ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆ ಜತೆ ಭ್ರಷ್ಟಾಚಾರ ಹೆಚ್ಚಳ

Last Updated 13 ಡಿಸೆಂಬರ್ 2012, 6:37 IST
ಅಕ್ಷರ ಗಾತ್ರ

ದಾವಣಗೆರೆ: ಶಿಕ್ಷಣ ದೊರೆತರೆ ಸಮಾಜದಲ್ಲಿ ಬದಲಾವಣೆ ಆಗುತ್ತದೆ ಎಂದು ನಂಬಿದ್ದೆವು. ಆದರೆ, ಇಂದು ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನೋಡಿದರೆ ಶಿಕ್ಷಣದ ಉದ್ದೇಶ ವಿಫಲವಾಗಿದೆ ಅನಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ವಿಷಾದಿಸಿದರು.

ಚನ್ನಗಿರಿ ಪಟ್ಟಣದಲ್ಲಿ ಬುಧವಾರ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಸ್ಮರಣಾರ್ಥ ಹಮ್ಮಿಕೊಂಡಿದ್ದ `ಬದಲಾವಣೆಗಾಗಿ ನಾವು-ನೀವು' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸತ್ಯ ಇಂದು ಮರೆಯಾಗಿದೆ. ರಾಜಕಾರಣ ಸ್ವಾರ್ಥವಾಗುತ್ತಿದೆ. ಸಮಾಜವನ್ನು ಬೆಸೆದ ಸ್ನೇಹ ಸ್ವಾರ್ಥದ ಮುಂದೆ ಕರಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ, ಯಾವುದೇ ವಿಷಯಗಳ ಬಗ್ಗೆ ಆಸಕ್ತಿ ಇದ್ದಷ್ಟೇ, ನಿರಾಸಕ್ತಿಯನ್ನು ಹೊಂದಿದ್ದ ನಿರ್ಲಿಪ್ತ ಸ್ವಭಾವದ ವಿಶೇಷ ವ್ಯಕ್ತಿ ಪಟೇಲ್.

ಹಿಡಿದ ಕೆಲಸಗಳನ್ನು ಹಠಬಿಡದೇ ಸಾಧಿಸುತ್ತಿದ್ದರು. ಎಂತಹ ಕಷ್ಟದ ಸನ್ನಿವೇಶವನ್ನೂ ಮಾತಿನಲ್ಲಿಯೇ ಸರಳವಾಗಿಸುತ್ತಿದ್ದರು. ಹೆಚ್ಚು ಓದಿಕೊಂಡಿದ್ದ ಅವರದು ಸ್ನೇಹದ ವ್ಯಕ್ತಿತ್ವ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಮಾತನಾಡಿ, ಇಂದಿನ ಯುವ ಜನತೆ ದಿಕ್ಕು ತಪ್ಪಿದೆ. ನೆಲ-ಆಕಾಶ ಎಲ್ಲಿದೆ ಎಂದು ಗುರುತಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದೇವೆ. ಬದಲಾವಣೆಯ ಲಹರಿಯಲ್ಲೇ ತೇಲುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪಟೇಲರ ಜತೆ ಕಳೆದ 29 ವರ್ಷಗಳ ಒಡನಾಟ ನೆನಪಾಗುತ್ತಿದೆ ಎಂದು ಗತ ಘಟನೆಗಳನ್ನು ಮೆಲುಕು ಹಾಕಿದರು.

ಮಾಜಿ ಶಾಸಕ ಮಹಿಮ ಪಟೇಲ್ ಪ್ರಸ್ತಾವಿಕ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.ಪಟೇಲರ ಪತ್ನಿ ಸರ್ವಮಂಗಳಮ್ಮ ಪಟೇಲ್, ಮಾಜಿ ಸಚಿವ ಕುಮಾರ್‌ಬಂಗಾರಪ್ಪ, ಎಚ್.ಎಸ್. ಮಹಾದೇವ ಪ್ರಸಾದ್, ಮಾಜಿ ಶಾಸಕ ಎಚ್. ಆಂಜನೇಯ, ಡಾ.ಎಂ.ಪಿ. ನಾಡಗೌಡ,  ಉದ್ಯಮಿ ಶ್ರೀಹರಿ ಖೋಡೆ, ವಿಧಾನ ಪರಿಷತ್ ಮಾಜಿ ಸದಸ್ಯೆ ಜಲಜಾನಾಯ್ಕ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ, ಸಿ.ಕೆ.ಎಚ್. ಮಹೇಶ್, ಎಚ್.ಕೆ. ಬಸವರಾಜ್, ತ್ರಿಶೂಲ್‌ಪಾಣಿ ಪಟೇಲ್, ರಾಜೇಶ್ ಉಪಸ್ಥಿತರಿದ್ದರು.

ಕಾಣದ ಪಟೇಲರ ಹಾಸ್ಯ ಲಹರಿ
ಚನ್ನಗಿರಿಯಲ್ಲಿ ಬುಧವಾರ ನಡೆದ ಜೆ.ಎಚ್. ಪಟೇಲರ ಸ್ಮರಣೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. 12/12/12ರಂದು ಆಚರಿಸಿದ 12ನೇ ಸ್ಮರಣೋತ್ಸವದಲ್ಲಿ ಹಲವು ಮಠಾಧೀಶರು, ರಾಜಕಾರಣಿಗಳು ಭಾಗಿಯಾಗಿದ್ದರು. ಎಲ್ಲರೂ ಪಟೇಲರ ಗುಣಗಾನ ಮಾಡಿದರು. ಆದರೆ, ಪಟೇಲರ ವ್ಯಕ್ತಿತ್ವಕ್ಕೆ ಕಳಸ ಇಟ್ಟಿದ್ದ ಹಾಸ್ಯ ಅಲ್ಲಿ ಕಾಣಲಿಲ್ಲ. ಪಟೇಲರ ಕುರಿತು ಮಾತನಾಡಿದ ಅವರ ಒಡನಾಡಿಗಳೂ ಪಟೇಲ ಹಾಸ್ಯ ಸಂದರ್ಭಗಳನ್ನು ಮೆಲುಕು ಹಾಕಲಿಲ್ಲ.

ಹೆಚ್ಚು ಜನ ವೇದಿಕೆಯ ಮೇಲೆ ಇದ್ದ ಕಾರಣ ಹೆಚ್ಚು ಮಾತಿಗೆ ಅವಕಾಶವೂ ಆಗಲಿಲ್ಲ. ಮುರುಘಾ ಶರಣರು, ಸಾಣೆಹಳ್ಳಿ ಶ್ರೀ, ಕಾಗೋಡು ಸೇರಿದಂತೆ ಬಹುತೇಕರು ನಾಲ್ಕು ಮಾತು ಆಡಿದ ತಕ್ಷಣ ವೇದಿಕೆಯಿಂದ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT