ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆ ದೇಶದ ಅಭಿವೃದ್ಧಿಗೆ ಮೆಟ್ಟಿಲು

ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಭಿಮತ
Last Updated 24 ಡಿಸೆಂಬರ್ 2013, 5:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂವಿಧಾನದಡಿ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡಬೇಕು. ಜತೆಗೆ ಪ್ರತಿಯೊಬ್ಬ ಪ್ರಜೆಯೂ ಸಾಕ್ಷರರಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ನಗರದ ಮೆದೇಹಳ್ಳಿಯಲ್ಲಿ ಸೋಮವಾರ ಸರ್ವ ಶಿಕ್ಷಣ ಅಭಿಯಾನದಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮತ್ತು ೮ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ವೆಚ್ಚ ಮಾಡಿ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೂ ಸಹ ರಾಷ್ಟ್ರದಲ್ಲಿ ಈವರೆಗೂ ಶೇ. ೧೦೦ರಷ್ಟು ಸಂಪೂರ್ಣ ಸಾಕ್ಷರತೆ ಸಾಧಿಸಲಾಗಿಲ್ಲ. ಆದ್ದರಿಂದ ರಾಜ್ಯ ನಿರ್ದೇಶಕ ತತ್ವಗಳಡಿ ಕಡ್ಡಾಯ ಶಿಕ್ಷಣ ಜಾರಿಗೊಳಿಸಿ ಅದಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಜಾರಿಗೊಳಿಸಿದೆ ಎಂದರು.

ದೂರದ ಗ್ರಾಮೀಣ ಪ್ರದೇಶಗಳಿಂದ ಬರುವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ೬ ವರ್ಷಗಳ ಹಿಂದೆ ಉಚಿತ ಸೈಕಲ್ ನೀಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಅದೇ ರೀತಿ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಸಹ ಸಾಕ್ಷರತೆ ಪ್ರಮಾಣ ಪುರುಷರಲ್ಲಿ ಶೇ ೭೮, ಮಹಿಳೆಯರಲ್ಲಿ ೭೦ರಷ್ಟಿದ್ದರೆ ಅಲ್ಪಸಂಖ್ಯಾತರ ಮಹಿಳೆಯರ ಸಾಕ್ಷರತೆ ಪ್ರಮಾಣ ಇನ್ನೂ ಕಡಿಮೆ ಇದೆ. ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸರ್ಕಾರದ ಸೌಲಭ್ಯದ ಜತೆಗೆ ಪೋಷಕರೂ ಸಹ ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳುಹಿಸುವ ಕೆಲಸ ಮಾಡಬೇಕಾಗಿದೆ. ಬಡತನದಿಂದ ಕೆಲವರು ಮಕ್ಕಳ ಶಿಕ್ಷಣ ಮೊಟಕುಗೊಳಿಸಿ ದುಡಿಮೆಗೆ ಕಳುಹಿಸುವುದುಂಟು. ಇದರಿಂದ ಅವರ ಜೀವನ ಸುಧಾರಣೆಯಾಗದು, ಶಿಕ್ಷಣವಿದ್ದಲ್ಲಿ ಏನನ್ನಾದರೂ ಸಾಧಿಸಬಹುದು ಎಂದರು.

ಶಿಕ್ಷಣ ಪಡೆದವರೆಲ್ಲರೂ ಸರ್ಕಾರಿ ಕೆಲಸ ಮಾಡಬೇಕೆಂದಿಲ್ಲ, ಆದರೆ, ಶಿಕ್ಷಣದಿಂದ ಸ್ವ ಉದ್ಯೋಗಿಗಳಾಗಿ, ಬುದ್ಧಿವಂತರಾಗಿ ಬದುಕುವ ಸಾಮರ್ಥ್ಯ ಪಡೆಯಲು ಸಾಧ್ಯವಿದೆ. ಎಲ್ಲರೂ ಸಾಕ್ಷರರಾದರೆ ದೇಶ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕಡು ಬಡತನವಿರುವವರು ಸಹ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಾದ ಮೆದೇಹಳ್ಳಿ, ಬಸವೇಶ್ವರ ನಗರ, ಪಿಳ್ಳೆಕೇರನಹಳ್ಳಿ, ಎಂ.ಕೆ.ಹಟ್ಟಿ, ತರಳಬಾಳು ನಗರ, ಕೋಡಯ್ಯನ ಹಟ್ಟಿಗೆ ಶಾಂತಿ ಸಾಗರ ಯೋಜನೆಯಿಂದ ನೀರನ್ನು ತಾತ್ಕಾಲಿಕವಾಗಿ ಕೊಡಲಾಗುತ್ತಿದೆ. ಇಲ್ಲಿನ ಕೆಲವು ಪ್ರದೇಶಗಳಿಗೆ ಕುಡಿಯುವ ನೀರನ್ನು ನೀಡಲು ಜಿಲ್ಲಾ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ. ಆದರೆ, ಜಗಳೂರಿಗೆ ಹೋಗುವ ಮಾರ್ಗದ ಪೈಪ್‌ನಿಂದ ನೀರನ್ನು ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಇದರಿಂದ ಜಗಳೂರಿಗೆ ನೀರಿನ ಪೂರೈಕೆ ಕಡಿಮೆಯಾಗಬಹುದು. ಮುಂದಿನ ದಿನಗಳಲ್ಲಿ ಜಗಳೂರಿಗೆ ಪರ್ಯಾಯ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಸಿ ಶಾಂತಿಸಾಗರ ಯೋಜನೆ ಬಳಕೆ ಮಾಡಿಕೊಳ್ಳಲು ಜಗಳೂರು ಶಾಸಕರೊಂದಿಗೆ ಚರ್ಚಿಸಲಾಗುತ್ತದೆ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆಶಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುನೀತಾ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್‌ರೆಡ್ಡಿ, ಉಮಾಶಂಕರ್, ಶಾಂತಕುಮಾರ್, ರಾಮಗಿರಿ ಹನುಮಂತಪ್ಪ, ಬಿಆರ್‌ಸಿ ಮಂಜುಳಾ, ಸಿದ್ದಪ್ಪ, ವೀರೇಶ್, ವಿಜಯಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT