಪಟ್ಟರೂ ಮಂಗಗಳನ್ನು ಬೆದರಿಸುವುದು ರೈತರಿಗೆ ಸಾಧ್ಯವಾಗುತ್ತಿಲ್ಲ.
 
`ಕೊಳೆ ರೋಗಕ್ಕೆ ಔಷಧ ಸಿಂಪಡಿಸುವಂತೆ ಅಡಿಕೆ ಗೊನೆಗಳಿಗೆ ಮೀನೆಣ್ಣೆ ಅಥವಾ ಕಟುವಾಸನೆಯ ಆಯುರ್ವೇದ ಔಷಧಿ ಸಿಂಪಡಿಸಿ~ ಎಂಬ ಸಲಹೆ ತೋಟಗಾರಿಕೆ ಅಧಿಕಾರಿಗಳಿಂದ ಬಂದಿದೆ. ಆದರೆ ಬೋರ್ಡೋ ಮಿಶ್ರಣ ಅಥವಾ ಬಯೋಫೈಟ್ ಸಿಂಪರಣೆಗೇ ಕೂಲಿಯಾಳು (ಕೊನೆಗೌಡರು) ಸಿಗದೇ ಇರುವಾಗ ಪದೆ ಪದೆ ಇತರ ದ್ರಾವಣ ಸಿಂಪರಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ರೈತರದ್ದು.

ಈ ಮಧ್ಯೆ ಅಡಿಕೆ ಮತ್ತಿತರ ಬೆಳೆಗಳನ್ನು ಹಾಳು ಮಾಡುವ ಕಾಡುಪ್ರಾಣಿಗಳ ವಿರುದ್ಧ ಹೋರಾಟ ಕೂಡ ತಾಲ್ಲೂಕಿನಲ್ಲಿ ನಡೆಯುತ್ತಿದೆ. ಮಂಗಗಳಿಂದ ಅಡಿಕೆ ಕಾಯಿಗಳ ರಕ್ಷಣೆಗಾಗಿ 2009ರಲ್ಲಿ ಮನವಿ ನೀಡಿದ ನಂತರ ಕಾಡು ಪ್ರಾಣಿಗಳಿಂದ ನಷ್ಟವಾದ 57 ಬೆಳೆಗಳಿಗೆ ಪರಿಹಾರ ನೀಡಲು ಸರ್ಕಾರ ಆರಂಭಿಸಿದೆ.
 
2010ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಪಟ್ಟಣದ ಶಂಕರಮಠದಲ್ಲಿ ಸಭೆ ನಡೆಸಿ, ಸಮಸ್ಯೆಯ ಗಂಭೀರತೆಯನ್ನು ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡ್ದ್ದಿದರು. ಈಗ ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಮತ್ತು ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ಬಗ್ಗೆ ಮನವಿ ನೀಡಿದ್ದಾರೆ.

`ಆದರೆ ಮಂಗಗಳಿಂದ ಉಂಟಾಗುವ ಅಡಿಕೆ ಬೆಳೆ ಹಾನಿಗೆ ಹಣದ ಮೂಲಕ ಪರಿಹಾರ ನೀಡುವುದು ಈ ಸಮಸ್ಯೆಗೆ ಉತ್ತರವಲ್ಲ. ಏಕೆಂದರೆ ಮಂಗಗಳ ಸಮಸ್ಯೆ ನಿರಂತರ. ವರ್ಷಕ್ಕೆ ಒಂದು ಬಾರಿ ಅಲ್ಪ ಮೊತ್ತದ  ಪರಿಹಾರ  ಹಣ ನೀಡುವುದರಿಂದ ಏನೂ ಪ್ರಯೋಜನವಾಗದು. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ~ ಎನ್ನುತ್ತಾರೆ ತಾಲ್ಲೂಕಿನಲ್ಲಿ ಈ ಹೋರಾಟದ ಸಂಘಟನೆಯ ನೇತೃತ್ವ ವಹಿಸಿರುವ ಬಿ.ಆರ್.ನಾಯ್ಕ ಹೆಗ್ಗಾರಕೈ.

ಎನ್‌ಆರ್‌ಇಜಿ (ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ಯೋಜನೆಯಲ್ಲಿ ಅರಣ್ಯ ಬೆಳೆಸಲು ನೀಡುವ ಅನುದಾನ ಬಳಸಿಕೊಂಡು, ತಲಾ 15 ಎಕರೆ ಅಡಿಕೆ ತೋಟಕ್ಕೆ ಒಬ್ಬರಂತೆ ಕಾವಲುಗಾರರ ನೇಮಕ ಆಗಬೇಕು. ಮಂಗಗಳನ್ನು ಹಿಡಿದು ಅಭಯಾರಣ್ಯಗಳಿಗೆ ಅಥವಾ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು ಎಂಬುದು ರೈತರ ಮೊರೆ. ಸರ್ಕಾರಕ್ಕೆ ಇದು ಕೇಳಿಸೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT