ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರದಲ್ಲಿ ಅರಳಿದ ಕುಸ್ತಿ...

ಮಲೆನಾಡಿನಲ್ಲಿ ವಿಜಯದಶಮಿ ಕ್ರೀಡೆ
Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಗೆ ಸುದೀರ್ಘ ಇತಿಹಾಸವೇನೂ ಇಲ್ಲ. ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಸಾಗರದಲ್ಲಿ 1976ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಕುಸ್ತಿ ಪಂದ್ಯಾವಳಿ ಈಗ ದೊಡ್ಡ ಮಟ್ಟಕ್ಕೆ ಬೆಳೆದಿದೆ. ವಿಜಯದಶಮಿ ದಿನ ನಡೆಯುವ ಈ ಪಂದ್ಯಾವಳಿ ಸ್ಥಳೀಯ ಮಟ್ಟದಿಂದ ಆರಂಭವಾಗಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ವಿಸ್ತಾರಗೊಂಡಿತು. ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯ ಮಟ್ಟದಲ್ಲಿ   ನಡೆಯುತ್ತ ಬಂದಿದೆ.

ದೇಸಿ ಕ್ರೀಡೆಯಾದ ಕುಸ್ತಿ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗಾಂಧಿನಗರ ಯುವಜನ ಸಂಘ ದಸರೆಯ ಕೊನೆಯ ದಿನ ನಡೆಸುವ ಈ ಬಯಲು ಕುಸ್ತಿ ಪಂದ್ಯಗಳನ್ನು ನೋಡಲು ಈಗಲೂ ಸಾಕಷ್ಟು  ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ. ‘ವಕೀಲ ಹಾಗೂ ಸಮಾಜ ಸೇವಕ ಕೋರಿ ಶಿವಾನಂದಪ್ಪ ಅವರ ಅಧ್ಯಕ್ಷತೆಯಲ್ಲಿ ಈ ಸಂಘ ಆರಂಭವಾಗಿತ್ತು. ಜಾನಪದ ಕ್ರೀಡೆಯನ್ನು ಬೆಳೆಸುವ ಸದುದ್ದೇಶದಿಂದ ಕುಸ್ತಿ ಆರಂಭಿಸಲಾಯಿತು.

ಮಣ್ಣಿನ ಅಂಕಣದಲ್ಲಿ ಕುಸ್ತಿಗಳು ನಡೆಯುತ್ತಿದ್ದವು. ಆಗಿನ ಕಾಲದಲ್ಲಿ ಕುಸ್ತಿ ನೋಡಲು ಬಂದವರು ಚಿಲ್ಲರೆ ಹಣ ನೀಡುತ್ತಿದ್ದರು. ಅವೆಲ್ಲ ಸಂಗ್ರಹವಾಗಿ ಬಹುಮಾನ ಹಣ ನೀಡುತ್ತಿದ್ದೆವು. ನಂತರದ ವರ್ಷಗಳಲ್ಲಿ ದಾನಿಗಳೂ ಕೈಜೋಡಿಸಿದರು. ಈಗ ಕುಸ್ತಿ ನಡೆಸಲು ಎರಡು ಲಕ್ಷ ರೂಪಾಯಿ ಖರ್ಚಾಗುತ್ತದೆ. ಸಾಗರದ ಜನರು, ಉದ್ಯಮಿಗಳ ನೆರವು ನಮಗೆ ಸಿಗುತ್ತಿದೆ.

ಆದರೆ ಸರ್ಕಾರದ ಮಾತ್ರ ಯಾವುದೇ ನೆರವು ನಮಗೆ ಸಿಗುತ್ತಿಲ್ಲ. ಇಂಥದ್ದನ್ನು ಬೆಂಬಲಿಸಬೇಕಿರುವ ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆರವು ನೀಡಿದ್ದಲ್ಲಿ ಇನ್ನೂ ಉತ್ತಮವಾಗಿ ಸಂಘಟಿಸಲು ಸಾಧ್ಯವಾಗುತ್ತದೆ’ ಎಂದು ಹಿನ್ನೆಲೆ ಹಾಗೂ ವಸ್ತುಸ್ಥಿತಿ ವಿವರಿಸುತ್ತಾರೆ ಸಂಘದ ಸದಸ್ಯರಾಗಿರುವ ಎಸ್.ಎಸ್.ರಮೇಶ್.

ಕುಸ್ತಿಗೆ ಹೆಸರಾದ ಬೆಳಗಾವಿ, ಬಿಜಾಪುರ, ಮೈಸೂರು, ಧಾರವಾಡ ಮೊದಲಾದ ಕರ್ನಾಟಕದ ಜಿಲ್ಲೆಗಳಿಂದ ಮಾತ್ರವಲ್ಲ, ಸಾಂಗ್ಲಿ, ಕೊಲ್ಲಾಪುರ ಮೊದಲಾದ ಮಹಾರಾಷ್ಟ್ರದ ಸಾಂಪ್ರದಾಯಿಕ ಕುಸ್ತಿ ಪ್ರಾಬಲ್ಯದ ಊರುಗಳ ಮಲ್ಲರೂ ಭಾಗವಹಿಸುತ್ತಾರೆ. ಮೈಸೂರು ದಸರಾ ಕುಸ್ತಿಯಲ್ಲಿ ಪದಕಗಳನ್ನು ಗೆದ್ದವರೂ ಇಲ್ಲಿ ಭಾಗವಹಿಸುತ್ತಾರೆ ಎಂದು ಅವರು ವಿವರಿಸುತ್ತಾರೆ. ಅಲ್ಲಿ ವಿಜಯದಶಮಿಗೆ ಎರಡು ದಿನ ಮೊದಲೇ ಕುಸ್ತಿ ಕೊನೆಗೊಳ್ಳುವುದಿಂದ ಕೇಸರಿ, ಕಂಠೀರವ ಮೊದಲಾದ ‘ಬಿರುದು ವಿಜೇತ’ ಪೈಲ್ವಾನರಲ್ಲಿ ಕೆಲವರು ಇಲ್ಲಿಗೆ ಬರುತ್ತಾರೆ. ಅಂದಾಜು 200 ರಿಂದ 250 ಮಂದಿ ಭಾಗವಹಿಸುತ್ತಾರೆ.

ಉಳಿದೆಡೆ ಇಲ್ಲ:
ಹಾಗೆ ನೋಡಿದರೆ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಮಲೆನಾಡು ಪ್ರದೇಶ ಹೊಂದಿರುವ ಶಿವಮೊಗ್ಗದಲ್ಲಿ ಕುಸ್ತಿ ಜನಪ್ರಿಯವೇ. ಆದರೆ ದಸರೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವುದು ಸಾಗರದಲ್ಲಿ ಮಾತ್ರ. ಈಗ ಗಾಂಧಿನಗರ ಯುವಜನ ಸಂಘಕ್ಕೆ ಮಾಜಿ ಪುರಸಭಾ ಸದಸ್ಯ ಎಂ.ಎನ್.ಪ್ರಕಾಶ್‌ ಅಧ್ಯಕ್ಷರಾಗಿದ್ದು, ಎಸ್.ಎಸ್.ನಾಗರಾಜ್, ಎಂ.ಆರ್.ರಾಘವೇಂದ್ರ ಸಂಚಾಲಕರಾಗಿದ್ದಾರೆ.

ಬಂಗಾರದ ಬಳೆ, ಬೆಳ್ಳಿಯ ಬಳೆ, ಪರ್ಸಿ ಬಳೆ, ಬೆಳ್ಳಿಯ ಗದೆ ಇಲ್ಲಿ ನೀಡುವ ಬಹುಮಾನಗಳಲ್ಲಿ ಒಳಗೊಂಡಿವೆ. ‘ಅಖಾಡದ ಬಳೆ’ ಗೆಲ್ಲುವ ಕುಸ್ತಿ ಪಟು ಒಂದು ರೀತಿ ಚಾಂಪಿಯನ್ ಆಫ್ ಚಾಂಪಿಯನ್’ ಇದ್ದಂತೆ!

ಶಿವಮೊಗ್ಗದ ಇತಿಹಾಸ:
ಸಾಮಾನ್ಯ ಕುಸ್ತಿಪಟುಗಳ ರೀತಿಯ ಎತ್ತರದ ನಿಲುವು ತೀನ್ ಪುಟಿಗೆ ಕೆಂಚಣ್ಣ ಅವರದಲ್ಲ. ಅವರು ಸ್ವಲ್ಪ ಕುಳ್ಳಗಿನ ವ್ಯಕ್ತಿ. ಆದರೆ 1970ರ ದಶಕದ ಮಧ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಹೆಸರನ್ನು ಎತ್ತರಕ್ಕೇರಿಸಿದ ಸಾಹಸಿ. ಮೈಸೂರಿನ ರಾಜ ಜಯಚಾಮರಾಜ ಒಡೆಯರ್ ಅವರಿಗೆ ಛತ್ರಿ ಹಿಡಿಯುತ್ತಿದ್ದ ಪೈಲ್ವಾನ್‌ ‘ಛತ್ರಿ ತಿಮ್ಮಪ್ಪ’ ಅವರನ್ನು ಸೋಲಿಸಿ ಮೈಸೂರು ಹುಲಿ ಎಂದು ಹೆಸರು ಪಡೆದವರು ಕೆಂಚಣ್ಣ. ಜಂಗೀ ಕುಸ್ತಿಯಲ್ಲಿ 1970 ಮತ್ತು 80ರ ದಶಕದ ಆರಂಭದಲ್ಲಿ ಅವರು ಸೋತಿದ್ದೇ ಕಡಿಮೆ.

ಕೆಂಚಣ್ಣ ಗೆದ್ದ ಬೆಳ್ಳಿಯ ಗದೆಯನ್ನು ಶಿವಮೊಗ್ಗದ ಕೋಟೆ ಆಂಜನೇಯ ದೇವಸ್ಥಾನದೊಳಗೆ ಈಗಲೂ ಕಾಣಬಹುದು ಎಂದು ಹೇಳುತ್ತಾರೆ ಪೈ.ತುಕ್ಕೋಜಿ ರಾವ್. ಶಿವಮೊಗ್ಗ ಜಿಲ್ಲೆ ಅಥವಾ ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆಯಲ್ಲಿ ನಾಡಹಬ್ಬ ದಸರಾ ವೇಳೆಯೇ ದೊಡ್ಡ ಪ್ರಮಾಣದ ಕುಸ್ತಿಗಳು ನಡೆಯುತ್ತಿರಲ್ಲಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮೈಸೂರು ದಸರಾಕ್ಕೆ ಹೋಗಲು ಈಗಲೂ ಸಾಕಷ್ಟು ತಾಲೀಮು ನಡೆಯುತ್ತದೆ ಎನ್ನುತ್ತಾರೆ ತುಕ್ಕೋಜಿ. ಅವರು ಶಿವಮೊಗ್ಗದ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ. ಕೊಲ್ಲೂರಯ್ಯನ ಗರಡಿಮನೆ ಅಧ್ಯಕ್ಷ ಕೂಡ.

ಶಿವಮೊಗ್ಗ ಜಿಲ್ಲೆಯ ಪೈಲ್ವಾನರು ಮೈಸೂರಿನ ಕುಸ್ತಿಗಳಲ್ಲಿ ಪದಕಗಳನ್ನು ಗೆಲ್ಲುತ್ತಿದ್ದರು. ಶಿವಮೊಗ್ಗದ ಕುಸ್ತಿ ಇತಿಹಾಸದಲ್ಲಿ ಕೆಂಚಣ್ಣ ಅವರ ಹೆಸರು ಪ್ರಮುಖ. ಮೈಸೂರಿನ ದೋಬಿ ರಾಮು ಎದುರು ಸೋಲೊಪ್ಪಿಕೊಂಡ ನಂತರ ಅವರು ಮರಳಿ ಅಖಾಡಕ್ಕೆ ಇಳಿಯಲಿಲ್ಲ. ಆದರೆ ತನ್ನ ಶಿಷ್ಯನೊಬ್ಬನ ಮೂಲಕ ಸೇಡು ತೀರಿಸುವುದಾಗಿ ಪಣತೊಟ್ಟರು.

ಅದರಂತೆ ಪೈಲ್ವಾನ್‌ ಖದ್ದೂಸ್ ಅವರನ್ನು ತಯಾರು ಮಾಡಿ ತಾವು ಅಂದುಕೊಂಡಿದ್ದನ್ನು ಸಾಧಿಸಿದರು. ಕೆಂಚಣ್ಣ ಅವರು ಖದ್ದೂಸ್ ಅವರನ್ನಲ್ಲದೇ ಹಲವು ಶಿಷ್ಯರನ್ನು ತಯಾರಿಸಿದರು. ಶಿವಮೊಗ್ಗದಲ್ಲಿ 1970ರ ದಶಕದಲ್ಲಿ ಪೈ. ಎಂ.ಸಿ.ಮಹದೇವಪ್ಪ, ದೊಡ್ಡ ನಾಗಣ್ಣ, ಸಣ್ಣನಾಗಣ್ಣ, ಬಳ್ಳಿ ತಿಮ್ಮಣ್ಣ, ಫಕೀರಪ್ಪ ಅವರೂ ಸಾಕಷ್ಟು ಹೆಸರು ಮಾಡಿದ್ದರು.
-ನಾಗೇಶ್ ಶೆಣೈ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT