ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಾರಗೊಳ್ಳದ ಸುವರ್ಣಭೂಮಿ ಯೋಜನೆ

Last Updated 16 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈತರಿಗೆ ಕೃಷಿಯಲ್ಲಿ ಉತ್ತೇಜನ ಹಾಗೂ ನೆರವು ನೀಡುವ ಉದ್ದೆೀಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ `ಸುವರ್ಣಭೂಮಿ~ ಯೋಜನೆ ಉದ್ದೇಶ ಈಡೇರಿಲ್ಲ. ವೇಳಾಪಟ್ಟಿಯಂತೆ ಯೋಜನೆಯನ್ನು  ಅನುಷ್ಠಾನಗೊಳಿಸುವಲ್ಲಿ ಕೃಷಿ ಇಲಾಖೆ ಆಸಕ್ತಿ ತೋರದಿರುವುದೇ ಇದಕ್ಕೆ ಕಾರಣ.

`ಸುವರ್ಣ ಭೂಮಿ~ ಯೋಜನೆ ಪ್ರಕ್ರಿಯೆ ಜೂನ್ ತಿಂಗಳಲ್ಲಿ ಆರಂಭವಾಗಿ ಆಗಸ್ಟ್‌ನಲ್ಲಿ ಪೂರ್ಣ ಗೊಳ್ಳಬೇಕು.  ಫಲಾನುಭವಿಗಳ ಆಯ್ಕೆ, ಮೊದಲ ಕಂತು ರೂ 5000 ಬಿಡುಗಡೆ, ಬಿತ್ತನೆಯ ಕಾರ್ಯ ಪರಿಶೀಲನೆ ಹಾಗೂ ಎರಡನೇ ಕಂತಿನ ಸಹಾಯಧನ ರೂ 10,000  ಬಿಡುಗಡೆ ಹೀಗೆ ಎಲ್ಲ ಪ್ರಕ್ರಿಯೆಗಳು ಮುಂಗಾರು ಹಂಗಾಮಿನ ಒಳಗೆ ಪೂರ್ಣಗೊಳ್ಳಬೇಕು. ಬಿತ್ತನೆ ಕಾರ್ಯ ಆರಂಭಕ್ಕೂ ಮುನ್ನ ಬೀಜ, ಗೊಬ್ಬರ ಖರೀದಿಗೆ ರೂ 5,000,  ಬಿತ್ತನೆಯಾದ ಒಂದು ತಿಂಗಳ ನಂತರದಲ್ಲಿ ಉಳಿದ ರೂ 5,000  ನೀಡುವುದು ಯೋಜನೆಯ ಗುರಿಯಾಗಿದೆ.

ಧಾರವಾಡ ಜಿಲ್ಲೆಯಲ್ಲಿ `ಸುವರ್ಣಭೂಮಿ~ ಯೋಜನೆಗೆ ಲಾಟರಿ ಮೂಲಕ ಒಟ್ಟು 6,575 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ 6,438 ಫಲಾನುಭವಿಗಳಿಗೆ 30.2 ಕೋಟಿ ರೂಪಾಯಿಗಳನ್ನು ಮೊದಲ ಕಂತಿನ ಸಹಾಯಧನವಾಗಿ ನೀಡಲಾಗಿದೆ. ಆದರೆ, ಮೊದಲ ಕಂತಿನ ಸಹಾಯಧನ ಪಡೆದವರಿಗೆ ಎರಡನೇ ಕಂತಿನ ಸಹಾಯ ಧನ ಮುಂಗಾರು ಮುಗಿದರೂ ಪಾವತಿಯಾಗಿಲ್ಲ. ಅಲ್ಲದೆ ಬಿತ್ತನೆ ಕಾರ್ಯ ಪರಿಶೀಲನೆಯಾದ ನಂತರವಷ್ಟೇ ಎರಡನೇ ಕಂತಿನ ಸಹಾಯಧನ ಬಿಡುಗಡೆಯಾಗಲಿದ್ದು, ಇಲಾಖೆಯಿಂದ ಬಿತ್ತನೆ ಕಾರ್ಯ ಪರಿಶೀಲನೆ ಈವರೆಗೂ ಆರಂಭವಾಗಿಲ್ಲ.

31 ಕೋಟಿ ಬೇಕು: ಜಿಲ್ಲೆಯ 6575 ಫಲಾನುಭವಿ ಗಳಿಗೆ ಎರಡೂ ಕಂತು ನೀಡಲು ಒಟ್ಟು ರೂ 31 ಕೋಟಿ ಅವಶ್ಯಕತೆಯಿದೆ. ಮೊದಲ ಕಂತಿನಲ್ಲಿ ಉಳಿದ ಫಲಾನುಭವಿಗಳಿಗೆ ಹಾಗೂ ಎರಡನೇ ಕಂತನ್ನು ಬಿತ್ತನೆಯಾಗಿರುವ ಕುರಿತು ತಪಾಸಣೆ ನಡೆಸಿದ ನಂತರ ಬಿಡುಗಡೆ ಮಾಡಲಾಗುವುದು. ಅಲ್ಲದೇ ಕಳೆದ ವರ್ಷ ಬಾಕಿ ಇರುವ `ಸುವರ್ಣ ಭೂಮಿ~ ಫಲಾನುಭವಿಗಳ ಎರಡನೇ ಕಂತನ್ನು ಬಿಡುಗಡೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಎಸ್. ಎಂ.ಗಡಾದ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದ ಕೇವಲ ಶೇ 70ರಷ್ಟು ಫಲಾನುಭವಿಗಳಿಗೆ ಮಾತ್ರ ಮೊದಲ ಕಂತಿನ 5,000 ರೂಪಾಯಿ ಪಾವತಿಯಾಗಿದ್ದು, ಉಳಿದ ಶೇ 30ರಷ್ಟು ಫಲಾನುಭವಿಗಳಿಗೆ ಮೊದಲ ಕಂತಿನ ಸಹಾಯಧನವೇ ಸಿಕ್ಕಿಲ್ಲ.

ರೂ 1.17 ಕೋಟಿ  ಬಾಕಿ: `ಸುವರ್ಣ ಭೂಮಿ~ ಯೋಜನೆಯ 2011-12ರ ಸಾಲಿನಲ್ಲಿ ರಾಜ್ಯದಾದ್ಯಂತ ಫಲಾನುಭವಿಗಳಿಗೆ ನೀಡಬೇಕಾದ ಸುಮಾರು 47 ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ. ಅಲ್ಲದೇ ಕಳೆದ ವರ್ಷ ಧಾರವಾಡ ಜಿಲ್ಲೆಯ 2500 ಫಲಾನುಭವಿಗಳಿಗೆ ಸೇರಿದ ಎರಡನೇ ಕಂತಿನ ಸುಮಾರು 1.17 ಕೋಟಿ ರೂಪಾಯಿ ಸಹಾಯಧನವನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ.

ಸರ್ಕಾರ `ಸುವರ್ಣ ಭೂಮಿ~ ಯೋಜನೆ ಜಾರಿಗೆ ತಂದ ಉದ್ದೇಶ ಈಡೇರುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕಾಗಿ ಬೀಜ, ಗೊಬ್ಬರ ಖರೀದಿಸಲು ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದ್ದು, ಹಿಂಗಾರು ಆರಂಭವಾದರೂ ಸಹಾಯಧನ ದೊರೆಯದಿರುವುದು ದುರದೃಷ್ಟಕರ ಎನ್ನುತ್ತಾರೆ ರೈತ ಮುಖಂಡ ಬಿ.ಎಸ್.ಸೊಪ್ಪಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT