ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆ: ರಾಜ್ಯದಲ್ಲಿ ಜಿಲ್ಲೆಗೆ 20ನೇ ಸ್ಥಾನ!

Last Updated 8 ಸೆಪ್ಟೆಂಬರ್ 2011, 10:40 IST
ಅಕ್ಷರ ಗಾತ್ರ

ಮಂಡ್ಯ: ಗುರುವಾರ (ಸೆ. 8) ಅಂತರರಾಷ್ಟ್ರೀಯ ಸಾಕ್ಷರತಾ ದಿನ. ಇತ್ತೀಚೆಗೆ ಬಿಡುಗಡೆ ಮಾಡಲಾದ 2011ರ ಜನಗಣತಿಯ ಮಧ್ಯಂತರ ವರದಿ ಪ್ರಕಾರ, ಕಳೆದ ಒಂದು ದಶಕದಲ್ಲಿ ಜಿಲ್ಲೆಯ ಸಾಕ್ಷರತೆ ಪ್ರಮಾಣ ನಿಧಾನವಾಗಿ ಶೇ 9.09 ರಷ್ಟು ಏರಿಕೆ ಕಂಡಿದೆ.


ಜಿಲ್ಲೆಯ ಜನಸಂಖ್ಯೆ  18.08 ಲಕ್ಷ ಇದ್ದು, ಈ ಪೈಕಿ ಸಾಕ್ಷರತೆಯ ಪ್ರಮಾಣ ಶೇ 70.14ರಷ್ಟಿದೆ. ಇದು, ದೇಶ (ಶೇ 74.04) ಮತ್ತು ರಾಜ್ಯದ (ಶೇ 75.60) ಒಟ್ಟು ಸರಾಸರಿ ಸಾಕ್ಷರತೆಯ ಪ್ರಮಾಣಕ್ಕಿಂತಲೂ ಕಡಿಮೆ. ಸಾಕ್ಷರತೆಯ ಪ್ರಮಾಣದಲ್ಲಿ ರಾಜ್ಯದಲ್ಲಿ ಜಿಲ್ಲೆಗೆ 20ನೇ ಸ್ಥಾನ!

2001ರಲ್ಲಿ ಶೇ 61.05ರಷ್ಟಿದ್ದ ಜಿಲ್ಲೆಯ ಸಾಕ್ಷರತೆ ಪ್ರಸ್ತುತ ಶೇ 70.14ರಷ್ಟಾಗಿದೆ. ಆದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ ಪುರುಷರ ಸಾಕ್ಷರತೆ ಪ್ರಮಾಣಕ್ಕೆ ಸರಿಸಮವಾಗಿ ಇನ್ನೂ ಏರಿಕೆ ಕಂಡಿಲ್ಲ. ಗ್ರಾಮೀಣ ಭಾಗದಲ್ಲಿ ಸಾಕ್ಷರತೆ ಬೆಳವಣಿಗೆ ನೀರಸವಾಗಿರುವುದೇ ಇದಕ್ಕೆ ಪ್ರಮುಖ ಕಾರಣ.

ಪ್ರಸ್ತುತ, ಜಿಲ್ಲೆಯಲ್ಲಿ ಒಟ್ಟು  11,54,952 ಮಂದಿ ಸಾಕ್ಷರರಿದ್ದಾರೆ. ಈ ಪೈಕಿ ಪುರುಷರ ಸಾಕ್ಷರತೆಯ ಪ್ರಮಾಣ ಶೇ 78.14ರಷ್ಟು; ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ 62.10ರಷ್ಟಿದೆ. 2001ರಲ್ಲಿ, ಸಾಕ್ಷರತೆಯು ಪುರುಷರ ಪ್ರಮಾಣ ಶೇ 70.50; ಮಹಿಳೆಯರ ಪ್ರಮಾಣ ಶೇ 51.53ರಷ್ಟಿತ್ತು.

ಜನಗಣತಿ ವರದಿ ಪ್ರಕಾರ, ಜಿಲ್ಲೆಯ ಒಟ್ಟು ಸಾಕ್ಷರತೆ ಪ್ರಮಾಣ 1991ರಲ್ಲಿ ಶೇ 48.15ರಷ್ಟಿದ್ದು, 2001ರ ವೇಳೆಗೆ ಶೇ 61.05ಕ್ಕೆ ಏರಿಕೆ ಆಗಿತ್ತು. ಅಂದರೆ, ಈ ಅವಧಿಯಲ್ಲಿ ಶೇ 12.9 ರಷ್ಟು ವೃದ್ಧಿಯಾಗಿತ್ತು. 2011ರಲ್ಲಿ ಸಾಕ್ಷರತೆ ಶೇ 70.14ಕ್ಕೆ ಹೆಚ್ಚಳವಾಗಿದ್ದರೂ, 1991-2001ರ ನಡುವಿನ ಸಾಕ್ಷರತೆ ಬೆಳವಣಿಗೆಗೆ ಹೋಲಿಸಿದರೆ, 2001-2011ರ ನಡುವೆ ಸಾಕ್ಷರತೆ ವೃದ್ಧಿದರದಲ್ಲಿ ಶೇ 3.81ರಷ್ಟು ಕುಸಿತ ಕಂಡು ಬಂದಿದೆ.

ಜನಸಂಖ್ಯೆ: 2011ರ ಜನಗಣತಿ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆ 18,08,680 ಇದೆ. ಈ ಪೈಕಿ ಪುರುಷರು 9,09,441 ಮತ್ತು ಮಹಿಳೆಯರು 8,99,239 ಇದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಜಿಲ್ಲೆಯ ಜನಸಂಖ್ಯೆ ಶೇ 2.96ರಷ್ಟಿದೆ. 2001ರ ಜನಗಣತಿಗೆ ಹೋಲಿಸಿದರೆ ಈ ಬಾರಿ ಶೇ 2.55ರಷ್ಟು ಜನಸಂಖ್ಯೆ ವೃದ್ಧಿಯಾಗಿದೆ.

ಲಿಂಗಾನುಪಾತದಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದ್ದು, ರಾಷ್ಟ್ರೀಯ (940) ಮತ್ತು ರಾಜ್ಯ (968) ಅನುಪಾತಕ್ಕಿಂತಲ್ಲೂ ಮುಂದಿದೆ. ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 989 ಮಹಿಳೆಯರಿದ್ದಾರೆ. ಪ್ರತಿ ಚದರ ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರ ಸಂಖ್ಯೆ 365 ರಷ್ಟಿದೆ.

ಏರಿಕೆಯಾಗದ ಸಾಕ್ಷರತೆ: ಸಾಕ್ಷರತೆ ಪ್ರಮಾಣ ವೃದ್ಧಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸುಧಾರಣೆಗಳಿಗೆ ಒತ್ತು ನೀಡಿರುವ ಸರ್ಕಾರ, ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ, ಬೈಸಿಕಲ್, ಬಿಸಿಯೂಟ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾಕ್ಷರತೆಯ ಪ್ರಗತಿ ಕಂಡು ಬಂದಿಲ್ಲ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT